ನವದೆಹಲಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಭೇಟಿಯಾಗಿ, ಮಹಾರಾಷ್ಟ್ರದಿಂದ ಹೆಚ್ಚುವರಿ ಕಲ್ಲಿದ್ದಲು ಪೂರೈಕೆಗೆ ಮನವಿ ಮಾಡಿದ್ದೇನೆ. ಅವರು ಕರ್ನಾಟಕಕ್ಕೆ ಹೆಚ್ಚುವರಿ ಕಲ್ಲಿದ್ದಲು ಪೂರೈಕೆ (Coal Crisis) ಮಾಡುವ ಭರವಸೆ ನೀಡಿದ್ದಾರೆ. ಸದ್ಯಕ್ಕೆ ರಾಜ್ಯದಲ್ಲಿ ಕಲ್ಲಿದ್ದಲು ಸಮಸ್ಯೆಯಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ. ದೇಶಾದ್ಯಂತ ಕಲ್ಲಿದ್ದಲಿನ ಬಿಕ್ಕಟ್ಟು ಉಂಟಾಗಿದ್ದು, ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ನವದೆಹಲಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.
ನಾಳೆ ಕಾವೇರಿ, ಮೇಕೆದಾಟು, ಕೃಷ್ಣಾ ಬಗ್ಗೆ ಕೇಂದ್ರ ಸರ್ಕಾರದ ನಾಯಕರ ಜೊತೆ ಚರ್ಚಿಸುತ್ತೇನೆ. ಒಡಿಶಾದ ಮಂದಕರಿಯಲ್ಲಿ ಕಲ್ಲಿದ್ದಲು ಗಣಿಗಾರಿಕೆಗೆ ಕೇಂದ್ರ ಸರ್ಕಾರದಿಂದ ಪರಿಸರ ಅನುಮತಿ ಸಿಕ್ಕಿದೆ. ಮಂದಕರಿಯಲ್ಲಿ ಕಲ್ಲಿದ್ದಲು ಗಣಿಗಾರಿಕೆ ನಡೆಸಬಹುದಾಗಿದೆ. ಗಣಿಗಾರಿಕೆ ನಡೆಸಲು ನಾವು ಎಲ್ಲ ಸಿದ್ಧತೆ ಮಾಡಿಕೊಳ್ತಿದ್ದೇವೆ. ರಾಜ್ಯದಲ್ಲಿ ವಿದ್ಯುತ್ ಅಭಾವ ಇಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಭುಗಿಲೆದ್ದಿರುವ ಬಿಟ್ ಕಾಯಿನ್ ದಂಧೆ ಬಗ್ಗೆ ಸಿದ್ದರಾಮಯ್ಯ ಆರೋಪ ವಿಚಾರವಾಗಿಯೂ ಮಾತನಾಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಸಿದ್ದರಾಮಯ್ಯ ಜವಾಬ್ದಾರಿಯುತ ನಾಯಕ. ಮಾತನಾಡುವಾಗ ಏನಾದರೂ ಆಧಾರವನ್ನು ಇಟ್ಟುಕೊಂಡು ಮಾತನಾಡಬೇಕು. ಬಿಜೆಪಿಯಲ್ಲಿ ಏನು ಅವ್ಯವಹಾರ ಆಗಿದೆ ಅನ್ನುವುದನ್ನು ಹೇಳಬೇಕು. ನಾವು ಯಾವುದೇ ತನಿಖೆ ಮಾಡಲು ಬೇಕಾದರೂ ಸಿದ್ಧರಿದ್ದೇವೆ. ಬಿಟ್ ಕಾಯಿನ್ ಕೇಸ್ ಬಗ್ಗೆ ಇಡಿ ತನಿಖೆ ನಡೆಯುತ್ತಿದೆ. ಈ ಬಗ್ಗೆ ಹೈಕಮಾಂಡ್ ನಾಯಕರ ಜತೆ ಚರ್ಚೆ ಮಾಡುವುದಿಲ್ಲ ಎಂದು ನವದೆಹಲಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಬಿಟ್ ಕಾಯಿನ್ ಕೇಸ್‌ನಲ್ಲಿ ಕಾಂಗ್ರೆಸ್‌ನವರಿರುವುದು ಸಾಬೀತಾದರೆ ಬಂಧಿಸಲಿ. ಈ ಪ್ರಕರಣದ ಬಗ್ಗೆ ಸಿಎಂ ಬೇಜವಾಬ್ದಾರಿತನದ ಹೇಳಿಕೆ ನೀಡ್ತಿದ್ದಾರೆ. ಕಾಂಗ್ರೆಸ್ ಪಕ್ಷದವರು ಭಾಗಿಯಾಗಿದ್ದರೆ ಅವರ ಹೆಸರು ಹೇಳಲಿ. ಅವರದ್ದೇ ಸರ್ಕಾರವಿದೆ, ಆರೋಪಿಗಳ ಹೆಸರು ಹೇಳಲಿ. ಹೆಸರು ಹೇಳಲು ಆಗಿಲ್ಲ ಅಂದ್ರೆ ಸರ್ಕಾರ ಬಿಟ್ಟು ಕೊಡಲಿ. ನಾವು ಅಧಿಕಾರಕ್ಕೆ ಬಂದು ಆರೋಪಿಗಳ ಹೆಸರು ಹೇಳ್ತೇವೆ. ಸಿಎಂ ಈ ರೀತಿ ಮಾತನಾಡಿದ್ದು ನೋಡಿದರೆ ಅನುಮಾನ ಹೆಚ್ಚಾಗುತ್ತಿದೆ. ಅವರೇ ಸಿಕ್ಕಿಹಾಕಿಕೊಂಡಿರುವಂತೆ ನಡೆದುಕೊಳ್ಳುತ್ತಿದ್ದಾರೆ. ಆದ್ರೆ ನಾನು ಎಲ್ಲೂ ಸಿಎಂ ಬಸವರಾಜ ಬೊಮ್ಮಾಯಿ ಅವರ ಹೆಸರು ಹೇಳಿಲ್ಲ. ಆದರೂ ಅವರ ಹೇಳಿಕೆ ನೋಡುತ್ತಿದ್ದರೆ ಅನುಮಾನ ಬರ್ತಿದೆ. ಆರೋಪಿ ಶ್ರೀಕೃಷ್ಣ ಏನು ಹೇಳಿದ್ದಾರೆಂದು ಸರ್ಕಾರ ಬಹಿರಂಗಪಡಿಸಲಿ ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದರು.
ಹ್ಯಾಕರ್ ಶ್ರೀಕಿಯಿಂದ ಜಪ್ತಿ ಮಾಡಿದ ಬಿಟ್ ಕಾಯಿನ್ ಎಲ್ಲಿ? 35 ಬಿಟ್ ಕಾಯಿನ್‌ಗಳನ್ನು ಜಪ್ತಿ ಮಾಡಿದ್ದಾಗಿ ಹೇಳಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದ ಈ ಹಗರಣದ ತನಿಖೆಯನ್ನು ಉನ್ನತ ಮಟ್ಟದ ಸಮಿತಿಗೆ ವಹಿಸಲು ವಿಳಂಬವೇಕೆ? ಈ ಹಗರಣದಲ್ಲಿ ಸಿಎಂ ಭಾಗಿಯಾಗಿದ್ದಾರೆ ಎಂದು ಹೇಳುತ್ತಿಲ್ಲ. ಈ ಹಗರಣದ ಪಾರದರ್ಶಕ ತನಿಖೆಯಾದರೆರಾಜ್ಯದಲ್ಲಿ ಮತ್ತೆ ಬಿಜೆಪಿಯ 3ನೇ ಮುಖ್ಯಮಂತ್ರಿಯನ್ನು ನೋಡುತ್ತೇವೆ. ಇದರಲ್ಲಿ ಯಾಱರು ಇದ್ದಾರೆಂದು ತನಿಖಾಧಿಕಾರಿಗಳಿಗೆ ಗೊತ್ತಿದೆ. ಸರಿಯಾದ ತನಿಖಾ ಏಜೆನ್ಸಿಗೆ ನೀಡಿದರೆ ಪ್ರಕರಣ ಬಯಲಾಗುತ್ತದೆ. ಈ ಹಗರಣದಲ್ಲಿ ಅಧಿಕಾರಿಗಳೂ ಭಾಗಿಯಾಗಿದ್ದಾರೆ. ಇದು ಕೇವಲ 200-300 ಕೋಟಿ ರೂಪಾಯಿಯ ಹಗರಣವಲ್ಲ. ಬಿಜೆಪಿಯವರು ಕ್ರಿಪ್ಟೋ ಕರೆನ್ಸಿಯಲ್ಲಿ ಲಂಚ ತೆಗೆದುಕೊಂಡಿದ್ದಾರೆ. ಡ್ರಗ್ಸ್ ಕೇಸ್ ಸೇರಿ ಎಲ್ಲ ಕೇಸ್ ಮುಚ್ಚಿಹಾಕಲು ಲಂಚ ಪಡೆದಿದ್ದಾರೆ ಎಂದು ಈ ಹಿಂದೆ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದ್ದು ಭಾರೀ ಸುದ್ದಿಯಾಗಿತ್ತು.
ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ವಸೂಲಿ ಕಿಂಗ್, ಬಿಟ್ ಕಾಯಿನ್ ದಂಧೆ ಕುರಿತು ದಾಖಲೆಯಿದ್ದರೆ ಬಹಿರಂಗಪಡಿಸಲಿ; ಸಚಿವ ಈಶ್ವರಪ್ಪ ಸವಾಲ್
ಬಿಟ್ ಕಾಯಿನ್ ದಂಧೆಯಲ್ಲಿ ಕಾಂಗ್ರೆಸ್ನವರಿದ್ದರೆ ಹೆಸರು ಹೇಳಿ ಬಂಧಿಸಲಿ; ಸಿಎಂ ಬೊಮ್ಮಾಯಿಗೆ ಸಿದ್ದರಾಮಯ್ಯ ಸವಾಲು