ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಾತಿ: ಮಂಗಳವಾರ ಬೆಂಗಳೂರಿಗೆ ರಣದೀಪ್ ಸುರ್ಜೇವಾಲ, ಅಂತಿಮಗೊಳ್ಳುತ್ತಾ ಪಟ್ಟಿ?

| Updated By: Ganapathi Sharma

Updated on: Nov 20, 2023 | 4:57 PM

ಮೊದಲ ಸುತ್ತಿನ ನೇಮಕಾತಿಯಲ್ಲಿ ಮಂಡಳಿ ಮತ್ತು ನಿಗಮಗಳ ಅಧ್ಯಕ್ಷರ ಹುದ್ದೆಗಳಿಗೆ ಕಾಂಗ್ರೆಸ್ ನಾಯಕರು ಶಾಸಕರನ್ನು ಮಾತ್ರ ಆಯ್ಕೆ ಮಾಡುವ ಸಾಧ್ಯತೆಯಿದೆ. ಎರಡು ಮತ್ತು ಮೂರನೇ ಸುತ್ತಿನಲ್ಲಿ ಪಕ್ಷದ ಮುಖಂಡರು ಕಾರ್ಯಕರ್ತರಿಗೆ ಅವಕಾಶ ನೀಡುವ ನಿರೀಕ್ಷೆಯಿದೆ.

ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಾತಿ: ಮಂಗಳವಾರ ಬೆಂಗಳೂರಿಗೆ ರಣದೀಪ್ ಸುರ್ಜೇವಾಲ, ಅಂತಿಮಗೊಳ್ಳುತ್ತಾ ಪಟ್ಟಿ?
Follow us on

ಬೆಂಗಳೂರು, ನವೆಂಬರ್ 20: ಕರ್ನಾಟಕದಲ್ಲಿ ನಿಗಮ ಮಂಡಳಿಗಳ ಅಧ್ಯಕ್ಷರ (Heads of Boards and Corporations in Karnataka) ನೇಮಕಕ್ಕೆ ಆಗ್ರಹ ಕೇಳಿಬರುತ್ತಿದ್ದು, ಈ ವಿಚಾರವಾಗಿ ಉಂಟಾಗಿರುವ ಗೊಂದಲಕ್ಕೆ ಪರಿಹಾರ ಕಂಡುಕೊಳ್ಳಲು ಕಾಂಗ್ರೆಸ್ (Congress) ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ (Randeep Singh Surjewala) ಮಂಗಳವಾರ ನಗರಕ್ಕೆ ಆಗಮಿಸಲಿದ್ದಾರೆ. ಸುರ್ಜೇವಾಲ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೊಂದಿಗೆ ಸಭೆ ನಡೆಸಿ ನಿರ್ಣಾಯಕ ಹುದ್ದೆಗಳ ಹೆಸರನ್ನು ಅಂತಿಮಗೊಳಿಸಲಿದ್ದಾರೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳಿಗಿಂತ ಹೆಚ್ಚು ಸಮಯ ಕಳೆದಿದ್ದು, ಸಂಪುಟ ಸ್ಥಾನ ತಪ್ಪಿದ ಪಕ್ಷದ ಹಲವಾರು ಶಾಸಕರು ಶೀಘ್ರವೇ ನೇಮಕಾತಿ ಮಾಡುವಂತೆ ರಾಜ್ಯ ನಾಯಕರ ಮೇಲೆ ಒತ್ತಡ ಹೇರುತ್ತಿದ್ದಾರೆ.

ನವೆಂಬರ್ 1 ರಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರೊಂದಿಗೆ ನಗರಕ್ಕೆ ಹಠಾತ್ ಭೇಟಿ ನೀಡಿದ ಸುರ್ಜೇವಾಲಾ ಅವರು ನವೆಂಬರ್ 17 ರಂದು ಮಧ್ಯಪ್ರದೇಶದಲ್ಲಿ ಮತದಾನ ಮುಗಿದ ನಂತರ ನೇಮಕಾತಿಗಳನ್ನು ಮಾಡುವುದಾಗಿ ಪಕ್ಷದ ನಾಯಕರಿಗೆ ಭರವಸೆ ನೀಡಿದ್ದರು.

ಸಿಎಂ ಸಿದ್ದರಾಮಯ್ಯ ಮತ್ತು ಉಪ ಡಿಕೆ ಶಿವಕುಮಾರ್ ಆಗಸ್ಟ್‌ನಲ್ಲಿ ಹೆಸರುಗಳನ್ನು ಅಂತಿಮಗೊಳಿಸಲು ಸಭೆ ನಡೆಸಿದ್ದರು. ಆದರೆ ಇಬ್ಬರೂ ನಾಯಕರು ಒಮ್ಮತಕ್ಕೆ ಬರಲು ವಿಫಲವಾದ ನಂತರ ಪ್ರಕ್ರಿಯೆ ಹಳಿತಪ್ಪಿತ್ತು. 5 ರಾಜ್ಯಗಳ ಚುನಾವಣೆಯಲ್ಲಿ ಪಕ್ಷದ ಹೈಕಮಾಂಡ್ ವ್ಯಸ್ತವಾಗಿರುವುದರಿದ ನೇಮಕಾತಿ ಮತ್ತಷ್ಟು ವಿಳಂಬವಾಗಿದೆ.

ಈ ತಿಂಗಳ ಆರಂಭದಲ್ಲಿ ಸಿಎಂ ಮತ್ತು ಶಿವಕುಮಾರ್ ಮಾತುಕತೆ ನಡೆಸಿದ್ದು, ನೇಮಕಾತಿಗಾಗಿ ಪಕ್ಷದ ಹೈಕಮಾಂಡ್‌ಗೆ ಶಿಫಾರಸು ಮಾಡಲು ಸುಮಾರು 25 ಹೆಸರುಗಳನ್ನು ಅಂತಿಮಗೊಳಿಸಿದ್ದಾರೆ ಎಂದು ಹೇಳಲಾಗಿದೆ.

ಮೂರು ಸುತ್ತುಗಳಲ್ಲಿ ನೇಮಕಾತಿ ಸಾಧ್ಯತೆ

ಮೊದಲ ಸುತ್ತಿನ ನೇಮಕಾತಿಯಲ್ಲಿ ಮಂಡಳಿ ಮತ್ತು ನಿಗಮಗಳ ಅಧ್ಯಕ್ಷರ ಹುದ್ದೆಗಳಿಗೆ ಕಾಂಗ್ರೆಸ್ ನಾಯಕರು ಶಾಸಕರನ್ನು ಮಾತ್ರ ಆಯ್ಕೆ ಮಾಡುವ ಸಾಧ್ಯತೆಯಿದೆ. ಎರಡು ಮತ್ತು ಮೂರನೇ ಸುತ್ತಿನಲ್ಲಿ ಪಕ್ಷದ ಮುಖಂಡರು ಕಾರ್ಯಕರ್ತರಿಗೆ ಅವಕಾಶ ನೀಡುವ ನಿರೀಕ್ಷೆಯಿದೆ.

ಇದನ್ನೂ ಓದಿ: ಬಿವೈ ವಿಜಯೇಂದ್ರ ಕರ್ನಾಟಕ ಬಿಜೆಪಿ ಅಧ್ಯಕ್ಷ; ಇದು ಸ್ವಜನಪಕ್ಷಪಾತ ಎಂದ ಸುರ್ಜೇವಾಲಾ

ಈ ಹಿಂದೆ, ಕಾಂಗ್ರೆಸ್ 70:30 ನಿಯಮವನ್ನು ಅನುಸರಿಸಲು ನಿರ್ಧರಿಸಿತ್ತು. ಅಂದರೆ ಪಕ್ಷದ ಕಾರ್ಯಕರ್ತರಿಗೆ ಶೇಕಡಾ 70 ಮತ್ತು ಶಾಸಕರಿಗೆ ಶೇಕಡಾ 30 ರಷ್ಟು ಹುದ್ದೆಗಳು. ಬೇಡಿಕೆಯಲ್ಲಿರುವ ಕೆಲವು ಹುದ್ದೆಗಳು ಕೈಗಾರಿಕೆಗಳು ಮತ್ತು ವಾಣಿಜ್ಯ ಮತ್ತು ಜಲಸಂಪನ್ಮೂಲ ಇಲಾಖೆಗಳಿಗೆ ಸಂಬಂಧಿಸಿದ ಮಂಡಳಿಗಳಾಗಿವೆ.

ಕೆಪಿಸಿಸಿ ಪುನಶ್ಚೇತನ

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪುನರ್ ರಚನೆ ಬಗ್ಗೆಯೂ ಕಾಂಗ್ರೆಸ್ ನಾಯಕರು ಮಂಗಳವಾರ ಚರ್ಚೆ ನಡೆಸುವ ನಿರೀಕ್ಷೆ ಇದೆ. ಐವರಲ್ಲಿ ನಾಲ್ವರು ಸರ್ಕಾರದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ಹೊಸ ಕಾರ್ಯಾಧ್ಯಕ್ಷರನ್ನು ನೇಮಿಸಲು ಪಕ್ಷ ಮುಂದಾಗಿದೆ. ಲೋಕಸಭೆ ಚುನಾವಣೆಗೂ ಮುನ್ನ ಪಕ್ಷದ 20 ಜಿಲ್ಲಾಧ್ಯಕ್ಷರನ್ನು ಬದಲಾಯಿಸಲು ಚಿಂತನೆ ನಡೆದಿದೆ. ಈ ವಿಚಾರವಾಗಿ ಸುರ್ಜೇವಾಲಾ ಅವರು ಸಿಎಂ ಹಾಗೂ ಶಿವಕುಮಾರ್ ಅವರೊಂದಿಗೆ ಸಭೆ ನಡೆಸುವ ಸಾಧ್ಯತೆ ಇದ್ದು, ಈ ತಿಂಗಳ ಕೊನೆಯ ವೇಳೆಗೆ ಅಂತಿಮ ನಿರ್ಧಾರ ಹೊರಬೀಳುವ ನಿರೀಕ್ಷೆಯಿದೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ