ಬಚ್ಚಲಲ್ಲೇ ಹೆತ್ತು, ಮಗುವನ್ನು ನೇಣಿಗೆ ಹಾಕಿದ ತಾಯಿ; ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಯ ಕಿಟಕಿಯಲ್ಲಿ ನವಜಾತ ಶಿಶು ಪತ್ತೆ
Chikkaballapura News: ಹೆರಿಗೆ ನೋವು ಬಂದ ಕೂಡಲೇ ಆಸ್ಪತ್ರೆಗೆ ಬಂದು ಬಾತ್ರೂಮ್ ಒಳಗೆ ತೆರಳಿ ಹೆರಿಗೆ ಮಾಡಿಕೊಂಡಿದ್ದಾರೆ. ಆದರೆ ಹುಟ್ಟಿದ ಮಗು ಹೆಣ್ಣು ಎಂಬ ಕಾರಣಕ್ಕೆ ಶಿಶುವಿನ ಕುತ್ತಿಗೆಗೆ ನೇಣು ಬಿಗಿದು ಒಳಗಡೆಯಿಂದ ಹೊರಗಡೆ ತಳ್ಳಲು ಪ್ರಯತ್ನಿಸಿದ್ದಾರೆ. ಆದರೆ, ಮಗು ಕಿಟಕಿಯಲ್ಲಿ ಆಚೆ ತೂರಿಲ್ಲವಾದ್ದರಿಂದ ಅಲ್ಲೇ ಬಿಟ್ಟು ಗಾಬರಿಯಲ್ಲಿ ಕಾಲ್ಕಿತ್ತಿದ್ದಾರೆ ಎನ್ನಲಾಗಿದೆ.
ಚಿಕ್ಕಬಳ್ಳಾಪುರ: ಒಂದೇ ಒಂದು ಮಗು ಆಗಲಿ, ಮಗುವಿನ ಬಾಯಲ್ಲಿ ಅಪ್ಪ, ಅಮ್ಮ ಎಂದು ಕರೆಯಿಸಿಕೊಳ್ಳುವ ಭಾಗ್ಯ ನಮಗೂ ಸಿಗಲಿ ಎಂದು ಅದೆಷ್ಟೊ ದಂಪತಿಗಳು ಇದ್ದಬದ್ದ ಆಸ್ಪತ್ರೆಗಳ ಮೆಟ್ಟಿಲನ್ನೆಲ್ಲಾ ಹತ್ತಿಳಿದು ದೇವರು, ದಿಂಡಿರು, ಪೂಜೆ ಪುನಸ್ಕಾರ ಎಂದೆಲ್ಲಾ ಮೊರೆ ಹೋಗುತ್ತಾರೆ. ಆದರೆ, ಇದಕ್ಕೆ ತದ್ವಿರುದ್ಧವಾಗಿ ಆಗತಾನೇ ಹುಟ್ಟಿದ ಮಗುವನ್ನೇ ಕಂಡಕಂಡಲ್ಲಿ ಎಸೆದು ನಿರ್ದಯವಾಗಿ ಹೋಗುವವರೂ ಇದ್ದಾರೆ. ಚಿಕ್ಕಬಳ್ಳಾಪುರದಲ್ಲಿ ನಡೆದ ಘಟನೆಯೊಂದು ಎಂತಹ ಕಲ್ಲು ಹೃದಯವನ್ನೂ ಹಿಂಡುವಂತಿದೆ. ನವಜಾತ ಶಿಶುವೊಂದನ್ನು ಆಸ್ಪತ್ರೆಯ ಬಚ್ಚಲು ಕೋಣೆಯ ಕಿಟಕಿಗೆ ನೇಣು ಹಾಕಿ ಕೊಂದಿರುವ ಅತ್ಯಂತ ಅಮಾನವೀಯ ಘಟನೆ ನಡೆದಿದೆ.
ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಈ ಹೃದಯವಿದ್ರಾವಕ ಕೃತ್ಯ ನಡೆದಿದ್ದು, ಆಗತಾನೇ ಹುಟ್ಟಿದ ಮಗುವನ್ನು ಬಚ್ಚಲ ಕೋಣೆಯ ಕಿಟಕಿಗೆ ನೇತುಹಾಕಲಾಗಿದೆ. ಆಸ್ಪತ್ರೆಯ ಸಿಬ್ಬಂದಿ ಆಸ್ಪತ್ರೆಯನ್ನು ಸ್ವಚ್ಚಗೊಳಿಸುತ್ತಿದ್ದಾಗ ಬೆಳಗ್ಗೆ 8 ಗಂಟೆ ಸಮಯದಲ್ಲಿ ಬಚ್ಚಲಿನ ಬಾಗಿಲು ಬಂದ್ ಆಗಿತ್ತು, ಸ್ವಚ್ಚಗೊಳಿಸಲೆಂದು ಎರಡು ಮೂರು ಸಲ ಹೋದಾಗಲೂ ಬಾಗಿಲು ಹಾಕಿತ್ತು. ನಂತರ ಬೆಳಗ್ಗೆ 9 ಗಂಟೆ ಸಮಯದಲ್ಲಿ ಹೋಗಿ ನೋಡಿದಾಗ ಅಲ್ಲಿ ಹೆರಿಗೆಯಾದ ವಾಸನೆ ಬಂದಿದೆ. ತಕ್ಷಣ ಸಿಬ್ಬಂದಿ ಆಚೀಚೆ ನೋಡಿ ಕಣ್ಣೆತ್ತಿ ಗಮನ ಹರಿಸಿದಾಗ ಆಗ ತಾನೆ ಜನಿಸಿದ ಹೆಣ್ಣು ನವಜಾತ ಶಿಶು ನೇತಾಡುತ್ತಿರುವುದು ಕಂಡುಬಂದಿದೆ.
ನವಜಾತ ಶಿಶುವನ್ನು ನೇತು ಹಾಕಿದ್ದನ್ನು ನೋಡಿ ಗಾಬರಿಗೊಂಡ ಆಸ್ಪತ್ರೆ ಸಿಬ್ಬಂದಿ ವೆಂಕಟೇಶ ಕೂಡಲೇ ವಿಷಯವನ್ನು ಕರ್ತವ್ಯ ನಿರತ ವೈದ್ಯ ಡಾ.ಜಯರಾಮ್ ಅವರಿಗೆ ತಿಳಿಸಿದ್ದಾರೆ. ತಕ್ಷಣ ವೈದ್ಯರು, ದಾದಿಯರು ಬಂದು ಪರಿಶೀಲಿಸಿದಾಗ ಮಗು ನೇತಾಡುತ್ತಾ ಉಸಿರಾಡುತ್ತಿತ್ತು. ತಡಮಾಡದೇ ಚಿಕಿತ್ಸೆ ನೀಡಲು ವೈದ್ಯರು ಪ್ರಯತ್ನಿಸಿದರಾದರೂ ಅಷ್ಟರಲ್ಲಿ ನವಜಾತ ಶಿಶು ಮೃತಪಟ್ಟಿದೆ.
ಬಹುಶಃ ಹೆಣ್ಣು ಮಗು ಎಂಬ ಕಾರಣಕ್ಕೆ ಹೀಗೆ ಮಾಡಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ, ಹೆರಿಗೆ ನೋವು ಬಂದ ಕೂಡಲೇ ಆಸ್ಪತ್ರೆಗೆ ಬಂದು ಬಾತ್ರೂಮ್ ಒಳಗೆ ತೆರಳಿ ಹೆರಿಗೆ ಮಾಡಿಕೊಂಡಿದ್ದಾರೆ. ಆದರೆ ಹುಟ್ಟಿದ ಮಗು ಹೆಣ್ಣು ಎಂಬ ಕಾರಣಕ್ಕೆ ಶಿಶುವಿನ ಕುತ್ತಿಗೆಗೆ ನೇಣು ಬಿಗಿದು ಒಳಗಡೆಯಿಂದ ಹೊರಗಡೆ ತಳ್ಳಲು ಪ್ರಯತ್ನಿಸಿದ್ದಾರೆ. ಆದರೆ, ಮಗು ಕಿಟಕಿಯಲ್ಲಿ ಆಚೆ ತೂರಿಲ್ಲವಾದ್ದರಿಂದ ಅಲ್ಲೇ ಬಿಟ್ಟು ಗಾಬರಿಯಲ್ಲಿ ಕಾಲ್ಕಿತ್ತಿದ್ದಾರೆ ಎನ್ನಲಾಗಿದೆ.
ಸ್ಥಳಕ್ಕೆ ಚಿಂತಾಮಣಿ ನಗರ ಠಾಣೆ ಪೊಲೀಸರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿಗಳು ಭೇಟಿ ನೀಡಿದ್ದು ಆಸ್ಪತ್ರೆಯ ಸಿಬ್ಬದಿಯಿಂದ ಮಾಹಿತಿ ಪಡೆಯುತ್ತಿದ್ದಾರೆ. ವೈದ್ಯರು ಹಾಗೂ ಪೊಲೀಸರು ಆಸ್ಪತ್ರೆಯ ಸಿಸಿಟಿವಿಯ ಮೊರೆ ಹೋಗಿದ್ದು ಆಸ್ಪತ್ರೆಗೆ ಬಂದ ಗರ್ಭಿಣಿಯರು ಹಾಗೂ ಹೆರಿಗೆಯಾದವರ ಬಗ್ಗೆ ತಲಾಶ್ ನಡೆಸಿದ್ದಾರೆ. ಅದೇನೇ ಇದ್ದರೂ 9 ತಿಂಗಳು ಹೊತ್ತ ಮಗು ಹೆರಿಗೆಯಾದ ತಕ್ಷಣ ನೇಣು ಬಿಗಿದು ಅಮಾನವಿಯತೆಯಿಂದ ವರ್ತಿಸಿರುವುದು ದುರಂತ.