AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಡಾ ಹಗರಣ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸ್ಥಾನಕ್ಕೆ ಕೆ ಮರಿಗೌಡ ರಾಜೀನಾಮೆ

ಮುಡಾ ನಿವೇಶನ ಹಂಚಿಕೆ ಕುರಿತಂತೆ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಪತ್ನಿಯ ವಿರುದ್ಧ 14 ಸೈಟುಗಳ ಹಂಚಿಕೆಯ ಹಗರಣ ಆರೋಪ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಈ ಮಧ್ಯೆ ಮುಡಾ ಹಗರಣ ಅಧ್ಯಕ್ಷ ಮರಿಗೌಡ ತಲೆದಂಡ ಮಾತು ಕೇಳಿಬಂದಿತ್ತು. ಇದೀಗ ಸಿಎಂ ಸೂಚನೆಯಂತೆ ಅಧ್ಯಕ್ಷ ಸ್ಥಾನಕ್ಕೆ ಮರಿಗೌಡ ಇಂದು ರಾಜೀನಾಮೆ ನೀಡಿದ್ದಾರೆ.

ಮುಡಾ ಹಗರಣ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸ್ಥಾನಕ್ಕೆ ಕೆ ಮರಿಗೌಡ ರಾಜೀನಾಮೆ
ಮುಡಾ ಹಗರಣ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸ್ಥಾನಕ್ಕೆ ಕೆ ಮರಿಗೌಡ ರಾಜೀನಾಮೆ
ಪ್ರಸನ್ನ ಗಾಂವ್ಕರ್​
| Updated By: ಗಂಗಾಧರ​ ಬ. ಸಾಬೋಜಿ|

Updated on:Oct 16, 2024 | 12:55 PM

Share

ಬೆಂಗಳೂರು, ಅಕ್ಟೋಬರ್ 16: ಮುಡಾ ಪ್ರಕರಣದಿಂದ ಸರ್ಕಾರ ತೀವ್ರ ಮುಜುಗರಕ್ಕೆ ಸಿಲುಕಿದೆ. ಪ್ರಕರಣದ ತನಿಖೆ ಕೂಡ ತೀವ್ರಗೊಂಡಿದೆ. ವಿರೋಧ ಪಕ್ಷಗಳು ಸಿಎಂ ಸಿದ್ದರಾಮಯ್ಯ ರಾಜೀನಾಮಗೆ ಆಗ್ರಹಿಸುತ್ತಲೇ ಇದ್ದಾರೆ. ಈ ಮಧ್ಯೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಕೆ.ಮರಿಗೌಡ (K Marigowda) ರಾಜೀನಾಮೆ ನೀಡಿದ್ದಾರೆ. ಸಿಎಂ ಸೂಚನೆ ಹಿನ್ನೆಲೆ ವಿಕಾಸಸೌಧದಲ್ಲಿ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ದೀಪಾ ಚೋಳನ್​ಗೆ ರಾಜೀನಾಮೆ ಸಲ್ಲಿಸಿದ್ದಾರೆ.

ರಾಜೀನಾಮೆ ವಿಚಾರವಾಗಿ ಇಂದು ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯರನ್ನು ಮುಡಾ ಅಧ್ಯಕ್ಷ ಕೆ.ಮರಿಗೌಡ‌ ಭೇಟಿ ಮಾಡಿದ್ದರು. ಆ ಮೂಲಕ ಮುಡಾ ಅಧ್ಯಕ್ಷ ಸ್ಥಾನಕ್ಕೆ ಮರಿಗೌಡ ರಾಜೀನಾಮೆ ಕೋಡುವುದು ಖಚಿತ ಎನ್ನಲಾಗಿತ್ತು. ಕೆಲ ಕಾಲ ಸಿದ್ದರಾಮಯ್ಯ ಜೊತೆ ಮಾತನಾಡಿರುವ ಮರಿಗೌಡ, ಬಳಿಕ ಸಿಎಂ ಸೂಚಿನೆ ಮೇರೆಗೆ ರಾಜೀನಾಮೆ ನೀಡಿದ್ದು, ಇಂದು ಅಧಿಕಾರಿಗಳಿಗೆ ರಾಜೀನಾಮೆ ಪತ್ರ ನೀಡಿದ್ದಾರೆ.

ಮುಡಾ ವಿಚಾರದಲ್ಲೂ ಸಿಎಂ ಸಿದ್ದರಾಮಯ್ಯ ಒತ್ತಡ ಹಾಕಿಲ್ಲ: ಮರಿಗೌಡ

ರಾಜೀನಾಮೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮರಿಗೌಡ, ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ರಾಜೀನಾಮೆ ಕೊಟ್ಟಿದ್ದೇನೆ. ಸಿಎಂ ಅವರು ರಾಜೀನಾಮೆ ನೀಡಲು ಸೂಚನೆ ಕೊಟ್ಟಿದ್ದರು. ಅದಕ್ಕೆ ರಾಜೀನಾಮೆ ಕೊಟ್ಟಿದ್ದೇನೆ‌. ನನ್ನ ಆರೋಗ್ಯವು ಸರಿಯಿಲ್ಲ, ಹೀಗಾಗಿ ರಾಜೀನಾಮೆ ಕೊಟ್ಟಿದ್ದೇನೆ. ಮುಡಾ ವಿಚಾರದಲ್ಲೂ ಸಿಎಂ ಸಿದ್ದರಾಮಯ್ಯ ಒತ್ತಡ ಹಾಕಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮುಡಾ ಹಗರಣಕ್ಕೆ ಅಧ್ಯಕ್ಷ ಮರಿಗೌಡ ತಲೆದಂಡ? ಸಿಎಂ ತಮ್ಮ ಆಪ್ತನನ್ನೇ ಕೆಳಗಿಳಿಸುತ್ತಿರುವುದ್ಯಾಕೆ?

ಮುಡಾ ತನಿಖೆ ನಡೆಯುತ್ತಿದೆ, ತನಿಖೆ ನಡೆಯಲಿ. ಅಕ್ರಮ ಆಗಿದೆಯಾ ಇಲ್ಲ ಅಂತ ನಾನು ಹೇಳುವುದಿಲ್ಲ. ಈಗ ತನಿಖೆ ನಡೆಯುತ್ತಿದೆ, ತನಿಖೆಯಿಂದ ಸತ್ಯ ಹೊರಬರುತ್ತೆ‌. ನನ್ನ ಮೇಲೆ ಯಾವುದೇ ಒತ್ತಡ ಇಲ್ಲ. ಆರೋಗ್ಯ ಸರಿಯಿಲ್ಲದ ಕಾರಣ ರಾಜೀನಾಮೆ ಕೊಟ್ಟಿದ್ದೇನೆ ಅಷ್ಟೇ. ಸೈಟ್ ವಿಚಾರವಾಗಿ ಸಿಎಂ ಅವರು ಯಾವುದೇ ಒತ್ತಡ ನನ್ನ ಮೇಲೆ ಹಾಕಿಲ್ಲ. ಅವರು ನಮ್ಮ ನಾಯಕರು. 40 ವರ್ಷಗಳಿಂದ ಜೊತೆಯಲ್ಲಿ ಇದ್ದೇನೆ. ತಾಲ್ಲೂಕು, ಜಿಲ್ಲಾ ಪಂಚಾಯತಿ ಅಧ್ಯಕ್ಷರಾಗಿ ಮಾಡಿದ್ದರು ನನ್ನನ್ನ.

ಯಾವತ್ತು ಕೂಡಾ ಸಿದ್ದರಾಮಯ್ಯ ಅವರು ಅಕ್ರಮ ಮಾಡಿ ಅಂತ ಹೇಳಿಲ್ಲ. ಎರಡು ಬಾರಿ ಸ್ಟ್ರೋಕ್ ಆಯ್ತು, ಆರೋಗ್ಯ ಸರಿಯಿಲ್ಲ, ಹೀಗಾಗಿ ಮುಡಾ ಅಧ್ಯಕ್ಷರಾಗಿ ಮುಂದುವರೆಯಲು ಆಗುವುದಿಲ್ಲ ಅಂತ ರಾಜೀನಾಮೆ ಕೊಟ್ಟಿದ್ದೇನೆ. ಇಲಾಖೆ ಸಚಿವರು ರಾಜೀನಾಮೆಗೆ ಒತ್ತಡ ಮಾಡಿದರು ಅನ್ನೋದು ಸತ್ಯಕ್ಕೆ ದೂರವಾದ ಮಾತು ಎಂದಿದ್ದಾರೆ.

ಅವ್ಯವಹಾರ ಆಗಿದೆ, ಅದಕ್ಕೆ ರಾಜೀನಾಮೆ ಕೊಟ್ಟಿದ್ದಾರೆ ಎಂದ ಬೊಮ್ಮಾಯಿ 

ಮುಡಾ ಅಧ್ಯಕ್ಷ ಮರಿಗೌಡ ರಾಜೀನಾಮೆ ವಿಚಾರವಾಗಿ ನಗರದಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು, ತಪ್ಪೇ ಆಗಿಲ್ಲ ಎಂದು ಹೇಳಿದ್ದಾರೆ. ಉಲ್ಲಂಘನೆ ಆಗಿಲ್ಲ ಎಂದವರು ಸೈಟ್ ವಾಪಸ್ ಕೊಟ್ಟಿದ್ದಾರೆ. ಈಗ ಮುಡಾ ಅಧ್ಯಕ್ಷ ರಾಜೀನಾಮೆ ಕೊಟ್ಟಿದ್ದಾರೆ. ಇದರ ಅರ್ಥ ಅವ್ಯವಹಾರ ಆಗಿದೆ, ಜವಾಬ್ದಾರಿ ಹೊರಬೇಕು ಅಂತಾ ಅರ್ಥ ತಾನೇ? ಎಂದು ವಾಗ್ದಾಳಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 12:22 pm, Wed, 16 October 24