ಬೆಳಗಾವಿ: ಕುಂದಾನಗರಿಯಲ್ಲಿ ಇಂದು ಮಧ್ಯಾಹ್ನದಿಂದ ನಗರ ಪ್ರದೇಶ ಸೇರಿದಂತೆ ಜಿಲ್ಲೆಯ ವಿವಿಧೆಡೆ ಅಕಾಲಿಕ ಮಳೆ ಆಗಿದೆ. ಜಿಲ್ಲೆಯ ಕೆಲವೆಡೆ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ. ಈ ನಡುವೆ, ಸಿಡಿಲು ಬಡಿದು ತೆಂಗಿನ ಮರಕ್ಕೆ ಬೆಂಕಿ ಹೊತ್ತಿಕೊಂಡಿರುವ ಘಟನೆ ಲಕ್ಷ್ಮೀನಗರದಲ್ಲಿ ವರದಿಯಾಗಿದೆ. ಸಿಡಿಲು ಬಡಿದು ಲಕ್ಷ್ಮೀನಗರದ ರೇಡೇಕರ್ ಎಂಬುವವರ ಮನೆ ಬಳಿಯಿದ್ದ ತೆಂಗಿನ ಮರ ಹೊತ್ತಿ ಉರಿದಿದೆ. ಅವಘಡದಲ್ಲಿ ತೆಂಗಿನ ಮರ ಸುಟ್ಟು ಕರಕಲಾಗಿದೆ.
ಕೋಟೆನಾಡಿಗೆ ತಂಪೆರೆದ ಮಳೆರಾಯ
ಇತ್ತ, ಕೋಟೆನಾಡು ಚಿತ್ರದುರ್ಗದಲ್ಲಿ ಜಿಲ್ಲೆಯಾದ್ಯಂತ ತುಂತುರು ಮಳೆಯಾಗಿದೆ. ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಜನರಿಗೆ ಅಕಾಲಿಕ ಮಳೆ ಹರುಷ ತಂದಿದೆ. ಬಿಸಿಲಿನಿಂದ ಕಂಗೆಟ್ಟವರಿಗೆ ವರುಣ ತಂಪೆರೆದಿದ್ದಾನೆ. ಚಿತ್ರದುರ್ಗ ನಗರ ಭಾಗ ಸೇರಿದಂತೆ ಹಿರಿಯೂರು, ಚಳ್ಳಕೆರೆ, ಹೊಳಲ್ಕೆರೆ ಮತ್ತು ಹೊಸದುರ್ಗ ತಾಲೂಕಿನ ವಿವಿಧೆಡೆ ತುಂತುರು ಮಳೆಯಾಗಿದೆ. ಇನ್ನು, ಜಿಲ್ಲೆಯಾದ್ಯಂತ ಇತರ ಕಡೆ ಮೋಡ ಕವಿದ ವಾತಾವರಣವಿದೆ.
ಸಿಲಿಕಾನ್ ಸಿಟಿಯಲ್ಲಿ 2 ದಿನಗಳ ಕಾಲ ತುಂತುರು ಮಳೆ ಸಾಧ್ಯತೆ
ಅತ್ತ, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ಮಳೆರಾಯ ಪ್ರಭಾವ ಬೀರಲಿದ್ದು ಫೆಬ್ರವರಿ 19ರಿಂದ 21ರವರೆಗೆ ನಗರದಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಆದರೆ, ನಗರದಲ್ಲಿ ತುಂತುರು ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಅದರಲ್ಲೂ ಸಾಯಂಕಾಲ ಹಾಗೂ ರಾತ್ರಿ ವೇಳೆ ವರುಣನ ಕಾಟ ಹೆಚ್ಚಾಗಿ ಇರಲಿದೆ.
ಬಂಗಾಳ ಕೊಲ್ಲಿಯಲ್ಲಿ ಹವಾಮಾನ ಚಟುವಟಿಕೆ ಬಿರುಸಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ, ತಮಿಳುನಾಡು ಹಾಗೂ ಕೇರಳದಲ್ಲಿ ಮಳೆರಾಯನ ಪ್ರಭಾವ ಇನ್ನೆರಡು ದಿನಗಳ ಕಾಲ ಜೋರಾಗಿರಲಿದೆ.
ಇತ್ತ, ಹಾವೇರಿ ಜಿಲ್ಲೆಯ ಹಲವೆಡೆ ಗಾಳಿ ಸಹಿತ ಭಾರಿ ಮಳೆಯಾಗಿದೆ. ರಾಣೆಬೆನ್ನೂರು, ಹಿರೇಕೆರೂರು ತಾಲೂಕು ಸೇರಿದಂತೆ ಕೆಲವೆಡೆ ಮಳೆಯಾಗಿದೆ. ಸುಮಾರು ಅರ್ಧ ಗಂಟೆಯ ಕಾಲ ಮಳೆ ಸುರಿದಿದೆ. ಜೊತೆಗೆ, ತುಮಕೂರಿನಲ್ಲಿ ಸಹ ಭಾರಿ ಮಳೆಯಾಗಿದೆ.
ಇದಲ್ಲದೆ, ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನಲ್ಲಿ ಧಾರಾಕಾರ ಮಳೆಯಾಗಿದೆ. ಹಾಗಾಗಿ, ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಬಂದ ಭಕ್ತರ ಪರದಾಡುವ ಸ್ಥಿತಿ ಎದುರಾಯ್ತು. ಆದರೂ, ಮಳೆಯಲ್ಲೆ ಸರತಿ ಸಾಲಿನಲ್ಲಿ ನಿಂತು ಭಕ್ತರು ದರ್ಶನ ಪಡೆದರು
ಅತ್ತ, ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಹಲವೆಡೆ ಮಳೆಯಾಗಿದೆ. ಜಿಲ್ಲೆಯ ಕೆಆರ್‌ಪೇಟೆ, ಶ್ರೀರಂಗಪಟ್ಟಣ, ಮಂಡ್ಯ, ಮದ್ದೂರು ತಾಲೂಕಿನ ಹಲವೆಡೆ ಮಳೆಯಾಗಿದೆ.
ಇದನ್ನೂ ಓದಿ: Bitcoin ಕಿಯೋಸ್ಕ್ ಸ್ಥಾಪಿಸಿದ್ದವರಿಗೆ ರಿಲೀಫ್: ಸೈಬರ್ ಪೊಲೀಸರ FIR ರದ್ದುಪಡಿಸಿದ ಹೈಕೋರ್ಟ್
Published On - 7:17 pm, Thu, 18 February 21