
ಬೆಂಗಳೂರು; ಚೀನಾದಲ್ಲಿ (china) ಕೊರೊನಾ ಸೋಂಕು (Corona) ವ್ಯಾಪಕವಾಗಿ ಹರಡುತ್ತಿರುವುದು ಭಾರತದಲ್ಲಿಯೂ ಆತಂಕ ಮೂಡಿಸಿದೆ. ಕೊರೊನಾ ನಿಯಂತ್ರಣಕ್ಕೆ ಭಾರತ ಸರ್ಕಾರವು ಈಗಾಗಲೇ ಮಾರ್ಗಸೂಚಿ ಪ್ರಕಟಿಸಿದೆ. ಈ ಸಂಬಂಧ ಕರ್ನಾಟಕ ಸರ್ಕಾರದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಯುವ ಬಗ್ಗೆ ಇನ್ನೂ ಖಚಿತ ಮಾಹಿತಿ ಲಭ್ಯವಾಗಿಲ್ಲ. ಈ ಸಭೆಯ ನಂತರ ವಿಸ್ತೃತ ಮಾರ್ಗಸೂಚಿ ಪ್ರಕಟವಾಗುವ ಸಾಧ್ಯತೆಯಿತ್ತು. ಈ ಮಧ್ಯೆ ಮಾನ್ಯತೆ ಪಡೆದ ಅನುದಾನರಹಿತ ಖಾಸಗಿ ಶಾಲೆಗಳ ಒಕ್ಕೂಟ (ರುಪ್ಸಾ) ಶಾಲೆಗಳಿಗಾಗಿ ಮಾರ್ಗಸೂಚಿಯನ್ನು ಹೊರಡಿಸಿದೆ. ಭಾರತದ ಅನೇಕ ರಾಜ್ಯಗಳಲ್ಲಿ ಈಗಾಗಲೇ ಮಾರ್ಗಸೂಚಿ ಪ್ರಕಟಿಸಿದೆ. ಮಾಸ್ಕ್ ಕಡ್ಡಾಯವಾಗಿ ಹಾಕಬೇಕು ಎಂದು ಕಟ್ಟುನಿಟ್ಟಿನ ಆದೇಶವನ್ನು ನೀಡಿದೆ. ಇನ್ನೊಂದು ಕಡೆ ಕೊರನೊ ಲಸಿಕೆ ನೀಡುವುದನ್ನು ಹೆಚ್ಚಿಸಬೇಕು ಎಂದು ಹೇಳಿದೆ.
ಬೆಂಗಳೂರಿನಲ್ಲಿ ಈಗಾಗಲೇ ಸಾರ್ವಜನಿಕರಲ್ಲಿ ಮಾಸ್ಕ್ ಧರಿಸುವ ಕುರಿತು ಹಾಗೂ ಸಾಮಾಜಿಕ ಅಂತರದ ಬಗ್ಗೆ ಜಾಗೃತಿ ಮೂಡಿಸಲು ಬೆಂಗಳೂರು ಮಹಾನಗರ ಪಾಲಿಕೆ ಮಾರ್ಷಲ್ಗಳು ಕಾರ್ಯನಿರ್ವಹಿಸುತ್ತಿದ್ದು, ರಾಜ್ಯ ರಾಜಧಾನಿಯ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಕೊವಿಡ್ಗೆ ಸಂಬಂಧಿಸಿದಂತೆ ಅರಿವು ಮೂಡಿಲು ಮಾರ್ಷಲ್ಗಳ ತಂಡವು ಪ್ರಯತ್ನಿಸುತ್ತಿದೆ. ಆದರೂ ಬೆಂಗಳೂರಿನಲ್ಲಿ ಮಾಸ್ಕ್ ಧರಿಸಲು ಜನರು ಹಿಂಜರಿಯುತ್ತಿರುವುದು ಕಂಡುಬಂದಿದೆ.
ಕೊವಿಡ್ ನಿಯಂತ್ರಣಕ್ಕೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲು ರಾಜ್ಯ ಸರ್ಕಾರವು ಅಗತ್ಯ ಸೂಚನೆ ನೀಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದು, ಮುಂಜಾಗ್ರತಾ ಕ್ರಮವಾಗಿ ಬೂಸ್ಟರ್ ಹಾಕಿಕೊಳ್ಳುವಂತೆ ಸಾರ್ವಜನಿಕರಿಗೆ ಅವರು ಮನವಿ ಮಾಡಿದರು. ಬಸ್, ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲು ಸೂಚನೆ ನೀಡಲಾಗಿದೆ. ಟೆಸ್ಟಿಂಗ್ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.
ಇದರ ಜೊತೆಗೆ ಆರೋಗ್ಯ ಸಚಿವ ಡಾ. ಸುಧಾಕರ್ ವಿದೇಶಗಳಿಂದ ನಗರಕ್ಕೆ ಬರುವವರಿಗೆ ಕೊವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯಗೊಳಿಸಬೇಕು ಎಂಬ ಒತ್ತಡವನ್ನು ಹೇರಲಾಗಿದೆ. ಕೆಲ ದೇಶಗಳಲ್ಲಿ ಕೊರೊನಾ ಸೋಂಕು ತೀವ್ರಗತಿಯಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ವಿದೇಶದಿಂದ ಬೆಂಗಳೂರಿಗೆ ಬರುವ ಪ್ರಯಾಣಿಕರಿಗೆ ನೆಗೆಟಿವ್ ರಿಪೋರ್ಟ್ ಕಡ್ಡಾಯಗೊಳಿಸಲು ತಜ್ಞರು ಸಲಹೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನು ಓದಿ: ಕರ್ನಾಟಕದಲ್ಲಿ ಮುಂದಿನ ತಿಂಗಳು ಕೊವಿಡ್ ಮೂರನೇ ಅಲೆ ಶುರು; ತಾಂತ್ರಿಕ ಸಲಹಾ ಸಮಿತಿ ಎಚ್ಚರಿಕೆ
ಬೆಂಗಳೂರಿನಲ್ಲಿ ಆಟೊ ಮತ್ತು ಕ್ಯಾಬ್ ಚಾಲಕರು ಸ್ವಯಂಪ್ರೇರಿತರಾಗಿ ಮಾಸ್ಕ್ ಧರಿಸಲು ನಿರ್ಧಾರ ಮಾಡಿದ್ದಾರೆ. ಪ್ರಯಾಣಿಕರಿಗೂ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಮನವಿ ಮಾಡುತ್ತಿದ್ದಾರೆ. ಮತ್ತೊಂದೆಡೆ ಬೀದಿಬದಿ ವ್ಯಾಪಾರಿಗಳೂ ಕೊರೊನಾ ಮುಂಜಾಗ್ರತೆಯ ನಿರ್ಧಾರಕ್ಕೆ ಬೆಂಬಲ ನೀಡಿದ್ದಾರೆ. ‘ಎಲ್ಲ ಬೀದಿಬದಿ ವ್ಯಾಪಾರಿಗಳಿಗೂ ಮಾಸ್ಕ್ ಧರಿಸಿಕೊಂಡೇ ವ್ಯಾಪಾರ ನಿರ್ವಹಿಸಬೇಕು ಎಂದು ಸೂಚನೆ ನೀಡಲಾಗಿದೆ’ ಎಂದು ರಾಜ್ಯ ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ರಂಗಸ್ವಾಮಿ ಮಾಹಿತಿ ನೀಡಿದ್ದಾರೆ.
ಕೊರೊನಾ ಒಮಿಕ್ರಾನ್ ರೂಪಾಂತರಿ ತಳಿ BF.7 ತೀವ್ರವಾಗಿ ಹರಡುತ್ತಿರುವ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಮಾನ್ಯತೆ ಪಡೆದ ಅನುದಾನರಹಿತ ಖಾಸಗಿ ಶಾಲೆಗಳ ಒಕ್ಕೂಟ (ರುಪ್ಸಾ) ಇಂದಿನಿಂದ ಅನ್ವಯವಾಗುವಂತೆ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ಶಾಲೆಗೆ ಬರುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ವಿದ್ಯಾರ್ಥಿಗಳಿಗೆ ನೆಗಡಿ, ಕೆಮ್ಮು, ಜ್ವರ ಕಂಡುಬಂದರೆ ರಜೆ ನೀಡಬೇಕು. ಶಾಲಾ ಆವರಣದಲ್ಲಿ ಎರಡು ದಿನಗಳಿಗೆ ಒಮ್ಮೆ ಸ್ಯಾನಿಟೈಸ್ ಮಾಡಿಸಬೇಕು. ಶಿಕ್ಷಕರು ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಬೂಸ್ಟರ್ ಡೋಸ್ ಲಸಿಕೆ ಹಾಕಿಸಿಕೊಳ್ಳಬೇಕು. ಶಾಲಾ ಆವರಣದಲ್ಲಿ ಮಕ್ಕಳು ಗುಂಪು ಗೂಡುವುದನ್ನು ತಡೆಯಬೇಕು. ಸಾಮಾಜಿಕ ಅಂತರ ಪಾಲನೆ ಮಾಡಬೇಕು. ಇತರೆ ಮಕ್ಕಳಿಗೆ ನೀರು, ಆಹಾರ ಹಂಚದಂತೆ ನೋಡಿಕೊಳ್ಳಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ವಿಶ್ವದ ಹಲವು ದೇಶಗಳಲ್ಲಿ ಒಮಿಕ್ರಾನ್ ರೂಪಾಂತರಿಗಳ ಹಾವಳಿ ಹೆಚ್ಚಾಗಿದೆ. ಚೀನಾದಲ್ಲಿ BF 7 ಕೊರೊನಾ ಉಪತಳಿಯು ಜನರನ್ನು ಕಾಡುತ್ತಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಬಹುದು ಎಂಬ ಆತಂಕ ವ್ಯಕ್ತವಾಗಿದೆ. ಚೀನಾದಲ್ಲಿ ದಿನದಿಂದ ದಿನಕ್ಕೆ ಪ್ರಕರಣಗಳು ದುಪ್ಪಟ್ಟಾಗುತ್ತಿವೆ. ಜನವರಿ ಮಧ್ಯಭಾಗದಲ್ಲಿ ಪ್ರಕರಣಗಳ ಸಂಖ್ಯೆ ಗರಿಷ್ಠಮಟ್ಟಕ್ಕೆ ತಲುಪಬಹುದು ಎಂದು ಶಂಕಿಸಲಾಗಿದೆ. ಫೆಬ್ರುವರಿ ಕೊನೆಯ ಅಥವಾ ಮಾರ್ಚ್ ಮೊದಲ ವಾರದಲ್ಲಿ ದಿನಕ್ಕೆ 3 ಕೋಟಿ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುವ ಸಾಧ್ಯತೆಯಿದೆ ಎಂದು ತಜ್ಞರು ಭವಿಷ್ಯ ನುಡಿದಿದ್ದಾರೆ. ಮಾರ್ಚ್ ಮೊದಲ ವಾರದಲ್ಲಿ ದಿನಕ್ಕೆ 4 ರಿಂದ 4.5 ಲಕ್ಷ ಜನರು ಸಾವನ್ನಪ್ಪಬಹುದು ಎಂದು ಅಂದಾಜಿಸಲಾಗಿದೆ. ಈ ವಿದ್ಯಮಾನವು ಚೀನಾದೊಂದಿಗೆ ಭೌಗೋಳಿಕ ಗಡಿ ಹಂಚಿಕೊಂಡಿರುವ ಭಾರತದಲ್ಲಿಯೂ ಆತಂಕಕ್ಕೆ ಕಾರಣವಾಗಿದೆ. ಭಾರತದಲ್ಲಿ ಪರಿಸ್ಥಿತಿಯು ಚೀನಾದಷ್ಟು ಹದಗೆಡುವ ಸಾಧ್ಯತೆ ಕಡಿಮೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ