ಬೆಂಗಳೂರು, ಅ.17: ಸಿದ್ದರಾಮಯ್ಯ ಸರ್ಕಾರದಲ್ಲೂ ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಹೇಳಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಭೇಟಿ ಬಳಿಕ ಮಾತನಾಡಿದ ಅವರು, ಭ್ರಷ್ಟಾಚಾರದ ಬಗ್ಗೆ ಡಿಕೆ ಶಿವಕುಮಾರ್ ಗಮನಕ್ಕೆ ತಂದಿದ್ದೇನೆ. ಕಾಂಗ್ರೆಸ್ ಸರ್ಕಾರದಲ್ಲಿ ಪ್ರಮುಖ ಕೆಲಸ ಯಾವುದು ಕೂಡ ಆಗಿಲ್ಲ. ಕಾಂಗ್ರೆಸ್ ಸರ್ಕಾರದಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದು ಐದೂವರೆ ತಿಂಗಳು ಮಾತ್ರ ಆಗಿದೆ. ಕಾಮಗಾರಿ ಬಿಲ್ ಪೇಮೆಂಟ್ನಲ್ಲಿ ಅವ್ಯವಹಾರ ನಡೆಯುತ್ತಿದೆ. ಈ ಬಗ್ಗೆ ಡಿಕೆ ಶಿವಕುಮಾರ್ ಗಮನಕ್ಕೆ ತಂದಿದ್ದು ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಭ್ರಷ್ಟಾಚಾರ ಇಲ್ಲ ಅಂತ ಹೇಳಿದರೆ ನನ್ನಂತ ಮೂರ್ಖ ಇನ್ನೊಬ್ಬರಿಲ್ಲ. ಹಿಂದೆಯೂ ಇತ್ತು, ಈಗಲೂ ಇದೆ. ಅದನ್ನು ತಡೆಗಟ್ಟಬೇಕು. ಈ ಸರ್ಕಾರದಲ್ಲಿ ಭ್ರಷ್ಟಾಚಾರ ಇದೆ. ಆದರೆ ಆ ಹಂತದಲ್ಲಿ ಕಂಡುಬರುತ್ತಿಲ್ಲ. ಈಗ ಯಾವುದೇ ಪ್ರಮುಖ ಕೆಲಸ ಮಾಡಿಲ್ಲ, ಹಾಗಾಗಿ ಆರೋಪ ಮಾಡಲ್ಲ. ಪ್ರಮುಖ ಕಾಮಗಾರಿ ನಡೆದರೆ ಆಗ ಭ್ರಷ್ಟಾಚಾರದ ಬಗ್ಗೆ ಗೊತ್ತಾಗಲಿದೆ ಎಂದರು.
ಅಂಬಿಕಾಪತಿ ಮೇಲಿನ ಆರೋಪ ಸುಳ್ಳು ಎಂದು ಹೇಳುವ ಮೂಲಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ (Kempanna) ಅವರು ಅಂಬಿಕಾಪತಿ ಅವರಿಗೆ ಬಿ ರಿಪೋರ್ಟ್ ನೀಡಿದ್ದಾರೆ. ಸದಾನಂದ ಗೌಡರ (D.V. Sadananda Gowda) ಆರೋಪ ವಿಚಾರವಾಗಿ ಮಾತನಾಡಿದ ಅವರು, ನಾನು ಅಂಬಿಕಾಪತಿ 45ವರ್ಷದಿಂದ ಸ್ನೇಹಿತರು. ಅಂಬಿಕಾಪತಿ ಮೇಲಿನ ಆರೋಪ ಸುಳ್ಳು ಎಂದಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆಯಿಂದ ನಾನು ನೇರವಾಗಿ ನಮ್ಮ ಮನೆಗೆ ಹೋಗಿದ್ದೇನೆ. ಅಂಬಿಕಾಪತಿ ಮನೆಯೆ ಹೋಗಿಲ್ಲ. ಆರೋಪ ಸಾಬೀತೂ ಮಾಡಿದರೆ ಅವರ ಕಾಲಡಿ ಇರುತ್ತೇನೆ ಎಂದರು. ಅಲ್ಲದೆ, ನಾನು ಅಂಬಿಕಾಪತಿ ಪರ ನಿಲ್ಲುತ್ತೇನೆ. ಅಂಬಿಕಾಪತಿ ತಪ್ಪು ಮಾಡಿದ್ದರೆ ಶಿಕ್ಷೆ ಆಗಲಿ. ಬಿಜೆಪಿಯ ಸರ್ಕಾರವೇ ಇದೆ, ಸಿಬಿಐ ಇಡಿ ಅವರ ಬಳಿಯೇ ಇದೆ. ತನಿಖೆ ಮಾಡಿಸಲಿ ಎಂದರು.
ನಾವು ಮಾಡಿದ 40 ಪರ್ಸೆಂಟ್ ಆರೋಪಕ್ಕೆ ಸಂಬಂಧಿಸಿದ ಸಾಕ್ಷಿಯನ್ನ ನಾಗಮೋಹನ್ ದಾಸ್ ಸಮಿತಿಗೆ ಕೊಡುತ್ತೇವೆ ಎಂದು ಹೇಳಿದ ಕೆಂಪಣ್ಣ, ಬಿಬಿಎಂಪಿಯ ಬಾಕಿ ಬಿಲ್ ವಿಚಾರ ಮಾತ್ರ ಇಂದು ಮಾತನಾಡಿದ್ದೇವೆ. 75 ಪರ್ಸೆಂಟ್ ಬಾಕಿ ಬಿಲ್ ಬಿಡಿಗಡೆ ಮಾಡಲು ಹೇಳಿದ್ದೇವೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.
ಇದನ್ನೂ ಓದಿ: ಗುತ್ತಿಗೆದಾರರ 20 ಸಾವಿರ ಕೋಟಿ ರೂ. ಬಾಕಿ, 30 ದಿನದಲ್ಲಿ ಬಗೆಹರಿಸದಿದ್ದರೆ ರಾಜ್ಯಾದ್ಯಂತ ಧರಣಿ: ಕೆಂಪಣ್ಣ ಎಚ್ಚರಿಕೆ
ಕಮೀಷನ್ ವಿಚಾರ ತನಿಖೆ ಮಾಡಿ ಎಂದಿದ್ದೇವೆ. 80 ಪರ್ಸೆಂಟ್ಗಿಂತ ಹೆಚ್ಚು ಸಿನಿಯಾರಿಟಿ ಮೇಲೆ ಪೇಮೆಂಟ್ ಮಾಡುವ ಭರವಸೆ ಕೊಟ್ಟಿದ್ದಾರೆ. ಅಧಿಕಾರಿಗಳ ಮೇಲಿನ ಕಮಿಷನ್ ಆರೋಪದ ವಿಚಾರವಾಗಿ ಇವತ್ತಿಗೂ ನಾನು ಆ ಮಾತಿನ ಮೇಲೆ ನಿಂತಿದ್ದೇನೆ. ನಾನು ಭ್ರಷ್ಟಾಚಾರ ಇಲ್ಲ ಎಂದರೆ ನನ್ನಂತ ಮೂರ್ಕ ಯಾರು ಇಲ್ಲ. ಭ್ರಷ್ಟಾಚಾರ ಇದೆ ಆದರೆ ಆ ಹಂತದಲ್ಲಿ ಕಂಡುಬರುತ್ತಿಲ್ಲ. ದೊಡ್ಡ ಪ್ರಮಾಣದ ಕೆಲಸ ಗುತ್ತಿಗೆ ಪಡೆದಿಲ್ಲ. ಹೀಗಾಗಿ ಭ್ರಷ್ಟಾಚಾರ ಬೆಳಕಿಗೆ ಬರುತ್ತಿಲ್ಲ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:28 pm, Tue, 17 October 23