ನಂದಿನಿ ರಾಷ್ಟ್ರ ಮಟ್ಟದ ಬ್ರ್ಯಾಂಡ್​, ಕಾಂಗ್ರೆಸ್​ನಿಂದ ಅಮುಲ್ ವಿಚಾರದಲ್ಲಿ ರಾಜಕೀಯ; ಸಿಎಂ ಬೊಮ್ಮಾಯಿ

|

Updated on: Apr 08, 2023 | 11:10 AM

ಕೆಎಂಎಫ್​​ನ ನಂದಿನಿ ರಾಷ್ಟ್ರ ಮಟ್ಟದ ಬ್ರ್ಯಾಂಡ್. ನಂದಿನಿ ಬ್ರ್ಯಾಂಡ್ ದೇಶದಲ್ಲಿ ನಂ.1 ಸ್ಥಾನಕ್ಕೆ ಏಳಿಗೆ ಹೊಂದಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಯಲ್ಲಿ ಶನಿವಾರ ಹೇಳಿದರು.

ನಂದಿನಿ ರಾಷ್ಟ್ರ ಮಟ್ಟದ ಬ್ರ್ಯಾಂಡ್​, ಕಾಂಗ್ರೆಸ್​ನಿಂದ ಅಮುಲ್ ವಿಚಾರದಲ್ಲಿ ರಾಜಕೀಯ; ಸಿಎಂ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Follow us on

ಬೆಂಗಳೂರು: ಕೆಎಂಎಫ್​​ನ ನಂದಿನಿ (Nandini) ರಾಷ್ಟ್ರ ಮಟ್ಟದ ಬ್ರ್ಯಾಂಡ್. ನಂದಿನಿ ಬ್ರ್ಯಾಂಡ್ ದೇಶದಲ್ಲಿ ನಂ.1 ಸ್ಥಾನಕ್ಕೆ ಏಳಿಗೆ ಹೊಂದಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ದೆಹಲಿಯಲ್ಲಿ ಶನಿವಾರ ಹೇಳಿದರು. ಅಮುಲ್ ಉತ್ಪನ್ನಗಳು ಬೆಂಗಳೂರಿನಲ್ಲಿ ಮಾರಾಟವಾಗುವ ಬಗ್ಗೆ ತೀವ್ರ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಪ್ರತಿಕ್ರಿಯಿಸಿದ ಅವರು, ಅಮುಲ್ ವಿಚಾರದಲ್ಲಿ ಕಾಂಗ್ರೆಸ್​ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು. ಅಮುಲ್ ಬ್ರ್ಯಾಂಡ್​ ವಿಚಾರವಾಗಿ ಯಾರೂ ಆತಂಕಪಡಬೇಕಿಲ್ಲ. ನಂದಿನಿ ಬ್ರ್ಯಾಂಡ್ ಉತ್ಪನ್ನಗಳ ವೃದ್ಧಿಗೆ​ ಮತ್ತಷ್ಟು ಕ್ರಮಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ಅಮುಲ್ ಅಂದ್ರೆ ಬಿಜೆಪಿ, ನಂದಿನಿ ಅಂದ್ರೆ ಕಾಂಗ್ರೆಸ್ಸಾ?

ಈ ಮಧ್ಯೆ, ನಂದಿನಿ ಬ್ರ್ಯಾಂಡ್ ವಿಚಾರವಾಗಿ ಸ್ಪಷ್ಟನೆ ನೀಡಿದ ಸಚಿವ ಸುಧಾಕರ್, ಹಾಲಿಗೆ ಪ್ರೋತ್ಸಾಹ ಧನ‌ ಕೊಟ್ಟಿದ್ದರೆ‌ ಅದು‌ ಬಿಜೆಪಿ ಸರ್ಕಾರ. ಪ್ರತಿ‌ ಲೀಟರ್ ಗೆ 5 ರೂ. ಪ್ರೋತ್ಸಾಹ ಧನ ಬಿಜೆಪಿ ಸರ್ಕಾರ ಕೊಟ್ಟಿದೆ. ಕೆಎಂಎಫ್ ಆದಾಯದಲ್ಲಿ ಹಾಲು ಉತ್ಪಾದಕರಿಗೆ‌ ಕೊಡುವ ವ್ಯವಸ್ಥೆ ಮಾಡಲಾಗಿದೆ. ನಂದಿನಿ‌ ಹಾಲನ್ನು ಕೇವಲ ರಾಜ್ಯಕ್ಕೆ ಸೀಮಿತ ಮಾಡಬೇಡಿ. ಈಗಾಗಲೇ ಸೇನೆಗೆ, ತಿರುಪತಿ ತಿರುಮಲ,‌ ಮಹಾರಾಷ್ಟ್ರಕ್ಕೆ ನಮ್ಮ ಹಾಲು ಪೂರೈಕೆಯಾಗುತ್ತಿದೆ.

ಇತರೆ ಬ್ರ್ಯಾಂಡ್​ನ ಹಾಲುಗಳನ್ನು ರಾಜ್ಯದಲ್ಲಿ ಹಿಂದಿನಿಂದಲೂ ಮಾರಾಟ ಮಾಡುತ್ತಿದ್ದಾರೆ. ಅಮುಲ್ ಅಂದ್ರೆ ಬಿಜೆಪಿ, ನಂದಿನಿ ಅಂದ್ರೆ ಕಾಂಗ್ರೆಸ್ಸಾ ಎಂದು ಸುಧಾಕರ್​ ಪ್ರಶ್ನಿಸಿದ್ದಾರೆ. ಈ ರೀತಿಯ ರಾಜಕೀಯ ಮಾಡುವುದನ್ನು ಬಿಡಬೇಕು, ಕಾಮಾಲೆ ಕಣ್ಣಿನಿಂದ ನೋಡುವುದನ್ನು ಬಿಡಿ ಎಂದು ಕಾಂಗ್ರೆಸ್​ ಅನ್ನು ಉದ್ದೇಶಿಸಿ ಸುಧಾಕರ್ ಹೇಳಿದ್ದಾರೆ.

ಇದನ್ನೂ ಓದಿ: ಅಮುಲ್​ನಲ್ಲಿ ಕೆಎಂಎಫ್​​ ವಿಲೀನ ವಿಚಾರ: ಪ್ರಧಾನಿ ಮೋದಿ, ಅಮಿತ್​ ಶಾ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಅಮುಲ್ ಬ್ರ್ಯಾಂಡ್​ನ ಹಾಲು ಮತ್ತು ಮೊಸರನ್ನು ಬೆಂಗಳೂರಿನಲ್ಲಿ ಮಾರಾಟ ಮಾಡುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿಯೂ ಆಕ್ಷೇಪಗಳು ವ್ಯಕ್ತವಾಗಿವೆ. ಕಾಂಗ್ರೆಸ್​ ನಾಯಕರು ಈ ವಿಚಾರವಾಗಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಕರ್ನಾಟಕದ ಮೇಲೆ ಅಮುಲ್ ಹೇರಿಕೆ ಮಾಡಲಾಗುತ್ತಿದೆ. ಇದರ ಹಿಂದೆ ಗುಜರಾತ್ ಬೆಳೆಯಬೇಕು, ಕರ್ನಾಟಕ ಮುಚ್ಚಬೇಕೆಂಬ ಆಶಯ ಇದ್ದಂತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಶುಕ್ರವಾರ ಹೇಳಿದ್ದರು.

ಕರ್ನಾಟಕದಲ್ಲಿ ನಮ್ಮ ಹಿರಿಯರು ಕಟ್ಟಿ ಬೆಳೆಸಿದ್ದ ಬ್ಯಾಂಕುಗಳನ್ನು ತಿಂದು ಮುಕ್ಕಿದ್ದಾಯಿತು. ಈಗ ರೈತರ ಪಾಲಿನ ಸಂಜೀವಿನಿಯಾಗಿರುವ ನಂದಿನಿಯನ್ನು ಆಪೋಶನ ತೆಗೆದುಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್​ ಶಾ ಸಂಚು ಹೂಡಿದ್ದಾರೆ. ಕನ್ನಡಿಗರೇ ಎಚ್ಚರ ಎಂದು ಸಿದ್ದರಾಮಯ್ಯ ಹೇಳಿದ್ದರು.

ಕರ್ನಾಟಕ ವಿಧಾನಸಭೆ ಚುನಾವಣೆ ಸಂಬಂಧಿತ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 11:09 am, Sat, 8 April 23