
ಬೆಂಗಳೂರು, ಡಿಸೆಂಬರ್ 3: ಕರ್ನಾಟಕ ಕಾಂಗ್ರೆಸ್ ಅಧಿಕಾರ ಹಂಚಿಕೆ ವಿಚಾರ ತಣ್ಣಗಾಗಿಸುವ ನಿಟ್ಟಿನಲ್ಲಿ ನಡೆದಿದ್ದ ‘ಬ್ರೇಕ್ಫಾಸ್ಟ್ ಮೀಟಿಂಗ್’ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನೀಡಿರುವ ವೈರಾಗ್ಯದ ಹೇಳಿಕೆ ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ. ಬೆಳಗ್ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಉಭಯ ನಾಯಕರು ಒಗ್ಗಟ್ಟಿನ ಸಂದೇಶ ನೀಡಿದ್ದರು. ನಮ್ಮಲ್ಲಿ ಭಿನ್ನಾಭಿಪ್ರಾಯವಿಲ್ಲ, ನಾವೆಲ್ಲಾ ಒಂದು ಎಂದು ಸ್ಪಷ್ಟಪಡಿಸಿ, ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗುವ ಕುರಿತ ಪ್ರಶ್ನೆಗೆ ಹೈಕಮಾಂಡ್ ಕಡೆ ಕೈ ತೋರಿಸಿದ್ದರು. ಈ ಮೂಲಕ ಪಕ್ಷದೊಳಗೆ ಸಾಮರಸ್ಯ ಕಾಪಾಡುವ ಪ್ರಯತ್ನ ಮಾಡಲಾಗಿತ್ತು.
ಬೆಳಗ್ಗೆ ಒಗ್ಗಟ್ಟು ಪ್ರದರ್ಶಿಸಿ ಒಮ್ಮತದ ಮಾತುಗಳನ್ನಾಡಿದ್ದ ಸಿದ್ದರಾಮಯ್ಯ, ಮಧ್ಯಾಹ್ನ ವೈರಾಗ್ಯದ ಮಾತುಗಳನ್ನು ಆಡಿದ್ದಾರೆ. ವಿಧಾನಸೌಧದಲ್ಲಿ ಸಭೆ ಮುಗಿಸಿ ಹೊರಬರುತ್ತಿದ್ದ ವೇಳೆ ವಿಧಾನಸೌಧದ ಕೆಂಗಲ್ ಗೇಟ್ ಬಳಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಸಿಎಂ ಪ್ರಸ್ತುತ ರಾಜಕೀಯ ವಿಷಯಗಳ ಬಗ್ಗೆ ಮಾತನಾಡಿದ್ದಾರೆ.
ರಾಜಕೀಯ ಶಾಶ್ವತ ಅಲ್ಲ, ಯಾವುದಕ್ಕೂ ತಲೆಕೆಡಿಸಿಕೊಳ್ಳಲ್ಲ, ರಾಜಕೀಯ ನಮ್ಮಪ್ಪನ ಆಸ್ತಿನಾ, ಏನಾಗುತ್ತೋ ಆಗ್ಲಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಈ ಅನಿರೀಕ್ಷಿತ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಕೆಲವರು ಇದನ್ನು ಸಿದ್ದರಾಮಯ್ಯ ಅವರ ವೈರಾಗ್ಯದ ಮಾತು ಎಂದು ವಿಶ್ಲೇಷಿಸಿದರೆ, ಮತ್ತೆ ಕೆಲವರು ಅಧಿಕಾರ ಹಂಚಿಕೆ ಕುಸ್ತಿ ಹಾಗೂ ಹೈಕಮಾಂಡ್‌ನ ಸಭೆಗಳ ನಡುವೆ ರಾಜಕೀಯ ಒತ್ತಡವನ್ನು ನಿಭಾಯಿಸುವ ಒಂದು ತಂತ್ರವೆಂದು ಅಭಿಪ್ರಾಯಪಟ್ಟಿದ್ದಾರೆ.
ಸಿದ್ದರಾಮಯ್ಯ ಹೇಳಿಕೆ ಈಗ ಚರ್ಚೆಗೆ ಗ್ರಾಸವಾಗಿದೆ. ಸಿಎಂ ಅವರು ಸಹಜವಾಗಿ ಹಾಗೆ ಮಾತನಾಡಿದ್ದಾರೆ ಅಷ್ಟೇ. ಅದಕ್ಕೆ ಹೆಚ್ಚು ಮಹತ್ವ ಕೋಡುವಅವಶ್ಯಕತೆ ಇಲ್ಲ, ವಿಶ್ಲೇಷಣೆ ಮಾಡುವ ಅಗತ್ಯವಿಲ್ಲ ಎಂದು ಮಾಜಿ ಸಂಸದ ಡಿಕೆ ಸುರೇಶ್ ಅಭಿಪ್ರಾಯಪಟ್ಟಿದ್ದಾರೆ. ಸಿಎಂ ಆಡಿರುವ ಮಾತು ಸತ್ಯವಿದೆ, ಮನುಷ್ಯನೂ ಶಾಶ್ವತ ಅಲ್ಲ. ಶಾಶ್ವತವಾಗಿ ಇರ್ತೇವೆ ಎಂಬುದು ಭ್ರಮೆ, ಜನಾದೇಶವೇ ಅಂತಿಮ. ಅಧಿಕಾರ ಹಸ್ತಾಂತರ ಯಾವಾಗ ಎಂಬುವುದು ಪ್ರಶ್ನೆ ಅಲ್ಲ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಏನು ಆಗುತ್ತೋ ಆಗಲಿ ಅಂದಿದ್ಯಾಕೆ? ಡಿಕೆಶಿ ಮನೆಯಲ್ಲಿ ಟಿಫನ್ ಬಳಿಕ ಸಿಎಂ ಶಾಕಿಂಗ್ ಮಾತು
ಸಿದ್ದರಾಮಯ್ಯ ಜನವರಿಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆ ಎಂದು ಬಿಜೆಪಿ ನಾಯಕ ಗೋವಿಂದ ಕಾರಜೋಳ ಹೇಳಿದ್ದಾರೆ. ಸಿದ್ದರಾಮಯ್ಯನವರು ವೈರಾಗ್ಯದ ಮಾತುಗಳನ್ನು ಆಡಿದ್ದಾರೆ. ಈ ಹೇಳಿಕೆಗಳನ್ನು ಗಮನಿಸಿದರೆ, ಸಿದ್ದರಾಮಯ್ಯನವರ ರಾಜೀನಾಮೆಗೆ ಕ್ಷಣಗಣನೆ ಪ್ರಾರಂಭವಾಗಿದೆ ಎಂದು ಗೋವಿಂದ ಕಾರಜೋಳ ಅಭಿಪ್ರಾಯಪಟ್ಟಿದ್ದಾರೆ.