ದೆಹಲಿ: ಮೇಕೆದಾಟು ಕುಡಿಯುವ ನೀರಿನ ಯೋಜನೆ ಜಾರಿ ವಿಚಾರವಾಗಿ ಸುಪ್ರೀಂಕೋರ್ಟ್ ಆದೇಶ ಮುಂದಿಟ್ಟು ಮನವರಿಕೆ ಮಾಡಿಕೊಟ್ಟಿದ್ದೇವೆ. ಕೇಂದ್ರ ಜಲಶಕ್ತಿ ಸಚಿವರಿಗೆ ಈ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಶೀಘ್ರದಲ್ಲೇ ಡಿಪಿಆರ್ಗೆ ಮಾನ್ಯತೆ ಸಿಗಲಿದೆ ಎಂದು ನವದೆಹಲಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಭೇಟಿ ಸಮಯ ಕೇಳಿದ್ದೇನೆ. ಅವರಿಗೆ ವೈಯಕ್ತಿಕ ಕೆಲಸವಿರುವ ಹಿನ್ನೆಲೆ ಮುಂದಿನ ವಾರ ಭೇಟಿಯಾಗಲು ತಿಳಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಕರ್ನಾಟಕ ಸಚಿವ ಸಂಪುಟದಲ್ಲಿ ಆನಂದ್ ಸಿಂಗ್ ಬಿಟ್ಟರೆ ಬೇರೆ ಯಾರಿಗೂ ಅಸಮಾಧಾನವಿಲ್ಲ. ಬೇರೆ ಖಾತೆ ನೀಡುವಂತೆ ಸಚಿವರು ಒತ್ತಡ ಹೇರುತ್ತಿಲ್ಲ. ಸಚಿವ ಆನಂದ್ ಸಿಂಗ್ ಕರೆದು ಮಾತನಾಡಿದ್ದೇನೆ. ಈಗ ಕೊಟ್ಟಿರುವ ಖಾತೆಯಲ್ಲಿ ಕೆಲಸ ಮಾಡುವಂತೆ ಸೂಚನೆ ನೀಡಲಾಗಿದೆ. ಅದರಂತೆ ಸಿಂಗ್ ಅಧಿಕಾರ ಸ್ವೀಕರಿಸಿ ಕೆಲಸ ಆರಂಭಿಸಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ಧಾರೆ.
ಕ್ಯಾಬಿನೆಟ್ ರಚನೆ ಬಳಿಕ ವರಿಷ್ಠರನ್ನು ಭೇಟಿ ಮಾಡುತ್ತಿದ್ದೇನೆ. ರಾಜ್ಯದ ವಿದ್ಯಮಾನಗಳ ಬಗ್ಗೆ ವರಿಷ್ಠರ ಜೊತೆ ಚರ್ಚಿಸುತ್ತೇನೆ. 4 ಸಚಿವ ಸ್ಥಾನಗಳ ಭರ್ತಿ ಬಗ್ಗೆ ಈಗಲೇ ಹೇಳಲು ಆಗಲ್ಲ. ಶಾಸಕ ರಮೇಶ್ ಸಚಿವ ಸ್ಥಾನ ಬೇಕು ಎನ್ನುವುದು ಸಹಜ. ಎಲ್ಲ ನಾಯಕರಿಗೂ ಮಂತ್ರಿ ಆಗಬೇಕೆಂಬ ಆಸೆ ಇರುತ್ತದೆ ಎಂದು ಬೊಮ್ಮಾಯಿ ಹೇಳಿದ್ದಾರೆ. ಸಚಿವ ಆನಂದ್ ಸಿಂಗ್ ಬಿಟ್ಟು ಯಾರಿಗೂ ಆಕ್ಷೇಪ ಇಲ್ಲ ಎಂದು ಸದ್ಯದ ಪರಿಸ್ಥಿತಿ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ.
ಕೇಂದ್ರ ಕೃಷಿ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್ ಅವರನ್ನು ಇಂದು ನವದೆಹಲಿಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಲಾಯಿತು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯ ಜಲಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.@ShobhaBJP @nstomar @GovindKarjol pic.twitter.com/11QCvtPHUf
— Basavaraj S Bommai (@BSBommai) August 25, 2021
ಕೇಂದ್ರ ಸಚಿವರನ್ನು ಭೇಟಿಯಾದ ಬಸವರಾಜ ಬೊಮ್ಮಯಿ
ಬುಧವಾರ ದೆಹಲಿಗೆ ಆಗಮಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೇಂದ್ರ ಕೃಷಿ ಸಚಿವ ತೋಮರ್ ಭೇಟಿಯಾಗಿದ್ದಾರೆ. ದೆಹಲಿಯಲ್ಲಿ ತೋಮರ್ ಜೊತೆಗೆ ಸಿಎಂ ಮಾತುಕತೆ ನಡೆಸಿದ್ದಾರೆ. ಈ ವೇಳೆ, ಶೋಭಾ ಕರಂದ್ಲಾಜೆ ಹಾಗೂ ಜಲಸಂಪನ್ಮೂಲ ಖಾತೆ ಸಚಿವ ಕಾರಜೋಳ ಉಪಸ್ಥಿತರಿದ್ದರು. ಬಳಿಕ, ಕೇಂದ್ರ ಜಲಶಕ್ತಿ ಸಚಿವರನ್ನು ಸಿಎಂ ಬಸವರಾಜ ಬೊಮ್ಮಾಯಿ ಭೇಟಿಯಾಗಿದ್ದಾರೆ. ದೆಹಲಿಯಲ್ಲಿ ಗಜೇಂದ್ರಸಿಂಗ್ ಶೇಖಾವತ್ ಭೇಟಿಯಾಗಿ, ಮಹದಾಯಿ, ಮೇಕೆದಾಟು ಯೋಜನೆ ಕುರಿತು ಚರ್ಚೆ ನಡೆಸಿದ್ದಾರೆ. ಬಳಿಕ, ಸಿಎಂ ಬಸವರಾಜ ಬೊಮ್ಮಾಯಿ ಬಿಜೆಪಿ ನಾಯಕ, ಗೃಹ ಸಚಿವ ಅಮಿತ್ ಶಾ ಭೇಟಿಯಾಗಿದ್ದಾರೆ. ದೆಹಲಿಯ ನಾರ್ತ್ ಬ್ಲಾಕ್ನಲ್ಲಿನ ಕಚೇರಿಯಲ್ಲಿ ಅಮಿತ್ ಶಾರನ್ನು ಭೇಟಿ ಮಾಡಿದ್ದಾರೆ.
ಹೊಸ ಸರ್ಕಾರದ ಕಾರ್ಯವೈಖರಿ ಬಗ್ಗೆ ತಿಳಿಯಲು ಕೇಂದ್ರ ಗೃಹ ಇಲಾಖೆ ಸಚಿವ ಅಮಿತ್ ಶಾ ಉತ್ಸುಕರಾಗಿದ್ದರು ಎಂದು ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ನಾಯಕ ಅಮಿತ್ ಶಾ ಭೇಟಿ ನಂತರ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ನಮ್ಮ ಸರ್ಕಾರದ ಕಾರ್ಯವೈಖರಿ ಬಗ್ಗೆ ತಿಳಿದುಕೊಂಡರು. ರಾಜ್ಯದಲ್ಲಿ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳುವಂತೆ ಸಲಹೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಮುಖ್ಯಮಂತ್ರಿ ಸ್ಥಾನ ಎನ್ನುವುದು ಜವಾಬ್ದಾರಿಯುತ ಸ್ಥಾನ. ಸಿಎಂ ಸ್ಥಾನದ ಜವಾಬ್ದಾರಿ ಏನೆಂಬ ಅರಿವು ನನಗೆ ಇದೆ. ಬಿ.ಎಸ್.ಯಡಿಯೂರಪ್ಪನವರ ಜತೆ ಕೆಲಸ ಮಾಡಿದ್ದೇನೆ. ಮುಖ್ಯಮಂತ್ರಿ ಆಗಿರುವುದು ಸಂತೋಷದಿಂದಿರಲು ಅಲ್ಲ. ರಾಜ್ಯದ ಜನರನ್ನು ಸಂತೋಷದಿಂದ ಇಡಲು ಸಿಎಂ ಆಗಿದ್ದೇನೆ ಎಂದು ಅಮಿತ್ ಶಾ ಭೇಟಿ ನಂತರ ಸಿಎಂ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಚರ್ಚೆ
ಮೀಸಲಾತಿಗಾಗಿ ವಿವಿಧ ಸಮುದಾಯಗಳಿಂದ ಹೋರಾಟ ವಿಚಾರವಾಗಿ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಹೋರಾಟ ಬೇರೆ ಸಮುದಾಯದ ಮೇಲೆ ಪರಿಣಾಮ ಬೀರುತ್ತೆ. ಮೀಸಲಾತಿ ಸಂಬಂಧ ಕೆಲ ಮಠಾಧೀಶರು ಭೇಟಿಯಾಗಿದ್ದಾರೆ. ಬಸವ ಜಯಮೃತ್ಯುಂಜಯಶ್ರೀ ಹೇಳಿಕೆಗೆ ಉತ್ತರಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ಆ ಬಳಿಕ, ಸಿಎಂ ಬೊಮ್ಮಾಯಿ ಅವರನ್ನು ಜಾರಕಿಹೊಳಿ ಸೋದರರು ಭೇಟಿಯಾಗಿದ್ದಾರೆ. ದೆಹಲಿಯ ಕರ್ನಾಟಕ ಭವನದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಸಚಿವ ಸ್ಥಾನದ ಬಗ್ಗೆ ಸಿಎಂ ಜತೆ ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಚರ್ಚಿಸಿದ್ದಾರೆ.
ಇದನ್ನೂ ಓದಿ: ಮಹೇಶ್ ಕುಮಟಳ್ಳಿ, ಶ್ರೀಮಂತ ಪಾಟೀಲ್, ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ನೀಡಲು ಮನವಿ ಮಾಡುತ್ತೇವೆ: ಬಾಲಚಂದ್ರ ಜಾರಕಿಹೊಳಿ
Published On - 8:29 pm, Wed, 25 August 21