ಯಾರು ಈ CJ ರಾಯ್?ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಜೀವನದಲ್ಲಿ ಕಾನ್ಫಿಡೆಂಟ್ ಕಳೆದುಕೊಂಡಿದ್ಯಾಕೆ?

ದೇಶ ವಿದೇಶಗಳಲ್ಲಿ ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಾವಿರಾರು ಕೋಟಿ ಒಡೆಯ ಖ್ಯಾತ ಉದ್ಯಮಿ ಕಾನ್ಫಿಡೆಂಟ್ ಗ್ರೂಪ್ ಮಾಲೀಕ ಸಿಜೆ ರಾಯ್ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಇಡೀ ಕರ್ನಾಟಕವನ್ನು ಬೆಚ್ಚಿ ಬೀಳಿಸಿದೆ. ಅವರು ಸಾಕಷ್ಟು ದೊಡ್ಡ ಉದ್ಯಮಿಯಾಗಿದ್ದರು. ಜೊತೆಗೆ, ಕನ್ನಡ ಬಿಗ್ ಬಾಸ್ ಶೋಗೆ 50 ಲಕ್ಷ ರೂ.ಕೊಟ್ಟು ಆಗ ಸಖತ್ ಸುದ್ದಿಯಾಗಿದ್ದರು. ಅವರು ದೇಶ ವಿದೇಶಗಳಲ್ಲೂ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿದ್ದು, ಇಂತಹ ದೊಡ್ಡ ಕಾನ್ಫಿಡೆಂಟ್ ಗ್ರೂಫ್ ಸಂಸ್ಥೆಯ ಒಡೆಯ ಜೀವನದಲ್ಲಿ ಕಾನ್ಫಿಡೆಂಟ್ ಕಳೆದುಕೊಂಡಿದ್ಯಾಕೆ? ಇವರ ಒಂದಿಷ್ಟು ರೋಚಕ ಸಂಗತಿಗಳು ಇಲ್ಲಿವೆ.

ಯಾರು ಈ CJ ರಾಯ್?ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಜೀವನದಲ್ಲಿ ಕಾನ್ಫಿಡೆಂಟ್ ಕಳೆದುಕೊಂಡಿದ್ಯಾಕೆ?
Cj Roy

Updated on: Jan 30, 2026 | 7:38 PM

ಬೆಂಗಳೂರು, (ಜನವರಿ 30): ಪ್ರಸಿದ್ದ ರಿಯಲ್ ಎಸ್ಟೇಟ್ ಕಂಪನಿ ಕಾನ್ಪಿಡೆಂಟ್ ಗ್ರೂಪ್ ಮಾಲೀಕ ಸಿ.ಜೆ.ರಾಯ್ (Confident Group Chairman CJ Roy) ಇಂದು (ಜನವರಿ 30) ಬೆಂಗಳೂರಿನ ಹೊಸೂರು ರಸ್ತೆಯ ಲ್ಯಾಂಗ್ ಫರ್ಡ್ ಟೌನ್ ನಲ್ಲಿರುವ ಕಂಪನಿಯ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಹಿಂದೆಯೂ ರಾಯ್ ಮನೆ, ಕಚೇರಿಗಳ ಮೇಲೆ ಐಟಿ ದಾಳಿಯಾಗಿದ್ದವು. ಅದರಂತೆ ಇಂದು ಸಹ ಕಂಪನಿಯ ಮೇಲೆ ಐಟಿ ದಾಳಿ ನಡೆದಿದ್ದು, ಇದರಿಂದ ಮನನೊಂದು ತಮ್ಮ ಪಿಸ್ತೂಲ್​​ನಿಂದಲೇ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿದ್ದಾರೆ.  ಸಿಜೆ ರಾಯ್ ಅವರ ಈ ಸಾವು ಉದ್ಯಮ ವಲಯದಲ್ಲಿ ಆಘಾತ ಮುಡಿಸಿದೆ.

ಕೇರಳ ರಾಜ್ಯದಿಂದ ವಿದೇಶದವರೆಗೆ

ಮೂಲತಃ ಕೇರಳದವರಾಗಿದ್ದರೂ ಸಹ ಬೆಂಗಳೂರಿನಲ್ಲೇ ಬೆಳೆದಿದ್ದರು.  ಕೊಚ್ಚಿ ಕ್ರೈಸ್ತ ಧರ್ಮಕ್ಕೆ ಸೇರಿದರಾಗಿರುವ ರಾಯ್, ಫ್ರಾನ್ಸ್, ಸ್ವಿಜರ್ಲ್ಯಾಂಡ್ ಸೇರಿದಂತೆ ಬೇರೆ ಬೇರೆ ಕಡೆಗಳಲ್ಲಿ ವ್ಯಾಸಂಗ ಮಾಡಿದ್ದರು.   ರಾಯ್ ಅವರ ಪತ್ನಿ ಹೆಸರು ಲಿನಿ ರಾಯ್, ಮಗ ರೋಹಿತ್, ಮಗಳು ರಿಯಾ.  2006ರವರೆಗೆ ಹ್ಯಾವ್ಲೆಟ್ ಪ್ಯಾಕರ್ಡ್ ಕಂಪನಿಯಲ್ಲಿ ಕೆಲಸ ಮಾಡಿದ್ದು. ನಂತರ ಕಾನ್ಫಿಡೆಂಟ್ ಗ್ರೂಪ್​​ನ ರಿಯಲ್ ಎಸ್ಟೇಟ್ ಸಮೂಹವನ್ನು ವಿಸ್ತರಿಸಲು ಶುರು ಮಾಡಿದ್ದರು. ರಾಯ್ ಕಾನ್ಷಿಡೆಂಟ್ ಗ್ರೂಪ್ನ ಚೇರ್ಮನ್ ಆಗಿದ್ದು, ದೇಶದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿದ್ದರು. ಹಲವು ಕ್ಷೇತ್ರಗಳಲ್ಲಿ ತಮ್ಮ ವ್ಯಾಪಾರ ಸಾಮ್ರಾಜ್ಯವನ್ನು ವಿಸ್ತರಿಸಿದ್ದಲ್ಲದೇ ಗಲ್ಫ್ ಮತ್ತು ಕೇರಳ, ಕರ್ನಾಟಕದಲ್ಲಿ ರಿಯಲ್ ಎಸ್ಟೇಟ್ ನಡೆಸುತ್ತಿದ್ದರು.

ಇದನ್ನೂ ಓದಿ: ಐಟಿ ದಾಳಿ ವೇಳೆಯೇ ಶೂಟ್​ ಮಾಡಿಕೊಂಡು ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಸಿಜೆ ರಾಯ್​ ಆತ್ಮಹತ್ಯೆ

ವಿವಿಧ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆ

ಕಾನ್ಪಿಡೆಂಟ್ ಗ್ರೂಪ್ ರಿಯಲ್ ಎಸ್ಟೇಟ್ ಲೇಔಟ್, ಹೋಟೇಲ್, ರೆಸಾರ್ಟ್, ಶಿಕ್ಷಣ ಸಂಸ್ಥೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಿ.ಜೆ.ರಾಯ್ ಬಂಡವಾಳ ಹೂಡಿಕೆ ಮಾಡಿ ಯಶಸ್ವಿಯಾಗಿ ಉದ್ಯಮವನ್ನು ನಡೆಸುತ್ತ ಸಿ.ಜೆ.ರಾಯ್ ಸಾವಿರಾರು ಕೋಟಿ ಒಡೆಯರಾಗಿದ್ದರು. ಜೊತೆಗೆ ಬಡವರಿಗೆ ದಾನ- ಧರ್ಮ ಸಹ ಮಾಡುತ್ತಿದ್ದರು. ಇದಕ್ಕೆ ಪೂರಕವೆಂಬಂತೆ ಇತ್ತೀಚೆಗೆ 201 ವಿದ್ಯಾರ್ಥಿಗಳಿಗೆ ಎಜುಕೇಷನ್ ಸ್ಕಾಲರ್ ಶಿಪ್ ನೀಡಿದ್ದರು.

ಹತ್ತಾರು ದೊಡ್ಡ ದೊಡ್ಡ ಐಷರಾಮಿ ಕಾರುಗಳು

ರಾಯ್ ಅವರು ಕಾರುಗಳ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ, ದುಬೈ ಮತ್ತು ಭಾರತದಲ್ಲಿ ದುಬಾರಿ ಐಷಾರಾಮಿ ಮತ್ತು ಸ್ಫೋರ್​ಟ್ಸ್​​​ ಕಾರುಗಳ ಕಲೆಕ್ಷನ್ ಇವರ ಬಳಿ ಇವೆ. ಬರೋಬ್ಬರಿ 12 ರೋಲ್ಸ್ ರಾಯ್ಸ್ ಕಾರ್ ಗಳನ್ನು ಹೊಂದಿದ್ದಾರೆ. ಇನ್ನು 10 ಕೋಟಿ ರೂಪಾಯಿ ಬೆಲೆಬಾಳುವ ಫ್ಯಾಂಟೋನ್-8 ಕಾರನ್ನು ಸಹ ಖರೀದಿಸಿದ್ದರು. ಅಲ್ಲದೇ ಕನ್ನಡ ಬಿಗ್ ಬಾಸ್ ವಿನ್ನರ್ ಗಳಿಗೆ 50 ಲಕ್ಷ ರೂಪಾಯಿ ಹಣವನ್ನು ಸಿ.ಜೆ.ರಾಯ್ ಪ್ರಾಯೋಕತ್ವ ಮಾಡುತ್ತಿದ್ದರು. ಇಂತಹ ಲಕ್ಷುರಿ, ಐಷಾರಾಮಿ ಜೀವನ ನಡೆಸುತ್ತಿದ್ದ ಉದ್ಯಮಿ ಸಿ.ಜೆ.ರಾಯ್ ಪದೇ ಪದೇ ಐಟಿ ದಾಳಿಯಿಂದ ನಲುಗಿ ಹೋಗಿದ್ದರು. ಇಂದು ಮತ್ತೆ ಐಟಿ ದಾಳಿ ನಡದದಿದ್ದರಿಂದ ಮನನೊಂದು ಈ ರೀತಿ ಮಾಡಿಕೊಂಡಿದ್ದಾರೆ.

43 ಲಕ್ಷ ಚದರ್ ಅಡಿಗಳಷ್ಟು ವ್ಯವಹಾರ

.ಇನ್ನು ಇವರು ರಿಯಲ್ ಎಸ್ಟೇಟ್​​ನಲ್ಲಿ ಬರೋಬ್ಬರಿ 43 ಲಕ್ಷ ಚದರ್ ಅಡಿಗಳಷ್ಟು ವ್ಯವಹಾರ ಮಾಡಿದ್ದಾರೆ. ಅಲ್ಲದೇ 150ಕ್ಕೂ ಹೆಚ್ಚು ದೊಡ್ಡ ದೊಡ್ಡ ಪ್ರಾಜೆಕ್ಟ್​ಗಳನ್ನು ಸಹ ಮಾಡಿದ್ದಾರೆ. ಆದ್ರೆ, ಇನ್ನೊಂದು ಗಮನಿಸಬೇಕಾದ ಅಂಶ ಇಲ್ಲಿಯವರೆಗೂ ಇವರ ನೆಟ್ವರ್ಕ್​ ಎಷ್ಟಿದೆ? ಎಲ್ಲಿಯವರೆಗೂ ಇದೆ ಎನ್ನುವುದನ್ನು ಎಲ್ಲೂ ತೋರಿಸಿಕೊಂಡಿಲ್ಲ. ದೇಶದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಇವರ ನೆಟ್ವರ್ಕ್ ಇದೆ. ಆದರೂ ಇದನ್ನು ಎಲ್ಲೂ ಬಹಿರಂಗಪಡಿಸಿಕೊಂಡಿಲ್ಲ. ಹೀಗೆ ದೇಶ ವಿದೇಶಗಳಲ್ಲೂ ಚಿರಪರಿಚಿತರಾಗಿದ್ದು, ತಮ್ಮ ಕಾನ್ಷಿಡೆಂಟ್ ಗ್ರೂಪ್​​ಗೆ ಯಾರನ್ನೂ ಬ್ರ್ಯಾಂಡ್ ಅಂಬಾಸಿಡರ್, ಅಥವಾ ದೊಡ್ಡ ದೊಡ್ಡ ಮಾಡೆಲ್, ಸೆಲೆಬ್ರಿಟಿಗಳಿಂದ ಜಾಹಿರಾತು ಕೊಡಿಸಿಲ್ಲ. ಬದಲಿಗೆ ರಾಯ್ ಅವರೇ ತಮ್ಮ ಕಂಪನಿಯ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದರು. ಏನೇ ಜಾಹಿರಾತು ನೀಡಬೇಕಿದ್ದರೂ ತಾವೇ ಅಂಬಾಸಿಡರ್ ಆಗಿದ್ದರು.

ಯುವಕರಿಗೆ ಸ್ಫೂರ್ತಿಯಾಗಿದ್ದ ಒಡೆಯ

ದೊಡ್ಡ ಕೋಟ್ಯಾಧೀಶರಾಗಿದ್ದರೂ ಸಹ ವಿಡಿಯೋ ಮೂಲಕ ಯುವ ಜನತೆಗೆ ಹೇಗೆ ಬ್ಯುಸಿನೆಸ್ ಮಾಡಬೇಕು? ಹೇಗೆ ಸಂಪಾದನೆ ಮಾಡಬೇಕು? ಎನ್ನುವುದನ್ನು ತಿಳಿಸುತ್ತಿದ್ದರು. ಜೀವನದಲ್ಲಿ ಸೋತು ಜಿಗುಪ್ಸೆಗೊಂಡವರಿಗೂ ಸಹ ತಮ್ಮ ಮೋಟಿವೇಶನ್ ಮಾತುಗಳೊಂದಿಗೆ ಮನಪರಿವರ್ತನೆ ಮಾಡುತ್ತಿದ್ದರು

ಹೀಗೆ ಕೋಟ್ಯಾಧೀಶ ಒಡೆಯನಾಗಿರುವ ವ್ಯಕ್ತಿ ಐಟಿ ಅಧಿಕಾರಿಗಳ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಅಂದರೆ ಯಾವ ಮಟ್ಟಕ್ಕೆ ಅವರಿಗೆ ಸ್ಟೆಸ್ ಅಥವಾ ಒತ್ತಡ ಇತ್ತು ಎನ್ನುವ ವಿಚಾರ ಪ್ರಶ್ನೆಯಾಗಿ ಉಳಿದಿದೆ. ಕಾನ್ಫಿಡೆಂಟ್​​ ಗ್ರೂಪ್​ ಒಡೆಯ ಜೀವನದ ಕಾನ್ಫಿಡೆಂಟ್ ಕಳೆದುಕೊಂಡಿದ್ಯಾಕೆ ಎನ್ನುವುದೇ ಎಲ್ಲರನ್ನು ಕಾಡುತ್ತಿರುವ ಪ್ರಶ್ನೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:12 pm, Fri, 30 January 26