Monkey Menace – ಚಿತ್ರದುರ್ಗ: ಐತಿಹಾಸಿಕ ಚಂದ್ರವಳ್ಳಿಯಲ್ಲಿ ಮಂಗಗಳ ಕಾಟ ಹೇಗಿದೆ ಗೊತ್ತಾ!?

| Updated By: ಸಾಧು ಶ್ರೀನಾಥ್​

Updated on: Feb 13, 2023 | 1:50 PM

ಇಷ್ಟೇ ಅಲ್ಲ ಪ್ರವಾಸಿ ತಾಣ ವೀಕ್ಷಿಸಲು ಬಂದವರ ಬೈಕ್ , ಕಾರ್ ಗಳ ಮೇಲೆ ಏರುವ ಮಂಗಗಳು ಮಂಗ ಚೇಷ್ಟೆ ಮಾಡುತ್ತವೆ. ಬ್ಯಾಗ್ ಗಳನ್ನು ಹರಿದು ಹಾಕುತ್ತವೆ. ಅಂತೆಯೇ ಇಲ್ಲಿನ ಅಂಗಡಿಗಳ ಜನರು ಸಹ ಮಂಗಗಳ ಹಾವಳಿಯಿಂದ ಬೇಸತ್ತಿದ್ದಾರೆ.

Monkey Menace - ಚಿತ್ರದುರ್ಗ: ಐತಿಹಾಸಿಕ ಚಂದ್ರವಳ್ಳಿಯಲ್ಲಿ ಮಂಗಗಳ ಕಾಟ ಹೇಗಿದೆ ಗೊತ್ತಾ!?
ಐತಿಹಾಸಿಕ ಚಂದ್ರವಳ್ಳಿಯಲ್ಲಿ ಮಂಗಗಳ ಕಾಟ ಹೇಗಿದೆ ಗೊತ್ತಾ!?
Follow us on

ಕೋಟೆನಾಡಿನ ಸುಂದರ ಪ್ರವಾಸಿ ತಾಣಗಳ ವೀಕ್ಷಣೆಗೆ ನಿತ್ಯ ನೂರಾರು ಜನ ಪ್ರವಾಸಿಗರು ಬರುತ್ತಾರೆ. ಆದ್ರೆ, ಕೋಟೆನಾಡಿನ ಆ ಪ್ರವಾಸಿ ತಾಣಕ್ಕೆ ಹೋಗಬೇಕೆಂದರೆ ನೀವು ಕೈಲಿ ಕೋಲು ಹಿಡಿದುಕೊಂಡೇ ಹೋಗಬೇಕು. ಯಾಕಂದ್ರೆ, ಅಲ್ಲೊಂದು ರೌಡಿ ಗ್ಯಾಂಗ್ ನಿಮಗೆ ಕಿರಿಕ್ ಮಾಡಲು ಕಾದಿರುತ್ತದೆ. ಯಾವುದು ಆ ಗ್ಯಾಂಗ್ ಅಂತೀರಾ. ಈ ವರದಿ ನೋಡಿ. ಪ್ರವಾಸಿಗರ ಬೆನ್ನು ಬಿದ್ದು ಕಾಡುತ್ತಿರುವ ಮಂಗಗಳ ಗ್ಯಾಂಗ್. ಕೈಲಿ ಬ್ಯಾಗ್ ಹಿಡಿದು ಹೊರಟವರನ್ನಂತೂ ಪಕ್ಕಾ ರೌಡಿಗಳಂತೆ ಬೆದರಿಸುವ ಮಂಕೀಸ್ ಗ್ಯಾಂಗ್​ ಅದು. ಮಂಗಗಳ ಕಾಟ (monkey menace) ತಪ್ಪಿಸಿಕೊಳ್ಳಲಿ ಕೈಯಲ್ಲಿ ಕೋಲು ಹಿಡಿದು ಹೊರಟ ಪ್ರವಾಸಿಗರು. ಈ ದೃಶ್ಯಗಳು ಕಂಡು ಬಂದಿರುವುದು ಕೋಟೆನಾಡು ಚಿತ್ರದುರ್ಗ (chitradurga) ನಗರದ ಬಳಿಯ ಚಂದ್ರವಳ್ಳಿ ಪ್ರದೇಶದಲ್ಲಿ (chandravalli lake caves).

ಹೌದು, ಐತಿಹಾಸಿಕ ಚಂದ್ರವಳ್ಳಿ ಪ್ರದೇಶದಲ್ಲಿ ಹಸಿರ ಸಿರಿಯ ನಡುವೆ ಚಂದದ ಚಂದ್ರವಳ್ಳಿ ಕೆರೆ ಇದೆ. ಗುಹಾಂತರ ದೇವಾಲಯ ಇದೆ. ಧವಳಗಿರಿಯ ಸುಂದರ ಸೊಬಗು ಕಣ್ತುಂಬಿಕೊಳ್ಳುವ ಜನರು ಸಖತ್ ಏಂಜಾಯ್ ಮಾಡುವ ತಾಣವಿದು. ಆದ್ರೆ, ಚಂದ್ರವಳ್ಳಿ ಎಂಟ್ರಿ ಗೇಟ್ ನಲ್ಲಿ ನೂರಾರು ಮಂಗಗಳ ಹಿಂಡು ಕಂಡು ಬರುತ್ತದೆ. ಯಾರೇ ಬ್ಯಾಗ್ ಹಿಡಿದು ಬಂದರೂ ಸಾಕು ಬೆನ್ನು ಬಿದ್ದು ಕಾಡುತ್ತವೆ. ಬೆದರಿಸಿ ಕೈಲಿರುವ ಬ್ಯಾಗ್ ಕಸಿದುಕೊಂಡು ತಿಂಡಿ ತನಿಸು ತಿಂದು ಮುಗಿಸುತ್ತವೆ. ಹೀಗಾಗಿ, ಸುಂದರ ತಾಣ ವೀಕ್ಷಿಸಲು ಖುಷಿಯಿಂದ ಬಂದ ಜನರು ಬೇಸರಗೊಳ್ಳುವ ಸ್ಥಿತಿ ನಿರ್ಮಾಣ ಆಗಿದೆ.

ಇನ್ನು ಇಷ್ಟೇ ಅಲ್ಲ ಪ್ರವಾಸಿ ತಾಣ ವೀಕ್ಷಿಸಲು ಬಂದವರ ಬೈಕ್ , ಕಾರ್ ಗಳ ಮೇಲೆ ಏರುವ ಮಂಗಗಳು ಮಂಗ ಚೇಷ್ಟೆ ಮಾಡುತ್ತವೆ. ಬ್ಯಾಗ್ ಗಳನ್ನು ಹರಿದು ಹಾಕುತ್ತವೆ. ಅಂತೆಯೇ ಇಲ್ಲಿನ ಅಂಗಡಿಗಳ ಜನರು ಸಹ ಮಂಗಗಳ ಹಾವಳಿಯಿಂದ ಬೇಸತ್ತಿದ್ದಾರೆ. ಇಡೀ ಅಂಗಡಿ ಹೊರ ಭಾಗದಲ್ಲೂ ಕಬ್ಬಿಣದ ಸಲಾಕೆ ಹಾಕಿ ಪ್ಯಾಕ್ ಮಾಡಿದರೂ ಮಂಗಗಳ ಕಾಟ ಮಾತ್ರ ತಪ್ಪಿಲ್ಲ. ಹೀಗಾಗಿ, ಹೇಗಾದ್ರೂ ಮಾಡಿ ಮಂಗಗಳ ಹಾವಳಿ ತಪ್ಪಿಸಿ ಎಂದು ವ್ಯಾಪಾರಿಗಳು ಮನವಿ ಮಾಡುತ್ತಾರೆ.

ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದ ಚಂದ್ರವಳ್ಳಿ ಪ್ರದೇಶದಲ್ಲಿ ಬೇಸಿಗೆ ಆರಂಭದಲ್ಲೇ ಆಹಾರ ಹರಸಿ ನೂರಾರು ಮಂಗಗಳ ಹಿಂಡು ಕಾಡಿನಿಂದ ನಾಡಿಗೆ ಬಂದಿವೆ. ಪ್ರವಾಸಿಗರು ಮತ್ತು ಇಲ್ಲಿನ ವ್ಯಾಪಾರಿಗಳಿಗೆ ಮಂಗಗಳ ರೌಡಿಸಂ ನೆಮ್ಮದಿ ಕೆಡಿಸುತ್ತಿದೆ. ಹಸಿರು ವನದಲ್ಲಿ ಮಂಗಗಳ ಚಿನ್ನಾಟ ಕಣ್ತುಂಬಿಕೊಳ್ಳಲು ಪ್ರವಾಸಿಗರಿಗೆ ಖುಷಿ ನೀಡುತ್ತದೆ.

ಆದ್ರೆ, ಆಹಾರಕ್ಕಾಗಿ ಪ್ರವಾಸಿಗರಿಗೆ ಮಂಗಗಳು ಮುಗಿಬೀಳುವದರಿಂದ ಮಾತ್ರ ಅನೇಕರು ಬೇಸರದಿಂದಲೇ ವಾಪಸ್ ಆಗುವ ಸ್ಥಿತಿ ನಿರ್ಮಾಣ ಆಗಿದೆ. ಹೀಗಾಗಿ, ಪ್ರವಾಸಿಗರಿಗೆ ಮಂಗಗಳ ಹಾವಳಿ ತಪ್ಪಿಸಬೇಕು. ಅಂತೆಯೇ ಮಂಗಗಳಿಗೂ ಸೂಕ್ತ ಆಹಾರ ಪೂರೈಸುವ ಕೆಲಸ ಆಗಬೇಕೆಂಬುದು ಜನರ ಆಗ್ರಹ.

ವರದಿ: ಬಸವರಾಜ ಮುದನೂರ್, ಟಿವಿ9, ಚಿತ್ರದುರ್ಗ

 

Published On - 1:46 pm, Mon, 13 February 23