ಬೆಂಗಳೂರು: ಕರ್ನಾಟಕದಲ್ಲಿ ಮಕ್ಕಳನ್ನು 1ನೇ ತರಗತಿಗೆ ಸೇರಿಸಲು ಅವರಿಗೆ 6 ವರ್ಷ ತುಂಬಿರಲೇಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ನೂತನ ವಯೋಮಿತಿ ಆದೇಶದ ಪ್ರಕಾರ, 1ನೇ ತರಗತಿಗೆ ಸೇರವ ಮಕ್ಕಳಿಗೆ ಜೂನ್ 1ಕ್ಕೆ ಕಡ್ಡಾಯವಾಗಿ 6 ವರ್ಷ ತುಂಬಿರಬೇಕು. ಆದರೆ, ಈಗಾಗಲೇ ರಾಜ್ಯದೆಲ್ಲೆಡೆ (Karnataka) ದಾಖಲಾತಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಈಗ ಶಿಕ್ಷಣ ಇಲಾಖೆ ಯಾವುದೇ ವಿಮರ್ಶೆ ಮಾಡದೆ, ಶಿಕ್ಷಣ ತಜ್ಞರ ಅಭಿಪ್ರಾಯ ಪಡೆಯದೆ ಈ ಆದೇಶ ಹೊರಡಿಸಿದ್ದು, ಪೋಷಕರನ್ನು ಗೊಂದಲಕ್ಕೆ ದೂಡಿದೆ ಎಂದು ಕಾಂಗ್ರೆಸ್ (Congress) ಆರೋಪ ಮಾಡಿದೆ.
ರಾಜ್ಯ ಸರ್ಕಾರ 1ನೇ ತರಗತಿಗೆ ಸೇರುವ ಮಕ್ಕಳಿಗೆ 6 ವರ್ಷ ತುಂಬಿರಬೇಕು ಎಂಬ ಆದೇಶ ಹೊರಡಿಸಿದೆ. ಶಿಕ್ಷಣ ಇಲಾಖೆ ಮೇ ತಿಂಗಳಿನಿಂದಲೇ ಪ್ರಸಕ್ತ ಶೈಕ್ಷಣಿಕ ವರ್ಷ ಘೋಷಿಸಿದ್ದು, ಈಗಾಗಲೇ ತ್ರೈಮಾಸಿಕ ಅವಧಿ ಮುಕ್ತಾಯವಾಗಿದೆ. ಈ ಆದೇಶ ಈ ವರ್ಷವೇ ಅನ್ವಯವಾಗುವುದೋ, ಮುಂದಿನ ವರ್ಷ ಜಾರಿಯಾಗುತ್ತದಾ ಎಂಬ ಸ್ಪಷ್ಟನೆಯನ್ನೂ ನೀಡಿಲ್ಲ.
ಪ್ರಸ್ತುತ ಇರುವ ಕಾನೂನಿನಂತೆ 5 ವರ್ಷ 5 ತಿಂಗಳ ಮಗು ಶಾಲೆಗೆ ದಾಖಲಾತಿ ಪಡೆಯಬಹುದು. ಈಗಾಗಲೇ ರಾಜ್ಯದೆಲ್ಲೆಡೆ ಸರ್ಕಾರಿ, ಅರೆ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ದಾಖಲಾತಿ ಪ್ರಕ್ರಿಯೆ ಪೂರ್ಣಗೊಂಡಿದೆ. ಈ ಸಂದರ್ಭದಲ್ಲಿ ಯಾವುದೇ ವಿಮರ್ಶೆ ಮಾಡದೆ, ಶಿಕ್ಷಣ ತಜ್ಞರ ಅಭಿಪ್ರಾಯ ಪಡೆಯದೆ ಈ ಆದೇಶ ಹೊರಡಿಸಲಾಗಿದೆ.
ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರು ಪರೀಕ್ಷಾ ಮಂಡಳಿಯ ಮೂಲಕ ಖಾಸಗಿ ಸಂಸ್ಥೆ ಬಳಸಿ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳನ್ನು ನಿರ್ವಹಿಸುತ್ತಿದ್ದಾರೆ. ಇಲಾಖೆಯ ಹಣವನ್ನು ವೈಯಕ್ತಿಕ ಹಾಗೂ ಪಕ್ಷದ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವುದು ಸರಿಯಲ್ಲ. ಈ ಬಗ್ಗೆ ರಾಜ್ಯ ಸರ್ಕಾರ ತನಿಖೆ ನಡೆಸಿ ಸಚಿವರಿಂದ ಆ ಹಣವನ್ನು ಹಿಂಪಡೆಯಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ಈ ಹಿಂದೆ ಮಕ್ಕಳನ್ನು 1ನೇ ತರಗತಿಗೆ ಸೇರಿಸಲು 5 ವರ್ಷ, 5 ತಿಂಗಳು ಹಾಗೂ 5 ವರ್ಷ 10 ತಿಂಗಳು ಆಗಿರಬೇಕು ಎಂಬ ನಿಯಮವಿತ್ತು. ಇದೀಗ ಆರ್‌ಟಿಇ ಶಿಕ್ಷಣ ಕಾಯ್ದೆ, ಕಡ್ಡಾಯ ಶಿಕ್ಷಣ ನಿಯಮ 2012 ಅನ್ವಯ ಕರ್ನಾಟಕ ಸರ್ಕಾರ ಹೊಸ ವಯೋಮಿತಿಯನ್ನು ನಿಗದಿ ಮಾಡಿದೆ. ಇದಕ್ಕೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ.
Published On - 2:40 pm, Thu, 28 July 22