
ಬೆಂಗಳೂರು, (ನವೆಂಬರ್ 17): ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಪತ್ನಿ ಪಾರ್ವತಿ (Parvathi) ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಶ್ವಾಸಕೋಶದ ಸಮಸ್ಯೆಯಿಂದಾಗಿ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಇದರಿಂದ ಇಂದು (ನವೆಂಬರ್ 17) ಬೆಂಗಳೂರಿನ ಶೇಷಾದ್ರಿಪುರಂನ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತಜ್ಞ ವೈದ್ಯರ ತಂಡದಿಂದ ಪಾರ್ವತಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದಬಂದಿದೆ.
ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿರುವ ಪಾರ್ವತಿ ಅವರಿಗೆ ಡಾ ಬಿಸಿ ಶ್ರೀನಿವಾಸ್ ನೇತೃತ್ವದ ವೈದ್ಯರ ತಂಡ ಐಸಿಯುನಲ್ಲಿ ಚಿಕಿತ್ಸೆ ನೀಡುತ್ತಿದ್ದು, ಪಾರ್ವತಿ ಜೊತೆಗೆ ಪುತ್ರ, ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಇದ್ದಾರೆ. ಇನ್ನು ಹೈಕಮಾಂಡ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಸಿಎಂ ಸಿದ್ದರಾಮಯ್ಯ ನವದೆಹಲಿಗೆ ತೆರಳಿದ್ದು, ಅಲ್ಲಿಂದಲ್ಲೇ ವೈದ್ಯರಿಗೆ ಪೋನ್ ಕರೆ ಮಾಡಿ ಪತ್ನಿ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ಇನ್ನು ತಾಯಿಯ ಆರೋಗ್ಯದ ಬಗ್ಗೆ ಪ್ರತಿಕ್ರಿಯಿಸಿರುವ ಪುತ್ರ ಯತೀಂದ್ರ, ಶ್ವಾಸಕೋಶದಲ್ಲಿ ನೀರು ತುಂಬಿದೆ. ಹಾಗಾಗಿ ಉಸಿರಾಟದ ಸಮಸ್ಯೆ ಉಂಟಾಗಿತ್ತು. ಇದರಿಂದ ವೈದ್ಯರು ಸಾಕಷ್ಟು ಪರೀಕ್ಷೆ ಮಾಡಿ ಐಸಿಯುನಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ನಾಳೆವರೆಗೂ (ನವೆಂಬರ್ 18) ಆಸ್ಪತ್ರೆಯಲ್ಲೇ ಅಡ್ಮಿಟ್ ಇರಲು ವೈದ್ಯರು ತಿಳಿಸಿದ್ದಾರೆ. ಸಿಎಂ ಸಹ ಆಸ್ಪತ್ರೆಗೆ ಬರಲಿದ್ದಾರೆ. ನಾನು ಇಲ್ಲೇ ಇರುತ್ತೇನೆ ಎಂದು ಮಾಹಿತಿ ನೀಡಿದರು.
ಪಾರ್ವತಿ ಅವರ ಆನಾರೋಗ್ಯದ ಸುದ್ದಿ ತಿಳಿಯುತ್ತಿದ್ದಂತೆಯೇ ಅಪೋಲೊ ಆಸ್ಪತ್ರೆಗೆ ಶಾಸಕ ಶಿವಲಿಂಗೇಗೌಡ ದೌಡಾಯಿಸಿದ್ದಾರೆ. ಆದ್ರೆ, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿರುವುದರಿಂದ ಪಾರ್ವತಿ ಅವರನ್ನು ನೋಡಲು ಯಾರನ್ನೂ ಒಳಗಡೆ ಬಿಡುತ್ತಿಲ್ಲ. ಹೀಗಾಗಿ ಶಿವಲಿಂಗೇಗೌಡ ಅವರು ಯತೀಂದ್ರ ಸಿದ್ದರಾಮಯ್ಯನವರಿಂದ ಆರೋಗ್ಯದ ಬಗ್ಗೆ ಮಾಹಿತಿ ಪಡೆದು ಆಸ್ಪತ್ರೆಯಿಂದ ತೆರಳಿದರು.
ಪಾರ್ವತಿ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಬಹಳ ವಿರಳ. ಅವರು ಮೈಸೂರಿನ ಚಾಮುಂಡಿ ದೇವಸ್ಥಾನಕ್ಕೂ ಬಂದರೂ ಸಹ ಜನರ ಜೊತೆಯಲ್ಲೇ ಸಾಮಾನ್ಯ ಭಕ್ತರ ರೀತಿಯಲ್ಲೇ ಸರದಿ ಸಾಲಿನಲ್ಲಿ ಹೋಗಿರುವುದನ್ನು ನಾವು ಕಂಡಿದ್ದೇವೆ. ಅವರು ಕೊನೆಯ ಬಾರಿಗೆ ಮಾಧ್ಯಮಗಳ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದು ಹಾಸನಾಂಬೆ ದರ್ಶನಕ್ಕೆ ಹೋಗಿದ್ದ ವೇಳೆ.
Published On - 9:39 pm, Mon, 17 November 25