ಚಿತ್ರದುರ್ಗ: ಹಸುವಿನ ಮರಣೋತ್ತರ ಪರೀಕ್ಷೆ ವರದಿ ನೀಡಲು ಲಂಚ ಸ್ವೀಕರಿಸುತ್ತಿದ್ದ ವೇಳೆ ಪಶು ವೈದ್ಯಾಧಿಕಾರಿ ಲೋಕಾಯುಕ್ತ (Lokayukta) ಬಲೆಗೆ ಬಿದ್ದಿರುವಂತಹ ಘಟನೆ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರು ಗ್ರಾಮದಲ್ಲಿ ನಡೆದಿದೆ. ಎಸ್ಪಿ ಮೃತ್ಯುಂಜಯ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಿದ್ದು, ಚಿಕ್ಕಜಾಜೂರು ಪಶು ಆಸ್ಪತ್ರೆ ವೈದ್ಯಾಧಿಕಾರಿ ಡಾ. ತಿಪ್ಪೇಸ್ವಾಮಿ ಬಲೆಗೆ ಬಿದ್ದಾರೆ. ಮೃತ ಹಸುವಿನ ಪೋಸ್ಟ್ ಮಾರ್ಟ್ಂ ರಿಪೋರ್ಟ್ ನೀಡಲು ಕಾಗಳಗೆರೆ ಗ್ರಾಮದ ರೈತ ಎಸ್.ಸ್ವಾಮಿಯಿಂದ 7,000 ರೂ. ಲಂಚ ಸ್ವೀಕರಿಸುತ್ತಿದ್ದರು ಎನ್ನಲಾಗಿದೆ.
ಹಾವೇರಿ: ಜಿಲ್ಲೆಯ ರಾಣೆಬೆನ್ನೂರಲ್ಲಿ 40 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ಶಹರ ಪೊಲೀಸ್ ಠಾಣೆ ಪಿಎಸ್ಐ ಸುನೀಲ್ ತೇಲಿ ಮತ್ತು ಅವರ ವಾಹನ ಚಾಲಕ ಸಚಿನ್ ಎಂಬವರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ. ಫಿರೋಜ್ ಎಂಬುವರಿಗೆ ಮನೆ ಬಾಡಿಗೆ ವಸೂಲಿ ಮಾಡಿಕೊಡಲು ಪಿಎಸ್ಐ ಸುನೀಲ್ ತೇಲಿ ಅವರು 50 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಇದನ್ನೂ ಓದಿ: Lokayukta Raid: ಹಾವೇರಿ, ಮಂಡ್ಯದಲ್ಲಿ ಲೋಕಾಯುಕ್ತ ದಾಳಿ, ಸಿಕ್ಕಿಬಿದ್ದ ಪಿಎಸ್ಐ ಮತ್ತು ಮಳವಳ್ಳಿ ಎಪಿಎಂಸಿ ಕಾರ್ಯದರ್ಶಿ
ಈ ಬಗ್ಗೆ ಫಿರೋಜ್ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಅದರಂತೆ ನಡೆದ ಕಾರ್ಯಾಚರಣೆ ವೇಳೆ 40 ಸಾವಿರ ಲಂಚ ಪಡೆಯುವಾಗ ಲಂಚದ ಹಣ ಸಹಿತ ಇಬ್ಬರನ್ನು ಅಧಿಕಾರಿಗಳು ಬಂಧಿಸಿದ್ದಾರೆ.
ಮಂಡ್ಯ: ಮಂಡ್ಯದಲ್ಲೂ ಭ್ರಷ್ಟ ಅಧಿಕಾರಿಯೊಬ್ಬರನ್ನು ಲೋಕಾಯುಕ್ತ ಅಧಿಕಾರಿಗಳು ಬೇಟೆಯಾಡಿದ್ದರು. ಗೋದಾಮಿಗೆ ಅನುಮತಿ ನೀಡಲು ಲಂಚ ಸ್ವೀಕರಿಸುತ್ತಿದ್ದ ಜಿಲ್ಲೆಯ ಮಳವಳ್ಳಿ ತಾಲೂಕಿನ ಎಪಿಎಂಸಿ ಕಾರ್ಯದರ್ಶಿ ಸಾಕಮ್ಮ ಅವರು ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದರು. ಕಲ್ಕುಣಿ ಆನಂದ್ ಎಂಬವರು ಗೋದಾಮು ನಿರ್ಮಾಣ ಮಾಡಲು ಅನುಮತಿ ನೀಡುವಂತೆ ಕೋರಿದ್ದರು. ಈ ವೇಳೆ ಎಪಿಎಂಸಿ ಕಾರ್ಯದರ್ಶಿ ಸಾಕಮ್ಮ ಅವರು 50 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದರು.
ಇದನ್ನೂ ಓದಿ: Lokayukta Raid: ಮುಂದುವರಿದ ಭ್ರಷ್ಟರ ಬೇಟೆ, ಲಂಚಕ್ಕೆ ಕೈಯೊಡ್ಡುತ್ತಿದ್ದ ಅಧಿಕಾರಿ ಲೋಕಾಯುಕ್ತ ಬಲೆಗೆ
ಗೋದಾಮು ನಿರ್ಮಾಣಕ್ಕೆ ಅನುಮತಿ ನೀಡಲು ಲಂಚಕ್ಕೆ ಬೇಡಿಕೆ ಇಟ್ಟ ಕಾರ್ಯದರ್ಶಿ ವಿರುದ್ಧ ಲೋಕಾಯುಕ್ತ ಕಚೇರಿಗೆ ಕಲ್ಕುಣಿ ಆನಂದ್ ಅವರು ದೂರು ನೀಡಿದ್ದರು. ಅದರಂತೆ ಕಲ್ಕುಣಿ ಆನಂದ್ ಎಂಬುವರ ಬಳಿಯಿಂದ ಬೇಡಿಕೆ ಇಟ್ಟ 50 ಸಾವಿರ ಲಂಚದ ಹಣದ ಪೈಕಿ ಮಾರ್ಚ್ 21 ಮುಂಗಡವಾಗಿ 20 ಸಾವಿರ ಹಣ ಸ್ವೀಕಾರ ಮಾಡುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಸಾಕಮ್ಮ ಅವರನ್ನು ಬಂಧಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.