ಚಿತ್ರದುರ್ಗ: ನಗರದ ಮುರುಘಾಮಠದಲ್ಲಿ ಗುರುವಾರ ಮುರುಘಾ ಮಠದ ಪರಂಪರೆಯ ಪ್ರವರ್ತಕರಾದ ಶಾಂತವೀರ ಮುರುಘಾಶ್ರೀ ಚಿತ್ರಪಟ ಹಾಗೂ ಪಾದುಕೆಯ ಶೂನ್ಯಪೀಠಾರೋಹಣ ಗುರುವಾರ ಶ್ರದ್ಧಾಭಕ್ತಿಯಿಂದ ನೆರವೇರಿತು. ಮುರುಘಾ ಮಠದ ಪೀಠಾಧ್ಯಕ್ಷ ಶಿವಮೂರ್ತಿ ಮುರುಘಾ ಶರಣರು ಪೊಕ್ಸೊ ಪ್ರಕರಣದಲ್ಲಿ ಜೈಲುವಾಸ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಧಾರ್ಮಿಕ ವಿಧಿಗಳನ್ನು ಸರಳವಾಗಿ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲೆಂದು ಮಾಜಿ ಶಾಸಕ ಹಾಗೂ ಮುರುಘಾ ಮಠದ ಮಾಜಿ ಆಡಳಿತಾಧಿಕಾರಿ ಎಸ್.ಕೆ.ಬಸವರಾಜನ್ ದಂಪತಿ ಸಹ ಮಠಕ್ಕೆ ಆಗಮಿಸಿದ್ದರು.
ಶಿವಮೂರ್ತಿ ಮುರುಘಾ ಶರಣರ ವಿರೋಧಿ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಬಸವರಾಜನ್ ಅವರನ್ನು ಮುಂಜಾಗ್ರತಾ ಕ್ರಮವಾಗಿ ಪೊಲೀಸರು ತಡೆದರು. ಈ ವೇಳೆ ಕೆಲ ಸಮಯ ವಾಗ್ವಾದ ನಡೆಯಿತು. ಶೂನ್ಯಪೀಠಕ್ಕೆ ನಮನ ಸಲ್ಲಿಸಿದ ಬಳಿಕ ಬಸವರಾಜನ್ ಅವರು ಮೆರವಣಿಗೆಯಲ್ಲಿಯೂ ಭಾಗಿಯಾಗಿದ್ದರು. ಆರಂಭದ ದಿನಗಳಲ್ಲಿ ಶೂನ್ಯಪೀಠಾರೋಹಣ ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದ ಬಸವರಾಜನ್ ಕಳೆದ 15 ವರ್ಷಗಳಿಂದಲೂ ಉತ್ಸವದಿಂದ ದೂರವೇ ಉಳಿದಿದ್ದರು. ಯಾವುದೇ ಅಹಿತಕರ ಘಟನೆಗಳಿಗೆ ಪೊಲೀಸರು ಅವಕಾಶ ನೀಡಲಿಲ್ಲ.
ಶೂನ್ಯಪೀಠಾರೋಹಣದ ಬಳಿಕ ವಚನಗಳ ಹಸ್ತಪ್ರತಿ, ಅಲ್ಲಮಪ್ರಭು ಹಾಗೂ ಬಸವಣ್ಣನವರ ಚಿತ್ರಪಟಗಳ ಮೆರವಣಿಗೆ ನಡೆಯಿತು. ಭಕ್ತರು ಮುರುಘಾ ಪರಂಪರೆಗೆ ಸಂಬಂಧಿಸಿದ ಘೋಷಣೆಗಳನ್ನು ಕೂಗಿದರು. ಶಿವಮೂರ್ತಿ ಮುರುಘಾ ಶರಣರು ಪೀಠಕ್ಕೆ ಬರುವ ಮೊದಲು ಸಾಂಪ್ರದಾಯಿಕ ಪೀಠಾರೋಹಣ ಕಾರ್ಯಕ್ರಮಗಳು ನಡೆಯುತ್ತಿದ್ದವು. ಮೂರು ದಶಕಗಳ ಹಿಂದೆ ಶಿವಮೂರ್ತಿ ಮುರುಘಾ ಶರಣರು ಪಟ್ಟಕ್ಕೆ ಬಂದ ನಂತರ ರತ್ನ ಖಚಿತ ಕಿರೀಟ ಹಾಗೂ ಬೆಳ್ಳಿ ಸಿಂಹಾಸನ ತ್ಯಜಿಸಿ ರುದ್ರಾಕ್ಷಿ ಕಿರೀಟ ಧರಿಸಿ, ಮರದ ಸಿಂಹಾಸನದಲ್ಲಿ ಪೀಠಾರೋಹಣ ಮಾಡುವ ರೂಢಿ ಜಾರಿಗೆ ತಂದರು.
ಪೀಠಾರೋಹಣ ಕಾರ್ಯಕ್ರಮದ ರೂಪುರೇಷೆ ನಿರ್ಧರಿಸಿದ್ದ ಶರಣ ಸಂಸ್ಕೃತಿ ಉತ್ಸವ ಸಮಿತಿಯು ಶಿವಮೂರ್ತಿ ಮುರುಘಾ ಶರಣರ ಅನುಪಸ್ಥಿತಿ ಹಿನ್ನೆಲೆಯಲ್ಲಿ ಮಠವನ್ನು ಪ್ರವರ್ಧಮಾನಕ್ಕೆ ತಂದ ಮುರುಘಾ ಶಾಂತವೀರ ಸ್ವಾಮೀಜಿ ಚಿತ್ರಪಟವನ್ನು ಪೀಠದ ಮೇಲೆ ಇರಿಸಲು ತೀರ್ಮಾನಿಸಿತ್ತು.
ಕಾರ್ಯಕ್ರಮದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮಾಜಿ ಆಡಳಿತಾಧಿಕಾರಿ ಬಸವರಾಜನ್, 15 ವರ್ಷಗಳ ಬಳಿಕ ಶೂನ್ಯಪೀಠಾರೋಹಣದಲ್ಲಿ ಪಾಲ್ಗೊಳ್ಳಲು ಮಠಕ್ಕೆ ಬಂದಿದ್ದೆ. ಯಾರೂ ನನಗೆ ಅಡ್ಡಿಪಡಿಸಿಲ್ಲ. ಜಾಗ ಕಿರಿದಾಗಿದ್ದ ಕಾರಣದಿಂದ ನೂಕಾಟ, ತಳ್ಳಾಟ ನಡೆಯಿತು. ಗದ್ದುಗೆಗೆ ಗೌರವ ಅರ್ಪಿಸಿ, ಹಸ್ತಪ್ರತಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದೆ ಎಂದು ಹೇಳಿದರು.