ಚಿತ್ರದುರ್ಗ: ಅಪ್ರಾಪ್ತ ಬಾಲಕಿಯರ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂಬ ಗಂಭಿರ ಆರೋಪ ಚಿತ್ರದುರ್ಗದ ಮುರುಘಾಶ್ರೀಗಳ ವಿರುದ್ಧ ಕೇಳಿ ಬಂದಿದೆ. ಈ ಪ್ರಕರಣ ಸಂಬಂಧ ಮುರುಘಾಶ್ರೀ ಸೇರಿ ಐವರ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದ್ದು, ಇದೀಗ ಬಾಲಕಿಯರ ಆರೋಪದ ಅಸಲಿಯತ್ತೇನು ಅನ್ನೋ ಬಗ್ಗೆ ಚಿತ್ರದುರ್ಗದ ಪೊಲೀಸರು ತನಿಖೆಗೆ ಸಜ್ಜಾಗಿದ್ದಾರೆ.
ಮೈಸೂರಿನ ನಜರ್ಬಾದ್ ಠಾಣೆಯಿಂದ ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ಕೇಸ್ ವರ್ಗಾವಣೆಯಾಗಿದೆ. ಡಿವೈಎಸ್ಪಿ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಯಲಿದೆ. ಆದ್ರೆ ಚಿತ್ರದುರ್ಗದ ಮುರುಘಾ ಮಠದ ಹಾಸ್ಟೆಲ್ ವಾರ್ಡನ್ ರಶ್ಮಿ, ಮಠದ ಉತ್ತರಾಧಿಕಾರಿ ಬಸವಾದಿತ್ಯ, ವಕೀಲ ಗಂಗಾಧರ್ ನಾಪತ್ತೆಯಾಗಿದ್ದಾರೆ. ಮುರುಘಾಶ್ರೀಗಳು ಮುರುಘಾಮಠದಲ್ಲೇ ವಾಸ್ತವ್ಯ ಹೂಡಿದ್ದು ಮಠದ ಕಾರ್ಯದರ್ಶಿ ಪರಮಶಿವಯ್ಯ ಸಾಥ್ ಇದ್ದಾರೆ.
ಸ್ವಾಮೀಜಿ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ
ಮುರುಘಾ ಮಠದ ಶ್ರೀಗಳ ವಿರುದ್ಧ ಮಕ್ಕಳು ಲೈಂಗಿಕ ದೌರ್ಜನ್ಯ ಆರೋಪ ಮಾಡಿರೋ ಬಗ್ಗೆ ಒಡನಾಡಿ ಸಂಸ್ಥೆಯ ಸಿಬ್ಬಂದಿ ಮಾತನಾಡಿದ್ದಾರೆ. ಕೌನ್ಸೆಲಿಂಗ್ ವೇಳೆ ಲೈಂಗಿಕ ದೌರ್ಜನ್ಯವಾಗಿದೆ ಅಂತಾ ಮಕ್ಕಳು ಆರೋಪಿಸಿದ್ರು. ಸ್ವಾಮೀಜಿಗಳೇ ಕಿರುಕುಳ ಕೊಡ್ತಿದ್ರು ಅಂತಾ ಮಕ್ಕಳು ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ಅಲ್ಲಿನ ಸಿಬ್ಬಂದಿ ಕೂಡ ಬೆಂಬಲವಾಗಿ ಇದ್ರು ಅಂತಾನೂ ಮಕ್ಕಳು ಆರೋಪಿಸಿದ್ದಾರಂತೆ. ಇಷ್ಟೇ ಅಲ್ಲ, ಆಹಾರದಲ್ಲಿ ಮತ್ತು ಬೆರೆಸಿ ದೌರ್ಜನ್ಯ ಎಸಗಿದ್ದಾರೆ ಅಂತಾನೂ ಶ್ರೀಗಳ ವಿರುದ್ಧ ಬಾಲಕಿಯರು ಆರೋಪಿಸಿದ್ದಾರಂತೆ.
ಹಿಂಸೆ ತಾಳಲಾರದೆ ಮಠದಿಂದ ನಾಪತ್ತೆಯಾಗಿದ್ರಾ ಬಾಲಕಿಯರು?
ಇನ್ನು ಮೈಸೂರಿನಲ್ಲಿ ಒಡನಾಡಿ ಸಂಸ್ಥೆ ಮುಖ್ಯಸ್ಥ ಪರಶು ಹೇಳೋ ಪ್ರಕಾರ, ಬಾಲಕಿಯರು ಹಿಂಸೆ ತಾಳಲಾರದೆ ತಿಂಗಳ ಹಿಂದೆಯೇ ಮಠದಿಂದ ನಾಪತ್ತೆಯಾಗಿದ್ರಂತೆ. ಚಿತ್ರದುರ್ಗದಿಂದ ಬೆಂಗಳೂರಿಗೆ ಬಂದು, ನಗರದಲ್ಲಿ ಓಡಾಡಿದ್ರಂತೆ. ಅಷ್ಟೇ ಅಲ್ಲ, ಕಾಟನ್ ಪೇಟೆ ಠಾಣೆ ವ್ಯಾಪ್ತಿಯಲ್ಲೂ ಕಾಣಿಸಿಕೊಂಡಿದ್ರಂತೆ. ಇದಾದ ಬಳಿಕ ಬೆಂಗಳೂರಿನಲ್ಲಿ ದೂರು ಕೊಟ್ರೆ ಆಗಲ್ಲ ಅಂತಾ ಮೈಸೂರಿನತ್ತ ಬಾಲಕಿಯರು ತೆರಳಿದ್ದಾರಂತೆ. ಒಬ್ಬ ಆಟೋ ಚಾಲಕನ ಸಹಾಯದಿಂದ ಮೈಸೂರಿಗೆ ಹೋಗಿದ್ದಾರಂತೆ. ಆಟೋ ಚಾಲಕ ಮಕ್ಕಳನ್ನ ಒಡನಾಡಿಗೆ ಕಳುಹಿಸಿಕೊಟ್ಟಿದ್ದಾನೆ ಅಂತಾ ಮೈಸೂರಿನಲ್ಲಿ ಒಡನಾಡಿ ಸಂಸ್ಥೆ ಮುಖ್ಯಸ್ಥ ಪರಶು ಹೇಳಿದ್ದಾರೆ.
ಇನ್ನು ಒಡನಾಡಿ ಸಂಸ್ಥೆ ಬಾಲಕಿಯರನ್ನ ವಿವಿಧ ಹಂತಗಳಲ್ಲಿ ಕೌನ್ಸೆಲಿಂಗ್ ನಡೆಸಿದೆ. ಈ ವೇಳೆ, ಬಾಲಕಿಯರು ಒಂದೊಂದೇ ವಿಚಾರಗಳನ್ನ ಬಿಚ್ಚಿಟ್ಟಿದ್ದಾರಂತೆ. ಮುರುಘಾ ಶ್ರೀಗಳ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರಂತೆ. ಹೀಗಾಗಿ ಒಡನಾಡಿ ಸಂಸ್ಥೆ ಮೂಲಕ ಮೈಸೂರಿನ ನಜರಬಾದ್ ಪೊಲೀಸ್ ಠಾಣೆಗೆ ಬಾಲಕಿಯರು ದೂರು ನೀಡಿದ್ದಾರೆ.
Published On - 8:38 pm, Sat, 27 August 22