Murugha Shree: ಬಿಗಿಯಾಗಿತ್ತು ಕಾನೂನು ಕುಣಿಕೆ, ಅನಿವಾರ್ಯವಾಗಿತ್ತು ಬಂಧನ; ಮುರುಘಾ ಶರಣರು ಶರಣಾಗಿದ್ದಾರೆ ಎಂದ ಸ್ವಾಮೀಜಿ ಪರ ವಕೀಲ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 02, 2022 | 8:08 AM

ಮಹಿಳಾ ವಾರ್ಡನ್​ ಹೇಳಿಕೆಯ ಆಧಾರದ ಮೇಲೆ ಬಂಧನ ಆಗಿಲ್ಲ. ಬೇರೆ ಪ್ರಕರಣದ ವಿಚಾರವಾಗಿ ಮಹಿಳಾ ವಾರ್ಡನ್ ವಿಚಾರಣೆ ನಡೆದಿದೆ ಎಂದು ಆರೋಪಿ ಪರ ವಕೀಲ ಉಮೇಶ್ ಹೇಳಿದರು.

Murugha Shree: ಬಿಗಿಯಾಗಿತ್ತು ಕಾನೂನು ಕುಣಿಕೆ, ಅನಿವಾರ್ಯವಾಗಿತ್ತು ಬಂಧನ; ಮುರುಘಾ ಶರಣರು ಶರಣಾಗಿದ್ದಾರೆ ಎಂದ ಸ್ವಾಮೀಜಿ ಪರ ವಕೀಲ
ಮುರುಘಾ ಮಠದ ಶಿವಮೂರ್ತಿ ಶರಣರು
Follow us on

ಚಿತ್ರದುರ್ಗ:  ಮುರುಘಾ ಮಠದ ಪೀಠಾಧ್ಯಕ್ಷ ಶಿವಮೂರ್ತಿ ಮುರುಘಾ ಶರಣರನ್ನು ಪೊಲೀಸರು ಬಂಧಿಸಿಲ್ಲ. ಕಾನೂನಿಗೆ ಗೌರವ ನೀಡಲೆಂದು ಸ್ವಾಮೀಜಿಯೇ ಪೊಲೀಸರಿಗೆ ಶರಣಾಗಿದ್ದಾರೆ ಎಂದು ಸ್ವಾಮೀಜಿ ಪರ ವಕೀಲ ಉಮೇಶ್​ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಅಪ್ರಾಪ್ತರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಸ್ವಾಮೀಜಿಯನ್ನು ಪೊಲೀಸರು ಪ್ರಾಥಮಿಕ ವಿಚಾರಣೆ ನಡೆಸಿದ್ದಾರೆ. ಮಹಿಳಾ ವಾರ್ಡನ್​ ಹೇಳಿಕೆಯ ಆಧಾರದ ಮೇಲೆ ಬಂಧನ ಆಗಿಲ್ಲ. ಬೇರೆ ಪ್ರಕರಣದ ವಿಚಾರವಾಗಿ ಮಹಿಳಾ ವಾರ್ಡನ್ ವಿಚಾರಣೆ ನಡೆದಿದೆ. ಶ್ರೀಗಳು ಆರೋಪ ಮುಕ್ತರಾಗಿ ಹೊರಬರುವ ವಿಶ್ವಾಸ ಇದೆ. ಇಂದು ಜಾಮೀನು ಕೋರಿ ಕೋರ್ಟ್​ಗೆ ಮತ್ತೆ ಅರ್ಜಿ ಸಲ್ಲಿಸುತ್ತೇವೆ ಎಂದು ಉಮೇಶ್ ತಿಳಿಸಿದರು. ನಾವು ನಿನ್ನೆ ನ್ಯಾಯಾಲಯಕ್ಕೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ರದ್ದಾಗಿದೆ. ಇಂದು ಮತ್ತೊಮ್ಮೆ ಜಾಮೀನಿಗೆ ಅರ್ಜಿ ಸಲ್ಲಿಸುತ್ತೇವೆ. ಮುರುಘಾಶ್ರೀಗಳಿಗೆ ಗೆದ್ದು ಬರುವ ವಿಶ್ವಾಸ ಇದೆ ಎಂದು ಅವರು ಹೇಳಿದರು.

ಸ್ವಾಮೀಜಿ ಬಂಧನದ ನಂತರ ಮುರುಘಾ ಮಠದ ಪ್ರಮುಖ ಗೇಟ್ ಅನ್ನು ಬಂದ್​​ ಮಾಡಿದ ಸಿಬ್ಬಂದಿ ವಾಹನಗಳ ಪ್ರವೇಶ ನಿರ್ಬಂಧಿಸಿದರು. ಪ್ರಸ್ತುತ ಮುರುಘಾ ಮಠದ ಆವರಣ ಸಂಪೂರ್ಣ ಖಾಲಿಯಾಗಿದೆ. ಇತ್ತೀಚೆಗಷ್ಟೇ ಕಾರಾಗೃಹದಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಿಕೊಟ್ಟಿದ್ದ ಮುರುಘಾ ಶರಣರು ಬಂಧನಕ್ಕೆ ಒಳಪಟ್ಟು ಜೈಲಿಗೆ ಬಂದಿರುವುದು ತಿಳಿದ ಸಿಬ್ಬಂದಿ ಅಚ್ಚರಿ ವ್ಯಕ್ತಪಡಿಸಿದರು. ನಿನ್ನೆ ಸಂಜೆ ಎಂದಿನಂತೆ ಕೆಲಸ ಮುಗಿಸಿ ಮನೆಗೆ ತೆರಳಿದ್ದ ಸಿಬ್ಬಂದಿ ಬೆಳಗ್ಗೆ ಡ್ಯೂಟಿಗೆ ಹಾಜರಾದಾಗ ಶ್ರೀಗಳ ಬಂಧನ ವಿಚಾರ ತಿಳಿದುಬಂದಿತ್ತು.

ಇಂದು ಪೊಲೀಸ್ ಕಸ್ಟಡಿಗೆ ಒಪ್ಪಿಸುವ ಸಾಧ್ಯತೆ

ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಶಿವಮೂರ್ತಿ ಮುರುಘಾ ಶರಣರನ್ನು ಪೊಲೀಸರು ಮತ್ತೊಮ್ಮೆ ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಆರೋಗ್ಯದ‌ ಸ್ಥಿತಿಗತಿ ವರದಿ ಪಡೆಯಲಿದ್ದಾರೆ. ಆರೋಪಗಳು ಗಂಭೀರವಾಗಿರುವುದರಿಂದ ತನಿಖೆಗಾಗಿ ಅವರನ್ನು ಪೊಲೀಸರ ಕಸ್ಟಡಿಗೆ ನೀಡುವ ಸಾಧ್ಯತೆಯಿದೆ. ಕಸ್ಟಡಿಗೆ ಪಡೆದ ನಂತರ ಕೂಲಂಕಷವಾಗಿ ತನಿಖೆ ನಡೆಸಲಿರುವ ಪೊಲೀಸರು, ಕೃತ್ಯ ನಡೆದ ಸ್ಥಳದ ಮಹಜರ್ ಮತ್ತು ಆರೋಪಿಯ ನಿವಾಸದ ಶೋಧನೆ ನಡೆಸಲಿದ್ದಾರೆ. ಸಂತ್ರಸ್ತ ಬಾಲಕಿಯರ ಹೇಳಿಕೆ ಆಧರಿಸಿ ವಿಚಾರಣೆ ಮುಂದುವರಿಸಲಿದ್ದಾರೆ. ಮಠದ ಆವರಣದಲ್ಲಿ ಸಿಸಿಟಿವಿಗಳಿದ್ದರೆ ಅವುಗಳ ದೃಶ್ಯಗಳನ್ನೂ ಪಡೆದು ಪರಿಶೀಲಿಸಬಹುದು. ಕಾವಲಿಗಿರುವ ಗಾರ್ಡ್​ಗಳ ಹೇಳಿಕೆಯನ್ನೂ ಪಡೆಯಬಹುದು. ಜಾಮೀನು ಸಿಗುವವರೆಗೆ ಶ್ರೀಗಳು ಜೈಲಿನಲ್ಲಿರಬೇಕು. ಒಂದು ವೇಳೆ ಜಾಮೀನು ನೀಡಲು ಸೆಷನ್ಸ್ ಕೋರ್ಟ್​ ನಿರಾಕರಿಸಿದರೆ ಹೈಕೋರ್ಟ್​​ನಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಬಹುದು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 3 ತಿಂಗಳ ಒಳಗೆ ಅಂತಿಮ ವರದಿ ಸಲ್ಲಸಿಬೇಕಿದೆ.

ಅನಿವಾರ್ಯವಾಗಿತ್ತು ಬಂಧನ

ಆರೋಪಿ ಶಿವಮೂರ್ತಿ ಮುರುಘಾ ಶರಣರ ಪರ ವಕೀಲರು ಸಲ್ಲಿಸಿದ್ದ ಜಾಮೀನು ಅರ್ಜಿಗೆ ಪೊಲೀಸರು ಆಕ್ಷೇಪಣೆ ಸಲ್ಲಿಸಬೇಕಿತ್ತು. ಆಕ್ಷೇಪಣೆ ಸಲ್ಲಿಸುವಾಗ ತನಿಖೆ ವಿವರ ನೀಡುವುದು ಅನಿವಾರ್ಯವಾಗಿತ್ತು. ದೇಶದ ಗಮನ ಸೆಳೆದ ಪ್ರಕರಣ ಇದು. ಎಫ್​ಐಆರ್ ದಾಖಲಾಗಿ ದಾಖಲಾಗಿ 7 ದಿನ ಕಳೆದರೂ ಬಂಧಿಸದ ಬಗ್ಗೆಯೂ ನ್ಯಾಯಾಧೀಶರು ಸಹಜವಾಗಿಯೇ ಪ್ರಶ್ನಿಸುತ್ತಿದ್ದರು. ಆಗ ಉತ್ತರಿಸಲೇಬೇಕಾದ ಅನಿವಾರ್ಯತೆಗೆ ಪೊಲೀಸರು ಸಿಲುಕುತ್ತಿದ್ದರು. ನಿರೀಕ್ಷಣಾ ಜಾಮೀನು ಸಿಗುವ ಸಾಧ್ಯತೆ ಕಡಿಮೆ ಇತ್ತು. ಒಂದು ವೇಳೆ ಸ್ವಾಮೀಜಿಯನ್ನು ಬಂಧಿಸದಿದ್ದರೆ ಅಥವಾ ಅವರು ಶರಣಾಗದಿದ್ದರೆ ತನಿಖೆಗೆ ಸಹಕರಿಸುತ್ತಿಲ್ಲ ಎಂಬ ಭಾವನೆ ಮೂಡುತ್ತಿತ್ತು. ಬಾಲಕಿಯರ ಪರ ವಕೀಲರು ಇದೇ ವಿಚಾರವನ್ನು ಮುಂದಿಟ್ಟು ಜಾಮೀನಿಗೆ ಆಕ್ಷೇಪ ಸಲ್ಲಿಸುತ್ತಿದ್ದರು. ತನಿಖಾಧಿಕಾರಿಯೂ ಕೋರ್ಟ್​ಗೆ ಉತ್ತರಿಸಬೇಕಾಗಿತ್ತು. ಕಾನೂನಿನ ಕುಣಿಕೆ ಬಿಗಿಯಾಗುತ್ತಿರುವುದನ್ನು ಅರಿತ ಪೊಲೀಸರು ಸ್ವಾಮೀಜಿಯನ್ನು ಬಂಧಿಸಿದ್ದಾರೆ.

Published On - 8:08 am, Fri, 2 September 22