ಮುಡಾ ಹಗರಣಕ್ಕೆ ಅಧ್ಯಕ್ಷ ಮರಿಗೌಡ ತಲೆದಂಡ? ಸಿಎಂ ತಮ್ಮ ಆಪ್ತನನ್ನೇ ಕೆಳಗಿಳಿಸುತ್ತಿರುವುದ್ಯಾಕೆ?
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಹಂಚಿಕೆ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪತ್ನಿಯ ವಿರುದ್ಧ 14 ಸೈಟುಗಳ ಹಂಚಿಕೆಯ ಹಗರಣ ಆರೋಪ ದೊಡ್ಡ ಮಟ್ಟದಲ್ಲಿ ವ್ಯಾಪಿಸಿದೆ. ಈ ಸಂಬಂಧ ಈಗಾಗಲೇ ಲೋಕಾಯುಕ್ತ ತನಿಖೆ ನಡೆಸಿದ್ದು, ಇದರ ಮಧ್ಯ ಇಡಿ ಸಹ ಪ್ರವೇಶ ಮಾಡಿದೆ. ಇದರ ಬೆನ್ನಲ್ಲೇ ಇದೀಗ ಮುಡಾ ಅಧ್ಯಕ್ಷರನ್ನೇ ವಜಾಗೊಳಿಸಲು ಸರ್ಕಾರ ಮುಂದಾಗಿದೆ.
ಬೆಂಗಳೂರು/ಮೈಸೂರು, ಅಕ್ಟೋಬರ್ 15): ಮುಡಾ ಹಗರಣ ರಾಜ್ಯ ರಾಜಕಾರಣದಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಸಿಎಂ ಸಿದ್ದರಾಮಯ್ಯನವರ ಕುರ್ಚಿಗೆ ಕಂಟಕವಾಗಿ ಪರಿಣಮಿಸಿದೆ. ಇದರ ಮಧ್ಯ ಇದೀಗ ರಾಜ್ಯ ಸರ್ಕಾರ ಮುಡಾ ಅಧ್ಯಕ್ಷ ಮರೀಗೌಡ ಅವರನ್ನು ವಜಾಗೊಳಿಸಿ ಆಡಳಿತಾಧಿಕಾರಿಯನ್ನು ನೇಮಕ ಮಾಡಲು ತೀರ್ಮಾನಿಸಿದೆ. ಈ ಬಗ್ಗೆ ಸಿದ್ದರಾಮಯ್ಯ ಮತ್ತು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅರ್ಧ ಗಂಟೆಗೂ ಹೆಚ್ಚು ಕಾಲ ರಹಸ್ಯ ಮಾತುಕತೆ ನಡೆಸಿದ್ದಾರೆ. ಬಳಿಕ ತಮ್ಮ ಆಪ್ತ ಮರಿಗೌಡಗೆ ಮುಡಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಇದೀಗ ರಾಜ್ಯ ಸರ್ಕಾರದಿಂದ ಆಡಳಿತಾಧಿಕಾರಿ ನೇಮಕ ಮಾಡಲು ತಿರ್ಮಾನ ಮಾಡಲಾಗಿದೆ. ಇನ್ನು ಸರ್ಕಾರದಿಂದ ಆಡಳಿತಾಧಿಕಾರಿ ನೇಮಕ ಹಿನ್ನೆಲೆಯಲ್ಲಿ ಮುಡಾ ಅಧ್ಯಕ್ಷರಿಗೆ ರಾಜೀನಾಮೆ ನೀಡಲು ನಿರ್ದೇಶನ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಮುಡಾ ಅಧ್ಯಕ್ಷ ಮರಿಗೌಡ ಅವರು ಯಾವುದೇ ಕ್ಷಣದಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬಹುದು. ಇದಾದ ಮರು ಕ್ಷಣವೇ ಸರ್ಕಾರದಿಂದ ಆಡಳಿತಾಧಿಕಾರಿಯನ್ನು ನಿಯೋಜನೆ ಮಾಡಿ ಸರ್ಕಾರದಿಂದ ಆದೇಶ ಹೊರ ಬೀಳುವ ಸಾಧ್ಯತೆಗಳಿವೆ.
ಇದನ್ನೂ ಓದಿ: ಮುಡಾ ಕೇಸ್ನಲ್ಲಿ ಸರ್ಚ್ ವಾರಂಟ್ ನೀಡಲು ವಿಳಂಬ: ಲೋಕಾಯುಕ್ತ ಅಧಿಕಾರಿಗಳ ವಿರುದ್ಧ ರಾಜ್ಯಪಾಲರಿಗೆ ದೂರು
ಈಗಾಗಲೇ ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಮತ್ತು ಜಾರಿ ನಿರ್ದೇಶನಾಲಯದಿಂದ (ಇಡಿ) ತನಿಖೆ ನಡೆಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಆಡಳಿತಾಧಿಕಾರಿ ನೇಮಕ ಮಾಡಲಾಗುತ್ತಿದೆ. ಇನ್ನು ಮುಡಾ ಹಾಲಿ ಅಧ್ಯಕ್ಷ ಮರಿಗೌಡ ಅವರೇ ಸಿಎಂ ಸಿದ್ದರಾಮಯ್ಯ ಅವರ ಮೇಲೆ ಆರೋಪಗಳು ಬರಲು ಕಾರಣ ಎಂದು ಹೇಳಲಾಗುತ್ತಿದೆ. ಇದಕ್ಕೆ ಪೂಕರವೆಂಬಂತೆ ಮೈಸೂರಿನಲ್ಲಿ ಮರಿಗೌಡಗೆ ಕಾಂಗ್ರೆಸ್ ಮುಖಂಡರೇ ಘೇರಾವ್ ಹಾಕಿ ಆಕ್ರೋಶ ಹೊರಹಾಕಿದ್ದರು. ಇನ್ನು ಮುಡಾ ಅಧ್ಯಕ್ಷ ಮರಿಗೌಡ ಹಾಗೂ ಅವರ ಕುಟುಂಬ ಸದಸ್ಯರ ವಿರುದ್ಧ ಕೆಲವು ಗುರುತರ ಆರೋಪಗಳು ಕೂಡ ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಮುಡಾ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಮೊದಲೇ ಮರಿಗೌಡ ಅವರನ್ನು ಮುಡಾ ಅಧ್ಯಕ್ಷರನ್ನಾಗಿ ಮಾಡಲು ಕಾಂಗ್ರೆಸ್ನಲ್ಲಿ ಪರ ವಿರೋಧಗಳು ವ್ಯಕ್ತವಾಗಿದ್ದವು. ಆದರೂ ಸಹ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಆಪ್ತ ಮರಿಗೌಡ ಅವರನ್ನೇ ಮುಡಾ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದರು. ಆದ್ರೆ, ಇದೀಗ ಏಕಾಏಕಿ ಸ್ವತಃ ಸಿಎಂ ಸಿದ್ದರಾಮಯ್ಯನವರೇ ಮರಿಗೌಡಗೆ ರಾಜೀನಾಮೆ ನೀಡುವಂತೆ ಸೂಚಿಸಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ