ಭುವನೇಶ್ವರದ ಉತ್ಕಲ್ ವಿಶ್ವವಿದ್ಯಾಲಯ ಹಾಗೂ ಮಹಾರಾಷ್ಟ್ರದ ಪುಣೆಯ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಟ್ರಾಪಿಕಲ್ ಮಿಟಿಯೊರಾಲಜಿಯು ನಡೆಸಿದ್ದ ಸಂಶೋಧನೆಯು ಎಲ್ಲರ ಗಮನ ಸೆಳೆದಿದೆ. ಈ ಅಧ್ಯಯನವು ಧೂಳು ಹಾಗೂ ವಾಯುಮಾಲಿನ್ಯವು ಕೊರೊನಾ ಸೋಂಕು ಹೆಚ್ಚಲು ಕಾರಣವಾಗುತ್ತದೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಿದೆ. ಧೂಳಿನ ಪಿಎಂ ಲೆವೆಲ್ 2.5ಕ್ಕಿಂತ ಹೆಚ್ಚಾಗಿದ್ದರೆ ಕೊರೊನಾ ಸೋಂಕು ಕೂಡಾ ಹೆಚ್ಚುತ್ತದೆ. ಇದರಿಂದಾಗಿ ಸೋಂಕಿತರಲ್ಲಿ ಗಂಭೀರ ಪ್ರಮಾಣದ ಸಮಸ್ಯೆಗಳೂ ಹುಟ್ಟಿಕೊಳ್ಳುತ್ತದೆ ಎಂಬುದನ್ನು ಅಧ್ಯಯನ ತಿಳಿಸಿದೆ. ಈ ವರದಿಯನ್ನು ವಾಯು ಗುಣಮಟ್ಟ ಮತ್ತು ಸಂಶೋಧನಾ ವ್ಯವಸ್ಥೆ (ಎಸ್ಎಎಫ್ಎಆರ್) ಬಿಡುಗಡೆ ಮಾಡಿದೆ.
ಅಧ್ಯಯನ ನಡೆಸಿದ್ದು ಹೇಗೆ?
ಕಳೆದ ವರ್ಷ ನವೆಂಬರ್‌ನಿಂದ ಅಧ್ಯಯನ ನಡೆಸಿ ವರದಿಯನ್ನು ಸಿದ್ಧಪಡಿಸಲಾಗಿದೆ. ದೇಶದ 900ಕ್ಕೂ ಹೆಚ್ಚು ಪ್ರದೇಶಗಳನ್ನು ಅಧ್ಯಯನಕ್ಕಾಗಿ ಆಯ್ದುಕೊಳ್ಳಲಾಗಿತ್ತು. ಈ ಪಟ್ಟಿಯಲ್ಲಿ ದೆಹಲಿ, ತಮಿಳುನಾಡು, ಕರ್ನಾಟಕ, ರಾಜಸ್ಥಾನ, ಗುಜರಾತ್, ಒಡಿಶಾ, ಮಧ್ಯಪ್ರದೇಶ ಸೇರಿ ವಿವಿಧ ಸ್ಥಳಗಳನ್ನು ಆಯ್ದುಕೊಳ್ಳಲಾಗಿತ್ತು.
ಸಂಶೋಧನೆ ತಿಳಿಸಿದ್ದೇನು?
ಕೊರೊನಾ ಸೋಂಕು ಹೆಚ್ಚಿರುವ ಪ್ರದೇಶಗಳಲ್ಲಿ ಪಿಎಂ ಲೆವೆಲ್ 2.5 ಅಥವಾ ಅದಕ್ಕಿಂತ ಹೆಚ್ಚಿರುವುದನ್ನು ಅಧ್ಯಯನವು ಬಹಿರಂಗಪಡಿಸಿದೆ. ಧೂಳು ಹಾಗೂ ವಾಯುಮಾಲಿನ್ಯ ಅಧಿಕವಿರುವ ಪ್ರದೇಶಗಳಲ್ಲಿ ಪಿಎಂ ಲೆವೆಲ್ ಅಧಿಕವಿರುತ್ತದೆ. ಇದು ಶ್ವಾಸಕೋಶ ಸಂಬಂಧಿತ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅದರಿಂದಾಗಿಯೇ ಈ ಪ್ರದೇಶಗಳಲ್ಲಿ ಸೋಂಕು ಹರಡುವ ಪ್ರಮಾಣ ಹಾಗೂ ಅದರಿಂದಾಗುವ ಪರಿಣಾಮ ಹೆಚ್ಚಿರುತ್ತದೆ ಎಂದು ಅಧ್ಯಯನ ಬಹಿರಂಗಪಡಿಸಿದೆ.
ಬೆಂಗಳೂರಿಗೇಕೆ ಆತಂಕ?
ಬೆಂಗಳೂರಿನಲ್ಲಿ ಕಾಮಗಾರಿ ಹಾಗೂ ವಾಹನ ದಟ್ಟಣೆಯಿಂದಾಗಿ ಧೂಳು ಹಾಗೂ ವಾಯುಮಾಲಿನ್ಯದ ಪ್ರಮಾಣ ಹೆಚ್ಚಾಗುತ್ತಿದೆ. ಬೆಂಗಳೂರು, ಮುಂಬೈ, ದೆಹಲಿ, ತಮಿಳುನಾಡು, ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ ಸೇರಿ ವಿವಿಧೆಡೆ ಹೆಚ್ಚು ಕೊರೊನಾ ಪತ್ತೆಯಾಗಿದ್ದು ಈ ಪ್ರದೇಶದಲ್ಲಿ ಪಿಎಂ ಲೆವೆಲ್ 2.5 ಇರೋದು ದೃಢಪಟ್ಟಿದೆ. ಆದ್ದರಿಂದ ಮೂರನೇ ಅಲೆ ಸಂಭವಿಸಿದರೆ ವಾಯುಮಾಲಿನ್ಯದಿಂದಾಗಿ ಅದರ ಪರಿಣಾಮ ಹೆಚ್ಚಾಗುವ ಆತಂಕ ಎದುರಾಗಿದೆ.
(Corona Cases are high in Polluted states: research study)
ಇದನ್ನೂ ಓದಿ: ಗರ್ಭಿಣಿಯರು ಕೊರೊನಾ ಲಸಿಕೆ ಪಡೆಯಬಹುದು: ಕೇಂದ್ರ ಆರೋಗ್ಯ ಇಲಾಖೆ ನಿರ್ಧಾರ
ಇದನ್ನೂ ಓದಿ: ಭಾರತದಲ್ಲಿ ಕೊರೊನಾ 2ನೇ ಅಲೆ ಇನ್ನೂ ಮುಗಿದಿಲ್ಲ: ಕೇಂದ್ರ ಕೊರೊನಾ ಕಾರ್ಯಪಡೆ ಅಧ್ಯಕ್ಷ ವಿ.ಕೆ.ಪೌಲ್