ಬೆಂಗಳೂರು: ರಾಜ್ಯದ ಬಿಜೆಪಿ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರ ಮೇಲೆ ಸುಳ್ಳು ಕೇಸು ಹಾಕಿಸಿ, ದೌರ್ಜನ್ಯ ನಡೆಸುತ್ತಿದೆ. ಇದನ್ನು ಖಂಡಿಸಿ ಇದೇ 13ರಂದು ‘ಶಿವಮೊಗ್ಗ ಚಲೋ’ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು. ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಶಿವಕುಮಾರ್ ಅವರ ಜತೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು.
ಕೊರೋನಾ ಹಾಗೂ ನಂತರದ ಸಮಯದಲ್ಲಿ ಬಿಜೆಪಿ ನಾಯಕರು ಶಾಂತಿಭಂಗದ ಹೇಳಿಕೆ ಕೊಟ್ಟಿದ್ದರೂ ಈ ಸರಕಾರ ಯಾರ ಮೇಲೂ ಕೇಸು ದಾಖಲಿಸಲಿಲ್ಲ. ಆಗಲೂ ಅಧಿಕಾರ ದುರುಪಯೋಗ ಮಾಡಿಕೊಂಡು ಸರ್ಕಾರದ ಪದಾರ್ಥವನ್ನು ತಮ್ಮ ಪದಾರ್ಥ ಎಂಬಂತೆ ಹಂಚಿದ್ದನ್ನು ನಾವು ಬಯಲು ಮಾಡಿದರೂ ಕ್ರಮ ಕೈಗೊಳ್ಳಲಿಲ್ಲ. ಆದರೆ ನಮ್ಮ ಶಾಸಕರು, ಮುಖಂಡರು, ಕಾರ್ಯಕರ್ತರ ಮೇಲೆ ನೂರಾರು ಕೇಸ್ ಹಾಕುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಇದರ ವಿರುದ್ಧ ಪ್ರತಿಭಟನೆ ಮಾಡಲು ನಾವು ನಿರ್ಧರಿಸಿದ್ದೇವೆ. ಈ ಬಗ್ಗೆ ಸದನದಲ್ಲಿ ಹಾಗೂ ಇತರೆ ಕಡೆಗಳಲ್ಲಿ ಚರ್ಚೆ ಮಾಡಿದ್ದೇವೆ. ಈ ಮಧ್ಯೆ ನಮ್ಮ ಪಕ್ಷದ ಶಾಸಕ ಸಂಗಮೇಶ್, ಅವರ ಕುಟುಂಬ ಸದಸ್ಯರು ಹಾಗೂ ಕಾರ್ಯಕರ್ತರ ಮೇಲೆ ಸುಳ್ಳು ಕೇಸು ಹಾಕಲಾಗಿದೆ ಎಂದು ಅವರು ಹೇಳಿದರು.
ಸಂಗಮೇಶ್ ಅವರನ್ನು ಬಿಜೆಪಿಗೆ ಸೆಳೆಯಲು ಬಹಳ ಒತ್ತಡ ಹೇರಿದ್ದರು. ಆಪರೇಷನ್ ಕಮಲಕ್ಕೆ ಬಲಿಯಾಗಲಿಲ್ಲ ಎಂಬ ಕಾರಣಕ್ಕೆ ಈ ರೀತಿ ಕಿರುಕುಳ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಒಬ್ಬ ಕಾಂಗ್ರೆಸ್ ಶಾಸಕ ಇದ್ದಾನೆ ಎಂದು ಪೊಲೀಸರ ಕೈಯಲ್ಲಿ ಎಫ್ಐಆರ್ ಹಾಕಿಸಿ, ತೊಂದರೆ ನೀಡುತ್ತಿದ್ದಾರೆ. ತಮಗಾಗುತ್ತಿರುವ ಅನ್ಯಾಯದ ವಿರುದ್ಧ ಮಾತನಾಡಲು ಅವಕಾಶ ಕೊಡಿ ಎಂದು ಕೇಳಿದರೆ ಅವರಿಗೆ ಅವಕಾಶ ನೀಡಲಿಲ್ಲ. ಆಗ ನೋವಿನಿಂದ ನಮ್ಮ ಶಾಸಕ ತಮ್ಮ ಷರ್ಟ್ ಬಿಚ್ಚಿ ಮೈಮೇಲಾಗಿರುವ ಗಾಯ ತೋರಿಸಲು ಮುಂದಾದಾಗ, ಅದನ್ನು ಅಸಭ್ಯ ವರ್ತನೆ ಎಂದು ಹೇಳಿ ಅವರನ್ನು ಒಂದು ವಾರಕ್ಕೂ ಹೆಚ್ಚು ಕಾಲ ವಿಧಾನಸಭೆ ಕಲಾಪದಿಂದ ಅಮಾನತು ಮಾಡಲಾಗಿದೆ. ಆ ಮೂಲಕ ಅವರ ಹಕ್ಕಿಗೆ ಧಕ್ಕೆ ತರಲಾಗಿದೆ. ಈ ಬಗ್ಗೆ ನಾವು ಪ್ರತಿಭಟನೆಯನ್ನೂ ಮಾಡಿದ್ದೇವೆ ಎಂದು ಶಿವಕುಮಾರ್ ವಿವರಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು, ಕಾರ್ಯಕರ್ತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ 13ರಂದು ವಿರೋಧ ಪಕ್ಷ ನಾಯಕರ ಸಮ್ಮುಖದಲ್ಲಿ ಎಲ್ಲ ನಾಯಕರು, ಶಾಸಕರು, ಸಂಸದರು, ಕಾರ್ಯಕರ್ತರು ಶಿವಮೊಗ್ಗ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ನಾವು ಶಿವಮೊಗ್ಗಕ್ಕೆ ತೆರಳಿ ಪ್ರತಿಭಟನೆ ನಡೆಸುತ್ತೇವೆ ಎಂದು ಘೋಷಿಸಿದರು.
ಅಶೋಕ್ ಮನಗೂಳಿ ಪಕ್ಷ ಸೇರ್ಪಡೆ
ಮಾಜಿ ಮಂತ್ರಿಗಳಾದ ಮನಗೂಳಿ ಅವರು ದೈವಾಧೀನರಾಗುವ ಮುಂಚಿತವಾಗಿ ನನ್ನನ್ನು, ನಮ್ಮ ವಿರೋಧ ಪಕ್ಷದ ನಾಯಕರನ್ನು ಭೇಟಿ ಮಾಡಿ, ಮುಂದಿನ ದಿನಗಳಲ್ಲಿ ನನ್ನ ಮಗನನ್ನು ನಿಮ್ಮ ತೆಕ್ಕೆಗೆ ನೀಡುತ್ತಿದ್ದೇನೆ ಎಂದಿದ್ದರು. ಅವನನ್ನು ಬೆಳೆಸುವುದು, ಬಿಡುವುದು ನಿಮಗೆ ಬಿಟ್ಟ ವಿಚಾರ ಎಂದು ನೋವಿನಿಂದ ಹೇಳಿದ್ದರು. ಅಶೋಕ್ ಅವರು ಕೂಡ ನಮ್ಮ ಬಳಿ ಬಂದು ಯಾವುದೇ ಷರತ್ತು ಇಲ್ಲದೆ ಪಕ್ಷ ಸೇರಲು ಅರ್ಜಿ ನೀಡಿದ್ದರು. ಈ ಅರ್ಜಿಯನ್ನು ನಮ್ಮ ಸಮಿತಿಯು ಪರಿಶೀಲಿಸಿ ಒಪ್ಪಿಗೆ ಸೂಚಿಸಿತ್ತು. ಪಕ್ಷದ ನಾಯಕರು, ಕಾರ್ಯಕರ್ತರ ಜತೆ ಚರ್ಚೆ ಮಾಡಿ ಅವರನ್ನು ಸೇರಿಸಿಕೊಂಡಿದ್ದೇವೆ. ಯಾವಾಗ ಬೇಕಾದರೂ ಉಪಚುನಾವಣೆ ಎದುರಾಗಬಹುದು. ಈ ನಿಟ್ಟಿನಲ್ಲಿ ಇವರ ಸೇರ್ಪಡೆ ಪಕ್ಷಕ್ಕೆ ಅನುಕೂಲವಾಗಲಿದೆ. ಆ ಜಿಲ್ಲೆಗೆ ಸಂಬಂಧಿಸಿದ ಎಲ್ಲ ನಾಯಕರ ಜತೆ ಚರ್ಚಿಸಿ, ಸಾಮೂಹಿಕವಾಗಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಪಕ್ಷಕ್ಕಾಗಿ ದುಡಿಯುತ್ತೇನೆ: ಅಶೋಕ್ ಮನಗೂಳಿ
ಪಕ್ಷಕ್ಕೆ ಸೇರ್ಪಡೆ ನಂತರ ಮಾತನಾಡಿದ ಅಶೋಕ್ ಮನಗೂಳಿ, ಇಂದು ಇಷ್ಟು ದೊಡ್ಡ ನಾಯಕರು ಮತ್ತು ಸಿಂದಗಿ ಕ್ಷೇತ್ರದ ಮುಖಂಡರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವುದು ಸಂತೋಷ ತಂದಿದೆ. ಪಕ್ಷವನ್ನು ಸಿಂದಗಿ ಕ್ಷೇತ್ರದಲ್ಲಿ ಬಲಿಷ್ಠವಾಗಿ ಕಟ್ಟುವ ಇಚ್ಛಾಶಕ್ತಿಯೊಂದಿಗೆ ಪಕ್ಷ ಸೇರುತ್ತಿದ್ದೇನೆ. ಸಿಂದಗಿ ಶಾಸಕರು ಹಾಗೂ ನನ್ನ ತಂದೆ ಮನಗೂಳಿ ಅವರ ಅಕಾಲಿಕ ನಿಧನದಿಂದ ಈಗ ಉಪಚುನಾವಣೆ ಎದುರಾಗುತ್ತಿದೆ. ನಾನು ಬೇಷರತ್ತಿನಿಂದ ಪಕ್ಷ ಸೇರುತ್ತಿದ್ದೇನೆ. ವರಿಷ್ಠರು ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ಕೊಟ್ಟರೂ ಪಕ್ಷದ ಪರವಾಗಿ ಕೆಲಸ ಮಾಡುತ್ತೇನೆ. ಕೇವಲ ವಿಧಾನಸಭೆ ಉಪಚುನಾವಣೆ ಮಾತ್ರವಲ್ಲ, ತಾಲೂಕು ಹಾಗೂ ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲೂ ಪಕ್ಷಕ್ಕಾಗಿ ದುಡಿಯುತ್ತೇನೆ ಎಂದು ಘೋಷಿಸಿದರು.
ಇದನ್ನೂ ಓದಿ: ನಾಳೆ ಎಲೆಕ್ಷನ್ ನಡೆದ್ರೂ ನೂರಕ್ಕೆ ಇನ್ನೂರರಷ್ಟು ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ -ಸಿದ್ದರಾಮಯ್ಯ ಚಾಲೆಂಜ್