ಆಸ್ಪತ್ರೆಯಲ್ಲಿ ಸಿಕ್ತಿಲ್ಲ ಬೆಡ್; ಮನೆಯಲ್ಲೇ ಪತಿ, ಹೆಣ್ಣುಮಕ್ಕಳ ಮುಂದೆ ನರಳಿ ನರಳಿ ಕಣ್ಣು ಮುಚ್ಚಿದ ಮಹಿಳೆ

|

Updated on: Apr 28, 2021 | 12:50 PM

ಕೊರೊನಾ ಸೋಂಕಿನಿಂದ 31 ವರ್ಷದ ಮಹಿಳೆ ಮೃತಪಟ್ಟಿದ್ದು ತಾಯಿಯ ಸಾವಿನಿಂದ ಹೆಣ್ಣುಮಕ್ಕಳು ಗೋಳಾಡುತ್ತಿದ್ದಾರೆ. ಇಂತಹದೊಂದು ಹೃದಯವಿದ್ರಾವಕ ಘಟನೆ ಬೆಂಗಳೂರಿನ ವಿದ್ಯಾರಣ್ಯಪುರದ ಸಿಂಗಾಪುರದಲ್ಲಿ ನಡೆದಿದೆ

ಆಸ್ಪತ್ರೆಯಲ್ಲಿ ಸಿಕ್ತಿಲ್ಲ ಬೆಡ್; ಮನೆಯಲ್ಲೇ ಪತಿ, ಹೆಣ್ಣುಮಕ್ಕಳ ಮುಂದೆ ನರಳಿ ನರಳಿ ಕಣ್ಣು ಮುಚ್ಚಿದ ಮಹಿಳೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಮಹಾಮಾರಿ ಕೊರೊನಾ ದಿನದಿಂದ ದಿನಕ್ಕೆ ತನ್ನ ಅಟ್ಟಹಾಸ ಹೆಚ್ಚು ಮಾಡಿದೆ. ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆ ಸಹ ಹೆಚ್ಚಾಗುತ್ತಿದೆ. ಆದ್ರೆ ಸೋಂಕಿಗೆ ಬಲಿಯಾಗುವವರ ಕುಟುಂಬಸ್ಥರ ನೋವು ಕೇಳುವವರಿಲ್ಲ. ಕೊರೊನಾ ಸೋಂಕಿನಿಂದ 31 ವರ್ಷದ ಮಹಿಳೆ ಮೃತಪಟ್ಟಿದ್ದು ತಾಯಿಯ ಸಾವಿನಿಂದ ಹೆಣ್ಣುಮಕ್ಕಳು ಗೋಳಾಡುತ್ತಿದ್ದಾರೆ. ಇಂತಹದೊಂದು ಹೃದಯವಿದ್ರಾವಕ ಘಟನೆ ಬೆಂಗಳೂರಿನ ವಿದ್ಯಾರಣ್ಯಪುರದ ಸಿಂಗಾಪುರದಲ್ಲಿ ನಡೆದಿದೆ.

31 ವರ್ಷದ ಮಹಿಳೆಗೆ ಏಪ್ರಿಲ್ 26ರಂದು ಕೊರೊನಾ ಸೋಂಕು‌ ದೃಢಪಟ್ಟಿತ್ತು. ನಿನ್ನೆ ಮಹಿಳೆಗೆ ಉಸಿರಾಟ ಸಮಸ್ಯೆ ಹೆಚ್ಚಾಗಿ ಮಹಿಳೆಯ ಪತಿ ಮತ್ತು ಮಗಳು ಆಸ್ಪತ್ರೆಗೆ ಅಲೆದಾಡಿದ್ದಾರೆ. 2-3 ಆಸ್ಪತ್ರೆ ಅಲೆದರೂ ಇವರಿಗೆ ಬೆಡ್ ಸಿಕಿಲ್ಲ. ಹೀಗಾಗಿ ಮನೆಗೆ ವಾಪಸ್ ಕರೆತಂದಿದ್ದರು. ರಾತ್ರಿ 10ಗಂಟೆಗೆ ಮನೆಯಲ್ಲಿ ಕೊರೊನಾ ಸೋಂಕಿತ ಮಹಿಳೆ ಉಸಿರಾಡಲು ಆಗದೆ ಚಿಕಿತ್ಸೆಯೂ ಇಲ್ಲದೆ ನರಳಿ ನರಳಿ ಪ್ರಾಣಬಿಟ್ಟಿದ್ದಾರೆ. ಪತ್ನಿಯ ಸಾವು ಕಣ್ಣಾರೆ ಕಂಡು ಪತಿ ಕುಸಿದು ಬಿದ್ದಿದ್ದಾರೆ. ನೆರವಿಗೆ ಯಾರೂ ಇಲ್ಲದೇ ಸೋಂಕಿತೆಯ ಹೆಣ್ಣುಮಕ್ಕಳು ಕಂಗಾಲಾಗಿದ್ದಾರೆ. ಅಮ್ಮ ಕಣ್ಣು ಮುಂದೆ ಕಣ್ಣು ಮುಚ್ಚಿದನ್ನು ನೋಡಿ ಮಕ್ಕಳು ದಿಗ್ಭ್ರಮೆಗೊಳಗಾಗಿದ್ದಾರೆ.

ವಿದ್ಯಾರಣ್ಯಪುರ ಪೊಲೀಸರಿಗೆ ಸ್ಥಳೀಯರ ಮಾಹಿತಿ ಹಿನ್ನೆಲೆಯಲ್ಲಿ ಮಹಿಳೆಯ ಮೃತದೇಹ ರವಾನಿಸಲು ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಆದ್ರೆ ಕಣ್ಣು ಮುಂದೆ ತಾಯಿಯನ್ನು ಕಳೆದುಕೊಂಡ ಮಕ್ಕಳ ನೋವು ಕೇಳುವವರಿಲ್ಲ. ಮನೆ ಬಳಿ ತೆರಳಲು ಅಕ್ಕಪಕ್ಕದವರು ಹಿಂದೇಟು ಹಾಕಿದ್ದಾರೆ. ಮಹಾಮಾರಿ ಕೊರೊನಾದಿಂದ ಮಕ್ಕಳು ತಾಯಿ ಇಲ್ಲದ ತಬ್ಬಲಿಯಾಗಿದ್ದಾರೆ.

ಚಿಕ್ಕಬಳ್ಳಾಪುರ: ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಮುನಿಶಾಮಿಗೌಡ ಆಸ್ಪತ್ರೆಯಲ್ಲಿ ಸೂಕ್ತ ಸಮಯಕ್ಕೆ ಬೆಡ್ ಸಿಗದೆ ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಆಸ್ಪತ್ರೆಯಲ್ಲಿ ನಡೆದಿದೆ.

ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಮುನಿಶಾಮಿಗೌಡ ಮೊದಲು ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಹೋಗಿದ್ದರು. ಆದ್ರೆ ಚಿಂತಾಮಣಿ ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳದ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರದಲ್ಲಿರುವ ಜಿಲ್ಲಾಸ್ಪತ್ರೆಗೆ ಹೋಗಿದ್ದಾರೆ. ನಾನ್ ಕೊವಿಡ್ ಪೇಷಂಟ್ ಹಿನ್ನೆಲೆಯಲ್ಲಿ ಅಲ್ಲಿಂದಲೂ ವಾಪಸ್ ಕಳಿಸಿದ್ದರು. ಬಳಿಕ ಚಿಂತಾಮಣಿಯ ಖಾಸಗಿ ಆಸ್ಪತ್ರೆಗಳಿಗೆ ಅಲೆದಾಡಿದ್ದಾರೆ.

ಚಿಂತಾಮಣಿಯ ಖಾಸಗಿ ಆಸ್ಪತ್ರೆಗಳಲ್ಲೂ ಬೆಡ್‌ ಸಿಕ್ಕಿರಲಿಲ್ಲ. ಎಲ್ಲೂ ಬೆಡ್ ಸಿಗದೆ ಬಳಿಕ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮುನಿಶಾಮಿಗೌಡ ಮೃತಪಟ್ಟಿದ್ದಾರೆ. ಚಿಂತಾಮಣಿ ಆಸ್ಪತ್ರೆ ವಿರುದ್ಧ ಮೃತನ ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ: ಕೊರೊನಾ ಸೋಂಕಿನ ಹರಡುವಿಕೆಗೆ ಮಂಡ್ಯದ ಜನ ಹೈರಾಣು; ಲಸಿಕೆ ಪಡೆದುಕೊಳ್ಳಲು ಸಾಲುಗಟ್ಟಿ ನಿಂತ ಸಾರ್ವಜನಿಕರು

Published On - 9:58 am, Wed, 28 April 21