ಚಿತ್ರದುರ್ಗ, ಅಕ್ಟೋಬರ್ 16: ಅಬಕಾರಿ ಇಲಾಖೆಯಲ್ಲಿ (Excise Department) ಬಹಳ ದಿನಗಳಿಂದ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಸ್ವತಃ ಅಬಕಾರಿ ಸಚಿವರೇ ಒಪ್ಪಿಕೊಂಡಿದ್ದಾರೆ. ಚಿತ್ರದುರ್ಗದಲ್ಲಿ ಮಾತನಾಡಿದ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ (RB Timmapur), ಅಬಕಾರಿ ಇಲಾಖೆಯಲ್ಲಿ ಬಹಳ ದಿನಗಳಿಂದ ಭ್ರಷ್ಟಾಚಾರ ನಡೆಯುತ್ತಿದೆ. ಅದನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿದ್ದೇವೆ. ಎರಡು ವರ್ಷಕ್ಕೊಮ್ಮೆ ಬಾರ್ ರಿನಿವಲ್ ಮಾಡುವ ಬಗ್ಗೆ ಕೂಡ ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದರು.
ಬಿಜೆಪಿ ನಾಯಕರ ಆರೋಪಗಳಿಗೆ ತಿರುಗೇಟು ನೀಡಿದ ಅವರು, ಅವರಿಗೆ ಮಾಡಲು ಬೇರೆ ಕೆಲಸ ಇಲ್ಲ. ಗುತ್ತಿಗೆದಾರನ ಮನೆಯಲ್ಲಿ ಹಣ ಸಿಕ್ಕದ್ದು ಕಾಂಗ್ರೆಸ್ಸಿರದ್ದು ಎಂದು ಹೇಳುತ್ತಿದ್ದಾರೆ. ಅದು ಬಿಜೆಪಿಗೆ ಸೇರಿದ ಹಣ ಯಾಕೆ ಇರಬಾರದು, ಅವರೇನು ಸತ್ಯಹರಿಶ್ಚಂದ್ರರಾ? ಬಿಜೆಪಿಗೆ ಸೇರಿದ ಹಣ ಎಂಬ ಮಾಹಿತಿ ನನಗೂ ಇದೆ ಎಂದು ಹೇಳಿದರು.
ಈ ಮಧ್ಯೆ, ಹೊಸ ಮದ್ಯದಂಗಡಿ ತೆರೆಯುವುದಿಲ್ಲ ಎಂದೂ ಸಚಿವ ತಿಮ್ಮಾಪುರ ಸ್ಪಷ್ಟಪಡಿಸಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮೇಲೆ ಸಚಿವ ಆರ್ಬಿ ತಿಮ್ಮಾಪುರ ಕಣ್ಣಿಟ್ಟಿದ್ದಾರೆ. ಚಿತ್ರದುರ್ಗ ಎಸ್ಸಿ ಮೀಸಲು ಲೋಕಸಭಾ ಕ್ಷೇತ್ರವಾಗಿದ್ದು, ಪುತ್ರ ವಿನಯ್ ತಿಮ್ಮಾಪುರ ಕಣಕ್ಕಿಳಿಸಲು ಸಚಿವರು ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ. ಚಿತ್ರದುರ್ಗದ ವಿವಿಧ ಮಠಗಳಿಗೆ ತಿಮ್ಮಾಪುರ ಈಗಾಗಲೇ ಭೇಟಿ ನೀಡಿದ್ದಾರೆ. ಸಿರಿಗೆರೆ ತರಳಬಾಳು ಮಠ, ಮುರುಘಾಮಠ ಸೇರಿ ವಿವಿದೆಡೆ ಭೇಟಿ ನೀಡಿದ್ದಾರೆ. ಪುತ್ರ ವಿನಯ್ ಜತೆಗೆ ಮಠಾಧೀಶರನ್ನು ಭೇಟಿ ಮಾಡಿ ಅವರಿಗೆ ಪರಿಚಯ ಮಾಡಿಸಿದ್ದಾರೆ.
ಇದನ್ನೂ ಓದಿ: ಸತೀಶ್ ಜಾರಕಿಹೊಳಿ ಅಸಮಾಧಾನಕ್ಕೆ ಕಾರಣವೇನು? ಮುನಿಸು ತಣಿಸಿದ್ರಾ ಕೆಸಿ ವೇಣುಗೋಪಾಲ್?
ಮುರುಘಾಮಠಲ್ಲರ ಬೇಟಿ ನೀಡಿದ ಬಳಿಕ ತಿಮ್ಮಾಪುರ ಹೇಳಿಕೆ ನೀಡಿದ್ದು, ಚಿತ್ರದುರ್ಗ ಲೋಕಸಭೆ ಕ್ಷೇತ್ರದಿಂದ ಪುತ್ರನನ್ನು ಕಣಕ್ಕಿಳಿಸುವುದಾಗಿ ಪರಿಚಯ ಮಾಡಿಕೊಡುತ್ತಿದ್ದೇನೆ. ಕಳೆದ ಆರು ವರ್ಷದಿಂದ ಪುತ್ರ ವಿನಯ್ ಪಕ್ಷದ ಕೆಲಸ ಮಾಡುತ್ತಿದ್ದಾನೆ. ಚಿತ್ರದುರ್ಗ ಲೋಕಸಭೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಆಗಿದ್ದಾನೆ. ಪಕ್ಷ ಒಪ್ಪಿದರೆ ವಿನಯ್ ಸ್ಪರ್ದಿಸಲಿದ್ದಾನೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಬಿಲ್ಡರ್ ಸಂತೋಷ್ ಮನೆ ಮೇಲೆ ಐಟಿ ದಾಳಿ ವೇಳೆ ಸಿಕ್ಕಿರುವ ಹಣ ಬಿಜೆಪಿಗೆ ಸೇರಿದ್ದು ಎಂಬುವುದು ಹಾಸ್ಯಾಸ್ಪದ ಎಂದು ಚಿತ್ರದುರ್ಗ ನಗರದಲ್ಲಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಮುಂದಿನ ಚುನಾವಣೆಗಾಗಿ ಗುತ್ತಿಗೆದಾರರ ಬಳಿ ಹಣ ಸಂಗ್ರಹ ನಡೆದಿದೆ. ಕಾಂಗ್ರೆಸ್ ಹೈಕಮಾಂಡ್ಗೆ ಹಣ ನೀಡಲು ಪೈಪೋಟಿ ಆರಂಭಿಸಿದ್ದಾರೆ. ಭದ್ರಾ ಯೋಜನೆಗೆ 1,950 ಕೋಟಿ ಹಣ ಬಾಕಿ ಉಳಿಸಿಕೊಳ್ಳಲಾಗಿದೆ. ನೇರ ರೈಲು ಮಾರ್ಗದ ಭೂಸ್ವಾಧೀನಕ್ಕೆ ಹಣ ಬಿಡುಗಡೆ ಮಾಡಿಲ್ಲ. ಕಮಿಷನ್ಗಾಗಿ ಕರೆ ಮಾಡ್ತಿದ್ದಾರೆಂದು ಅಧಿಕಾರಗಳೇ ಹೇಳುತ್ತಿದ್ದಾರೆ. ಚುನಾವಣೆಗೆ ಕಾಂಗ್ರೆಸ್ ಫಂಡಿಂಗ್ ಮಾಡ್ತಿರುವುದು ಜಗಜ್ಜಾಹೀರಾಗಿದೆ. ಸರ್ಕಾರ ದಿವಾಳಿ ಆಗಿದೆ ಎಂದು ಸಿಎಂ ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ. ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹೋರಾಟ ನಡೆಸಲಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ