ಚಿತ್ರದುರ್ಗ: ಹೊಸದುರ್ಗ ತಾಲ್ಲೂಕು ಸಾಣೇಹಳ್ಳಿಯಲ್ಲಿ ಮಂಗಳವಾರ ಶಿವಸಂಚಾರ ನಾಟಕೋತ್ಸವಕ್ಕೆ ರಂಗಕರ್ಮಿ ಶ್ರೀನಿವಾಸ್ ಜಿ.ಕಪ್ಪಣ್ಣ ಚಾಲನೆ ನೀಡಿದರು. ತರಳಬಾಳು ಮಠದಿಂದ ಆಯೋಜಿಸಿರುವ ನಾಟಕೋತ್ಸವವು ಶಿವಕುಮಾರ ಬಯಲು ರಂಗಮಂದಿರದಲ್ಲಿ ನಡೆಯಲಿದೆ. ತರಳಬಾಳು ಮಠದ ಡಾ.ಪಂಡಿತಾರಾಧ್ಯ ಸ್ವಾಮೀಜಿ, ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ, ಸಾಹಿತಿ ದೊಡ್ಡರಂಗೇಗೌಡ ಸೇರಿದಂತೆ ಹಲವು ಗಣ್ಯರು ಉಪಸ್ಥಿತಿರಿದ್ದರು.
ನಾಟಕೋತ್ಸವದಲ್ಲಿ ಮಾತನಾಡಿದ ಯಡಿಯೂರಪ್ಪ, ಸಾಹಿತಿ ದೊಡ್ಡರಂಗೇಗೌಡರು ಸಲಹೆ ಮಾಡಿದ್ದ ಸಾಣೇಹಳ್ಳಿಯಲ್ಲಿ ಸಾಂಸ್ಕೃತಿಕ ವಿಶ್ವವಿದ್ಯಾಲಯ ಆರಂಭಿಸುವ ಬೇಡಿಕೆ ಕುರಿತು ಪ್ರಸ್ತಾಪಿಸಿದರು. ನಾನು ಮುಖ್ಯಮಂತ್ರಿ ಆಗಿದ್ದಿದ್ದರೆ ಈಗಲೇ ಘೋಷಣೆ ಮಾಡುತ್ತಿದ್ದೆ. ನಾಟಕೋತ್ಸವ ಸಮಾರೋಪಕ್ಕೆ ಮುಖ್ಯಮಂತ್ರಿ ಬರುತ್ತಾರೆ. ಸಾಂಸ್ಕೃತಿಕ ವಿಶ್ವವಿದ್ಯಾಲಯದ ಬಗ್ಗೆ ಅವರಿಗೆ ಹೇಳುತ್ತೇನೆ. ಸಾಣೇಹಳ್ಳಿ ಎಂಬ ಕುಗ್ರಾಮ ಈಗ ಸಾಂಸ್ಕೃತಿಕ ಕೇಂದ್ರ ಆಗಿದೆ. ಡಾ.ಪಂಡಿತಾರಾಧ್ಯಶ್ರೀ ನಾಟಕ ಚಳವಳಿ ಆರಂಭಿಸಿದ್ದಾರೆ. ಶಿವಕುಮಾರ ಕಲಾಸಂಘ ದೇಶಾದ್ಯಂತ ಖ್ಯಾತಿ ಗಳಿಸಿದೆ. ನಶಿಸಿಹೋಗುತ್ತಿದ್ದ ನಾಟಕ ಕಲೆ ಉಳಿವಿಗೆ ಶ್ರೀಗಳ ಶ್ರಮ ಇದೆ. ಶರಣ ಸಂಸ್ಕೃತಿ ಕಟ್ಟಿಕೊಡುವಲ್ಲಿ ನಾಟಕೋತ್ಸವ ಯಶಸ್ವಿಯಾಗಿದೆ ಎಂದು ಹೇಳಿದರು.
ಇದೇ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹಾನಗಲ್, ಸಿಂದಗಿ ಉಪಚುನಾವಣೆ ಫಲಿತಾಂಶ ವಿಚಾರದ ಬಗ್ಗೆ ವಿವರಿಸಿದರು. ಸಿಂದಗಿ ಕ್ಷೇತ್ರದಲ್ಲಿ 30 ಸಾವಿರ ಅಂತರದಲ್ಲಿ ಬಿಜೆಪಿ ಗೆದ್ದಿದೆ. ಹಾನಗಲ್ ವಿಧಾನಸಭೆ ಕ್ಷೇತ್ರದಲ್ಲಿ ಸ್ವಲ್ಪ ವ್ಯತ್ಯಾಸವಾಗಿದೆ. ಈ ಬಗ್ಗೆ ಕಾರ್ಯಕರ್ತರು, ಮುಖಂಡರ ಜೊತೆಗೆ ಸಮಾಲೋಚನೆ ಮಾಡುತ್ತೇನೆ. ಹಾನಗಲ್ನಲ್ಲಿ ಹಿನ್ನಡೆಗೆ ಕಾರಣ ಹುಡುಕುವ ಪ್ರಯತ್ನ ಮಾಡುತ್ತೇನೆ ಎಂದರು.
ಇದನ್ನೂ ಓದಿ: ಹಾನಗಲ್ ಉಪಚುನಾವಣೆ ಸೋಲನ್ನು ಸಿಎಂ ಒಬ್ಬರ ಮೇಲೆ ಹಾಕಲು ಆಗಲ್ಲ: ಬಿಎಸ್ ಯಡಿಯೂರಪ್ಪ
ಇದನ್ನೂ ಓದಿ: ಕರ್ನಾಟಕ ರಾಜ್ಯೋತ್ಸವ 2021: ನಾಡಿನ ಸಮಸ್ತ ಜನತೆಗೆ ಶುಭಾಶಯ ತಿಳಿಸಿದ ಮುಖ್ಯಮಂತ್ರಿ ಬೊಮ್ಮಾಯಿ, ಬಿ.ಎಸ್.ಯಡಿಯೂರಪ್ಪ