ಪೊಲೀಸರಿಂದ ಮುರುಘಾ ಶರಣರ ವಿಶ್ರಾಂತಿ ಕೋಣೆಯ ಮಹಜರು, ಮೈಸೂರಿನಿಂದ ಚಿತ್ರದುರ್ಗಕ್ಕೆ ಸಂತ್ರಸ್ತ ಬಾಲಕಿಯರು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Oct 28, 2022 | 12:58 PM

ಸೆ 1ರಂದು ಶಿವಮೂರ್ತಿ ಮುರುಘಾ ಶರಣರನ್ನು ಪೊಲೀಸರು ಬಂಧಿಸಿದ್ದರು. ಪ್ರಸ್ತುತ ಸ್ವಾಮೀಜಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಪೊಲೀಸರಿಂದ ಮುರುಘಾ ಶರಣರ ವಿಶ್ರಾಂತಿ ಕೋಣೆಯ ಮಹಜರು, ಮೈಸೂರಿನಿಂದ ಚಿತ್ರದುರ್ಗಕ್ಕೆ ಸಂತ್ರಸ್ತ ಬಾಲಕಿಯರು
ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರು
Follow us on

ಚಿತ್ರದುರ್ಗ: ಶಿವಮೂರ್ತಿ ಮುರುಘಾ ಶರಣರ (Murugha Mutt Seer) ವಿರುದ್ಧ ದಾಖಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ದಿನದಿಂದ ದಿನಕ್ಕೆ ವೇಗ ಪಡೆದುಕೊಳ್ಳುತ್ತಿದೆ. ನಿನ್ನೆಯಷ್ಟೇ (ಅ 27) ಸ್ವಾಮೀಜಿ ವಿರುದ್ಧ 694 ಪುಟಗಳ ಆರೋಪಪಟ್ಟಿಯನ್ನು (POCSO Chargesheet) ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ದೂರು ದಾಖಲಾಗಿ 2 ತಿಂಗಳಾದ ನಂತರ ಪೊಲೀಸರು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಈ ಬೆಳವಣಿಗೆಯ ಬೆನ್ನಲ್ಲೇ ತನಿಖೆಯೂ ಚುರುಕುಗೊಂಡಿದೆ.

ಶಿವಮೂರ್ತಿ ಮುರುಘಾ ಶರಣರು ಮಠದಲ್ಲಿ ಬಳಸುತ್ತಿದ್ದ ಕಚೇರಿ ಹಾಗೂ ವಿಶ್ರಾಂತಿ ಕೊಠಡಿಗಳಿಗೆ ಇಂದು (ಅ 28) ಪೊಲೀಸರು ಭೇಟಿ ನೀಡಿ ಮಹಜರು ಮಾಡಿದರು. ಎರಡೂ ಕೊಠಡಿಗಳ ಕೀಲಿಯನ್ನು ಬಸವಪ್ರಭು ಸ್ವಾಮೀಜಿ ಪೊಲೀಸರಿಗೆ ಕೊಟ್ಟು, ತನಿಖೆಗೆ ಸಹಕರಿಸಿದರು. ಶಿವಮೂರ್ತಿ ಶರಣರ ವಿರುದ್ಧ ಆಗಸ್ಟ್​ 26ರಂದು ಮೊದಲ ಪೋಕ್ಸೋ ಪ್ರಕರಣ ಮೈಸೂರಿನ ನಜರ್​ಬಾದ್​ ಠಾಣೆಯಲ್ಲಿ ದಾಖಲಾಗಿತ್ತು. ಈ ಪ್ರಕರಣವನ್ನು ಆ 27ರಂದು ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ಸೆ 1ರಂದು ಶಿವಮೂರ್ತಿ ಮುರುಘಾ ಶರಣರನ್ನು ಪೊಲೀಸರು ಬಂಧಿಸಿದ್ದರು. ಪ್ರಸ್ತುತ ಸ್ವಾಮೀಜಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಅ 13ರಂದು ದಾಖಲಾಗಿರುವ 2ನೇ ಪೋಕ್ಸೋ ಪ್ರಕರಣದಲ್ಲಿ ಕ್ರಮವಾಗಿ 6 ಮತ್ತು 7ನೇ ಆರೋಪಿಗಳಾಗಿರುವ ಶ್ರೀಗಳ ಸಹಾಯಕ ಮಹಾಲಿಂಗ ಹಾಗೂ ಅಡುಗೆಭಟ್ಟ ಕರಿಬಸಪ್ಪ ಅವರ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು ಸೆಷನ್ಸ್ ನ್ಯಾಯಾಲಯವು ಅ 31ಕ್ಕೆ ಮುಂದೂಡಿದೆ. ವಕೀಲ ಪ್ರತಾಪ ಜೋಗಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.

ಚಿತ್ರದುರ್ಗಕ್ಕೆ ಬಂದ ದೂರು ನೀಡಿದ ಬಾಲಕಿಯರು

ಚಿತ್ರದುರ್ಗದ ಮುರುಘಾಶ್ರೀ ವಿರುದ್ಧ 2ನೇ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಿರುವ ಬಾಲಕಿಯರನ್ನು ಮೈಸೂರಿನಿಂದ ಚಿತ್ರದುರ್ಗಕ್ಕೆ ಪೊಲೀಸರು ಕರೆತಂದರು. ಬಾಲಕಿಯರ ಸಮಕ್ಷಮದಲ್ಲಿ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಮುರುಘಾ ಮಠದಲ್ಲಿ ಮಹಜರು ನಡೆಸಿದರು. ಸಿಪಿಐ ಬಾಲಚಂದ್ರ ನಾಯ್ಕ್ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಯುತ್ತಿದೆ. ಮುರುಘಾ ಶರಣರ ವಿರುದ್ಧ ಅ 13ರಂದು ಮೈಸೂರಿನ ನಜರಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅ 14ಕ್ಕೆ ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ವರ್ಗಾವಣೆಯಾಗಿತ್ತು.

Published On - 12:58 pm, Fri, 28 October 22