ಮುಡಾ ಹಗರಣ: ಎಲ್ಲ ಸೈಟ್​ಗಳ ವಾಪಸಿಗೆ ಕಾಂಗ್ರೆಸ್ ಪಟ್ಟು, ಬಿಜೆಪಿ ಜೆಡಿಎಸ್ ನಾಯಕರ ಮೇಲೆ ಸೇಡು ತೀರಿಸಲು ‘ಕೈ’ ತಂತ್ರ

| Updated By: Ganapathi Sharma

Updated on: Oct 18, 2024 | 9:14 AM

ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ಪತ್ನಿ ವಿಚಾರದಲ್ಲಿ ತೀವ್ರ ಮುಜುಗರಕ್ಕೊಳಗಾಗಿರುವ ಕಾಂಗ್ರೆಸ್ ಸರ್ಕಾರ ಇದೀಗ ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಮೇಲೂ ಸೇಡು ತೀರಿಸಿಕೊಳ್ಳಲು ಮುಂದಾಗಿದೆಯೇ? ಇಂಥದ್ದೊಂದು ಅನುಮಾನ ಈಗ ಬಲವಾಗಿದೆ. 50:50 ಅನುಪಾತದಲ್ಲಿ ಮುಡಾ ನೀಡಿದ ಎಲ್ಲಾ ಸೈಟ್​​ಗಳ ವಾಪಸಾತಿಗೆ ಕಾಂಗ್ರೆಸ್ ನಾಯಕರು ಪಟ್ಟು ಹಿಡಿದಿದ್ದಾರೆ.

ಮುಡಾ ಹಗರಣ: ಎಲ್ಲ ಸೈಟ್​ಗಳ ವಾಪಸಿಗೆ ಕಾಂಗ್ರೆಸ್ ಪಟ್ಟು, ಬಿಜೆಪಿ ಜೆಡಿಎಸ್ ನಾಯಕರ ಮೇಲೆ ಸೇಡು ತೀರಿಸಲು ‘ಕೈ’ ತಂತ್ರ
ಮುಡಾ
Follow us on

ಮೈಸೂರು, ಅಕ್ಟೋಬರ್ 18: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮುಡಾ ಹಗರಣ ಸಂಬಂಧ ತೀವ್ರ ಮುಜುಗರಕ್ಕೊಳಗಾಗಿರುವ ಕಾಂಗ್ರೆಸ್ ಇದೀಗ ಅದೇ ಅಸ್ತ್ರವನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳ ನಾಯಕರಿಗೂ ಬಿಸಿ ಮುಟ್ಟಿಸಲು ಮುಂದಾಗಿದೆ. ಮುಡಾದಿಂದ ಹಂಚಿಕೆಯಾಗಿರುವ 14 ಸೈಟ್​​ಗಳನ್ನು ಸಿಎಂ ಸಿದ್ದರಾಮಯ್ಯ ಪತ್ನಿ ಪಾವರ್ತಿ ವಾಪಸ್ ನೀಡಿರುವ ಬೆನ್ನಲ್ಲೇ, 50:50 ಅನುಪಾತದಲ್ಲಿ ಮುಡಾ ನೀಡಿದ ಎಲ್ಲಾ ನಿವೇಶನಗಳ ವಾಪಸಾಗಿಗೆ ಕಾಂಗ್ರೆಸ್ ನಾಯಕರು ಪಟ್ಟುಹಿಡಿದಿದ್ದಾರೆ.

ಕಾಂಗ್ರೆಸ್ ನಾಯಕರ ಈ ನಿಲುವು, ಜೆಡಿಎಸ್ ಹಾಗೂ ಬಿಜೆಪಿ ನಾಯಕರ ಮೇಲೆ ಸೇಡು ತೀರಿಸಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆಯೇ ಎಂಬ ಅನುಮಾನ ಹುಟ್ಟುಹಾಕಿದೆ.

ಎಲ್ಲ ಸೈಟ್​ಗಳ ವಾಪಸ್ ಪಡೆಯಲಿ: ಕೈ ನಾಯಕರ ಪಟ್ಟು

ಮುಡಾದಿಂದ 50:50 ಅನುಪಾತದಲ್ಲಿ ಹಂಚಿಕೆಯಾಗಿರುವ ಎಲ್ಲಾ ನಿವೇಶನಗಳನ್ನು ವಾಪಸ್ ಪಡೆಯುವಂತೆ ಕಾಂಗ್ರೆಸ್ ನಾಯಕರು ಈಗಾಗಲೇ ಧ್ವನಿಯೆತ್ತಿದ್ದಾರೆ. 50:50 ಅನುಪಾತಕ್ಕೆ ಯಾವುದೇ ರೀತಿಯ ಅನುಮತಿ ಸಿಕ್ಕಿಲ್ಲ ಎಂದು ಕಾಂಗ್ರೆಸ್ ನಾಯಕ ತನ್ವೀರ್ ಸೇಠ್ ಹೇಳಿರುವುದು ಅನುಮಾನಕ್ಕೆ ಪುಷ್ಟಿ ನೀಡಿದೆ.

ಸಿಎಂ ಸಿದ್ದರಾಮಯ್ಯ ಪತ್ನಿ ಸೈಟ್​ಗಳನ್ನು ವಾಪಸ್​ ಕೊಟ್ಟ ಮಾತ್ರಕ್ಕೆ ಮುಗಿಯುವುದಿಲ್ಲ. ಮುಡಾ ಎಲ್ಲಾ ಸೈಟ್​​ಗಳನ್ನು ವಾಪಸ್​ ಪಡೆಯಬೇಕು ಎಂದು ಕಾಂಗ್ರೆಸ್ಸಿಗರು ಒತ್ತಾಯಿಸುತ್ತಿದ್ದಾರೆ. ಬಿಜೆಪಿ, ಜೆಡಿಎಸ್ ನಾಯಕರು ಕೂಡ ಬೇನಾಮಿ ಹೆಸರಿನಲ್ಲಿ ಸೈಟ್ ಪಡೆದಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.

ವಿರೋಧಿಗಳ ಹಣಿಯಲು ಸಿದ್ದರಾಮಯ್ಯ ತಂತ್ರ

ಮುಡಾದಿಂದ 14 ಸೈಟ್​ಗಳನ್ನು ಪಡೆದ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಸಾಕಷ್ಟು ಮುಜುಗರಕ್ಕೊಳಗಾಗಿದ್ದಾರೆ. ಈ ಕಾರಣದಿಂದ ವಿರೋಧಿಗಳ ಹಣಿಯಲು ಅವರು ಅಣಿಯಾಗಿದ್ದಾರೆ ಎನ್ನಲಾಗುತ್ತಿದೆ. ಮುಡಾ ಕ್ಲೀನ್ ನೆಪದಲ್ಲಿ ವಿರೋಧಿಗಳ ಹಣಿಯಲು ಅವರು ತಂತ್ರ ರೂಪಿಸುತ್ತಿದ್ದಾರೆ. ಅದರ ಅಂಗವಾಗಿಯೇ ಕಾಂಗ್ರೆಸ್ ನಾಯಕರು ಮುಡಾ ಸೈಟ್​​ಗಳ ವಾಪಸ್ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಮುಡಾ ಹಗರಣ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸ್ಥಾನಕ್ಕೆ ಕೆ ಮರಿಗೌಡ ರಾಜೀನಾಮೆ

ಮುಡಾ ಹಗರಣ ವಿಚಾರ ಮುಂದಿಟ್ಟುಕೊಂಡು ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ, ಜೆಡಿಎಸ್ ಭಾರಿ ಪ್ರತಿಭಟನೆ ನಡೆಸಿವೆ. ಪಾದಯಾತ್ರೆಯನ್ನೂ ಮಾಡಿದ್ದವು. ಸದ್ಯ ಪ್ರಕರಣ ಕೋರ್ಟ್​ ಮೆಟ್ಟಿಲೇರಿದೆ. ಮತ್ತೊಂದೆಡೆ, ಜಾರಿ ನಿರ್ದೇಶನಾಲಯ ಕೂಡ ಪ್ರಕರಣ ದಾಖಲಿಸಿಕೊಂಡಿದೆ. ಈಗಾಗಲೇ ದೂರುದಾರ ಸ್ನೇಹಮಯಿ ಕೃಷ್ಣ ಅವರನ್ನು ವಿಚಾರಣೆಗೆ ಒಳಪಡಿಸಿದೆ. ಈ ಎಲ್ಲ ವಿದ್ಯಮಾನಗಳ ಮಧ್ಯೆ ಇದೀಗ ಮುಡಾವನ್ನು ರಾಜಕೀಯ ದಾಳವಾಗಿಯೇ ಪ್ರತಿಪಕ್ಷಗಳ ವಿರುದ್ಧ ಪ್ರಯೋಗಿಸಲು ಸಿಎಂ ಸಜ್ಜಾಗುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ