ಜನವರಿ 10ರಿಂದ ನೀಡಲಾಗುವ ಬೂಸ್ಟರ್ ಡೋಸ್ಗೆ ಬೇರೆಯದ್ದೇ ಕೊವಿಡ್ 19 ಲಸಿಕೆ ಬಳಕೆ; ಕೊವಿಶೀಲ್ಡ್, ಕೊವ್ಯಾಕ್ಸಿನ್ ಬೇಡವೆಂದ ಆರೋಗ್ಯ ತಜ್ಞರು
ಮೂರನೇ ಡೋಸ್ ಆಗಿ ಸೀರಮ್ ಇನ್ಸ್ಟಿಟ್ಯೂಟ್ನ ಕೊವಾವ್ಯಾಕ್ಸ್ ಲಸಿಕೆ ನೀಡುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿದೆ. ಇದು ಮರುಸಂಯೋಜಿತ ನ್ಯಾನೊಪರ್ಟಿಕಲ್ ಪ್ರೊಟೀನ್ ಆಧಾರಿತ ಕೊರೊನಾ ಲಸಿಕೆಯಾಗಿದೆ
ನಿನ್ನೆ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ(PM Modi), ಮೂರು ಮಹತ್ವದ ಘೋಷಣೆ ಮಾಡಿದ್ದಾರೆ. ಜನವರಿ 3ರಿಂದ 15-18ವರ್ಷದವರಿಗೆ ಕೊರೊನಾ ಲಸಿಕೆ (Corona Vaccine) ಹಾಕಲಾಗುವುದು, ಜನವರಿ 10ರಿಂದ, ಕೊವಿಡ್ 19 ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಆರೋಗ್ಯ ಕಾರ್ಯಕರ್ತರಿಗೆ ಮುನ್ನೆಚ್ಚರಿಕಾ ಡೋಸ್ ಹಾಕಲಾಗುವುದು ಹಾಗೂ 60 ವರ್ಷ ಮೇಲ್ಪಟ್ಟವರಿಗೆ ವೈದ್ಯರ ಸಲಹೆ ಮೇರೆಗೆ ಕೊರೊನಾ ಲಸಿಕೆ ಮುನ್ನೆಚ್ಚರಿಕಾ ಡೋಸ್ ನೀಡಲಾಗುವುದು ಎಂದು ಹೇಳಿದ್ದಾರೆ. ಈ ಮುನ್ನೆಚ್ಚರಿಕಾ ಡೋಸ್ ನೀಡಲು ಪ್ರಾರಂಭ ಮಾಡುವ ಸಂಬಂಧ ನೀಲನಕ್ಷೆಯನ್ನು ಕೇಂದ್ರ ಸರ್ಕಾರ ಇಂದು ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಆದರೆ ಈ ಬಾರಿ ನೀಡಲಾಗುವ ಲಸಿಕೆ ಭಿನ್ನವಾಗಿರಬೇಕು ಎಂಬು ಒಮ್ಮತದ ಅಭಿಪ್ರಾಯವನ್ನು ದೇಶದ ಕೊವಿಡ್ 19 ಉನ್ನತ ತಾಂತ್ರಿಕ ಸಮಿತಿ ಹೊಂದಿದೆ ಎಂದು ಮೂಲಗಳು ತಿಳಿಸಿದ್ದಾಗಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. ಅಂದರೆ, ಈಗಾಗಲೇ ಎರಡು ಡೋಸ್ ಪಡೆದವರಿಗೆ ಮೂರನೇ ಡೋಸ್ ನೀಡಲಾಗುತ್ತದೆ. ಆದರೆ ಮೊದಲೆರಡು ಡೋಸ್ ಪಡೆದ ಲಸಿಕೆಯನ್ನೇ ಮತ್ತೆ ಮೂರನೇ ಬಾರಿಗೂ ಮುನ್ನೆಚ್ಚರಿಕಾ ಡೋಸ್ ಆಗಿ ಕೊಡುವುದು ಬೇಡ. ಅದರ ಬದಲು ಕೊವಿಡ್ 19 ಬೇರೆ ಲಸಿಕೆಯನ್ನು ಕೊಡಬೇಕು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಶನಿವಾರದವರೆಗೆ 60 ವರ್ಷ ಮೇಲ್ಪಟ್ಟ 12.04 ಕೋಟಿ ಜನರಿಗೆ ಕೊವಿಡ್ 19 ಲಸಿಕೆ ನೀಡಲಾಗಿದೆ. ಅದರಲ್ಲಿ 9.21 ಜನರು ಸಂಪೂರ್ಣ ಡೋಸ್ ಪಡೆದವರು. ಹಾಗೇ, 1.03 ಕೋಟಿ ಆರೋಗ್ಯ ಕಾರ್ಯಕರ್ತರು ಕೊರೊನಾ ಲಸಿಕೆ ಪಡೆದಿದ್ದು, ಅದರಲ್ಲಿ 96 ಲಕ್ಷ ಜನರಿಗೆ ಎರಡೂ ಡೋಸ್ ಮುಕ್ತಾಯವಾಗಿದೆ. ಹಾಗೇ, 1.83 ಕೋಟಿ ಮುಂಚೂಣಿ ಕಾರ್ಯಕರ್ತರು ಕೊರೊನಾ ಲಸಿಕೆ ಪಡೆದಿದ್ದು, ಅದರಲ್ಲಿ 1.68 ಕೋಟಿ ಜನರಿಗೆ ಎರಡೂ ಡೋಸ್ ಆಗಿದೆ. ಎರಡೂ ಡೋಸ್ ಕೊರೊನಾ ಲಸಿಕೆ ಪಡೆದವರಿಗೆ ಮಾತ್ರ ಮೂರನೇ ಡೋಸ್ ಅಂದರೆ ಬೂಸ್ಟರ್ ಡೋಸ್ ಕೊಡಲು ಸಾಧ್ಯ. ಇದೀಗ ಸರ್ಕಾರ ಬಿಡುಗಡೆ ಮಾಡಿರುವ ಡಾಟಾ ಪ್ರಕಾರ ಸದ್ಯ ಮೂರನೇ ಡೋಸ್ ಪಡೆಯುವ ಫಲಾನುಭವಿಗಳು 11 ಕೋಟಿ ಮಂದಿ ಇದ್ದಾರೆ.
ದೇಶದಲ್ಲಿ ಈಗ ಬಹುತೇಕರಿಗೆ ನೀಡಿರುವುದು ಕೊವ್ಯಾಕ್ಸಿನ್ ಮತ್ತು ಕೊವಿಶೀಲ್ಡ್ ಲಸಿಕೆಯನ್ನು. ಆದರೆ ಮೂರನೇ ಡೋಸ್ ಆಗಿಯೂ ಇವುಗಳನ್ನೇ ಬಳಸುವುದು ಬೇಡ ಎಂಬ ತೀರ್ಮಾನಕ್ಕೆ ಆರೋಗ್ಯತಜ್ಞರು ಬಂದಿದ್ದಾರೆ. ಆದರೆ ಮುಂದೆ ನೀಡಬಹುದಾದ ಲಸಿಕೆ ಯಾವುದು ಎಂಬುದಕ್ಕೆ ಹಲವು ಆಯ್ಕೆಗಳು ಇವೆ. ಹಾಗಂತ ಇನ್ನೂ ಅದು ನಿರ್ಧರಿತವಾಗಿಲ್ಲ. ಆದರೆ ಮೊದಲ ಆದ್ಯತೆ ಹೈದರಾಬಾದ್ ಮೂಲದ ಬಯಾಲಾಜಿಕಲ್ ಇ ಕಂಪನಿಯ ಕಾರ್ಬೆವ್ಯಾಕ್ಸ್ ಲಸಿಕೆಗೆ ಎನ್ನಲಾಗಿದೆ. ಇದು ಪ್ರೊಟಿನ್ ಉಪ-ಘಟಕದ ಕೊವಿಡ್ 19 ವ್ಯಾಕ್ಸಿನ್ ಆಗಿದೆ. ಕಾರ್ಬೆವ್ಯಾಕ್ಸ್ನ 30 ಕೋಟಿ ಡೋಸ್ಗಳನ್ನು ಕಾಯ್ದಿರಿಸಲು ಕೇಂದ್ರ ಸರ್ಕಾರ ಈಗಾಗಲೇ 1500 ಕೋಟಿ ರೂಪಾಯಿ ಮುಂಗಡ ಪಾವತಿ ಮಾಡಿದೆ. ಮುಂದಿನ ಎರಡು ವಾರಗಳಲ್ಲಿ ಈ ಲಸಿಕೆ ತುರ್ತು ಬಳಕೆಗೆ ಅನುಮತಿ ಪಡೆಯಲಿದೆ ಎಂದು ಮೂಲಗಳು ತಿಳಿಸಿದ್ದಾಗಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಕೊವಾವ್ಯಾಕ್ಸ್ ಕೂಡ ಮುಂಚೂಣಿಯಲ್ಲಿದೆ ಹಾಗೇ, ಮೂರನೇ ಡೋಸ್ ಆಗಿ ಸೀರಮ್ ಇನ್ಸ್ಟಿಟ್ಯೂಟ್ನ ಕೊವಾವ್ಯಾಕ್ಸ್ ಲಸಿಕೆ ನೀಡುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿದೆ. ಇದು ಮರುಸಂಯೋಜಿತ ನ್ಯಾನೊಪರ್ಟಿಕಲ್ ಪ್ರೊಟೀನ್ ಆಧಾರಿತ ಕೊರೊನಾ ಲಸಿಕೆಯಾಗಿದ್ದು, ಯುಎಸ್ ಮೂಲದ ನೊವಾವ್ಯಾಕ್ಸ್ ಮತ್ತುಸೀರಮ್ ಇನ್ಸ್ಟಿಟ್ಯೂಟ್ ಸಹಭಾಗಿತ್ವದಲ್ಲಿ ತಯಾರಾಗುತ್ತಿದೆ. ಫಿಲಿಪಿನ್ಸ್ನಲ್ಲಿ ತುರ್ತು ಬಳಕೆಗೆ ಅನುಮತಿ ಸಿಕ್ಕಿದ್ದು, ಭಾರತದಲ್ಲೂ ಮೂರನೇ ಡೋಸ್ ಆಗಿ ಕೊವಾವ್ಯಾಕ್ಸ್ ಲಸಿಕೆಯನ್ನೇ ಬಳಸಲು ಆರೋಗ್ಯ ತಜ್ಞರು ಶಿಫಾರಸ್ಸು ಮಾಡುತ್ತಿದ್ದಾರೆ. ಅದರ ಹೊರತಾಗಿ ಭಾರತ್ ಬಯೋಟೆಕ್ನ ಇಂಟ್ರಾನಾಸಲ್ ವ್ಯಾಕ್ಸಿನ್, ಪುಣೆ ಮೂಲದ ಜೆನೋವಾ ಬಯೋಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ ಅಭಿವೃದ್ಧಿಪಡಿಸಿದ ಭಾರತದ ಮೊದಲ m-RNA ಕೋವಿಡ್ -19 ಲಸಿಕೆಗಳೂ ಕೂಡ ಲಿಸ್ಟ್ನಲ್ಲಿವೆ.
ಇದನ್ನೂ ಓದಿ: ಕ್ರಿಸ್ಮಸ್ ಆಚರಿಸಿದ ಚಿರು ಪುತ್ರ ರಾಯನ್; ಮೇಘನಾ ರಾಜ್ ಹಂಚಿಕೊಂಡ ಫೋಟೋಗಳು ಇಲ್ಲಿವೆ