ಬೆಂಗಳೂರು: ಹೊಸ ವರ್ಷಾಚರಣೆಗೆ ಕೇವಲ ಒಂದು ವಾರ ಮಾತ್ರ ಬಾಕಿ ಇದೆ. ಇದರ ನಡುವೆ ದಿನದಿಂದ ದಿನಕ್ಕೆ ರಾಜ್ಯದಲ್ಲಿ ಕೊರೊನಾ ರೂಪಾಂತರಿ ಒಮಿಕ್ರಾನ್ ಪ್ರಕರಣ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಇಂದು (ಡಿ.26) ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ನೇತೃತ್ವದಲ್ಲಿ ಮಹತ್ವದ ಸಭೆ ನಡೆದಿದೆ. ಸಭೆ ಬಳಿಕ ಮಾತನಾಡಿದ ಆರೋಗ್ಯ ಸಚಿವ ಡಾ. ಕೆ ಸುಧಾಕರ್, ರಾಜ್ಯದಾದ್ಯಂತ 10 ದಿನಗಳ ಕಾಲ ನೈಟ್ ಕರ್ಫ್ಯೂ ಜಾರಿಗೊಳಿಸಿ ಘೋಷಿಸಿದ್ದಾರೆ. ಡಿ.28ರಿಂದ 10 ದಿನಗಳ ಕಾಲ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5ರವರೆಗೆ ನೈಟ್ ಕರ್ಫ್ಯೂ ಜಾರಿ ಇರಲಿದೆ ಅಂತ ಸಚಿವರು ತಿಳಿಸಿದ್ದಾರೆ.
ಮುಂದುವರಿದು ಮಾತನಾಡಿದ ಸಚಿವ ಸುಧಾಕರ್, ಸಾರ್ವಜನಿಕ ಸ್ಥಳಗಳಲ್ಲಿ ರಾತ್ರಿ ಹೊಸ ವರ್ಷ ಆಚರಿಸುವಂತಿಲ್ಲ. ಸಭೆ ಸಮಾರಂಭಗಳಲ್ಲಿ ಶೇ.50ರಷ್ಟು ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಅಲ್ಲದೇ ಹಗಲಿನಲ್ಲೂ ಬಾರ್, ಪಬ್, ಕ್ಲಬ್, ರೆಸ್ಟೋರೆಂಟ್‌ಗಳಲ್ಲಿ ಶೇ.50ರಷ್ಟು ಜನರಿಗೆ ಮಾತ್ರ ಮಿತಿಗೊಳಿಸಲಾಗಿದೆ ಅಂತ ತಿಳಿಸಿದ್ದಾರೆ. ಪಬ್, ಬಾರ್, ರೆಸ್ಟೋರೆಂಟ್ ಗಳಲ್ಲಿ 50:50 ನಿಯಮ ಜಾರಿಗೊಳಿಸಿದ ಕರ್ನಾಟಕ ಸರ್ಕಾರ, ಸಿನಿಮಾ ಥಿಯೇಟರ್ಗಳಿಗೆ ಸದ್ಯ ಈ ನಿಮಯ ಅನ್ವಯವಾಗಲ್ಲ ಅಂತ ತಿಳಿಸಿದೆ.
4 ಸಾವಿರ ಐಸಿಯು ಬೆಡ್ ಸಿದ್ಧಪಡಿಸಿಕೊಂಡಿದ್ದೇವೆ. 7,500 ಬೆಡ್‌ಗಳು ICU ಬೆಡ್‌ಗಳಾಗಿ ಮೇಲ್ದರ್ಜೆ ಮಾಡಲಾಗುವುದು. ಜನವರಿ 10ರಿಂದ ಬೂಸ್ಟರ್ ಡೋಸ್ ನೀಡುತ್ತೇವೆ. ರಾಜ್ಯಾದ್ಯಂತ ಬೂಸ್ಟರ್ ಡೋಸ್ ನೀಡಲಾಗುವುದು. ಆಯಾ ಕ್ಷೇತ್ರಗಳಲ್ಲಿ ಸಚಿವರು ಚಾಲನೆ ನೀಡಲಿದ್ದಾರೆ. ಸಿಎಂ, ಆಯಾ ಕ್ಷೇತ್ರಗಳಲ್ಲಿ ಸಚಿವರು ಚಾಲನೆ ನೀಡುತ್ತಾರೆ ಎಂದು ತಿಳಿಸಿದ ಸುಧಾಕರ್, ಮಕ್ಕಳಿಗೆ ಲಸಿಕೆ ನೀಡಲು ಕೇಂದ್ರದಿಂದ ಗೈಡ್‌ಲೈನ್ಸ್ ಬಂದ ಬಳಿಕ ಮಾಹಿತಿ ನೀಡುತ್ತೇನೆ ಎಂದಿದ್ದಾರೆ.
ಸಭೆಯಲ್ಲಿ ಕಂದಾಯ ಸಚಿವ R.ಅಶೋಕ್, ಗೃಹ ಸಚಿವ ಆರಗ ಜ್ಞಾನೇಂದ್ರ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್, ತಾಂತ್ರಿಕ ಸಲಹಾ ಸಮಿತಿ ಮುಖ್ಯಸ್ಥ ಡಾ.ಎಂ.ಕೆ.ಸುದರ್ಶನ್, ಗೃಹ ಕಾರ್ಯದರ್ಶಿ ರಜನೀಶ್ ಗೋಯಲ್, ಸಿಎಂ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಸೇರಿದಂತೆ ಅಧಿಕಾರಿಗಳು ಭಾಗಿಯಾಗಿದ್ದರು.
ಇದನ್ನೂ ಓದಿ
Merry Christmas: ಕತ್ರಿನಾ ಮುಂದಿನ ಚಿತ್ರದ ಹೆಸರೇನು? ಇಲ್ಲಿದೆ ಉತ್ತರ
Published On - 10:12 am, Sun, 26 December 21