ಬೆಂಗಳೂರು, ಅ.13: ಕರ್ನಾಟಕದಲ್ಲಿ ಲೋಡ್ ಶೆಡ್ಡಿಂಗ್ (Load Shedding) ಸಮಸ್ಯೆ ಬಗ್ಗೆ ವಿಪಕ್ಷ ಬಿಜೆಪಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಲೇ ಇದೆ. ಆದರೆ, ಯಾವುದೇ ಪ್ರತಿಕ್ರಿಯೆ ನೀಡದ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಇದೀಗ ಮೌನ ಮುರಿದಿದ್ದು, ಮಳೆ ಕಡಿಮೆ ಆಗಿರುವುದರಿಂದ ಸಮಸ್ಯೆ ಆಗಿದೆ ಎಂದು ಒಪ್ಪಿಕೊಂಡಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಕಡಿಮೆ ಇದೆ ಹಾಗೂ ಬೇಡಿಕೆ ಹೆಚ್ಚಿದೆ. ಕಳೆದ ವರ್ಷ 900-1000 ಮೆಗಾವ್ಯಾಟ್ ವಿದ್ಯುತ್ ಬಳಕೆ ಆಗುತ್ತಿತ್ತು. ಈ ಬಾರಿ 1500-1600 ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ಇದೆ. ಹೊರ ರಾಜ್ಯದಿಂದ ವಿದ್ಯುತ್ ಖರೀದಿಸುವ ಬಗ್ಗೆ ಸಭೆ ಕರೆದಿದ್ದೇನೆ. ವಿದ್ಯುತ್ ಉತ್ಪಾದಿಸುವವರು ಸರ್ಕಾರಕ್ಕೆ ನೀಡುವಂತೆ ಆದೇಶಿಸಿದ್ದೇನೆ. ವಿದ್ಯುತ್ ಖರೀದಿಸಿ ಸರಿಪಡಿಸುವ ಕೆಲಸ ಮಾಡುತ್ತೇನೆ ಎಂದರು.
ಇದನ್ನೂ ಓದಿ: ಲೋಡ್ ಶೆಡ್ಡಿಂಗ್ ತೀವ್ರಗೊಂಡರೆ ರಾಜ್ಯಕ್ಕೆ ನಷ್ಟ: ಎಂಎಲ್ಸಿ ಎನ್ ರವಿಕುಮಾರ್
ಬಿಜೆಪಿಯವರ ಹೇಳಿಕೆಗೆ ಉತ್ತರ ಕೊಡುವುದಕ್ಕೆ ನನಗೆ ಆಗುವುದಿಲ್ಲ. ಅವರು ರಾಜಕೀಯವಾಗಿ ಮಾತಾಡ್ತಾರೆ ಎಂದ ಸಿಎಂ ಸಿದ್ದರಾಮಯ್ಯ, ಮಳೆಯಿಲ್ಲ, ಬರಗಾಲ ಇದೆ. ಏಳು ಗಂಟೆಗೆ ಕೋಡಲು ಆಗುತ್ತಿಲ್ಲ. ಆದರೂ ವಿದ್ಯುತ್ ಕೊಡುತ್ತಿದ್ದೇವೆ ಎಂದರು.
ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ವಿಚಾರವಾಗಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಮುಖ್ಯಮಂತ್ರಿಗಳು ಲೋಡ್ ಶೆಡ್ಡಿಂಗ್ ವಿಚಾರವಾಗಿ ಸಭೆ ಕರೆದಿದ್ದಾರೆ. ಯಾರ್ಯಾರ ಕಾಲದಲ್ಲಿ ಎಷ್ಟು ಪವರ್ ಜನರೇಟ್ ಆಯ್ತು ಅಂತ ನನ್ನ ಬಳಿ ಮಾಹಿತಿ ಇದೆ. ನಾವಿದ್ದಾಗ ಎಷ್ಟು ಆಗಿದೆ, ಹಿಂದೆ ಎಷ್ಟಾಗಿದೆ, ಎಷ್ಟು ಹೆಚ್ಚುವರಿ ಇದೆ, ಏನ್ ತಯಾರಿ ಇತ್ಯಾದಿಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ. ಸಭೆ ಬಳಿಕ ಮಾತನಾಡುತ್ತೇನೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ