ಬೆಂಗಳೂರು, ನವೆಂಬರ್ 22: ಕಾಂತರಾಜ್ ಸಮಿತಿ ಸಿದ್ಧಪಡಿಸಿರುವ ಜಾತಿ ಗಣತಿ ವರದಿಯು (Caste Census Report) ಕರ್ನಾಟಕ ಸರ್ಕಾರದ ಕಾಂಗ್ರೆಸ್ ಶಾಸಕರಲ್ಲಿ ಒಡಕು ಮೂಡಿಸಿದೆ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಲಿಂಗಾಯತರು ಮತ್ತು ಒಕ್ಕಲಿಗರ ವಿರೋಧದ ನಡುವೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು, ಸರ್ಕಾರವು ಇತರ ಹಿಂದುಳಿದ ವರ್ಗಗಳ ಆಯೋಗದಿಂದ (OBC) ವರದಿಯನ್ನು ಸ್ವೀಕರಿಸಲಿದೆ ಎಂದು ಬುಧವಾರ ಹೇಳಿದ್ದಾರೆ.
ವಿಧಾನಸೌಧದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸಮೀಕ್ಷೆಗೆ 162 ಕೋಟಿ ರೂಪಾಯಿ ಖರ್ಚು ಮಾಡಲಾಗಿದ್ದು, ಸರ್ಕಾರ ವರದಿ ತರಿಸಿಕೊಂಡು ನಂತರ ತೀರ್ಮಾನಿಸಲಿದೆ ಎಂದರು.
ನಾವು 162 ಕೋಟಿ ರೂಪಾಯಿ ಖರ್ಚು ಮಾಡಿದ್ದೇವೆ. ನಾವು ವರದಿ ತೆಗೆದುಕೊಳ್ಳಬೇಕು. ಅವರಿಗೆ (ವೊಕ್ಕಲಿಗರಿಗೆ) ಇರುವ ಅನುಮಾನಗಳು ವರದಿಯಲ್ಲಿವೆಯೇ ಇಲ್ಲವೇ ಎಂಬುದನ್ನು ನೋಡಬೇಕು. ನಾನು ವರದಿಯನ್ನು ನೋಡಿಲ್ಲ. ನಾನೇ ನೋಡದಿದ್ದರೆ ಬೇರೆಯವರು ಅದನ್ನು ಹೇಗೆ ನೋಡುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ವರದಿ ಸಲ್ಲಿಕೆ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಅವರು ವರದಿ ಸಲ್ಲಿಸುವವರೆಗೆ ಒಬಿಸಿ ಆಯೋಗದ ಅವಧಿಯನ್ನು ವಿಸ್ತರಿಸಲಾಗುವುದು ಎಂದು ಹೇಳಿದ್ದಾರೆ.
‘ಜಯಪ್ರಕಾಶ್ ಹೆಗ್ಡೆ (ಒಬಿಸಿ ಆಯೋಗದ ಅಧ್ಯಕ್ಷ) ನನ್ನನ್ನು ಭೇಟಿ ಮಾಡಿದ್ದರು. ಡಿಸೆಂಬರ್‌ನಲ್ಲಿ ವರದಿ ಸಲ್ಲಿಸುವುದಾಗಿ ತಿಳಿಸಿದರು. ಅವರು ವರದಿ ಸಲ್ಲಿಸುವವರೆಗೂ ಅವರ ಸೇವಾವಧಿಯನ್ನು ವಿಸ್ತರಿಸುತ್ತೇವೆ ಎಂದು ಹೇಳಿದ್ದೆ. ಜನವರಿಯೊಳಗೆ ಸಲ್ಲಿಸುವಂತೆ ಹೇಳಿದ್ದೇನೆ’ ಎಂದು ಸಿಎಂ ತಿಳಿಸಿದರು.
ಡಿಸಿಎಂ ಡಿಕೆ ಶಿವಕುಮಾರ್ ವರದಿಗೆ ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ಇಬ್ಬರ ನಡುವೆ ಈ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಸಿಎಂ ಹೇಳಿದರು.
ಇದನ್ನೂ ಓದಿ: ಜಾತಿಗಣತಿ ವರದಿ ಜಾರಿ ವಿಚಾರದಲ್ಲಿ ನನ್ನ ನಿರ್ಧಾರ ಅಚಲ: ಸಿದ್ದರಾಮಯ್ಯ
ಈ ಬಗ್ಗೆ ಡಿಸಿಎಂ ನನ್ನೊಂದಿಗೆ ಯಾವತ್ತೂ ಮಾತನಾಡಿಲ್ಲ. ಒಕ್ಕಲಿಗ ಸಂಘದ ಮುಖಂಡರು ನನ್ನನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ವರದಿ ಬಂದ ನಂತರ ಅವರ ಮನವಿಯನ್ನು ಪರಿಗಣಿಸುತ್ತೇನೆ ಎಂದು ಸಿಎಂ ಹೇಳಿದರು.
ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಸುಮಾರು 15 ಕಾಂಗ್ರೆಸ್ ಶಾಸಕರು ಸಿಎಂಗೆ ಬರೆದ ಪತ್ರಕ್ಕೆ ಸಹಿ ಮಾಡಿ ವರದಿ ತಿರಸ್ಕರಿಸುವಂತೆ ಮನವಿ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ