Karnataka Assembly Poll 2023: ಕೂಡಲೇ ಚುನಾವಣೆ ದಿನಾಂಕ ಘೋಷಣೆ ಮಾಡುವಂತೆ ಆಯೋಗಕ್ಕೆ ಸಿದ್ದರಾಮಯ್ಯ ಮನವಿ

| Updated By: ವಿವೇಕ ಬಿರಾದಾರ

Updated on: Mar 05, 2023 | 11:22 AM

ಕೂಡಲೆ ರಾಜ್ಯ ವಿಧಾನಸಭೆ ಚುನಾವಣೆಯ ದಿನಾಂಕವನ್ನು ಘೋಷಿಸಬೇಕು ಮತ್ತು ನೀತಿ ಸಂಹಿತೆಯನ್ನು ಜಾರಿ ಮಾಡಬೇಕೆಂದು ಭಾರತದ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸುತ್ತೇವೆ ಎಂದು ವಿಪಕ್ಷನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

Karnataka Assembly Poll 2023: ಕೂಡಲೇ ಚುನಾವಣೆ ದಿನಾಂಕ ಘೋಷಣೆ ಮಾಡುವಂತೆ ಆಯೋಗಕ್ಕೆ ಸಿದ್ದರಾಮಯ್ಯ ಮನವಿ
ಸಿದ್ದರಾಮಯ್ಯ
Follow us on

ಬೆಳಗಾವಿ: ಕೂಡಲೆ ರಾಜ್ಯ ವಿಧಾನಸಭೆ ಚುನಾವಣೆಯ (Karnataka Assembly Election) ದಿನಾಂಕವನ್ನು ಘೋಷಿಸಬೇಕು ಮತ್ತು ನೀತಿ ಸಂಹಿತೆಯನ್ನು (Model Code of Conduct) ಜಾರಿ ಮಾಡಬೇಕೆಂದು  (Congress) ಭಾರತದ ಚುನಾವಣಾ ಆಯೋಗಕ್ಕೆ (Indian Election Commission) ಮನವಿ ಸಲ್ಲಿಸುತ್ತೇವೆ ಎಂದು ವಿಪಕ್ಷನಾಯಕ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. ರಾಜ್ಯ ಸರ್ಕಾರದ ಭ್ರಷ್ಟಾಚಾರ ಮತ್ತು ಕಾನೂನು ಉಲ್ಲಂಘನೆಯನ್ನು ತಡೆಯುವ ನಿಟ್ಟಿನಲ್ಲಿ ಚುನಾವಣಾ ಆಯೋಗವು ಶೀಘ್ರದಲ್ಲೇ ಚುನಾವಣೆ ದಿನಾಂಕ ಮತ್ತು ನೀತಿ ಸಂಹಿತೆ ಜಾರಿ ಮಾಡಬೇಕೆಂದು ಒತ್ತಾಯಿಸುತ್ತೇವೆ ಎಂದು ಹೇಳಿದರು.

ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಗಳನ್ನು, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್​ ಸಿಂಗ್​ರ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ರಾಜ್ಯ ಸರ್ಕಾರ ಜನರ ತೆರಿಗೆ ಹಣವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ. ಪ್ರಚಾರಕ್ಕಾಗಿ ಮಾಧ್ಯಮಗಳಿಗೆ ಕೋಟ್ಯಾಂತರ ರೂಪಾಯಿ ಹಣ ನೀಡುತ್ತಿದೆ. ಸಚಿವರು ಗುತ್ತಿಗೆದಾರರಿಂದ ಲಂಚ ಪಡೆದು, ವಿವಿಧ ಇಲಾಖೆಗಳಲ್ಲಿನ ಕಾಮಗಾರಿಗಳನ್ನು ನೀಡುತ್ತಿದ್ದಾರೆ. ಬಿಜೆಪಿಯ ಕೆಲವು ಅಭ್ಯರ್ಥಿಗಳು ಮತ್ತು ಟಿಕೆಟ್​ ಆಕಾಂಕ್ಷಿಗಳು ಜನರಿಗೆ ಹಣ ಮತ್ತು ಗಿಫ್ಟ್​ಗಳನ್ನು ನೀಡುತ್ತಿದ್ದಾರೆ. ಇದನ್ನು ತಡೆಗಟ್ಟಲು ಚುನಾವಣಾ ಆಯೋಗ ಕೂಡಲೆ ನೀತಿ ಸಂಹಿತೆ ಜಾರಿಗೆ ಮಾಡಬೇಕೆಂದು ಎಂದು ಒತ್ತಾಯಿಸಿದರು.

ಕಾಂಗ್ರೆಸ್​ ಅಧಿಕಾರಕ್ಕೆ ಬಂದ ನಂತರ ಇತ್ತೀಚಿಗೆ ನೀಡಲಾದ ಗುತ್ತಿಗೆಗಳನ್ನು ಮತ್ತು ಟೆಂಡರ್​ನ್ನು ರದ್ದುಗೊಳಿಸುತ್ತೇನೆ. ಮತ್ತು ಗುತ್ತಿಗೆದಾರರು ಲಂಚ ನೀಡಿ ಕಾಮಗಾರಿಯನ್ನು ಗುತ್ತಿಗೆಗೆ ಪಡೆದುಕೊಳ್ಳಬೇಡಿ ಎಂದು ನಾನು ಈಗಾಗಲೆ ಹೇಳಿದ್ದೇನೆ. ನಾವು ಅಧಿಕಾರಕ್ಕೆ ಬಂದ ತಕ್ಷಣ ಇವುಗಳನ್ನು ರದ್ದು ಮಾಡುತ್ತೇವೆ. ಇದರಿಂದ ಗುತ್ತಿಗೆದಾರರು ಹಣ ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಶಾಲಾ ಮಕ್ಕಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಪ್ರಧಾನಿ ನರೇಂದ್ರ ಮೋದಿಯವರ ರ್ಯಾಲಿಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕೆಂದು ಸರಕಾರ ಆದೇಶ ಹೊರಡಿಸಿದೆ. ಹಾಗೆ ರ್ಯಾಲಿಗೆ ಸೇರುವ ಜನರಿಗೆ ಹಣ ನೀಡಲಾಗುತ್ತಿದೆ. ಇತ್ತೀಚಿಗೆ ಒಂದು ವಿಡಿಯೋ ವೈರಲ್​ ಆಗಿತ್ತು. ಅದರಲ್ಲಿ, ರ್ಯಾಲಿ ಆಯೋಜಕರ ವಿರುದ್ಧ ಇಬ್ಬರು ವ್ಯಕ್ತಿಗಳು ಜಗಳವಾಡುತ್ತಿದ್ದು, ರ್ಯಾಲಿಯಲ್ಲಿ ಪಾಲ್ಗೊಳ್ಳುವವರಿಗೆ 1000 ರೂ. ನೀಡುವುದಾಘಿ ಭರವಸೆ ನೀಡಿದ್ದು, ಕೊನೆಗೆ 500 ರೂ. ನೀಡಿರುವ ವಿಡಿಯೋ ನೋಡಿದ್ದೇನೆ. ಈ ಬಗ್ಗೆ ನಾನು ಹೇಳಿದ್ದು, ಆದರೆ ಬಿಜೆಪಿಯವರು ನನ್ನ ಹೇಳಿಕೆಯನ್ನು ತಿರುಚುವ ಮೂಲಕ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪ ಮಾಡಿದರು.

ಕಾಂಗ್ರೆಸ್ ಮಾಡಿದ ಕೆಲಸಗಳ ಶ್ರೇಯಸ್ಸು ಬಿಜೆಪಿ ಪಡೆದುಕೊಳ್ಳುತ್ತಿದೆ. “ಉದಾಹರಣೆಗೆ, ಕಾಂಗ್ರೆಸ್ ಸರ್ಕಾರವು ತಾಂಡಾಗಳು ಮತ್ತು ಕುಗ್ರಾಮಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಲು ಕಾನೂನನ್ನು ಜಾರಿಗೊಳಿಸಿತ್ತು. ನರಸಿಂಹಯ್ಯ ಸಮಿತಿ ರಚಿಸಿ ಅಂದಿನ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಕಾನೂನನ್ನು ಜಾರಿಗೆ ತಂದಿದ್ದrಉ. ಈ ತಾಂಡಾಗಳು ಮತ್ತು ಕುಗ್ರಾಮಗಳ ನಿವಾಸಿಗಳಿಗೆ ನಾವು ಭೂಮಿಯ ಹಕ್ಕನ್ನು ನೀಡಿದ್ದೇವೆ. ದೇವರಾಜ್ ಅರಸ್ ಅವರು ಉಳುವವರಿಗೆ ಕೃಷಿ ಭೂಮಿಯ ಮಾಲೀಕತ್ವದ ಹಕ್ಕು ನೀಡಿದಂತೆ, ನಾವು ನಿವಾಸಿಗಳಿಗೆ ಹಕ್ಕುಗಳನ್ನು ನೀಡಿದ್ದೇವೆ. ಆದರೆ ಬಿಜೆಪಿಯವರು ನಾವು ಮಾಡಿದ್ದೇವೆ ಎಂದು ಶ್ರೇಯಸ್ಸು ತೆಗೆದುಕೊಳ್ಳುತ್ತಿದ್ದಾರೆ, ಎಂದು ವಾಗ್ದಾಳಿ ಮಾಡಿದರು.

ಕಾಂಗ್ರೆಸ್ ಸರ್ಕಾರ ಐದು ವರ್ಷದಲ್ಲಿ 14. 54 ಲಕ್ಷ ಮನೆಗಳನ್ನು ನಿರ್ಮಿಸಿದರೆ, ಬಿಜೆಪಿ ಒಂದೇ ಒಂದು ಹೊಸ ಮನೆಯನ್ನು ಮಂಜೂರು ಮಾಡಿಲ್ಲ. ಕಳೆದ ನಾಲ್ಕು ವರ್ಷಗಳಲ್ಲಿ ಮನೆ ಮಂಜೂರಾತಿ ಮಾಡಿದ ಆದೇಶದ ಪ್ರತಿಗಳನ್ನು ಬಹಿರಂಗಪಡಿಸಿ ಎಂದು ಕೇಳಿದ್ದೇವೆ ಆದರೆ ಅವರು ನೀಡಿಲ್ಲ. ನಾವು ಪ್ರಣಾಳಿಕೆಯಲ್ಲಿ ನೀಡಿದ್ದ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇವೆ. ಆದರೆ ಬಿಜೆಪಿಯವರು ತಮ್ಮ ಪ್ರಣಾಳಿಕೆಯಲ್ಲಿ ನೀಡಿದ್ದ 600 ಭರವಸೆಗಳಲ್ಲಿ ಶೇ 10% ಅನ್ನು ಸಹ ಈಡೇರಿಸಿಲ್ಲ. ನಮ್ಮ ಪ್ರಣಾಳಿಕೆಗಳನ್ನು ಯಾರು ಬೇಕಾದರೂ ಪರಿಶೀಲಿಸಬಹುದು ಎಂದು ತಿಳಿಸಿದ್ದಾರೆ.

ಬಿಜೆಪಿ ಸಚಿವರು, ಪಾಲಿಕೆ ಅಧ್ಯಕ್ಷರು, ಶಾಸಕರ ಭ್ರಷ್ಟಚಾರದ ವಿರುದ್ಧ ಕಾಂಗ್ರೆಸ್ ಹೋರಾಟ ನಡೆಸಲಿದೆ ಎಂದರು. ಶಾಸಕ ಹಾಗೂ ಕೆಎಸ್‌ಡಿಎಲ್‌ ಅಧ್ಯಕ್ಷ ಮಾಡಾಳ್‌ ವಿರೂಪಾಕ್ಷಪ್ಪ ಅವರ ಪುತ್ರ ಸರ್ಕಾರಿ ನೌಕರ ಪ್ರಶಾಂತ್‌ ಮಾಡಾಳ್‌ ಲಂಚ ಸ್ವೀಕರಿಸುವಾಗ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿರುವುದರಿಂದ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತಿದ್ದೇವೆ. ಅವರ ಮನೆಯಿಂದ ಕೋಟ್ಯಂತರ ರೂ. ಹಣ ಸಿಕ್ಕಿದೆ ಎಂದು ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:51 am, Sun, 5 March 23