ಸರ್ಕಾರದ ಕುತ್ತಿಗೆಗೆ ಗುತ್ತಿಗೆ ಕುಣಿಕೆ! ಬೊಮ್ಮಾಯಿ, ಅಶೋಕ್ ಜತೆ ಗುತ್ತಿಗೆದಾರರ ಸಮಾಲೋಚನೆ, ಪಟ್ಟು ಬಿಡದ ಡಿಕೆ ಶಿವಕುಮಾರ್

|

Updated on: Aug 10, 2023 | 10:48 PM

ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಸುದ್ದಿಗೋಷ್ಠಿ ಕರೆದು ಬಾಕಿ ಬಿಲ್‌ಗಳ ಕುರಿತು ಮಾತನಾಡುವ ಸಾಧ್ಯತೆ ಇದೆ. ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಇದೇ ಕೆಂಪಣ್ಣ 40% ಕಮಿಷನ್ ಆರೋಪ ಮಾಡಿದ್ದರು. ಹೀಗಾಗಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಇಷ್ಟೊಂದು ಆರೋಪಗಳು ಕೇಳಿಬರುತ್ತಿದ್ದರೂ ಈ ಬಗ್ಗೆ ಕೆಂಪಣ್ಣ ಮೌನ ವಹಿಸಿದ್ದಕ್ಕೆ ಹಲವು ಬಿಜೆಪಿ ಮುಖಂಡರು ಅವರನ್ನು ಪ್ರಶ್ನಿಸಿದ್ದಾರೆ.

ಸರ್ಕಾರದ ಕುತ್ತಿಗೆಗೆ ಗುತ್ತಿಗೆ ಕುಣಿಕೆ! ಬೊಮ್ಮಾಯಿ, ಅಶೋಕ್ ಜತೆ ಗುತ್ತಿಗೆದಾರರ ಸಮಾಲೋಚನೆ, ಪಟ್ಟು ಬಿಡದ ಡಿಕೆ ಶಿವಕುಮಾರ್
ಕೆಂಪಣ್ಣ
Follow us on

ಬೆಂಗಳೂರು, ಆಗಸ್ಟ್ 10: ಬಿಜೆಪಿ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್​​ಗೆ ಸರ್ಕಾರ ರಚನೆಯಾದ ಕೆಲವೇ ತಿಂಗಳಲ್ಲಿ ಅದೇ ಗುತ್ತಿಗೆದಾರರಿಂದ ಸವಾಲು ಎದುರಾಗಿದೆ. ಬಿಬಿಎಂಪಿ ಗುತ್ತಿಗೆದಾರ (BBMP Contractors) ಬಾಕಿ ಹಣ ಬಿಡುಗಡೆ ವಿಚಾರ ತೀವ್ರ ಸ್ವರೂಪದ ರಾಜಕೀಯ ಕೋಲಾಹಲಕ್ಕೆ (Political Outrage) ಕಾರಣವಾಗಿದೆ. ರಾಜ್ಯ ರಾಜಕಾರಣದಲ್ಲಿ ಗುರುವಾರ ಇಡೀ ದಿನ ಗುತ್ತಿಗೆದಾರರ ಸದ್ದು ಮಾರ್ದನಿಸಿದ್ದು, ಹಲವಾರು ಬೆಳವಣಿಗೆಗಳಿಗೆ ಸಾಕ್ಷಿಯಾಗಿದೆ. ಈ ಮಧ್ಯೆ, ಕಾಂಗ್ರೆಸ್ ಸರ್ಕಾರದ ವಿರುದ್ಧ ಇದನ್ನೇ ಪ್ರಮುಖ ಅಸ್ತ್ರವನ್ನಾಗಿ ಮಾಡಿಕೊಂಡಿರುವ ಬಿಜೆಪಿ, ಕಮಿಷನ್ ಆರೋಪ ಮಾಡಿದೆ.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಎಸ್​ ಯಡಿಯೂರಪ್ಪ ಅವರನ್ನು ಬಿಬಿಎಂಪಿ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಭೇಟಿ ಮಾಡಿದ್ದು, ಬಾಕಿ ಬಿಲ್ ಬಿಡುಗಡೆ ಮನವಿಯ ಬಗ್ಗೆ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಮನವಿ ಮಾಡಿದ್ದಾರೆ. ಇಷ್ಟೇ ಅಲ್ಲದೆ, ಬಿಬಿಎಂಪಿ ಗುತ್ತಿಗೆದಾರರು ಬಿಜೆಪಿಯ ಮತ್ತೊಬ್ಬ ನಾಯಕ ಆರ್ ಅಶೋಕ ಹಾಗೂ ಮಾಜಿ ಸಚಿವ ಅಶ್ವತ್ಥನಾರಾಯಣ ಅವರನ್ನೂ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ್ದ ಆರ್ ಅಶೋಕ, ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರಶ್ನೆಗಳ ಮಳೆಯನ್ನೇಗರೆದಿದ್ದಾರೆ.

ರಾಹುಲ್ ಗಾಂಧಿಗೆ ದೂರು ನೀಡಿದ್ದಾರೆಯೇ ಬಿಬಿಎಂಪಿ ಗುತ್ತಿಗೆದಾರರ ಸಂಘದವರು?

ಕಾಂಗ್ರೆಸ್ ಸರ್ಕಾರದಲ್ಲಿ 65% ಕಮಿಷನ್ ಕೇಳಲಾಗುತ್ತಿದೆ ಎಂದು ಬಿಬಿಎಂಪಿ ಗುತ್ತಿಗೆದಾರರ ಸಂಘದವರು ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿಗೆ ದೂರು ನೀಡಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆದರೆ, ಗುತ್ತಿಗೆದಾರರ ಸಂಘದವರು ಅಧಿಕೃತ ಹೇಳಿಕೆ ನೀಡಿಲ್ಲ. ಈ ವಿಚಾರವಗಿ ಕಾಂಗ್ರೆಸ್ ಹೈಕಮಾಂಡ್ ಬುಡಕ್ಕೇ ಕೈಹಾಕಿರುವ ಬೊಮ್ಮಾಯಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಧ್ಯ ಪ್ರವೇಶಿಸಬೇಕು. ರಾಹುಲ್ ಗಾಂಧಿ ಭ್ರಷ್ಟಾಚಾರ ಸಹಿಸದೇ‌ ಇರುವವರಾದರೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಕರ್ನಾಟಕ ಸರ್ಕಾರವು ಕಾಂಗ್ರೆಸ್​​​ನ ಎಟಿಎಂ ಎಂಬುದು ಸಾಬೀತಾದಂತೆ ಎಂದು ಹೇಳಿದ್ದಾರೆ.

ಪಟ್ಟು ಬಿಡದ ಡಿಕೆ ಶಿವಕುಮಾರ್

ಈ ಮಧ್ಯೆ ಗುತ್ತಿಗೆದಾರರ ಬಾಕಿ ಹಣ ಬಿಡುಗಡೆ ಮಾಡದೇ ಇರುವುದು ಹಾಗೂ ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಅದನ್ನೇ ಪ್ರಮುಖ ದಾಳವನ್ನಾಗಿಸಿಕೊಂಡಿರುವ ವಿಚಾರ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿಯೂ ಚರ್ಚೆಯಾಗಿದೆ. ಕಾಮಗಾರಿ ಪೂರ್ಣಗೊಳಿಸಿದ ಗುತ್ತಿಗೆದಾರರಿಗೆ ಕೂಡಲೇ ಹಣ ಬಿಡುಗಡೆ ಮಾಡಬೇಕು. ಬಿಜೆಪಿ ನಾಯಕರು ಈ ವಿಚಾರವನ್ನೇ ದೊಡ್ಡದು ಮಾಡುತ್ತಿದ್ದಾರೆ. ಇದರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಕೆಲವು ಸಚಿವರು ಸಂಪುಟ ಸಭೆಯಲ್ಲಿ ಸಲಹೆ ನೀಡಿದ್ದಾರೆ. ಆದರೆ, ತಕ್ಷಣ ಮಧ್ಯ ಪ್ರವೇಶ ಮಾಡಿದ ಡಿಕೆ ಶಿವಕುಮಾರ್, ಅನೇಕ ಕಡೆ ಕಾಮಗಾರಿಗಳೇ ಅಗಿಲ್ಲ. ಇಂಥ ಪರಿಸ್ಥಿತಿಯಲ್ಲಿ ಬಾಕಿ ಹಣ ಬಿಡುಗಡೆ ಮಾಡುವುದು ಹೇಗೆ? ಕಾಮಗಾರಿ ಆಗಿರುವ ಬಗ್ಗೆ ಸಮಿತಿ ರಚನೆ ಮಾಡಲಾಗಿದೆ. ಆ ಸಮಿತಿ ವರದಿ ಸಲ್ಲಿಸಿದ ನಂತರ ಬಾಕಿ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಬಿಬಿಎಂಪಿ ಮುಖ್ಯ ಆಯುಕ್ತರ ಬಳಿ ಮಾಹಿತಿ ಪಡೆದ ರಾಜ್ಯಪಾಲ

ಈ ಮಧ್ಯೆ, ಗುತ್ತಿಗೆದಾರರಿಗೆ ಬಾಕಿ ಪಾವತಿ ವಿಳಂಬ ವಿಚಾರವಾಗಿ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರಿಂದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮಾಹಿತಿ ಪಡೆದಿದ್ದಾರೆ. ಗಿರಿನಾಥ್ ಅವರನ್ನು ತಮ್ಮ ನಿವಾಸಕ್ಕೆ ಗುರುವಾರ ರಾತ್ರಿ ಕರೆಸಿಕೊಂಡ ರಾಜ್ಯಪಾಲರು, ಬಾಕಿ ಇರುವ ಬಿಲ್​ಗಳ ಮಾಹಿತಿ ಪಡೆದಿದ್ದಾರೆ. ಸರ್ಕಾರದ ವ್ಯಾಪ್ತಿಯಲ್ಲಿ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆದಿರುವ ಸಂಪೂರ್ಣ ಕಾಮಗಾರಿಗಳ ಬಗ್ಗೆ ಬಿಬಿಎಂಪಿ ಆಯುಕ್ತರು ರಾಜ್ಯಪಾಲರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಸರ್ಕಾರಿ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ 5000 ಸಾವಿರ ಕೋಟಿ ಬಿಲ್​ ಬಾಕಿ ಇದ್ದು, ಸದ್ಯ 670 ಕೋಟಿ ಬಿಬಿಎಂಪಿ ಖಾತೆಗೆ ಸರ್ಕಾರ ವರ್ಗಾವಣೆ ಮಾಡಿದೆ.

ಅಖಾಡಕ್ಕಿಳಿಯುತ್ತಾರಾ ಕೆಂಪಣ್ಣ?

ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಶುಕ್ರವಾರ ಸುದ್ದಿಗೋಷ್ಠಿ ಕರೆದು ಬಾಕಿ ಬಿಲ್‌ಗಳ ಕುರಿತು ಮಾತನಾಡುವ ಸಾಧ್ಯತೆ ಇದೆ. ಕಳೆದ ಎರಡು ದಿನಗಳಿಂದ ಬಿಬಿಎಂಪಿ ಗುತ್ತಿಗೆದಾರರ ಸಂಘವು ಪಕ್ಷಾತೀತವಾಗಿ ಹಲವು ಮುಖಂಡರನ್ನು ಭೇಟಿ ಮಾಡಿ ತಮ್ಮ ಬಾಕಿ ಬಿಲ್‌ಗಳನ್ನು ತೆರವುಗೊಳಿಸಲು ಮಧ್ಯಪ್ರವೇಶಿಸುವಂತೆ ಒತ್ತಾಯಿಸಿದೆ. ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ, ಬೆಂಗಳೂರು ಅಭಿವೃದ್ಧಿ ಸಚಿವ ಶಿವಕುಮಾರ್ ಅವರ ಪರವಾಗಿ ಕೆಲವರಿಂದ 10-15 ಪರ್ಸೆಂಟ್ ಕಮಿಷನ್ ಕೇಳಲಾಗಿದೆ ಎಂದು ಆರೋಪಿಸಿದ್ದರು.

ಇದನ್ನೂ ಓದಿ: ಬಿಬಿಎಂಪಿ ಗುತ್ತಿಗೆದಾರರಿಂದ ದೂರು: ರಾಜ್ಯಪಾಲರನ್ನು ಭೇಟಿಯಾದ ಬಿಬಿಎಂಪಿ ಮುಖ್ಯ ಆಯುಕ್ತ

ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಇದೇ ಕೆಂಪಣ್ಣ 40% ಕಮಿಷನ್ ಆರೋಪ ಮಾಡಿದ್ದರು ಎಂಬುದು ಗಮನಾರ್ಹ. ಹೀಗಾಗಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಇಷ್ಟೊಂದು ಆರೋಪಗಳು ಕೇಳಿಬರುತ್ತಿದ್ದರೂ ಈ ಬಗ್ಗೆ ಕೆಂಪಣ್ಣ ಮೌನ ವಹಿಸಿದ್ದಕ್ಕೆ ಹಲವು ಬಿಜೆಪಿ ಮುಖಂಡರು ಅವರನ್ನು ಪ್ರಶ್ನಿಸಿದ್ದರು.

ಜೆಡಿಎಸ್​ ನಾಯಕ ಹೆಚ್​ಡಿ ಕುಮಾರಸ್ವಾಮಿ ಸಹ ಕೆಂಪಣ್ಣ ಅವರ ನಡೆಯ ಬಗ್ಗೆ ಬುಧವಾರ ಟ್ವೀಟ್ ಮಾಡಿದ್ದರು. ಬಿಜೆಪಿ ಸರ್ಕಾರದ ವಿರುದ್ಧ ಆರೋಪ ಮಾಡಿದ್ದ ಕೆಂಪಣ್ಣ ಸ್ಥಿತಿ ಈಗ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ ಎಂದು ಹೇಳಿದ್ದರು.

ಡಿಕೆ ಶಿವಕುಮಾರ್ ಹೇಳಿದ್ದೇನು?

ಗುತ್ತಿಗೆದಾರರ ಮೇಲೆ ಪ್ರಭಾವ ಬೀರುವ ವ್ಯಕ್ತಿಗಳ ಬಗ್ಗೆ ನನಗೆ ತಿಳಿದಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಬಿಬಿಎಂಪಿಯಲ್ಲಿ ನಡೆದಿರುವ ಭ್ರಷ್ಟಾಚಾರ ಆರೋಪಗಳ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಕೆಂಪಣ್ಣ ಆರೋಪ ಮಾಡಿದ್ದು, ನ್ಯಾಯ ಸಿಗಬೇಕು. ಈ ಜನರನ್ನು ದೆಹಲಿಗೆ ಹೇಳಿಕೆ ನೀಡಲು ಯಾರು ಆಹ್ವಾನಿಸುತ್ತಿದ್ದಾರೆಂದು ನನಗೆ ತಿಳಿದಿದೆ. ಈ ಗುತ್ತಿಗೆದಾರರನ್ನು ಮಾಧ್ಯಮದವರ ಮುಂದೆ ಕಳುಹಿಸುತ್ತಿರುವವರು ಯಾರು ಎಂಬುದು ನನಗೂ ಗೊತ್ತು. ನಾವು ತನಿಖೆಗೆ ಆದೇಶಿಸಿದ್ದೇವೆ, ಅವರು ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದರೆ ಅವರಿಗೆ ನ್ಯಾಯ ಸಿಗುತ್ತದೆ ಎಂದು ಶಿವಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದಲ್ಲಿ 65% ಕಮಿಷನ್, ಗುತ್ತಿಗೆದಾರರಿಂದ ರಾಹುಲ್ ಗಾಂಧಿಗೆ ಮಾಹಿತಿ; ಬಸವರಾಜ ಬೊಮ್ಮಾಯಿ ಆರೋಪ

ಈ ಮಧ್ಯೆ, ತನಿಖಾ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿದ ನಂತರ ಹಣ ಬಿಡುಗಡೆ ಮಾಡಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಈ ವಾರದ ಆರಂಭದಲ್ಲಿ ಬಿಜೆಪಿ ಆಡಳಿತದಲ್ಲಿ ಬಿಬಿಎಂಪಿ ಕಾಮಗಾರಿಗಳಲ್ಲಿನ ಭ್ರಷ್ಟಾಚಾರ ಆರೋಪಗಳ ತನಿಖೆಗಾಗಿ ಸರ್ಕಾರ ನಾಲ್ಕು ಸಮಿತಿಗಳನ್ನು ರಚಿಸಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:41 pm, Thu, 10 August 23