CM Yediyurappa PC LIVE: ಹೂವು ಬೆಳೆಗಾರರಿಗೆ, ಆಟೋ, ಟ್ಯಾಕ್ಸಿ ಚಾಲಕರಿಗೆ, ಅಸಂಘಟಿತ ಕಾರ್ಮಿಕರಿಗೆ, ಕಲಾವಿದರು, ಕಲಾ ತಂಡಗಳಿಗೆ ಆರ್ಥಿಕ ಸಹಾಯ
BS Yediyurappa Press Meet Highlights | Covid Curfew LIVE Updates: ವಾಣಿಜ್ಯ ಚಟುವಟಿಕೆಗೆ ನಿರ್ಬಂಧ ವಿಧಿಸಿದ್ದಾಗ ಕೊರೊನಾ ಮೊದಲ ಅಲೆಯಲ್ಲಿ ಆರ್ಥಿಕ ಸಹಾಯ ಮಾಡಲಾಗಿತ್ತು. ಕೆಲ ವಲಯಗಳಿಗೆ ಸರ್ಕಾರ ಆರ್ಥಿಕ ಸಹಾಯ ಮಾಡಿತ್ತು. ಅದೇ ರೀತಿ ಈ ಬಾರಿ 1,250 ಕೋಟಿಗೂ ಹೆಚ್ಚು ಪ್ಯಾಕೇಜ್ ನೀಡಲಾಗುವುದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಬೆಂಗಳೂರು: ₹1,250 ಕೋಟಿಗೂ ಹೆಚ್ಚು ಪ್ಯಾಕೇಜ್ ಘೋಷಣೆಯಲ್ಲಿ ಹೂವು ಬೆಳೆಗಾರರಿಗೆ ಹೆಕ್ಟೇರ್‌ಗೆ 10 ಸಾವಿರ ಸಹಾಯಧನ, ಇದಕ್ಕೆ 70 ಕೋಟಿ ರೂಪಾಯಿ ಖರ್ಚಾಗಲಿದೆ. ನೋಂದಣಿ ಮಾಡಿಸಿದ ಆಟೋ ಚಾಲಕರಿಗೆ ಆಟೋ, ಟ್ಯಾಕ್ಸಿ ಚಾಲಕರಿಗೆ 3 ಸಾವಿರ ರೂಪಾಯಿ, ಅಸಂಘಟಿತ ಕಾರ್ಮಿಕರಿಗೆ ತಲಾ 2 ಸಾವಿರ ರೂಪಾಯಿ ನೀಡಲಾಗುವುದು, ಇದಕ್ಕಾಗಿ 61 ಕೋಟಿ ರೂಪಾಯಿ ಖರ್ಚಾಗಲಿದೆ ಹಾಗೂ ಕಲಾವಿದರು, ಕಲಾ ತಂಡಗಳಿಗೆ ತಲಾ 3 ಸಾವಿರ ರೂ.ನಂತೆ 16,100 ಜನರಿಗೆ ನೀಡಲಾಗುವುದು ಇದಕ್ಕೆ 4 ಕೋಟಿ ರೂಪಾಯಿ ಖರ್ಚಾಗಲಿದೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ. ರೈತರು, ಸ್ವಸಹಾಯ ಸಂಘ, ಸೊಸೈಟಿ ಸಾಲ ಮರು ಪಾವತಿ ದಿನಾಂಕ ಜುಲೈ ಅಂತ್ಯದವರೆಗೆ ವಿಸ್ತರಣೆ ಮಾಡಲಾಗುವುದು ಎಂದು ಹೇಳಿದ್ದಾರೆ.
LIVE NEWS & UPDATES
-
ಇದೊಂದು ಅವೈಜ್ಞಾನಿಕ ಪರಿಹಾರ, ಸರ್ಕಾರ ಜನರಿಗೆ ಟೋಪಿ ಹಾಕುತ್ತಿದೆ: ಹೆಚ್ಡಿಕೆ
ಕಳೆದ ಬಾರಿ ಆಟೋ ಚಾಲಕರ ಪಟ್ಟಿ 7 ಲಕ್ಷ ಇತ್ತು, ಈ ಬಾರಿ 2 ಲಕ್ಷಕ್ಕೆ ಇಳಿಕೆಯಾಗಿದ್ದು ಹೇಗೆಂದು ಪ್ರಶ್ನಿಸಿರುವ ಹೆಚ್.ಡಿ.ಕುಮಾರಸ್ವಾಮಿ ಅಕ್ಕಿ ಕೊಡುವುದರ ಬಗ್ಗೆಯೂ ಟೀಕಿಸಿದ್ದಾರೆ. ಬಿಜೆಪಿ ಸರ್ಕಾರ ಬರುವುದಕ್ಕೂ ಮುನ್ನ 7 ಕೆಜಿ ಅಕ್ಕಿ ಕೊಡಲಾಗುತ್ತಿತ್ತು, ಬಿಜೆಪಿ ಸರ್ಕಾರ ಬಂದ ಬಳಿಕ 5 ಕೆಜಿಗೆ ಇಳಿಕೆ ಮಾಡಿದ್ರು. ಈಗ ಮತ್ತೆ ಏರಿಸಿರುವಂತೆ ತೋರಿಸಿಕೊಳ್ಳುತ್ತಿದ್ದಾರೆ. ಇತ್ತ ಕಾರ್ಮಿಕರಿಗೆ ಸಹ ಸರ್ಕಾರದಿಂದ ಹಣ ನೀಡುವುದಿಲ್ಲ. ಕಾರ್ಮಿಕರು ಇಟ್ಟಿರುವ ಎಫ್‌ಡಿ ಹಣದಿಂದ ನೀಡ್ತಾರಷ್ಟೆ. ಇದು ಅವೈಜ್ಞಾನಿಕ ಪರಿಹಾರ. ಜನರಿಗೆ ಟೋಪಿ ಹಾಕಲಾಗುತ್ತಿದೆಯಷ್ಟೇ ಎಂದು ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
-
ಮೂರು ಕಾಸು ಮಜ್ಜಿಗೆಗೂ ಆಗದ ಆರ್ಥಿಕ ಪ್ಯಾಕೇಜ್: ಹೆಚ್.ಡಿ.ಕುಮಾರಸ್ವಾಮಿ
ಕರ್ನಾಟಕ ರಾಜ್ಯ ಸರ್ಕಾರ ಘೋಷಿಸಿರುವ ಆರ್ಥಿಕ ಪ್ಯಾಕೇಜ್ ಮೂರು ಕಾಸು ಮಜ್ಜಿಗೆಗೂ ಆಗುವುದಿಲ್ಲ ಎಂದು ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಇದು ಕಣ್ಣೊರೆಸುವ ತಂತ್ರವಷ್ಟೇ. ಹೂವು ಬೆಳೆಗಾರರಿಗೆ, ಮಾರಾಟಗಾರರಿಗೆ ಪ್ಯಾಕೇಜ್ ಘೋಷಿಸಿದ್ದಾರೆ. ಅವರನ್ನು ಹೇಗೆ ಗುರುತಿಸುತ್ತಾರೆ? ಕೆಲ ವಲಯಕ್ಕೆ ₹3 ಸಾವಿರ ಘೋಷಣೆ ಮಾಡಿದ್ದಾರೆ. ಅಷ್ಟು ಹಣದಲ್ಲಿ ಹೇಗೆ ಬದುಕಬೇಕು ಎಂದು ಪ್ರಶ್ನಿಸಿದ್ದಾರೆ.
-
ಇಂದಿರಾ ಕ್ಯಾಂಟೀನ್ ಊಟಕ್ಕೆ ಆಧಾರ್ ಕಾರ್ಡ್ ಕೇಳುವ ಸರ್ಕಾರ ಇದು: ಡಿ.ಕೆ.ಶಿವಕುಮಾರ್
ಇಂದಿರಾ ಕ್ಯಾಂಟೀನ್‌ಗಳಲ್ಲಿ ಉಚಿತ ಊಟ ನೀಡುತ್ತಿದ್ದಾರೆ ಆದರೆ ಇದಕ್ಕೂ ಆಧಾರ್ ಕಾರ್ಡ್ ತರಬೇಕು ಎಂದು ಕೇಳ್ತಿದ್ದಾರೆ. ನಾವು ಹೇಳಿದ ಮೇಲೆ ಎಚ್ಚೆತ್ತುಕೊಂಡರು. ಯಾರಾದ್ರೂ ಊಟಕ್ಕಾಗಿ ಆಧಾರ್ ತರುವುದಕ್ಕೆ ಆಗುತ್ತಾ? ಇದು ಸರ್ಕಾರ ಎಷ್ಟು ಜನಪರ ಎನ್ನುವುದನ್ನು ತೋರಿಸುತ್ತದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಇದು ಬಡವರ ಬಗ್ಗೆ ಚಿಂತನೆ ಮಾಡುವ ಸರ್ಕಾರವಲ್ಲ: ಡಿ.ಕೆ.ಶಿವಕುಮಾರ್
ಆರ್ಥಿಕ ಪ್ಯಾಕೇಜ್‌ನಲ್ಲಿ ಕಟ್ಟಡ ಕಾರ್ಮಿಕರಿಗೆ ಏನೂ ಕೊಟ್ಟಿಲ್ಲ. ಬೆಳೆ ಹಾನಿ ಬಗ್ಗೆ ಸರ್ವೆ ಮಾಡಿ ರೈತರಿಗೆ ಸಹಾಯ ಮಾಡಬೇಕಾಗಿದೆ. ಉದ್ಯೋಗ ಕಳೆದುಕೊಂಡವರ ಸರ್ವೇ ಮಾಡಬೇಕಿದೆ. ಇದು ಬಡವರ ಬಗ್ಗೆ ಚಿಂತನೆ ಮಾಡುವ ಸರ್ಕಾರವಲ್ಲ ಎಂದು ಡಿ.ಕೆ.ಶಿವಕುಮಾರ್ ಅಸಮಾಧಾನ ಹೊರಹಾಕಿದ್ದಾರೆ. ನಾವು ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಲು ಕೇಳಿದ್ದೆವು. ಅದಕ್ಕಾಗಿ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ್ದಾರಷ್ಟೆ. ಪ್ಯಾಕೇಜ್ ಘೋಷಣೆಗೂ ಮುನ್ನ ಚರ್ಚೆ ಮಾಡಿದ್ದಾರಾ? ಬ್ಯಾಂಕ್ ಅಧಿಕಾರಿಗಳ ಜತೆ ಇವರು ಚರ್ಚೆ ಮಾಡಿದ್ದಾರಾ? ಎಂದು ಪ್ರಶ್ನಿಸಿದ್ದಾರೆ.
ರಾಜ್ಯ ಸರ್ಕಾರದ ಪ್ಯಾಕೇಜ್ ಮೇಲೆ ನನಗೆ ನಂಬಿಕೆ ಇಲ್ಲ: ಡಿ.ಕೆ.ಶಿವಕುಮಾರ್
ರಾಜ್ಯ ಸರ್ಕಾರದ ಪ್ಯಾಕೇಜ್ ಮೇಲೆ ನನಗೆ ನಂಬಿಕೆ ಇಲ್ಲ ಎಂದು ಬೆಂಗಳೂರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಫಲಾನುಭವಿಗಳಿಗೆ ಹಣ ಕೊಡುತ್ತಾರೆಂಬ ನಂಬಿಕೆ ಇಲ್ಲ. ಪಂಚಾಯಿತಿ ಸಿಬ್ಬಂದಿ, ಶಿಕ್ಷಕರಿಗೆ ಹಣ ಹಂಚುವ ಜವಾಬ್ದಾರಿಯನ್ನು ನೀಡಬೇಕು. ಸರ್ಕಾರ ಯಾವುದೋ ಒತ್ತಡಕ್ಕೆ ಸಿಲುಕಿ ಗೊಂದಲದಲ್ಲಿ ಘೋಷಣೆ ಮಾಡಿದಂತೆ ಕಾಣುತ್ತಿದೆ.
ಯಾರಿಗೆ ಎಷ್ಟು ಹಣ ಸಿಗಲಿದೆ?
ಕೊರೊನಾ ಬಿಕ್ಕಟ್ಟು ಸಂಭಾಳಿಸಲು ₹1,250 ಕೋಟಿ ರೂಪಾಯಿಗೂ ಹೆಚ್ಚು ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿರುವ ಸಿಎಂ ಬಿ.ಎಸ್.ಯಡಿಯೂರಪ್ಪ, ವಿವಿಧ ವಲಯಗಳ ಜನರ ಸಹಾಯಕ್ಕೆ ಧಾವಿಸಿದೆ. ಈ ಆರ್ಥಿಕ ಪ್ಯಾಕೇಜ್‌ನಲ್ಲಿ ಯಾರಿಗೆ ಎಷ್ಟು ಹಣ ಸಿಗಲಿದೆ ಎಂಬ ವಿವರ ಇಲ್ಲಿದೆ.
ಹೂವು ಬೆಳೆಗಾರರಿಗೆ ಹೆಕ್ಟೇರ್‌ಗೆ ₹10 ಸಾವಿರ ಸಹಾಯಧನ ನೋಂದಣಿ ಮಾಡಿಸಿದ ಆಟೋ ಟ್ಯಾಕ್ಸಿ ಚಾಲಕರಿಗೆ ₹3 ಸಾವಿರ ಸಹಾಯಧನ ಅಸಂಘಟಿತ ವಲಯದ ಕಾರ್ಮಿಕರಿಗೆ ತಲಾ ₹2 ಸಾವಿರ ಸಹಾಯಧನ ಕಲಾವಿದರು, ಕಲಾ ತಂಡಗಳಿಗೆ ತಲಾ ₹3 ಸಾವಿರ ಸಹಾಯಧನ ರಸ್ತೆ ಬದಿ ವ್ಯಾಪಾರಿಗಳಿಗೆ ₹2 ಸಾವಿರ ಸಹಾಯಧನ
ಸುದ್ದಿಗೋಷ್ಠಿಯ ಇತರೆ ಘೋಷಣೆಗಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸಾಲ ವಿಚಾರಕ್ಕೆ ಸಂಬಂಧಿಸಿದಂತೆ ಸಾಲ ಮರುಪಾವತಿ ಅವಧಿ ಜುಲೈ 31ರವರೆಗೆ ವಿಸ್ತರಣೆ ಮಾಡಲಾಗಿದೆ ಗರೀಬ್ ಕಲ್ಯಾಣ್ ಯೋಜನೆಯಡಿ ಪ್ರತಿ ತಿಂಗಳು 5 ಕೆಜಿ ಅಕ್ಕಿ ಸಿಗಲಿದ್ದು 30 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಈ ಯೋಜನೆ ಸಿಗಲಿದೆ. ಇದಕ್ಕಾಗಿ 180 ಕೋಟಿ ರೂಪಾಯಿ ಖರ್ಚಾಗಲಿದೆ.
ಬಿಬಿಎಂಪಿ ವ್ಯಾಪ್ತಿ, ನಗರ ಪ್ರದೇಶದಲ್ಲಿ ಇಂದಿರಾ ಕ್ಯಾಂಟೀನ್‌ಗಳಲ್ಲಿ ಉಚಿತ ಊಟ ನೀಡಲಾಗುತ್ತಿದೆ. ಕೊರೊನಾ ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ.
ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾವಣೆ
ಆರ್ಥಿಕ ಪ್ಯಾಕೇಜ್ ಘೋಷಣೆಗೆ ಸಂಬಂಧಿಸಿದಂತೆ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ. ಹೆಸರು ನೋಂದಾಯಿಸಿಕೊಂಡ ಎಲ್ಲಾ ಫಲಾನುಭವಿಗಳಿಗೆ ಸಹಾಯಧನ ತಲುಪಲಿದೆ. ಇದರಲ್ಲಿ ಯಾವುದೇ ಗೊಂದಲ ಬೇಡ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
30 ಲಕ್ಷ ಫಲಾನುಭವಿಗಳಿಗೆ ಇದರಿಂದ ಸಹಾಯವಾಗಲಿದೆ
ಸದರಿ ಆರ್ಥಿಕ ಘೋಷಣೆಯಿಂದ 30 ಲಕ್ಷ ಫಲಾನುಭವಿಗಳಿಗೆ ಸಹಾಯವಾಗಲಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಆರ್ಥಿಕ ಸ್ಥಿತಿ ಸರಿಯಿಲ್ಲದಿದ್ದರೂ ಪ್ಯಾಕೇಜ್ ಘೋಷಿಸಿದ್ದೇವೆ, ನಾಡಿನ ಜನರ ಜತೆ ಸರ್ಕಾರ ಇದೆ: ಬಿಎಸ್ವೈ
ಆರ್ಥಿಕ ಸ್ಥಿತಿ ಸರಿಯಿಲ್ಲದಿದ್ದರೂ ಪ್ಯಾಕೇಜ್ ಘೋಷಿಸಿದ್ದೇವೆ. ನಾಡಿನ ಜನರ ಜತೆ ಸರ್ಕಾರ ಇದೆ. ಲಾಕ್‌ಡೌನ್ ಬಗ್ಗೆ ಮೇ 23ರಂದು ನಿರ್ಧಾರ ಮಾಡುತ್ತೇವೆ.ಫಲಾನುಭವಿಗಳಿಗೆ ಸಹಾಯಧನ ನೀಡಲು ಶಕ್ತಿಮೀರಿ ಕೆಲಸ ಮಾಡುತ್ತೇವೆ. ಎಲ್ಲ ಫಲಾನುಭವಿಗಳಿಗೆ ಸಹಾಯಧನ ಸಿಗುತ್ತದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.
3 ದಿನಗಳಲ್ಲಿ 2500 ವೈದ್ಯರ ನೇಮಕಕ್ಕೆ ತೀರ್ಮಾನ
ಕೊರೊನಾ ಪರಿಸ್ಥಿತಿ ನಿರ್ವಹಿಸುವ ಸಲುವಾಗಿ 3 ದಿನಗಳಲ್ಲಿ 2500 ವೈದ್ಯರನ್ನು ನೇಮಕ ಮಾಡಲು ಸರ್ಕಾರ ತೀರ್ಮಾನ ಮಾಡಿದೆ.
ಶಿಕ್ಷಕರು, ಲೈನ್ ಮ್ಯಾನ್, ಗ್ಯಾಸ್ ಸಿಲಿಂಡರ್ ಡೆಲಿವರಿ ಬಾಯ್ಸ್ಗಳನ್ನು ಫ್ರಂಟ್ ಲೈನ್ ವಾರಿಯರ್ಸ್ ಎಂದು ಪರಿಗಣನೆ
ಶಿಕ್ಷಕರು, ಲೈನ್ ಮ್ಯಾನ್, ಗ್ಯಾಸ್ ಸಿಲಿಂಡರ್ ಡೆಲಿವರಿ ಬಾಯ್ಸ್ ಇವರನ್ನೆಲ್ಲಾ ಫ್ರಂಟ್ ಲೈನ್ ವಾರಿಯರ್ಸ್ ಎಂದು ಪರಿಗಣಿಸಿ ಲಸಿಕೆ ನೀಡಲು ನಿರ್ಧಾರ ಮಾಡಲಾಗಿದೆ. ಸೋಂಕಿತ ರೋಗಿಗಳಿಗೆ ಸರ್ಕಾರದಿಂದ ನಿಗದಿತ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗ್ತಿದೆ.
ಸಾಲ ಮರು ಪಾವತಿ ದಿನಾಂಕ ಜುಲೈ ಅಂತ್ಯದವರೆಗೆ ವಿಸ್ತರಣೆ
ರೈತರು, ಸ್ವಸಹಾಯ ಸಂಘ, ಸೊಸೈಟಿ ಸಾಲ ಮರು ಪಾವತಿ ದಿನಾಂಕ ಜುಲೈ ಅಂತ್ಯದವರೆಗೆ ವಿಸ್ತರಣೆ ಮಾಡಲಾಗುವುದು. ಪಿಎಂಜಿಕೆವೈ ಯೋಜನೆಯಡಿ ಬಿಪಿಎಲ್ ಅಂತ್ಯೋದಯ ಕಾರ್ಡ್ಗೆ 5 ಕೆಜಿ ಅಕ್ಕಿ ನೀಡಲಾಗುವುದು. ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿರುವವರಿಗೂ ಎರಡು ತಿಂಗಳು ಬಿಪಿಎಲ್ ಉಚಿತ ಅಕ್ಕಿ ಆಹಾರ ಧಾನ್ಯ ನೀಡಲಿದ್ದೇವೆ. ಎಪಿಎಲ್ ಕಾರ್ಡ್ಗೆ ಕೆಜಿಗೆ 15 ರೂ ನಂತೆ ಅಕ್ಕಿ ಕೊಡುತ್ತೇವೆ.
ಹೂವು ಬೆಳೆಗಾರರಿಗೆ, ಆಟೋ, ಮ್ಯಾಕ್ಸಿ ಚಾಲಕರಿಗೆ, ಅಸಂಘಟಿತ ಕಾರ್ಮಿಕರಿಗೆ, ಕಲಾವಿದರು, ಕಲಾ ತಂಡಗಳಿಗೆ ಆರ್ಥಿಕ ಸಹಾಯ
₹1,250 ಕೋಟಿಗೂ ಹೆಚ್ಚು ಪ್ಯಾಕೇಜ್ ಘೋಷಣೆಯಲ್ಲಿ ಹೂವು ಬೆಳೆಗಾರರಿಗೆ ಹೆಕ್ಟೇರ್‌ಗೆ 10 ಸಾವಿರ ಸಹಾಯಧನ, ಇದಕ್ಕೆ 70 ಕೋಟಿ ರೂಪಾಯಿ ಖರ್ಚಾಗಲಿದೆ. ನೋಂದಣಿ ಮಾಡಿಸಿದ ಆಟೋ ಚಾಲಕರಿಗೆ ಆಟೋ, ಮ್ಯಾಕ್ಸಿ ಚಾಲಕರಿಗೆ 3 ಸಾವಿರ ರೂಪಾಯಿ, ಅಸಂಘಟಿತ ಕಾರ್ಮಿಕರಿಗೆ ತಲಾ 2 ಸಾವಿರ ರೂಪಾಯಿ ನೀಡಲಾಗುವುದು, ಇದಕ್ಕಾಗಿ 61 ಕೋಟಿ ರೂಪಾಯಿ ಖರ್ಚಾಗಲಿದೆ ಹಾಗೂ ಕಲಾವಿದರು, ಕಲಾ ತಂಡಗಳಿಗೆ ತಲಾ 3 ಸಾವಿರ ರೂ.ನಂತೆ 16,100 ಜನರಿಗೆ ನೀಡಲಾಗುವುದು ಇದಕ್ಕೆ 4 ಕೋಟಿ ರೂಪಾಯಿ ಖರ್ಚಾಗಲಿದೆ.
1,250 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಆರ್ಥಿಕ ಪ್ಯಾಕೇಜ್ ನೀಡಲು ಯೋಚಿಸಲಾಗಿದೆ.
ವಾಣಿಜ್ಯ ಚಟುವಟಿಕೆಗೆ ನಿರ್ಬಂಧ ವಿಧಿಸಿದ್ದಾಗ ಕೊರೊನಾ ಮೊದಲ ಅಲೆಯಲ್ಲಿ ಆರ್ಥಿಕ ಸಹಾಯ ಮಾಡಲಾಗಿತ್ತು. ಕೆಲ ವಲಯಗಳಿಗೆ ಸರ್ಕಾರ ಆರ್ಥಿಕ ಸಹಾಯ ಮಾಡಿತ್ತು. ಅದೇ ರೀತಿ ಈ ಬಾರಿ 1,250 ಕೋಟಿಗೂ ಹೆಚ್ಚು ಪ್ಯಾಕೇಜ್ ನೀಡಲು ಯೋಚಿಸಲಾಗಿದೆ.
ನಿರ್ಬಂಧ ಅನಿವಾರ್ಯವಾಗಿತ್ತು ಆದರೆ, ಅಗತ್ಯ ಸೇವೆಗೆ ಅವಕಾಶ ಕೊಟ್ಟಿದ್ದೆವು
ಕೊರೊನಾ ನಿಯಂತ್ರಣಕ್ಕೆ ಮೇ 24 ವರೆಗೆ ನಿರ್ಬಂಧ ಅನಿವಾರ್ಯವಾಗಿತ್ತು. ಸಾಮಾಜಿಕ ಆರ್ಥಿಕ ಪರಿಣಾಮ ಕಡಿಮೆಗೊಳಿಸಲು ಅಗತ್ಯ ಸೇವೆಗೆ ಅವಕಾಶ ನೀಡಲಾಗಿತ್ತು. ಲಾಕ್‌ಡೌನ್ ವೇಳೆ ಅಗತ್ಯ ಸೇವೆಗಳಿಗೆ ಅವಕಾಶ ಕಲ್ಪಿಸಿದ್ದೆವು. ಅಗತ್ಯವಸ್ತುಗಳ ಖರೀದಿ ಮಾಡುವುದಕ್ಕೂ ಅವಕಾಶ ನೀಡಿದ್ದೆವು.
ಆರ್ಥಿಕ ಘೋಷಣೆಗೆ ಸುದ್ದಿಗೋಷ್ಠಿ ಸೀಮಿತ ಸಾಧ್ಯತೆ
ಕಳೆದ ವರ್ಷ ಆರ್ಥಿಕ ನೆರವು ನೀಡಿದ್ದ ಬಹುತೇಕ ಎಲ್ಲಾ ವರ್ಗಕ್ಕೂ ಈ ಬಾರಿ ಕೂಡಾ ನೆರವು ನೀಡಲು ತೀರ್ಮಾನಿಸಲಾಗಿದ್ದು, ಆರ್ಥಿಕ ಪ್ಯಾಕೇಜ್ ಒಟ್ಟು ಮೊತ್ತದ ಬಗ್ಗೆ ಇನ್ನೂ ನಿರ್ಧಾರ ಮಾಡಬೇಕಿದೆ. ಸದ್ಯ ಲಾಕ್‌ಡೌನ್ ವಿಸ್ತರಣೆ ಬಗ್ಗೆ ಚರ್ಚಿಸದ ಕಾರಣ ಇಂದಿನ ಸುದ್ದಿಗೋಷ್ಠಿಯಲ್ಲಿ ಕೇವಲ ಆರ್ಥಿಕ ಪ್ಯಾಕೇಜ್ ಬಗ್ಗೆ ಮಾತ್ರ ಪ್ರಸ್ತಾಪವಾಗುವ ಸಾಧ್ಯತೆ ಇದೆ.
ಲಾಕ್‌ಡೌನ್ ಮುಂದೂಡುವ ಬಗ್ಗೆ ನಿರ್ಧಾರ ಇಲ್ಲ?
ಲಾಕ್‌ಡೌನ್ ಮುಂದುವರೆಸುವ ಬಗ್ಗೆ ಅಥವಾ ವಿಸ್ತರಿಸುವ ಕುರಿತು ಇಂದು ನಿರ್ಧಾರ ಬೇಡ ಎಂದು ಮುಖ್ಯಮಂತ್ರಿಗಳ ಸಭೆಯಲ್ಲಿ ತೀರ್ಮಾನವಾಗಿರುವ ಕುರಿತು ಮಾಹಿತಿ ಸಿಕ್ಕಿದೆ. ಇನ್ನೂ ಒಂದೆರೆಡು ದಿನಗಳ ಬಳಿಕ ಲಾಕ್‌ಡೌನ್ ಕುರಿತು ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.
3000 ರೂ ಆರ್ಥಿಕ ಪ್ಯಾಕೇಜ್ ಘೋಷಣೆ ಸಾಧ್ಯತೆ
ಕಳೆದ ವರ್ಷದ ಮಾದರಿಯಲ್ಲೇ ಆಟೋ ಚಾಲಕರು, ಕ್ಷೌರಿಕರು,ಬೀದಿ ಬದಿ ವ್ಯಾಪಾರಿಗಳು, ಹೂವು ಹಣ್ಣು ಬೆಳೆಗಾರರು, ಮಾರಾಟಗಾರರಿಗೆ ಆರ್ಥಿಕ ಪ್ಯಾಕೇಜ್ ಘೋಷಿಸುವ ಸಾಧ್ಯತೆ ಇದ್ದು, ಕಳೆದ ವರ್ಷ 5000ರೂ ನೀಡಿದ್ದಕ್ಕೆ ಬದಲಾಗಿ ಈಗ 3 ಸಾವಿರ ರೂ. ಸಹಾಯಧನ ನೀಡುವ ಸಾಧ್ಯತೆ ಇದೆ.
ಕನ್ನಡ ಚಿತ್ರರಂಗಕ್ಕೆ ಆರ್ಥಿಕ ಪ್ಯಾಕೇಜ್ ಘೋಷಣೆ ನಿರೀಕ್ಷೆ ಇದೆ: ಡಾ.ಶಿವರಾಜ್‌ಕುಮಾರ್
ಕನ್ನಡ ಚಿತ್ರರಂಗಕ್ಕೆ ಆರ್ಥಿಕ ಪ್ಯಾಕೇಜ್ ಘೋಷಣೆ ನಿರೀಕ್ಷೆ ಇದೆ ಎಂದು ಟಿವಿ9ಗೆ ನಟ ಡಾ.ಶಿವರಾಜ್‌ಕುಮಾರ್ ಹೇಳಿಕೆ ನೀಡಿದ್ದಾರೆ. ಕಳೆದ ಬಾರಿಯಿಂದಲೂ ಚಿತ್ರರಂಗದತ್ತ ಗಮನ ಹರಿಸಲು ಮನವಿ ಇಟ್ಟಿದ್ದೇವೆ. ಮಾನವೀಯತೆ ಆಧಾರದ ಮೇಲೆ ಸಹಾಯ ನೀಡಬೇಕು ಎಂದಿದ್ದಾರೆ.
ಸಾಲ ವಸೂಲಾತಿ 3 ತಿಂಗಳ ಮೂಂದೂಡಿಕೆ ಸಾಧ್ಯತೆ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸಭೆಯಲ್ಲಿ ಸಾಲ ವಸೂಲಾತಿ ಬಗ್ಗೆ ಮಾತುಕತೆ ನಡೆದಿದ್ದು, ಸಾಲ ವಸೂಲಾತಿ 3 ತಿಂಗಳ ಮೂಂದೂಡಿಕೆ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ನಿರ್ದಿಷ್ಟ ವಲಯಗಳಿಗೆ ಆರ್ಥಿಕ ಪ್ಯಾಕೇಜ್ ಘೋಷಣೆ?
ಸಿಎಂ ನೇತೃತ್ವದ ಸಭೆಯಲ್ಲಿ ನಾಲ್ಕೈದು ವಲಯಗಳ ಅಧಿಕಾರಿಗಳು ಭಾಗಿಯಾಗಿದ್ದಾರೆ. ಸಾರಿಗೆ, ಸಹಕಾರ, ಕಾರ್ಮಿಕ, ರೇಷ್ಮೆ, ತೋಟಗಾರಿಕೆ ಅಧಿಕಾರಿಗಳು ಭಾಗಿಯಾಗಿದ್ದಾರೆ. ಅಸಂಘಟಿತ ವಲಯದ ಕಾರ್ಮಿಕರಿಗೆ ಆಹಾರ ಭದ್ರತೆ ಒದಗಿಸುವ ನಿರೀಕ್ಷೆ ಇದೆ. ಆಟೋ, ಟ್ಯಾಕ್ಸಿ ಚಾಲಕರು, ಹೂ ಬೆಳೆಗಾರರಿಗೂ ಆರ್ಥಿಕ ನೆರವು ಸಾಧ್ಯತೆ.
ಚಿತ್ರರಂಗಕ್ಕೆ ವಿಶೇಷ ಪ್ಯಾಕೇಜ್ ನೀಡುವಂತೆ ಮುಖ್ಯಮಂತ್ರಿ ಬಳಿ ಮನವಿ
ಚಿತ್ರರಂಗಕ್ಕೆ ವಿಶೇಷ ಪ್ಯಾಕೇಜ್ ನೀಡುವಂತೆ ಮುಖ್ಯಮಂತ್ರಿ ಬಳಿ ಮನವಿ ಸಲ್ಲಿಸಲು ನಿರ್ಮಾಪಕ ಬಾ.ಮಾ.ಹರೀಶ್, ನಟ ಜಯಕೃಷ್ಣ ಮುಂದಾಗಿದ್ದಾರೆ. ಮನವಿ ಸಲ್ಲಿಸಲು ಸಿಎಂ ಗೃಹಕಚೇರಿ ಕೃಷ್ಣಾಗೆ ನಿರ್ಮಾಪಕ ಬಾ.ಮಾ.ಹರೀಶ್, ನಟ ಜಯಕೃಷ್ಣ ಆಗಮಿಸಿದ್ದಾರೆ.
ಲಾಕ್‌ಡೌನ್ ಮುಂದುವರೆಸುವಂತೆ ಡಾ.ಸುಧಾಕರ್ ಸಲಹೆ ಸಾಧ್ಯತೆ
ಕೊವಿಡ್ ನಿಯಂತ್ರಣಕ್ಕಾಗಿ ಲಾಕ್‌ಡೌನ್ ಮುಂದುವರೆಸುವಂತೆ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಸಲಹೆ ನೀಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಆರ್ಥಿಕ ಪ್ಯಾಕೇಜ್ ಘೋಷಣೆ ಸಂಬಂಧ ಪೂರ್ವಭಾವಿ ಸಭೆಯಲ್ಲಿ ಕೊವಿಡ್ ನಿಯಂತ್ರಣದ ಕುರಿತು ಸಿಎಂಗೆ ಮನವರಿಕೆ ಮಾಡಿಕೊಡಲಿದ್ದು, ಗ್ರಾಮೀಣ ಭಾಗದಲ್ಲಿ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆ ಇನ್ನೂ ಹದಿನೈದು ದಿನಗಳ ಕಾಲ ಲಾಕ್‌ಡೌನ್ ಮುಂದುವರಿಸುವಂತೆ ಮನವಿ ಮಾಡುವ ಸಾಧ್ಯತೆ ಇದೆ. ಅಲ್ಲದೇ, ತಜ್ಞರು ನೀಡಿರುವ ಅಭಿಪ್ರಾಯವನ್ನು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಮುಖ್ಯಮಂತ್ರಿಗಳ ಮುಂದಿಡಲಿದ್ದಾರೆ.
ಲಾಕ್‌ಡೌನ್ ವಿಸ್ತರಣೆ ಹಾಗೂ ವಿಶೇಷ ಪ್ಯಾಕೇಜ್ ಘೋಷಣೆ ಬಗ್ಗೆ ಡಿಸಿಎಂ ಡಾ.ಅಶ್ವತ್ಥನಾರಾಯಣ ಸುಳಿವು
ಕೊರೊನಾ ಪರಿಸ್ಥಿತಿಯನ್ನು ಯಾವ ರೀತಿ ನಿರ್ವಹಣೆ ಮಾಡಬೇಕು? ಲಾಕ್‌ಡೌನ್ ವಿಸ್ತರಣೆ ಅಗತ್ಯವಿದೆಯಾ? ಪ್ಯಾಕೇಜ್ ಘೋಷಣೆ ಸೇರಿದಂತೆ ಎಲ್ಲಾ ರೀತಿಯ ಬೇಡಿಕೆ ಬಗ್ಗೆ ಚರ್ಚೆ ಮಾಡಲು ಸಿಎಂ ಸಭೆ ಕರೆದಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ತಿಳಿಸಿದ್ದಾರೆ. ಈ ಸಭೆಯಲ್ಲಿ ಎಲ್ಲಾ ಸಚಿವರು ಭಾಗಿಯಾಗಿ ಸಲಹೆ ಕೊಡುತ್ತೇವೆ. ಮುಖ್ಯಮಂತ್ರಿಗಳು ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಎಲ್ಲವನ್ನೂ ಘೋಷಣೆ ಮಾಡುತ್ತಾರೆ. ನಮ್ಮ ಸರ್ಕಾರ ಜನರ ಪರವಾಗಿ ಕೆಲಸ ಮಾಡುತ್ತಿದೆ ಯಾವುದೇ ಅಂಕಿಅಂಶಗಳನ್ನು ಮುಚ್ಚಿಟ್ಟಿಲ್ಲ ಎಂದಿದ್ದಾರೆ. ಈ ವೇಳೆ ಲಾಕ್‌ಡೌನ್ ವಿಸ್ತರಣೆ ಹಾಗೂ ವಿಶೇಷ ಪ್ಯಾಕೇಜ್ ಘೋಷಣೆ ಬಗ್ಗೆ ಡಿಸಿಎಂ ಸುಳಿವು ಕೊಟ್ಟಿರುವ ಕಾರಣ ನಿರೀಕ್ಷೆ ಹೆಚ್ಚಿದೆ.
ಮಹತ್ತರ ಸಭೆಯಲ್ಲಿ ಹಿರಿಯ ಸಚಿವರು ಭಾಗಿ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸಭೆಯಲ್ಲಿ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಡಾ.ಅಶ್ವತ್ಥ್ ನಾರಾಯಣ ಹಾಗೂ ಸಚಿವರಾದ ಡಾ.ಕೆ.ಸುಧಾಕರ್, ಆರ್.ಅಶೋಕ್, ಬಸವರಾಜ ಬೊಮ್ಮಾಯಿ, ವಿ.ಸೋಮಣ್ಣ, ಕೆ.ಎಸ್.ಈಶ್ವರಪ್ಪ, ಸುರೇಶ್ ಕುಮಾರ್, ಮಾಧುಸ್ವಾಮಿ, ಜಗದೀಶ್ ಶೆಟ್ಟರ್, ಎಸ್.ಟಿ.ಸೋಮಶೇಖರ್, ಅರವಿಂದ ಲಿಂಬಾವಳಿ ಭಾಗಿಯಾಗಲಿದ್ದಾರೆ.
Published On - May 19,2021 12:15 PM