Lokayukta Raids: ಬೆಳ್ಳಂಬೆಳಗ್ಗೆ ಕರ್ನಾಟಕದ ಹಲವೆಡೆ ಲೋಕಾಯುಕ್ತ ದಾಳಿ: ನಿದ್ದೆಗಣ್ಣಲ್ಲಿದ್ದ ಅಧಿಕಾರಿಗಳು ಶಾಕ್

| Updated By: ಆಯೇಷಾ ಬಾನು

Updated on: Aug 17, 2023 | 9:05 AM

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಸಣ್ಣ ನೀರಾವರಿ ಇಲಾಖೆ, ಬೆಂಗಳೂರಿನ BBMP ಕಚೇರಿ ಮೇಲೂ ದಾಳಿ ನಡೆಯುವ ಸಾಧ್ಯತೆ ಇದೆ. ಆದಾಯಕ್ಕೂ ಮೀರಿ ಅಕ್ರಮ ಆಸ್ತಿ ಸಂಪಾದನೆ ದೂರು ಬಂದ ಹಿನ್ನೆಲೆ ಲೋಕಾಯುಕ್ತ ಎಸ್ಪಿ ವಾಸುದೇವರಾಮ್, ಡಿವೈಎಸ್ಪಿ ಮೃತ್ಯುಂಜಯ ನೇತೃತ್ವದಲ್ಲಿ ಅಧಿಕಾರಿಗಳ ಮನೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.

Lokayukta Raids: ಬೆಳ್ಳಂಬೆಳಗ್ಗೆ ಕರ್ನಾಟಕದ ಹಲವೆಡೆ ಲೋಕಾಯುಕ್ತ ದಾಳಿ: ನಿದ್ದೆಗಣ್ಣಲ್ಲಿದ್ದ ಅಧಿಕಾರಿಗಳು ಶಾಕ್
ಸಾಂದರ್ಭಿಕ ಚಿತ್ರ
Follow us on

ಚಿತ್ರದುರ್ಗ, ಆ.17: ರಾಜ್ಯಾದ್ಯಂತ ಏಕಕಾಲದಲ್ಲಿ 48 ಕಡೆ ಲೋಕಾಯುಕ್ತ ದಾಳಿ ನಡೆದಿದೆ. ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ(Lokayukta Raids) ನಡೆಸಿ ಶಾಕ್ ಕೊಟ್ಟಿದ್ದಾರೆ. ಬೆಂಗಳೂರು ನಗರ, ಮೈಸೂರು, ಚಿತ್ರದುರ್ಗ, ತುಮಕೂರು, ದಾವಣಗೆರೆ, ಬೀದರ್, ಧಾರವಾಡ, ರಾಯಚೂರು, ಮಡಿಕೇರಿಯಲ್ಲಿ 200 ಲೋಕಾಯುಕ್ತ ಅಧಿಕಾರಿಗಳು, ಸಿಬ್ಬಂದಿಯಿಂದ ರೇಡ್​​ ಆಗಿದೆ. ಚಿತ್ರದುರ್ಗ, ದಾವಣಗೆರೆ ಸೇರಿ ಹಲವೆಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹೊಳಲ್ಕೆರೆ ಸಣ್ಣ ನೀರಾವರಿ‌ ಇಲಾಖೆ ಇಂಜಿನಿಯರ್ ಕೆ.ಮಹೇಶ್ ಹಾಗೂ ಕೆ.ಮಹೇಶ್ ಪತ್ನಿ BBMP ಎಇ ಹೆಚ್.ಭಾರತಿ ಮನೆ ಮೇಲೆ ದಾಳಿ ನಡೆದಿದೆ. ಲೋಕಾಯುಕ್ತ ಅಧಿಕಾರಿಗಳು ದಾವಣಗೆರೆಯ ಜಯನಗರದಲ್ಲಿರುವ ಮಹೇಶ್ ಅವರ​​ ಮನೆ ಬಾಗಿಲು ತಟ್ಟಿದ್ದಾರೆ. ಬೆಳ್ಳಂಬೆಳಗ್ಗೆ ಶಾಕ್ ಕೊಟ್ಟಿದ್ದಾರೆ.

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಸಣ್ಣ ನೀರಾವರಿ ಇಲಾಖೆ, ಬೆಂಗಳೂರಿನ BBMP ಕಚೇರಿ ಮೇಲೂ ದಾಳಿ ನಡೆಯುವ ಸಾಧ್ಯತೆ ಇದೆ. ಆದಾಯಕ್ಕೂ ಮೀರಿ ಅಕ್ರಮ ಆಸ್ತಿ ಸಂಪಾದನೆ ದೂರು ಬಂದ ಹಿನ್ನೆಲೆ ಲೋಕಾಯುಕ್ತ ಎಸ್ಪಿ ವಾಸುದೇವರಾಮ್, ಡಿವೈಎಸ್ಪಿ ಮೃತ್ಯುಂಜಯ ನೇತೃತ್ವದಲ್ಲಿ ಅಧಿಕಾರಿಗಳ ಮನೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಕೊಡಗು ಜಿಲ್ಲೆಯಲ್ಲೂ ಲೋಕಾಯುಕ್ತ ಅಧಿಕಾರಿಗಳ ದಾಳಿ

ಮಡಿಕೇರಿಯಲ್ಲಿ ಕೊಡಗು ಅಪರ ಜಿಲ್ಲಾಧಿಕಾರಿ ನಂಜುಂಡೇಗೌಡ ಮನೆಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ಮಾಡುತ್ತಿದ್ದಾರೆ. ಮಡಿಕೇರಿಯ ಫೀಲ್ಡ್‌ಮಾರ್ಷಲ್ ಕಾರ್ಯಪ್ಪ ವೃತ್ತದ ಬಳಿಯ ನಂಜುಂಡೇಗೌಡ ಮನೆಯಲ್ಲಿ ಪರಿಶೀಲನೆ ನಡೆಯುತ್ತಿದೆ.

ಇದನ್ನೂ ಓದಿ: Karnataka Breaking Kannada News Live: ರಾಜ್ಯದ ಹಲವೆಡೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ

ಬೀದರ್ ಜಿಲ್ಲೆಯಲ್ಲೂ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ

ಬೀದರ್ ಜಿಲ್ಲೆಯ ಚಿಟಗುಪ್ಪ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾನ್ಸ್​ಟೇಬಲ್​ ವಿಜಯಕುಮಾರ್ ಮನೆ ಮೇಲೆ ದಾಳಿ ನಡೆದಿದೆ. ಹುಮ್ನಾಬಾದ್ ಪಟ್ಟಣದ ಟೀಚರ್ ಕಾಲೋನಿ ಹುಚಕನಳ್ಳಿ ಗ್ರಾಮದ ಮನೆ ಮೇಲೆ ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದು ಮಹತ್ವದ ದಾಖಲೆ ಪರಿಶೀಲಿಸುತ್ತಿದ್ದಾರೆ.

ಕೊಪ್ಪಳದಲ್ಲೂ ಲೋಕಾಯುಕ್ತ ಅಧಿಕಾರಿಗಳ ತಂಡದಿಂದ ರೇಡ್

ರಾಯಚೂರು ಲೋಕಾಯುಕ್ತ ಎಸ್​ಪಿ R​.L.ಅರಸಿದ್ದಿ ನೇತೃತ್ವದಲ್ಲಿ ನಿರ್ಮಿತಿ ಕೇಂದ್ರದ ಕಚೇರಿ ವ್ಯವಸ್ಥಾಪಕ‌ ಮಂಜುನಾಥ ಮನೆ ಮೇಲೆ‌ ದಾಳಿ ನಡೆದಿದೆ. ಮಂಜುನಾಥ್ ಬನ್ನಿಕೊಪ್ಪಗೆ ಸೇರಿದ ಕೊಪ್ಪಳ ನಗರದ ಮಂಗಲಾ ಆಸ್ಪತ್ರೆ ಹಿಂಭಾಗದ ಮನೆ, ನಿರ್ಮಿತಿ ಕೇಂದ್ರ ಕಚೇರಿಯಲ್ಲಿ ಪರಿಶೀಲನೆ ನಡೆಯುತ್ತಿದೆ.

ದಾವಣಗೆರೆ ಜಿಲ್ಲೆಯಲ್ಲೂ ಲೋಕಾಯುಕ್ತ ಅಧಿಕಾರಿಗಳ ದಾಳಿ

ಚನ್ನಗಿರಿ ತಾಲೂಕಿನ ಅರಣ್ಯ ಇಲಾಖೆ ಅಧಿಕಾರಿ RFO ಸತೀಶ್ ಮನೆಗಳ ಮೇಲೆ ರೇಡ್​​​​ ಆಗಿದೆ. ಶಿವಮೊಗ್ಗದಲ್ಲಿರುವ ಸತೀಶ್ ಮನೆ ಮೇಲೂ ದಾಳಿ ನಡೆಸಿ ಪರಿಶೀಲನೆ ಮಾಡಲಾಗುತ್ತಿದೆ. ಇನ್ಸ್ಪೆಕ್ಟರ್ ರಾಷ್ಟ್ರಪತಿ ಹಾಗು ಮಧುಸೂಧನ್ ತಂಡದಿಂದ ಶೋಧ ಕಾರ್ಯ ನಡೆಯುತ್ತಿದೆ.

ಧಾರವಾಡ, ತುಮಕೂರಿನಲ್ಲೂ ಅಧಿಕಾರಿಗಳ ಮನೆ ಮೇಲೆ ರೇಡ್

ಧಾರವಾಡದಲ್ಲಿ ಬೆಳಗಾವಿ ಪಾಲಿಕೆ ಸಹಾಯಕ ಆಯುಕ್ತ ಸಂತೋಷ್ ಆನಿಶೆಟ್ಟರ್ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಸಪ್ತಾಪುರ ಬಡಾವಣೆಯ ಮಿಚಿಗನ್ ಲೇಔಟ್​​ನಲ್ಲಿರುವ ಮನೆಯಲ್ಲಿ ಅಧಿಕಾರಿಗಳಿಂದ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ಈ ಮೊದಲು ಹು-ಧಾ ಪಾಲಿಕೆಯಲ್ಲಿದ್ದ ಸಂತೋಷ್ ಆನಿಶೆಟ್ಟರ್ ಕೆಲ ವರ್ಷಗಳ ಹಿಂದೆ ಬೆಳಗಾವಿಗೆ ವರ್ಗಾವಣೆಯಾಗಿದ್ದರು. ಇನ್ನು ಮತ್ತೊಂದೆಡೆ ತುಮಕೂರು ನಗರದ ಸಪ್ತಗಿರಿ ಬಡಾವಣೆಯಲ್ಲಿರುವ ತುಮಕೂರು‌ ನಗರಾಭಿವೃದ್ಧಿ ಪ್ರಾಧಿಕಾರದ ಜಂಟಿ ನಿರ್ದೇಶಕ ನಾಗರಾಜು ನಿವಾಸದ ಮೇಲೆ ದಾಳಿ ನಡೆದಿದೆ.ದಾಖಲಾತಿಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 6:56 am, Thu, 17 August 23