ಬೆಂಗಳೂರು, ಅಕ್ಟೋಬರ್ 18: ವಾಣಿಜ್ಯ ತೆರಿಗೆ ಇಲಾಖೆಯ ಮಹಿಳಾ ಬೆರಳಚ್ಚುಗಾರ್ತಿಯೊಬ್ಬರು 300 ರೂಪಾಯಿ ಲಂಚ ಪಡೆದು ಸಿಕ್ಕಿಬಿದ್ದ ನಂತರ ಅವರನ್ನು ರಾಜ್ಯ ಸರ್ಕಾರ ವಜಾಗೊಳಿಸಿತ್ತು. ಈ ವಿಚಾರವಾಗಿ ಸರ್ಕಾರದ ನಿರ್ಧಾರವನ್ನು ಕರ್ನಾಟಕ ಹೈಕೋರ್ಟ್ ಕೂಡ ಎತ್ತಿಹಿಡಿದಿದೆ. ಇಂಥ ಪ್ರಕರಣದಲ್ಲಿ ವಿಧಿಸಿದ ಶಿಕ್ಷೆಯನ್ನು ಬದಲಿಸಲು ನ್ಯಾಯಾಲಯಕ್ಕೆ ಅಧಿಕಾರವಿಲ್ಲ ಎಂದು ನ್ಯಾಯಮೂರ್ತಿಗಳಾದ ಎಸ್ಜಿ ಪಂಡಿತ್ ಮತ್ತು ಸಿಎಂ ಪೂಣಚ್ಚ ಅವರನ್ನೊಳಗೊಂಡ ವಿಭಾಗೀಯ ಪೀಠ ಹೇಳಿದೆ.
ಲಂಚ ಪಡೆದಿದ್ದ ಹೆಚ್ಎಸ್ ಕಂಠಿ ಅವರನ್ನು ಸೇವೆಯಿಂದ ವಜಾಗೊಳಿಸಿ ಸರ್ಕಾರ ಕ್ರಮ ಕೈಗೊಂಡಿತ್ತು. ಆದರೆ, ಶಿಕ್ಷೆಯನ್ನು ಕಡ್ಡಾಯ ನಿವೃತ್ತಿಗೆ ಬದಲಾಯಿಸುವಂತೆ ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಾಧಿಕರಣ (ಕೆಎಸ್ಎಟಿ) 2018ರ ಜನವರಿ 4ರಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಹೈಕೋರ್ಟ್ ಮೆಟ್ಟಿಲೇರಿತ್ತು.
ಕಂಠಿ ಮತ್ತು ವಾಣಿಜ್ಯ ತೆರಿಗೆ ಅಧಿಕಾರಿ ಸಂಪತ್ ರಾವ್ ಎಸ್ ಬೊಮ್ಮಣ್ಣನವರ್ ಲಂಚ ಪಡೆದ ಆರೋಪ ಎದುರಿಸಿದ್ದರು. ರಾವ್ ಅವರು ದೂರುದಾರ ಗಣೇಶ್ ಶೆಟ್ಟಿಯಿಂದ 2000 ಮತ್ತು ಕಂಠಿ 300 ರೂ. ಲಂಚ ಪಡೆದಿದ್ದರು ಎಂದು ಆರೋಪಿಸಲಾಗಿತ್ತು.
ವಿಚಾರಣೆಯ ನಂತರ, ಕಂಠಿ ಅವರನ್ನು 2014 ರ ಜುಲೈ 24 ರಂದು ಸೇವೆಯಿಂದ ವಜಾಗೊಳಿಸಲಾಗಿತ್ತು. ಅವರು ಕರ್ತವ್ಯ ನಿಷ್ಠೆಯನ್ನು ಕಾಪಾಡಿಕೊಳ್ಳಲು ವಿಫಲರಾಗಿದ್ದಾರೆ ಮತ್ತು ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಗಳನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ ಎಂದು ಸರ್ಕಾರ ಹೇಳಿತ್ತು.
ಇದನ್ನು ಪ್ರಶ್ನಿಸಿ ಕಂಠಿ ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಾಧಿಕರಣ ಮೊರೆ ಹೋಗಿದ್ದರು. ಅವರ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಧಿಕರಣ, ಆಕೆ 11 ವರ್ಷ 5 ತಿಂಗಳಷ್ಟೇ ಸೇವೆ ಸಲ್ಲಿಸಿದ ಮಹಿಳೆಯಾಗಿದ್ದು, ಪ್ರಕರಣವನ್ನು ಸೌಮ್ಯವಾಗಿ ಪರಿಗಣಿಸಬೇಕು. ವಜಾಗೊಳಿಸುವ ಆದೇಶಕ್ಕೆ ಬದಲಾಗಿ ಕಡ್ಡಾಯ ನಿವೃತ್ತಿ ನೀಡಬಹುದು ಎಂದಿತ್ತು.
ನ್ಯಾಯಮಂಡಳಿಯ ಆದೇಶದ ವಿರುದ್ಧ ರಾಜ್ಯ ಸರ್ಕಾರವು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಅಕ್ರಮ ಸಾಬೀತಾದ ಪ್ರಕರಣದಲ್ಲಿ ಶಿಕ್ಷೆಯನ್ನು ಬದಲಿಸುವಂತೆ ನ್ಯಾಯಾಧಿಕರಣ ಸೂಚಿಸಿದೆ. ಇದು ಸರಿಯಲ್ಲ ಎಂದು ಸರ್ಕಾರ ವಾದಿಸಿತ್ತು.
ಹೈಕೋರ್ಟ್ ಹೇಳಿದ್ದೇನು?
ಕಂಠಿ ಮೊದಲ ವಿಚಾರಣೆಯಲ್ಲೇ ಹಣ ಪಡೆದಿರುವುದಾಗಿ ಒಪ್ಪಿಕೊಂಡಿದ್ದಾರೆ. ತಮ್ಮ ಹೇಳಿಕೆಯಲ್ಲಿಯೂ ಅದನ್ನು ದಾಖಲಿಸಿದ್ದಾರೆ ಎಂಬುದನ್ನು ಹೈಕೋರ್ಟ್ ವಿಭಾಗೀಯ ಪೀಠ ಗಮನಿಸಿದೆ.
ಇದನ್ನೂ ಓದಿ: ಮತ್ತೆ ಮುನ್ನಲೆಗೆ ಪಂಚಮಸಾಲಿ 2ಎ ಮೀಸಲಾತಿ ಕಿಚ್ಚು: ಸಿಎಂ ಜೊತೆ ಸಮುದಾಯದ ಮುಖಂಡರ ಸಭೆ
ಲಂಚ ಕೇಳುವುದು ಮತ್ತು ಪಡೆಯುವುದು ಗಂಭೀರ ಅಪರಾಧವಾಗಿದೆ. ಇಂಥ ಪ್ರಕರಣಗಳಲ್ಲಿ ಕಠಿಣವಾಗಿ ವ್ಯವಹರಿಸಬೇಕು. ಶಿಕ್ಷೆಯನ್ನು ಬದಲಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಪೀಠ ಹೇಳಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ