ಚಿತ್ರದುರ್ಗ: ಈ ನಾಡಿಗೆ ಭದ್ರಾ ಯೋಜನೆ ತಂದ ಭಗೀರಥ ಬಿ.ಎಸ್.ಯಡಿಯೂರಪ್ಪ. ಇದು ಈಗ ರಾಷ್ಟ್ರೀಯ ಯೋಜನೆಗೆ ಸೇರುವ ಅಂತಿಮ ಹಂತದಲ್ಲಿದೆ ಎಂದು ಚಿತ್ರದುರ್ಗ ಶರಣ ಸಂಸ್ಕೃತಿ ಉತ್ಸವದಲ್ಲಿ ಭಾಗಿಯಾಗಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಜನರ ಬಾಯಾರಿಕೆ, ಭೂತಾಯಿ ಬಾಯಾರಿಕೆ ನೀಗಿಸುವ ಕೆಲಸಕ್ಕೆ ಸರ್ಕಾರ ಬದ್ಧವಾಗಿದೆ. ಚಿತ್ರದುರ್ಗ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರವು ಅಗತ್ಯ ಕ್ರಮ ತೆಗೆದುಕೊಳ್ಳಲಿದೆ. ಜಿಲ್ಲೆಯಲ್ಲಿ ಇಂಡಸ್ಟ್ರಿಯಲ್ ಟೌನ್ಶಿಪ್ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದರು. ಈ ಕಾರ್ಯಕ್ಕಾಗಿ 2 ಸಾವಿರ ಎಕರೆ ಭೂಮಿ ಗುರುತಿಸುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ. ಮುರುಘಾಶರಣರ ಜನ್ಮದಿನವನ್ನು ಸಮಾನತೆಯ ದಿನವಾಗಿ ಆಚರಿಸಲು ಅಧಿಕಾರಿಗಳ ಜತೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಹೇಳಿದರು.
ಚಿತ್ರದುರ್ಗದ ಮುರುಘಾಮಠದ ಅನುಭವ ಮಂಟಪದಲ್ಲಿ ನಡೆದ ಶರಣ ಸಂಸ್ಕೃತಿ ಉತ್ಸವದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಸವ ಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಶರಣಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಿಂತುಕೊಂಡೇ ಗೌರವ ಸ್ವೀಕರಿಸಿದ ಮುಖ್ಯಮಂತ್ರಿಯ ಸರಳತೆ ಎಲ್ಲರ ಗಮನ ಸೆಳೆಯಿತು. ಈ ವೇಳೆ ಬೊಮ್ಮಾಯಿ, ಬಿಎಸ್ವೈ ಭೇಟಿಯಾಗಬೇಕು ಎಂದು ಮಹಿಳೆಯೊಬ್ಬರು ಗಲಾಟೆ ಮಾಡುತ್ತಿದ್ದರು. ಮಹಿಳೆಯನ್ನು ಸುತ್ತುವರಿದ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಹೊರಗೆ ಕರೆದೊಯ್ದರು.
ಶರಣ ಸಂಸ್ಕೃತಿ ಉತ್ಸವದಲ್ಲಿ ಮುರುಘಾಶ್ರೀಗೆ ಶಿಷ್ಯವೃಂದ ಹಾಗೂ ಭಕ್ತರಿಂದ ಗುರುವಂದನೆ ಕಾರ್ಯಕ್ರಮ ನಡೆಯಿತು. ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಪುಷ್ಪವೃಷ್ಟಿಗೈದು, ಮುರುಘಾಶ್ರೀ ಮಾದರಿ ಬೆಳ್ಳಿ ಪುತ್ಥಳಿ ನೀಡಿ ಗೌರವಿಸಲಾಯಿತು.
ಉತ್ಸವದಲ್ಲಿ ಭಾಷಣ ಮಾಡಿದ ಮುರುಘಾಶರಣರು, ಚಿತ್ರದುರ್ಗಕ್ಕೆ ಕಾರಿಡಾರ್ ಇಲ್ಲ, ಸ್ಮಾರ್ಟ್ಸಿಟಿಯೂ ಇಲ್ಲ. ಜಿಲ್ಲೆಗೆ ವಿಶೇಷ ಯೋಜನೆ ನೀಡದಿರುವುದು ನೋವಿನ ಸಂಗತಿ. ಚಿತ್ರದುರ್ಗ ಜಿಲ್ಲೆ ಅಭಿವೃದ್ಧಿಗೆ ಬಂದ ಹಣ ವಾಪಸ್ ಹೋಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಶೇ 2.5ರಷ್ಟು ಹಣ ಮಾತ್ರ ಬಳಕೆಯಾಗಿದೆ. ಚಿತ್ರದುರ್ಗ ಜಿಲ್ಲೆಯ ಜನರು ಐವರು ಬಿಜೆಪಿ ಶಾಸಕರನ್ನು ಗೆಲ್ಲಿಸಿದ್ದಾರೆ. ಚಿತ್ರದುರ್ಗ ಜಿಲ್ಲೆ ದಿನೇದಿನೆ ಅಧೋಗತಿಯತ್ತ ಹೋಗುತ್ತಿದೆ. ಏಳುಸುತ್ತಿನ ಕೋಟೆ, ಮುರುಘಾಮಠ ಬಿಟ್ಟರೆ ಇಲ್ಲಿ ಮತ್ತೇನೂ ಇಲ್ಲ. ಬಯಲುಸೀಮೆಯ ಬಗ್ಗೆ ಗಮನಹರಿಸಿ ಅಭಿವೃದ್ಧಿ ಮಾಡಿ. ಬೊಮ್ಮಾಯಿ ಅದೃಷ್ಟದ ಸಿಎಂ, ಬಿಎಸ್ವೈ ಅನುಭವಿ ಸಿಎಂ ಎಂದು ಹೇಳಿದರು. ಅಭಿವೃದ್ಧಿ ಕಡೆಗಣನೆ ಬಗ್ಗೆ ಮುರುಘಾಶರಣು ಪ್ರಸ್ತಾಪಿಸಿದಾಗ ಜನರು ಬೆಂಬಲಿಸಿ ಘೋಷಣೆಗಳನ್ನು ಕೂಗಿದರು. ದಾವಣಗೆರೆ ಸಂಸದ ಸಿದ್ದೇಶ್ವರ, ಚಿತ್ರದುರ್ಗ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಉಪಸ್ಥಿತರಿದ್ದರು.
ದೇಶಕಟ್ಟುವ ಸಂಸ್ಥೆ ಆರ್ಎಸ್ಎಸ್
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರ್ಎಸ್ಎಸ್ನ ರಿಮೋಟ್ ಕಂಟ್ರೋಲ್ನಲ್ಲಿದ್ದಾರೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಚಿತ್ರದುರ್ಗದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು. ಆರ್ಎಸ್ಎಸ್ ಒಂದು ರಾಷ್ಟ್ರ ಕಟ್ಟುವ ಸಂಸ್ಥೆಯಾಗಿದೆ. ರಾಷ್ಟ್ರ ಕಟ್ಟುವ ಕೆಲಸಕ್ಕೆ ನನ್ನ ಸಮರ್ಪಣ ಭಾವನೆಯಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ನಾನು ವಿರೋಧಿಸಲ್ಲ. ಅವರು ಸಮಾಜವಾದಿ ಹಿನ್ನೆಲೆಯವರು. ಆದರೆ ಒಂದು ಕುಟುಂಬದ ರಿಮೋಟ್ ಕಂಟ್ರೋಲ್ನಲ್ಲಿದ್ದಾರೆ. ಇದು ನನಗೆ ದುಃಖದ ವಿಚಾರ ಎಂದು ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದರು.
ಇದನ್ನೂ ಓದಿ: ಗುರುವಂದನೆ ಕಾರ್ಯಕ್ರಮದಲ್ಲಿ ಡಾ.ಶಿವಮೂರ್ತಿ ಮುರುಘಾ ಶರಣರಿಗೆ ಬೆಳ್ಳಿ ಪುತ್ಥಳಿ ಉಡುಗೊರೆ: ಯಡಿಯೂರಪ್ಪ-ಬೊಮ್ಮಾಯಿಗೆ ಶರಣ ಪ್ರಶಸ್ತಿಗಳು
ಇದನ್ನೂ ಓದಿ: ಬಿಎಸ್ ಯಡಿಯೂರಪ್ಪ ‘ಶರಣಶ್ರೀ’, ಬಸವರಾಜ ಬೊಮ್ಮಾಯಿ ‘ಬಸವಭೂಷಣ’ ಪ್ರಶಸ್ತಿಗೆ ಆಯ್ಕೆ; ಡಾ.ಶಿವಮೂರ್ತಿ ಮುರುಘಾ ಶರಣರು ಮಾಹಿತಿ