ಬೆಳಗಾವಿ: ಹಿಂದೂ ಪದದ ಅರ್ಥ ಅಶ್ಲೀಲವಾಗಿದೆ ಎಂಬ ಸತೀಶ್ ಜಾರಕಿಹೊಳಿ (Satish Jarkiholi) ಅವರ ಹೇಳಿಕೆ ರಾಜ್ಯ ಮಾತ್ರವಲ್ಲದೆ, ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಇದನ್ನು ಕಾಂಗ್ರೆಸ್ ಹೈಕಮಾಂಡ್ ಸಹ ಗಂಭೀರವಾಗಿ ಪರಿಗಣಿಸಿ ವಾರ್ನಿಂಗ್ ಕೊಟ್ಟಿದೆ. ಇದರ ಬೆನ್ನಲ್ಲೇ ಸತೀಶ್ ಜಾರಕಿಹೊಳಿ ಅವರು ತಮ್ಮ ಹೇಳಿಕೆಯನ್ನು ಹಿಂಪಡೆದುಕೊಂಡಿದ್ದಾರೆ. ಅಲ್ಲದೇ ಈ ಬಗ್ಗೆ ತಂಡ ರಚನೆ ಮಾಡಿ ತನಿಖೆ ಮಾಡಿಸುವಂತೆ ಸಿಎಂಗೆ ಪತ್ರ ಬರೆದಿದ್ದಾರೆ.
ಕಾಂಗ್ರೆಸ್ಗೆ ಭಾರಿ ದುಬಾರಿಯಾದ ಸತೀಶ್ ಜಾರಕಿಹೊಳಿ ನಡೆ: ಕೈ ಹೋರಾಟಗಳೆಲ್ಲ ನೀರಿನಲ್ಲಿ ಹೋಮ
‘ತನಿಖಾ ಸಮಿತಿ ರಚಿಸುವ ಕುರಿತು’ ಎನ್ನುವ ವಿಷಯದ ಬಗ್ಗೆ ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಸಿಎಂಗೆ ಪತ್ರ ಬರೆದಿದ್ದು, ಆ ಪತ್ರ ಟಿವಿ9ಗೆ ಲಭ್ಯವಾಗಿದೆ. ಹಿಂದೂ ಪದದ ಬಗ್ಗೆ ನೀಡಿರುವ ಹೇಳಿಕೆ ಬಗ್ಗೆ ತಂಡ ರಚನೆ ಮಾಡಿ ತನಿಖೆ ಮಾಡುವಂತೆ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಯಾಗಬಾರದು ಎಂಬ ಸದುದ್ದೇಶದಿಂದ ಅಂದು ನಾನು ಹೇಳಿದ ಆ ಹೇಳಿಕೆಯನ್ನು ಹಿಂಪಡೆಯುತ್ತಿದ್ದೇನೆ. ಮತ್ತು ಈ ಹೇಳಿಕೆಯಿಂದ ಯಾರಿಗಾದರೂ ಮನಸ್ಸಿಗೆ ನೋವಾಗಿದ್ದಲ್ಲಿ ವಿಷಾದಿಸುತ್ತೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಜಾರಕಿಹೊಳಿ ಬರೆದ ಪತ್ರದಲ್ಲೇನಿದೆ?
ದಿ.06-11-2022 ರಂದು ನಿಪ್ಪಾಣಿಯಲ್ಲಿ ಜರುಗಿದ ಮಾನವ ಬಂಧುತ್ವ ವೇದಿಕೆ ಕರ್ನಾಟಕ ಇದರ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಈ ಕೆಳಕಂಡ ವಿಷಯಗಳನ್ನು ಪ್ರಸ್ತಾಪಿಸಿದ್ದೇನೆ.
ಹಿಂದೂ ಶಬ್ದ ಪರ್ಷಿಯನ್ ಭಾಷೆಯಿಂದ ಬಂದಿದೆ. ಇದು ಭಾರತ ದೇಶಕ್ಕೆ ಹೇಗೆ ಬಂತು? ಹಲವಾರು ಲೇಖನಗಳಲ್ಲಿ ಹಿಂದೂ ಎಂಬ ಪದದ ಅರ್ಥ ಕಟ್ಟದಾಗಿದೆ ಎಂದು ಬರೆದಿರುತ್ತಾರೆ ಅಂತಾ ಹೇಳಿರುತ್ತೇನೆ ಮತ್ತು ಇದು ಸಾರ್ವಜನಿಕವಾಗಿ ಚರ್ಚೆ ಆಗಬೇಕಾಗಿರುವುದು ಬಹಳ ಅವಶ್ಯಕತೆ ಇದೆ ಎಂದು ಸಹ ಹೇಳಿರುತ್ತೇನೆ.
ಇದನ್ನು ನಾನು ವೀಕಿಪಿಡಿಯಾ, ಪುಸ್ತಕಗಳು, ಶಬ್ದಕೋಶಗಳು ಮತ್ತು ಇತಿಹಾಸಕಾರರ ಬರಹಗಳ ಉಲ್ಲೇಖದ ಮೇಲೆ ಈ ನನ್ನ ಭಾಷಣ ಆಧಾರಿತವಾಗಿರುತ್ತದೆ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ನನ್ನನ್ನು ಹಿಂದೂ ವಿರೋಧಿ ಎಂದು ಬಿಂಬಿಸಲು ಹೊರಟಿರುತ್ತಾರೆ. ಜೊತೆಗೆ ನನಗೆ ತೇಜೋವಧೆ ಹಾಗೂ ಹಾನಿವುಂಟು ಮಾಡುವ ವ್ಯವಸ್ಥಿತ ಪಿತೂರಿ ನಡೆದಿರುತ್ತದೆ. ಮೇಲಿನ ಎಲ್ಲ ಅಂಶಗಳನ್ನು ಪರಿಶೀಲಿಸಲು ಮತ್ತು ನೈಜ ಸ್ಥಿತಿಯನ್ನು ವಿವರಿಸದೇ ಈ ಅವಾಂತರ ಸೃಷ್ಟಿಸಿದವರ ಮೇಲೆ ತನಿಖೆ ಮಾಡುವಂತೆ ವಿನಂತಿಸಿಕೊಳ್ಳುತ್ತೇನೆ.
ಮತ್ತೊಮ್ಮೆ ತಮ್ಮಲ್ಲಿ ಕೇಳಿಕೊಳ್ಳುವದೇನೆಂದರೆ, ಈ ಕುರಿತು ತಕ್ಷಣ ತನಿಖಾ ಸಮಿತಿ ರಚಿಸಬೇಕು ಎಂದು ವಿನಂತಿಸಿಕೊಳ್ಳುತ್ತೇನೆ. ಹಾಗೂ ನಿಪ್ಪಾಣಿಯಲ್ಲಿ ಜರುಗಿದ ಮಾನವ ಬಂಧುತ್ವ ವೇದಿಕೆಯ ಮನೆ ಮನೆಗೆ ಬುದ್ಧ, ಬಸವ, ಅಂಬೇಡ್ಕರ, ಕಾರ್ಯಕ್ರಮದಲ್ಲಿ ನಾನು ಮಾತನಾಡಿದ ಆ ಒಂದು ಮಾತು ವಿವಾದಕ್ಕಿಡಾಗಿದೆ. ಅಲ್ಲದೇ ಅದನ್ನು ತಿರುಚಿ ಅಪಪ್ರಚಾರ ಗೊಳಿಸುತ್ತಿರುವುದರಿಂದ. ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಯಾಗಬಾರದು ಎಂಬ ಸದುದ್ದೇಶದಿಂದ ಅಂದು ನಾನು ಹೇಳಿದ ಆ ಹೇಳಿಕೆಯನ್ನು ಹಿಂಪಡೆಯುತ್ತಿದ್ದೇನೆ ಮತ್ತು ಈ ಹೇಳಿಕೆಯಿಂದ ಯಾರಿಗಾದರೂ ಮನಸ್ಸಿಗೆ ನೋವಾಗಿದ್ದಲ್ಲಿ ವಿಷಾದಿಸುತ್ತೇನೆ ಎಂದು ಬರೆದಿದ್ದಾರೆ.
Published On - 6:02 pm, Wed, 9 November 22