Lokayukta Raid: ಹಾವೇರಿ, ಮಂಡ್ಯದಲ್ಲಿ ಲೋಕಾಯುಕ್ತ ದಾಳಿ, ಸಿಕ್ಕಿಬಿದ್ದ ಪಿಎಸ್ಐ ಮತ್ತು ಮಳವಳ್ಳಿ ಎಪಿಎಂಸಿ ಕಾರ್ಯದರ್ಶಿ
ಕರ್ನಾಟಕದಲ್ಲಿ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟರಿಗೆ ಬಿಸಿ ಮುಟ್ಟಿಸುವ ಕೆಲಸ ಮುಂದುವರಿಸಿದ್ದು, ಹಾವೇರಿ ಮತ್ತು ಮಂಡ್ಯದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಿಎಸ್ಐ, ಕಾರು ಚಾಲಕ ಹಾಗೂ ಎಪಿಎಂಸಿ ಕಾರ್ಯದರ್ಶಿ ಬಲೆಗೆ ಬಿದ್ದಿದ್ದಾರೆ.
ಹಾವೇರಿ: ಕರ್ನಾಟಕದಲ್ಲಿ ಲೋಕಾಯುಕ್ತ (Karnataka Lokayukta) ಅಧಿಕಾರಿಗಳು ಭ್ರಷ್ಟರಿಗೆ ಬಿಸಿ ಮುಟ್ಟಿಸುವ ಕೆಲಸ ಮುಂದುವರಿಸಿದ್ದು, ಹಾವೇರಿ ಮತ್ತು ಮಂಡ್ಯದಲ್ಲಿ ನಡೆದ ಕಾರ್ಯಾಚರಣೆಯಲ್ಲಿ (Lokayukta Raid At Haveri And Mandya) ಪಿಎಸ್ಐ, ಕಾರು ಚಾಲಕ ಹಾಗೂ ಎಪಿಎಂಸಿ ಕಾರ್ಯದರ್ಶಿ ಬಲೆಗೆ ಬಿದ್ದಿದ್ದಾರೆ. ಹಾವೇರಿಯ ಜಿಲ್ಲೆಯ ರಾಣೆಬೆನ್ನೂರಲ್ಲಿ 40 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ಶಹರ ಪೊಲೀಸ್ ಠಾಣೆ ಪಿಎಸ್ಐ ಸುನೀಲ್ ತೇಲಿ ಮತ್ತು ಅವರ ವಾಹನ ಚಾಲಕ ಸಚಿನ್ ಎಂಬವರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ. ಫಿರೋಜ್ ಎಂಬುವರಿಗೆ ಮನೆ ಬಾಡಿಗೆ ವಸೂಲಿ ಮಾಡಿಕೊಡಲು ಪಿಎಸ್ಐ ಸುನೀಲ್ ತೇಲಿ ಅವರು 50 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಫಿರೋಜ್ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಅದರಂತೆ ನಡೆದ ಕಾರ್ಯಾಚರಣೆ ವೇಳೆ 40 ಸಾವಿರ ಲಂಚ ಪಡೆಯುವಾಗ ಲಂಚದ ಹಣ ಸಹಿತ ಇಬ್ಬರನ್ನು ಅಧಿಕಾರಿಗಳು ಬಂಧಿಸಿದ್ದಾರೆ.
ಮಳವಳ್ಳಿ ಎಪಿಎಂಸಿ ಕಾರ್ಯದರ್ಶಿ ಸಾಕಮ್ಮ ಲೋಕಾಯುಕ್ತ ಬಲೆಗೆ
ಮಂಡ್ಯ: ಮಂಡ್ಯದಲ್ಲೂ ಭ್ರಷ್ಟ ಅಧಿಕಾರಿಯೊಬ್ಬರನ್ನು ಲೋಕಾಯುಕ್ತ ಅಧಿಕಾರಿಗಳು ಬೇಟೆಯಾಡಿದ್ದಾರೆ. ಗೋದಾಮಿಗೆ ಅನುಮತಿ ನೀಡಲು ಲಂಚ ಸ್ವೀಕರಿಸುತ್ತಿದ್ದ ಜಿಲ್ಲೆಯ ಮಳವಳ್ಳಿ ತಾಲೂಕಿನ ಎಪಿಎಂಸಿ ಕಾರ್ಯದರ್ಶಿ ಸಾಕಮ್ಮ ಅವರು ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಕಲ್ಕುಣಿ ಆನಂದ್ ಎಂಬವರು ಗೋದಾಮು ನಿರ್ಮಾಣ ಮಾಡಲು ಅನುಮತಿ ನೀಡುವಂತೆ ಕೋರಿದ್ದಾರೆ. ಈ ವೇಳೆ ಎಪಿಎಂಸಿ ಕಾರ್ಯದರ್ಶಿ ಸಾಕಮ್ಮ ಅವರು 50 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ.
ಗೋದಾಮು ನಿರ್ಮಾಣಕ್ಕೆ ಅನುಮತಿ ನೀಡಲು ಲಂಚಕ್ಕೆ ಬೇಡಿಕೆ ಇಟ್ಟ ಕಾರ್ಯದರ್ಶಿ ವಿರುದ್ಧ ಲೋಕಾಯುಕ್ತ ಕಚೇರಿಗೆ ಕಲ್ಕುಣಿ ಆನಂದ್ ಅವರು ದೂರು ನೀಡಿದ್ದಾರೆ. ಅದರಂತೆ ಕಲ್ಕುಣಿ ಆನಂದ್ ಎಂಬುವರ ಬಳಿಯಿಂದ ಬೇಡಿಕೆ ಇಟ್ಟ 50 ಸಾವಿರ ಲಂಚದ ಹಣದ ಪೈಕಿ ಇಂದು (ಮಾರ್ಚ್ 21) ಮುಂಗಡವಾಗಿ 20 ಸಾವಿರ ಹಣ ಸ್ವೀಕಾರ ಮಾಡುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಸಾಕಮ್ಮ ಅವರನ್ನು ಬಂಧಿಸಿದ್ದಾರೆ.
ಇತ್ತೀಚೆಗೆ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರನ ನಿವಾಸದ ಮೇಲೆ ದಾಳಿ ನಡೆಸಿದ್ದ ಲೋಕಾಯುಕ್ತ ಅಧಿಕಾರಿಗಳು ಭರ್ಜರಿ ಬೇಟೆಯಾಡಿದ್ದರು. ಇದು ಲೋಕಾಯುಕ್ತ ಅಧಿಕಾರಿಗಳ ಅತಿ ದೊಡ್ಡ ಬೇಟೆಯಾಗಿತ್ತು. ಅದಾಗ್ಯೂ, ಸಣ್ಣಪುಟ್ಟ ಲಂಚ ಪ್ರಕರಣಗಳಿಗೆ ಸಂಬಂಧಿಸಿದಂತೆ ದಾಳಿ ನಡೆಸುತ್ತಿದ್ದಾರೆ. ಇತ್ತೀಚೆಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕೊಳ್ಳೇಗಾಲದ ಕಾರ್ಮಿಕ ಇಲಾಖೆಯ ನಿರೀಕ್ಷಕ ಚಂದ್ರು ಲೋಕಾಯುಕ್ತ ದಾಳಿ ವೇಳೆ ಪರಾರಿಯಾಗಿದ್ದರು. ಹನೂರು ತಾಲೂಕಿನ ರಾಮಾಪುರ ಗ್ರಾಮದ ಕಬ್ಬಿಣದ ಅಂಗಡಿ ವ್ಯಾಪಾರಿ ಲಕ್ಷ್ಮಣ್ ಎಂಬವರು ಅನುಮತಿ ಪಡೆಯಲು ಅರ್ಜಿ ಹಾಕಿದ್ದರು. ಈ ವೇಳೆ ಇಲಾಖೆಯ ನಿರೀಕ್ಷಕ ಚಂದ್ರು 5 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಲಂಚದ ಹಣದ ಪೈಕಿ ಮುಂಗಡವಾಗಿ ಒಂದು ಸಾವಿರ ರೂಪಾಯಿ ಪಡೆಯಲು ಮುಂದಾದಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಚಂದ್ರು ಪರಾರಿಯಾಗಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:01 pm, Tue, 21 March 23