ಕಾಂಗ್ರೆಸ್​​ ಸರಿಯಾಗಿ ಆರ್ಥಿಕ ನಿರ್ವಹಣೆ ಮಾಡಿಲ್ಲ, ಸುಪ್ರೀಂಕೋರ್ಟ್​ಗೆ ಹೋಗುವ ನಾಟಕ ಮಾಡ್ತಿದೆ: ಬೆಲ್ಲದ್

| Updated By: ಗಂಗಾಧರ​ ಬ. ಸಾಬೋಜಿ

Updated on: Mar 23, 2024 | 6:36 PM

ಬರ ಪರಿಹಾರ ಕೊಡಿಸುವಂತೆ ಸುಪ್ರೀಂಕೋರ್ಟ್​ಗೆ ಆರ್ಟಿಕಲ್ 32ರ ಅಡಿ ಕೇಂದ್ರದ ವಿರುದ್ಧ ರಿಟ್ ಅರ್ಜಿ ಸಲ್ಲಿಸಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಿದ್ದಂತೆ ರಾಜ್ಯ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ ಸರಿಯಾದ ರೀತಿಯಲ್ಲಿ ಹಣಕಾಸು ನಿರ್ವಹಿಸಿಲ್ಲ. ಸುಪ್ರೀಂಕೋರ್ಟ್​ಗೆ ಹೋಗುವ ನಾಟಕವಾಡುತ್ತಿದೆ ಎಂದು ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ್ ವಾಗ್ದಾಳಿ ಮಾಡಿದ್ದಾರೆ.

ಕಾಂಗ್ರೆಸ್​​ ಸರಿಯಾಗಿ ಆರ್ಥಿಕ ನಿರ್ವಹಣೆ ಮಾಡಿಲ್ಲ, ಸುಪ್ರೀಂಕೋರ್ಟ್​ಗೆ ಹೋಗುವ ನಾಟಕ ಮಾಡ್ತಿದೆ: ಬೆಲ್ಲದ್
ಅರವಿಂದ ಬೆಲ್ಲದ್
Follow us on

ಬೆಂಗಳೂರು, ಮಾರ್ಚ್​ 23: ರಾಜ್ಯ ಸರ್ಕಾರ ಸರಿಯಾದ ರೀತಿಯಲ್ಲಿ ಆರ್ಥಿಕ ನಿರ್ವಹಣೆ ಮಾಡಿಲ್ಲ. ಈಗ ಕೇಂದ್ರದ ವಿರುದ್ಧ ಸುಪ್ರೀಂಕೋರ್ಟ್​ ಮೆಟ್ಟಿಲೇರುವ ನಾಟಕ ಮಾಡುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಜನರ ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಿದೆ ಎಂದು ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ್ (Arvind Bellad) ವಾಗ್ದಾಳಿ ಮಾಡಿದ್ದಾರೆ. ವಿಧಾನಸಭೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ವಿದ್ಯುತ್ಮ ಅಬಕಾರಿ ನೋಂದಣಿ ಮತ್ತು ಮುದ್ರಾಂಕ ಶುಲ್ಕವನ್ನು ಹೆಚ್ಚಳ ಮಾಡಲಾಗಿದೆ. ಆದರೂ ಈ ವರ್ಷ 18 ಸಾವಿರ ಕೋಟಿ ರೂ. ಆದಾಯ ಸಂಗ್ರಹ ಆಗಿದ್ದೇಕೆ ಎಂದು ಪ್ರಶ್ನಿಸಿದ್ದಾರೆ.

ಬೋರ್​​ವೆಲ್ ಕೊರೆಸಲು ಇವರ ಬಳಿ ಹಣವಿಲ್ಲ. ಈಗ ನೀರಿಲ್ಲ ಹೀಗಾಗಿ ಈ ಎಲ್ಲಾ ನಾಟಕ ಮಾಡುತ್ತಿದ್ದಾರೆ. ವರ್ಗಾವಣೆ ದಂಧೆ ಬಿಟ್ಟು ಸರಿಯಾಗಿ ಆಡಳಿತ ಮಾಡಲಿ. ಈ ಎಲ್ಲಾ ನಾಟಕ ಬೇಡ ಎಂದು ಕಿಡಿಕಾರಿದ್ದಾರೆ.

ಕೇಂದ್ರದ ವಿರುದ್ಧ ಸುಪ್ರೀಂಕೋರ್ಟ್‌ಗೆ ಹೋಗಿದ್ದು ಒಂದು ಗಿಮಿಕ್ ಅಷ್ಟೇ: ಎಸ್‌.ಆರ್.ವಿಶ್ವನಾಥ್

ಈ ವಿಚಾರವಾಗಿ ಬೆಂಗಳೂರಿನಲ್ಲಿ ಟಿವಿ9ಗೆ ಬಿಜೆಪಿ ಶಾಸಕ ಎಸ್‌.ಆರ್.ವಿಶ್ವನಾಥ್​ ಪ್ರತಿಕ್ರಿಯಿಸಿದ್ದು, ಕೇಂದ್ರದ ವಿರುದ್ಧ ಸುಪ್ರೀಂಕೋರ್ಟ್‌ಗೆ ಹೋಗಿದ್ದು ಒಂದು ಗಿಮಿಕ್ ಅಷ್ಟೇ. 15ನೇ ಹಣಕಾಸು ಆಯೋಗ ಬಂದಾಗ ಸಿದ್ದರಾಮಯ್ಯ ಸರ್ಕಾರವೇ ಇತ್ತು. ಅಂದಿನ ಸರ್ಕಾರ ಸೂಕ್ತ ಮಾಹಿತಿ ನೀಡಿಲ್ಲ, ಹೀಗಾಗಿ ಪಾಲು ಕಡಿಮೆ ಆಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬರ ಪರಿಹಾರ ಬಿಡುಗಡೆ ಮಾಡದ ಕೇಂದ್ರ ಸರ್ಕಾರ ವಿರುದ್ಧ ಸುಪ್ರೀಂ ಕೋರ್ಟ್​​ನಲ್ಲಿ ರಿಟ್​ ಅರ್ಜಿ: ಸಿದ್ದರಾಮಯ್ಯ

ಈಗ ಲೋಕಸಭಾ ಚುನಾವಣೆ ಹಿನ್ನೆಲೆ ಹೊಸದಾಗಿ ಮಾತನಾಡುತ್ತಿದ್ದಾರೆ. ರಾಜ್ಯದ ಇತಿಹಾಸದಲ್ಲಿ ಹಿಂದೆಂದೂ ಈ ರೀತಿಯಾಗಿಲ್ಲ. ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ, ಈ ಬಗ್ಗೆ ಅರ್ಥ ಮಾಡಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.

ಸಿಎಂ ಸಿದ್ದರಾಮಯ್ಯ ಹೇಳಿದ್ದಿಷ್ಟು 

ಬರ ಪರಿಹಾರ ಕೊಡಿಸುವಂತೆ ಸುಪ್ರೀಂಕೋರ್ಟ್​ಗೆ ಆರ್ಟಿಕಲ್ 32ರ ಅಡಿ ಕೇಂದ್ರದ ವಿರುದ್ಧ ರಿಟ್ ಅರ್ಜಿ ಸಲ್ಲಿಸಿದ್ದೇವೆ ಎಂದು ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಸುಪ್ರೀಂಕೋರ್ಟ್​ಗೆ ರಜೆ ಇರುವ ಕಾರಣ ಅರ್ಜಿ ವಿಚಾರಣೆಗೆ ಬಂದಿಲ್ಲ. 1 ವಾರ ರಜೆ ಮುಗಿದ ಬಳಿಕ ಕೂಡಲೇ ವಿಚಾರಣೆಗೆ ತೆಗೆದುಕೊಳುತ್ತಾರೆ. ಕರ್ನಾಟಕ ಸರ್ಕಾರ 5 ತಿಂಗಳ ಕಾಲ ಕಾದಿದೆ. ಕೇಂದ್ರ ಸರ್ಕಾರದ ವಿರುದ್ಧ ಹೋರಾಟಕ್ಕೆ ನಾವು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.