ಕಾಂಗ್ರೆಸ್ ಪಕ್ಷದ ಕಟ್ಟಾ ಹುರಿಯಾಳಾಗಿದ್ದ ಮುನಿರತ್ನ ಕಳೆದ ವರ್ಷ ಬಿಜೆಪಿಗೆ ಜಿಗಿದು ಈಗ ಆರ್ ಆರ್ ನಗರದಿಂದ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದ್ದಿದ್ದಾರೆ. ದಿವಂಗತ ಐಎಎಸ್ ಅಧಿಕಾರಿ, ಡಿಕೆ ರವಿ ಅವರ ಪತ್ನಿ ಕುಸುಮಾ ಅವರನ್ನು ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನಾಗಿಸಿದೆ. ಹಾಗೆಯೇ, ಜೆಡಿ(ಎಸ್) ಕೃಷ್ಣಮೂರ್ತಿ ಎನ್ನುವವರಿಗೆ ಟಿಕೆಟ್ ನೀಡಿದೆ.
ಮುನಿರತ್ನ ನಾಮಪತ್ರ ಸಲ್ಲಿಸುವಾಗ ಅವರೊಂದಿಗೆ ಬಿ ಎಸ್ ಯಡಿಯೂರಪ್ಪನವರ ಸಂಪುಟದಲ್ಲಿ ಉಪ ಮುಖ್ಯಮಂತ್ರಿಯಾಗಿರುವ ಅಶ್ವಥ್ ನಾರಾಯಣ, ಹಿರಿಯ ಸಚಿವ ಆರ್ ಅಶೋಕ ಮತ್ತು ಇತರ ಕೆಲ ನಾಯಕರು ಜೊತೆಗಿದ್ದರು. ನಾಮಪತ್ರ ಸಲ್ಲಿಕೆಯಾದ ನಂತರ ಸುದ್ದಿಗಾರರೊಂದಿಗೆ ಮಾತಾಡಿದ ಕಂದಾಯ ಸಚಿವರು, ‘‘ಡಿಕೆ ಶಿವಕುಮಾರ್ ಅವರಾಟ ಕೇವಲ ಕನಕಪುರಕ್ಕೆ ಮಾತ್ರ ಸೀಮಿತವಾಗಿದೆ. ಇದು ಆರ್ ಆರ್ ನಗರ, ಇಲ್ಲಿ ಕಲ್ಲುಬಂಡೆಗಳಿಲ್ಲ, ಈ ಕ್ಷೇತ್ರದಲ್ಲಿ ವಿದ್ಯಾವಂತ ಮತದಾರರಿದ್ದಾರೆ ಮತ್ತು ಬುದ್ಧಿವಂತ ನಾಗರಿಕರಿದ್ದಾರೆ. ನಮ್ಮ ಸರ್ಕಾರ ಉತ್ತಮವಾಗಿ ಕೆಲಸ ಮಾಡಿರುವುದರಿಂದ ನಾವು ಸುಲಭವಾಗಿ ಗೆಲ್ಲುತ್ತೇವೆ,’’ ಎಂದು ಹೇಳಿದರು.
ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಜೊತೆ ಬಂದಿದ್ದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ‘‘ಈ ಬಾರಿ ನಾನೇ ಉಸ್ತುವಾರಿ ವಹಿಸಿಕೊಂಡು ಅಖಾಡಕ್ಕಿಳಿಯುತ್ತೇನೆ,’’ ಎಂದು ಹೇಳಿದರು.
ರಾಜರಾಜೇಶ್ವರಿ ನಗರ ಮುನಿರತ್ನಗೆ ಭದ್ರಕೋಟೆಯಾಗಿದ್ದರೂ ಈ ಸಲ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಅವರಿಗೆ ಟಿಕೆಟ್ ನೀಡುತ್ತಿದ್ದಂತೆಯೇ ಆರ್ ಆರ್ ನಗರ ಬಿಜೆಪಿ ಕಾರ್ಯಕರ್ತರು ರೊಚ್ಚಿಗೆದ್ದು ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಸಭೆಯಲ್ಲಿ ಅಸಮಾಧಾನ ಹೊರಹಾಕಿದ್ದಾರೆ. ಹಗರಣದಲ್ಲಿ ಸಿಲುಕಿರುವ ವ್ಯಕ್ತಿಗೆ ಟಿಕೆಟ್ ಕೊಟ್ಟಿದ್ದಾರೆ, ತಮ್ಮ ನಿಲುವು ಏನೆಂದು ಬಿಜೆಪಿ ನಾಯಕರು ಕೇಳಲಿಲ್ಲ. ರಾಷ್ಟ್ರಮಟ್ಟದಲ್ಲಿ ಪಕ್ಷ ತಮ್ಮನ್ನು ಅವಮಾನಿಸಿಲಾಗಿದೆ, ತಮಗೆ ತಕ್ಕ ಮನ್ನಣೆ ಕೊಟ್ಟಿಲ್ಲ ಅಂದ್ರೆ ತಟಸ್ಥರಾಗಿಬಿಡುವ ಎಚ್ಚರಿಕೆ ನೀಡಿದ್ದಾರೆ.
ಆರ್ ಆರ್ ನಗರ ಉಪ ಚುನಾವಣೆ ಕಣ ಈಗ ಕಾವೇರಿದ್ದು, ನಾಳೆಯಿಂದ ಪ್ರಚಾರದ ಭರಾಟೆ ಶುರುವಾಗಲಿದೆ.