ಕೇರಳದ ಕನ್ನಡ ಶಾಲೆಗಳಲ್ಲಿ ಮಲಯಾಳಂ ಹೇರಿಕೆ: ಪಿಣರಾಯಿ ವಿಜಯನ್​ಗೆ ಸಿದ್ದರಾಮಯ್ಯ ಎಚ್ಚರಿಕೆ ಸಂದೇಶ

ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಲಯಾಳಂ ಕಲಿಕೆ ಕಡ್ಡಾಯಗೊಳಿಸುವ ಮಸೂದೆಯನ್ನು ಸಿಎಂ ಸಿದ್ದರಾಮಯ್ಯ ತೀವ್ರವಾಗಿ ಖಂಡಿಸಿದ್ದಾರೆ. ಕೇರಳ ಸಿಎಂ ಪಿಣರಾಯಿ ವಿಜಯನ್‌ಗೆ ಪತ್ರ ಬರೆದಿರುವ ಸಿಎಂ ಸಿದ್ದರಾಮಯ್ಯ, ಒಂದು ವೇಳೆ ಮಸೂದೆ ಜಾರಿಯಾದರೆ ಕರ್ನಾಟಕ ಸಾಂವಿಧಾನಿಕವಾಗಿ ವಿರೋಧಿಸುವುದಾಗಿ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಕೇರಳದ ಕನ್ನಡ ಶಾಲೆಗಳಲ್ಲಿ ಮಲಯಾಳಂ ಹೇರಿಕೆ: ಪಿಣರಾಯಿ ವಿಜಯನ್​ಗೆ ಸಿದ್ದರಾಮಯ್ಯ ಎಚ್ಚರಿಕೆ ಸಂದೇಶ
ಸಿಎಂ ಸಿದ್ದರಾಮಯ್ಯ, ಕೇರಳ ಸಿಎಂ ಪಿಣರಾಯಿ ವಿಜಯನ್

Updated on: Jan 09, 2026 | 10:05 PM

ಬೆಂಗಳೂರು, ಜನವರಿ 09: ಕೋಗಿಲು ಲೇಔಟ್ ವಿಚಾರಕ್ಕೆ ಮೂಗು ತೂರಿಸಿದ್ದ ಕೇರಳ ಇದೀಗ ಮಲಯಾಳಂ ಭಾಷಾ ಮಸೂದೆ-2025 (Kerala Malayalam Language Bill) ಮೂಲಕ ಕಿರಿಕ್​ ತೆಗೆದಿದ್ದು, ಕೇರಳದ ಕನ್ನಡ ಶಾಲೆಗಳಲ್ಲಿ ಮಲಯಾಳಂ ಹೇರಿಕೆಗೆ ಮುಂದಾಗಿದೆ. ಸದ್ಯ ಕೇರಳ ಸರ್ಕಾರದ ಈ ನಡೆಯನ್ನ ತೀವ್ರವಾಗಿ ಖಂಡಿಸಿರುವ ಸಿಎಂ ಸಿದ್ದರಾಮಯ್ಯ (Siddaramaiah), ಸಿಎಂ ಪಿಣರಾಯಿ ವಿಜಯನ್​ಗೆ ಪತ್ರ ಬರೆದಿದ್ದಾರೆ. ಆ ಮೂಲಕ ಗಡಿ ಜಿಲ್ಲೆಯಲ್ಲಿ ಕೇರಳದ ಮಲಯಾಳಂ ಭಾಷಾ ಮಸೂದೆ ಜಾರಿಯಾದರೆ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ.

ಭಾಷಾ ಮಸೂದೆಯ ಬಗ್ಗೆ ಸಿಎಂ ಕಳವಳ 

ಕೇರಳದಲ್ಲಿ ಮಲಯಾಳಂ ಕಡ್ಡಾಯ ಮಸೂದೆ ಜಾರಿಗೆ ಮುಂದಾಗಿದೆ. ಇದು ಗಡಿಭಾಗದ ಕಾಸರಗೋಡು ಮತ್ತು ಮಂಜೇಶ್ವರ ಭಾಗದ ಕನ್ನಡ ಮಕ್ಕಳ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಕೇರಳ ಸರ್ಕಾರದ ನಡೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಇತ್ತ ಸಿಎಂ ಸಿದ್ದರಾಮಯ್ಯ ಕೂಡ ಭಾಷಾ ಮಸೂದೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಕೇರಳ ಸಿಎಂ ಪಿಣರಾಯಿ ವಿಜಯನ್​ಗೆ ಸಿಎಂ ಸಿದ್ದರಾಮಯ್ಯ ಪತ್ರ

ಕಾಸರಗೋಡಿನಲ್ಲಿ ಕನ್ನಡ ಶಾಲೆಗಳಲ್ಲಿ ಮಲಯಾಳಂ ಮೊದಲ ಭಾಷೆಯಾಗಿ ಕಡ್ಡಾಯಗೊಳಿಸುವುದು ಸರಿಯಲ್ಲ. ​ಗಡಿ ಭಾಗದಲ್ಲಿ ಮಲಯಾಳಂ, ಕನ್ನಡ, ತುಳು, ಬ್ಯಾರಿ ಸೇರಿದಂತೆ ಹಲವು ಭಾಷೆಗಳನ್ನು ಮಾತನಾಡುವವರಿದ್ದಾರೆ. ಹಾಗಾಗಿ ಮಲಯಾಳಂ ಹೇರಿಕೆ ಮಾಡುವುದರಿಂದ ಮಕ್ಕಳಿಗೆ ಹೊರೆಯಾಗುವುದರಿಂದ ಮಕ್ಕಳ ಶೈಕ್ಷಣಿಕ ವ್ಯವಸ್ಥೆಗೆ ಧಕ್ಕೆಯಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಕೇರಳದ ಮಲಯಾಳ ಭಾಷಾ ಮಸೂದೆಯಲ್ಲೇನಿದೆ? ಕನ್ನಡಿಗರಿಗೆ, ಕನ್ನಡ ಶಾಲೆಗಳಿಗೇಕೆ ಆತಂಕ?

ಸಂವಿಧಾನದ 29, 30, 350A, 350B ಅಡಿ ಶಿಕ್ಷಣ ಪಡೆವ ಹಕ್ಕಿದೆ. ತಮ್ಮ ಸಂಸ್ಕೃತಿ ಉಳಿಸಿಕೊಳ್ಳುವ ಹಕ್ಕಿದೆ. ​ಯಾವುದೇ ಭಾಷೆ ಪ್ರಚಾರ ಇನ್ನೊಂದು ಭಾಷೆಯ ಹೇರಿಕೆ ಆಗಬಾರದು. ಒಂದು ವೇಳೆ ಮಸೂದೆ ಅಂಗೀಕರಿಸಿದರೆ ಕರ್ನಾಟಕವು ಈ ಮಸೂದೆಯನ್ನು ಸಾಂವಿಧಾನಿಕವಾಗಿ ವಿರೋಧಿಸಲಿದೆ. ​ಕೇರಳ ಸರ್ಕಾರವು ಈ ನಿರ್ಧಾರವನ್ನು ಮರುಪರಿಶೀಲಿಸಬೇಕು. ಭಾಷಾ ಅಲ್ಪಸಂಖ್ಯಾತರು ಮತ್ತು ಶಿಕ್ಷಣ ತಜ್ಞರೊಂದಿಗೆ ಚರ್ಚಿಸಬೇಕು ಎಂದು ಪತ್ರದ ಮೂಲಕ ಕೇರಳ ಸಿಎಂ ವಿಜಯನ್​ಗೆ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ವರದಿ: ಈರಣ್ಣ ಬಸವ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:02 pm, Fri, 9 January 26