ಬೆಂಗಳೂರು: ಕೊರೊನಾ ಎರಡನೇ ಅಲೆ ವೇಗವಾಗಿ ಹರಡುತ್ತಿದೆ. ಏರುಗತಿಯಲ್ಲಿ ಸಾಗಿದ ಸೋಂಕು ರಾಜ್ಯದಲ್ಲಿ ಇನ್ನೂ ಕೂಡ ಪರಿಣಾಮಕಾರಿಯಾಗಿ ಇಳಿಕೆಯತ್ತ ಮುಖಮಾಡಿಲ್ಲ. ನಗರ ಪ್ರದೇಶದಲ್ಲಿ ಕೊರೊನಾ ವ್ಯಾಪಕವಾಗಿ ಇರುವ ಜೊತೆಗೆ ಇತ್ತೀಚೆಗೆ ಗ್ರಾಮೀಣ ಭಾಗದಲ್ಲಿ ಕೂಡ ಕೊವಿಡ್ ಪ್ರಮಾಣ ಹೆಚ್ಚಳವಾಗಿದೆ. ಸಾಲದು ಎಂಬಂತೆ ಸಾವಿನ ಸಂಖ್ಯೆಯೂ ಏರಿಕೆಯಾಗಿದೆ. ಸೋಂಕಿತರ ಸಂಖ್ಯೆ ಇಳಿಕೆಯತ್ತ ಬರುತ್ತಿದ್ದರೂ ಸಾವಿನ ಸಂಖ್ಯೆ ಕಡಿಮೆ ಆಗಿಲ್ಲ. ನಿನ್ನೆ ಕೊರೊನಾ ಎರಡನೇ ಅಲೆಯಲ್ಲೇ ಅತಿ ಹೆಚ್ಚು ಸೋಂಕಿತರು ಮೃತಪಟ್ಟಿದ್ದರು.
ಈ ಮಧ್ಯೆ ಲಾಕ್ಡೌನ್ ಮಾರ್ಗಸೂಚಿಯಲ್ಲಿ ಪ್ರಮುಖ ಬದಲಾವಣೆಯೊಂದನ್ನು ಮಾಡಿದೆ. ರಾಜ್ಯ ಸರ್ಕಾರದ ಮಾರ್ಗಸೂಚಿಯಲ್ಲಿ ಪರಿಷ್ಕರಣೆ ಮಾಡಲಾಗಿದೆ. ಅದರಂತೆ, ಮೃತರ ಅಸ್ಥಿ ವಿಸರ್ಜನೆಗೆ ತೆರಳಲು ಅವಕಾಶ ನೀಡಲಾಗಿದೆ. ಅಸ್ಥಿ ವಿಸರ್ಜನೆಗೆ ತೆರಳಲು 4 ಜನರಿಗೆ ಅವಕಾಶ ನೀಡಿ ಆದೇಶ ಹೊರಡಿಸಲಾಗಿದೆ. ಧಾರ್ಮಿಕ ವಿಧಿವಿಧಾನದ ಅನುಸಾರ ಅಸ್ಥಿ ವಿಸರ್ಜನೆ ಮಾಡಬಹುದು ಎಂದು ತಿಳಿಸಿದ್ದಾರೆ.
ಆಯಾ ಧಾರ್ಮಿಕ ವಿಧಾನದಲ್ಲಿ ಅಸ್ಥಿ ವಿಸರ್ಜನೆಗೆ ಅವಕಾಶವಿದೆ. ಅಸ್ಥಿ ವಿಸರ್ಜನೆಗೆ ತೆರಳಲು 4 ಜನರಿಗೆ ಅವಕಾಶ ನೀಡಲಾಗಿದೆ. ಈ ಕಾರ್ಯಕ್ಕೆ ಅಡ್ಡಿಪಡಿಸದಂತೆ ಬಿಬಿಎಂಪಿ ಆಯುಕ್ತರು, ಎಲ್ಲಾ ಪೊಲೀಸ್ ಆಯುಕ್ತರು, ಜಿಲ್ಲಾಧಿಕಾರಿಗಳು ಹಾಗೂ ಎಸ್ಪಿಗಳಿಗೆ ಸರ್ಕಾರ ಸೂಚನೆ ನೀಡಿದೆ.
ಖಾಸಗಿ ಆಸ್ಪತ್ರೆಗಳ ದರ್ಬಾರ್‌ಗೆ ರಾಜ್ಯ ಸರ್ಕಾರದ ಬ್ರೇಕ್
ಕೊರೊನಾ ಮೃತದೇಹ ನೀಡಲು ತೊಂದರೆ ಮಾಡಿದರೆ ಆಸ್ಪತ್ರೆಗೇ ಕುತ್ತು ಉಂಟಾಗಲಿದೆ. ಕೊರೊನಾದಿಂದ ಮೃತಪಟ್ಟವರ ಶವ ಹಸ್ತಾಂತರ ಸುಗಮವಾಗಿ ಆಗಬೇಕು. ಚಿಕಿತ್ಸೆಯ ಬಾಕಿ ಹಣ ಪಾವತಿಸುವಂತೆ ಒತ್ತಾಯ ಸಲ್ಲದು ಎಂದು ಆಸ್ಪತ್ರೆಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಖಡಕ್ ಆದೇಶ ಹೊರಡಿಸಿದೆ.
ಶವ ಹಸ್ತಾಂತರಕ್ಕೆ ಬಾಕಿ ಬಿಲ್ ಪಾವತಿಗೆ ಒತ್ತಡ ಹಿನ್ನೆಲೆಯಲ್ಲಿ, KPME ಕಾಯ್ದೆ ಅಡಿ ಬಾಕಿ ಬಿಲ್‌ಗೆ ಒತ್ತಾಯಿಸುವಂತಿಲ್ಲ. ಬಿಲ್ ಕಟ್ಟದಿದ್ದರೆ ಶವ ಹಸ್ತಾಂತರಕ್ಕೆ ನಿರಾಕರಿಸಬಾರದು. ಶವ ನೀಡಲು ಸಮಸ್ಯೆ ಮಾಡಿದರೆ ನೋಂದಣಿಯೇ ರದ್ದುಗೊಳಿಸುವ ಆದೇಶವನ್ನು ಖಾಸಗಿ ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆ ನೀಡಿದೆ.
ಈ ಬಗ್ಗೆ ನಿಗಾವಹಿಸುವಂತೆ ಆಯಾ ಡಿಸಿಗಳಿಗೆ ನಿರ್ದೇಶನ ನೀಡಲಾಗಿದ್ದು, ಶವ ಹಸ್ತಾಂತರಕ್ಕೆ ಸತಾಯಿಸಿದ ಪ್ರಕರಣಗಳಿದ್ದರೆ ತಿಳಿಸಿ ಎಂದು ಆಯಾ ಡಿಸಿಗಳು, ಜಿ.ಪಂ. ಸಿಇಒ, ಬಿಬಿಎಂಪಿಗೆ ನಿರ್ದೇಶನ ಮಾಡಲಾಗಿದೆ. ಈ ಬಗ್ಗೆ ವಾರಕ್ಕೆ ಒಂದು ಬಾರಿ ವರದಿ ಸಲ್ಲಿಸಲು ಕೂಡ ಸೂಚಿಸಲಾಗಿದೆ.
ಕೊರೊನಾ ಸೋಂಕು ಕಾರಣ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಕರಣ ವಿಚಾರಣೆ: ಕರ್ನಾಟಕ ಹೈಕೋರ್ಟ್
Published On - 8:11 pm, Mon, 24 May 21