ಬೆಂಗಳೂರು: ಕೆಜಿಎಫ್ 2 (KGF Chapter 2) ಹಾಡಿನ ದುರ್ಬಳಕೆ ಆರೋಪ ಮೇಲೆ . ಕಾಂಗ್ರೆಸ್ ನ ಭಾರತ್ ಜೋಡೋ (Bharat Jodo Yatra) ಟ್ವಿಟ್ಟರ್ (Twitter) ಖಾತೆಗೆ ನಿರ್ಬಂಧಿಸಿ ವಾಣಿಜ್ಯ ನ್ಯಾಯಾಲಯ ಆದೇಶಿಸಿದೆ, ಈ ಆದೇಶವನ್ನು ಪ್ರಶ್ನಿಸಿ ಕಾಂಗ್ರೆಸ್ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದೆ.
ತುರ್ತು ವಿಚಾರಣೆಗೆ ಹಿರಿಯ ವಕೀಲ ಎ.ಎಸ್.ಪೊನ್ನಣ್ಣ ಮನವಿ ಮಾಡಿದ್ದು, ಇದಕ್ಕೆ ಹೈಕೋರ್ಟ್ ಇಂದೇ(ಮಂಗಳವಾರ) ವಿಚಾರಣೆ ನಡೆಸಲು ಒಪ್ಪಿಗೆ ಸೂಚಿಸಿದೆ.
ಕೆಜಿಎಫ್ 2 ಸಾಂಗ್ ಬಳಕೆ: ಕಾಂಗ್ರೆಸ್ ಟ್ವಿಟರ್ ಖಾತೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸುವಂತೆ ಕೋರ್ಟ್ ಆದೇಶ
ಭಾರತ್ ಜೋಡೋ ಯಾತ್ರೆಯಲ್ಲಿ ಕೆಜಿಎಫ್ ಚಾಪ್ಟರ್ 2 ಸಂಗೀತವನ್ನು ಅನುಮತಿ ಇಲ್ಲದೇ ಬಳಸಿರುವುದು ಕಾಂಗ್ರೆಸ್‌ಗೆ (Congress) ಮುಳುವಾಗಿದೆ. ಈ ಬಗ್ಗೆ ವಿಚಾರಣೆ ನಡೆಸಿದ ಬೆಂಗಳೂರಿನ ವಾಣಿಜ್ಯ ನ್ಯಾಯಾಲಯ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಮತ್ತು ಭಾರತ್ ಜೋಡೋ ಯಾತ್ರೆಯ ಟ್ವಿಟರ್ ಖಾತೆಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸುವಂತೆ ಟ್ವಿಟರ್‌ಗೆ ಆದೇಶಿಸಿತ್ತು.
ಪ್ರಕರಣ ಹಿನ್ನೆಲೆ
ಇತ್ತೀಚೆಗೆ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆಗಾಗಿ ಕರ್ನಾಟಕಕ್ಕೆ ಬಂದಿದ್ದರು. ಅವರು ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಕಾಲ್ನಡಿಗೆಯಲ್ಲಿ ಸಾಗಿದ್ದರು. ಈ ವೇಳೆ ರಾಹುಲ್ ಗಾಂಧಿ ಅವರ ಕಾಲ್ನಡಿಗೆಯ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಲಾಗಿತ್ತು. ಈ ವಿಡಿಯೋಗೆ ‘ಕೆಜಿಎಫ್ 2’ ಚಿತ್ರದ ಹಿಂದಿ ಗೀತೆ ‘ಸುಲ್ತಾನ್..’ ಹಾಡನ್ನು ಬಳಕೆ ಮಾಡಲಾಗಿತ್ತು. ಈ ಕಾರಣಕ್ಕೆ ರಾಹುಲ್ ಗಾಂಧಿ ವಿರುದ್ಧ ಈ ಹಾಡಿನ ಹಿಂದಿ ಹಕ್ಕನ್ನು ಹೊಂದಿರುವ ಎಂಆರ್ಟಿ ಮ್ಯೂಸಿಕ್ನವರು ಫೋರ್ಜರಿ ಪ್ರಕರಣ ದಾಖಲು ಮಾಡಿದ್ದರು. ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹೀಗಾಗಿ ರಾಹುಲ್ ಗಾಂಧಿ ಮಾತ್ರವಲ್ಲದೆ, ಜೈರಾಮ್ ರಮೇಶ್, ಸುಪ್ರಿಯಾ ವಿರುದ್ಧವೂ ಎಫ್ಐಆರ್ ದಾಖಲಾಗಿತ್ತು.
ಈ ಪ್ರಕರಣವನ್ನು ಬೆಂಗಳೂರಿನ ವಾಣಿಜ್ಯ ಕೋರ್ಟ್ನಲ್ಲಿ ವಿಚಾರಣೆ ಮಾಡಲಾಗಿದೆ. ಈ ವೇಳೆ ದೂರುದಾರರು ನೀಡಿದ ದಾಖಲೆಗಳನ್ನು ಕೋರ್ಟ್ ಪರಿಗಣಿಸಿದೆ. ಹೀಗಾಗಿ, ನವೆಂಬರ್ 21ರವರೆಗೆ ಕಾಂಗ್ರೆಸ್ ಟ್ವಿಟರ್ ಖಾತೆಯನ್ನು ನಿರ್ಬಂಧಿಸುವಂತೆ ಕೋರ್ಟ್ ಸೂಚಿಸಿತ್ತು.