Tv9 Digital Live| ಜನರನ್ನು ಹಳ್ಳಿಗೆ ಬಿಟ್ಟು ಸರ್ಕಾರ ಮತ್ತೆ ಎಡವಿದೆಯಾ? ಅಭಿಪ್ರಾಯಗಳು ಇಲ್ಲಿವೆ
ಜನರು ಕಳೆದ ಬಾರಿ ಲಾಕ್ಡೌನ್ ಆದಾಗ ಅನುಭವಿಸಿದ ಕಷ್ಟವನ್ನು ಪುನಃ ಅನುಭವಿಸಲು ಸಾಧ್ಯವಾಗದ ಕಾರಣ ಕುಟುಂಬ ಸಮೇತ ಊರುಗಳಿಗೆ ಹೋಗುತ್ತಿದ್ದಾರೆ. ಆದರೆ ಬೆಂಗಳೂರಿನಿಂದ ಹಳ್ಳಿಗಳಿಗೆ ಹೋಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಬೆಂಗಳೂರು: ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ರಾಜ್ಯದಲ್ಲಿ ಕೊರೊನಾ ಕರ್ಫ್ಯೂ ಜಾರಿಗೊಳಿಸಿದೆ. ಲಾಕ್ಡೌನ್ ಹೋಲುವ ಈ ಕರ್ಫ್ಯೂನಲ್ಲಿ ಬಹುತೇಕ ಎಲ್ಲವೂ ಬಂದ್ ಆಗಿರುತ್ತದೆ. ಹೀಗಾಗಿ ಬೆಂಗಳೂರಿನಿಂದ ತಮ್ಮ ಊರುಗಳತ್ತ ಜನರು ಮುಖ ಮಾಡಿದ್ದಾರೆ. ಇಂದು ರಾತ್ರಿ 9 ಗಂಟೆಯಿಂದ ಸುಮಾರು 14 ದಿನಗಳ ಕಾಲ ಎಲ್ಲವೂ ಬಂದ್ ಆಗಲಿವೆ. ಊರುಗಳಿಗೆ ಹೋಗುವವರಿಗೆ ನಿನ್ನೆ ಕೊನೆಯ ದಿನ. ಹೀಗಾಗಿ ಜನರು ಕಳೆದ ಬಾರಿ ಲಾಕ್ಡೌನ್ ಆದಾಗ ಅನುಭವಿಸಿದ ಕಷ್ಟವನ್ನು ಪುನಃ ಅನುಭವಿಸಲು ಸಾಧ್ಯವಾಗದ ಕಾರಣ ಕುಟುಂಬ ಸಮೇತ ಊರುಗಳಿಗೆ ಹೋಗುತ್ತಿದ್ದಾರೆ. ಆದರೆ ಬೆಂಗಳೂರಿನಿಂದ ಹಳ್ಳಿಗಳಿಗೆ ಹೋಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಕಳೆದ ಬಾರಿ ಹಳ್ಳಿಗಳಲ್ಲೂ ಕ್ವಾರಂಟೈನ್ ಕೇಂದ್ರ ಸ್ಥಾಪಿಸಲಾಗಿತ್ತು. ಹಳ್ಳಿಗೆ ಬಂದ ಜನರನ್ನು ಸ್ವಲ್ಪ ಕಾಲ ಕ್ವಾರಂಟೈನ್ ಮಾಡಿ ನಂತರ ಮನೆಗೆ ಕಳಿಸುತಿದ್ದರು. ಆದರೆ ಈ ಬಾರಿ ಜನ ಸೀದಾ ತಮ್ಮ ಮನೆಗೆ ಹೋಗುತ್ತಿದ್ದಾರೆ. ಇದರಿಂದ ಮನೆ, ಹಳ್ಳಿಯಲ್ಲೂ ಕೊರೊನಾ ಹಬ್ಬುವ ಸಾಧ್ಯತೆ ಹೆಚ್ಚಿದೆ. ಈ ವಿಚಾರದಲ್ಲಿ ಸರ್ಕಾರ ಮತ್ತೆ ಎಡವಿದೆಯೇ? ನಗರದಲ್ಲಿ ವ್ಯಾಪಿಸಿ ಕೈಮೀರಿ ಹೋಗಿದ್ದ ಕೊರೊನಾ ಇನ್ನೂ ಹಳ್ಳಿಯಲ್ಲೂ ತನ್ನ ಆರ್ಭಟ ಮುಂದುವರಿಸಲು ಅವಕಾಶವಾಯಿತಾ? ಎಂಬ ಪ್ರಶ್ನೆಯನ್ನು ಆಧಾರವಾಗಿಸಿಕೊಂಡು ನಿನ್ನೆ (ಏಪ್ರಿಲ್ 27) ಡಿಜಿಟಲ್ ಲೈವ್ನಲ್ಲಿ ಚರ್ಚಿಸಲಾಗಿದೆ. ಚರ್ಚೆಯಲ್ಲಿ ಭಾರತೀಯ ಜನತಾ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ತೆಂಗಿನಕಾಯಿ, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಮತ್ತು ಸಾಂಕ್ರಾಮಿಕ ರೋಗ ತಜ್ಞ ಡಾ.ಸುನೀಲ್ ಭಾಗವಹಿಸಿದ್ದರು. ಚರ್ಚೆಯನ್ನು ಆ್ಯಂಕರ್ ಹರಿಪ್ರಸಾದ್ ನಡೆಸಿಕೊಟ್ಟರು.
ಚರ್ಚೆಯ ಮೊದಲಿಗೆ ಮಾತನಾಡಿದ ಸಾಂಕ್ರಾಮಿಕ ರೋಗ ತಜ್ಞ ಡಾ.ಸುನೀಲ್, ಬೆಂಗಳೂರಿನಿಂದ ಹಳ್ಳಿಗಳಿಗೆ ಹೋಗುತ್ತಿದ್ದಾರೆ. ಈ ವೇಳೆ ಥರ್ಮಲ್ ಸ್ಕ್ಯಾನಿಂಗ್ ಇಟ್ಟು ಯಾರಿಗಾದರು ಟೆಂಪ್ರೇಚರ್ ಜಾಸ್ತಿಯಿದ್ದರೆ ಅಂತವರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸುವ ಕೆಲಸ ಮಾಡಬೇಕಿತ್ತು. ಒಂದು ಊರಿನಿಂದ ಇನ್ನೊಂದು ಊರಿಗೆ ಹೋದಾಗ ಊರಿನ ಗಡಿಗಳಲ್ಲಿ ರ್ಯಾಪಿಡ್ ಟೆಸ್ಟ್ನ ಮಾಡಬೇಕಾಗುತ್ತದೆ. ಆಗ ಪ್ರಾರಂಭದಲ್ಲೇ ಕೊರೊನಾ ತಡೆಗಟ್ಟಲು ಸಾಧ್ಯವಾಗುತ್ತದೆ. ಹಳ್ಳಿಯ ಜನರಿಗೆ ಈ ಬಗ್ಗೆ ಆತಂಕ ಕಡಿಮೆಯಾಗುತ್ತದೆ ಎಂದು ಹೇಳಿದರು.
ಜನ ಹಳ್ಳಿಗಳಿಗೆ ಹೋಗುತ್ತಿದ್ದಾರೆ. ಸದ್ಯಕ್ಕೆ ಯಾವ ಸವಾಲುಗಳು ಮುಂದಿವೆ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಮಹೇಶ್ ತೆಂಗಿನಕಾಯಿ, ಈಗಾಗಲೇ ಸರ್ಕಾರ ಕೊರೊನಾ ಬಗ್ಗೆ ಕ್ರಮ ಕೈಗೊಂಡಿದೆ. ಈ ಬಗ್ಗೆ ಜನರ ಸಹಕಾರವು ಮುಖ್ಯವಾಗಿರುತ್ತದೆ. ಜಾರಿಯಾಗಿರುವ ಕಠಿಣ ಕ್ರಮಗಳನ್ನು ಪಾಲಿಸಿದಾಗ ಕೊರೊನಾ ತಡೆಯಲು ಸಾಧ್ಯವಿದೆ. ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಇವೆಲ್ಲಾ ಸದ್ಯಕ್ಕೆ ಪಾಲಿಸುವ ಅನಿವಾರ್ಯವಿದೆ. ಹೀಗಾಗಿ ಜನರು ಈ ಕುರಿತು ನಿರ್ಲಕ್ಷ್ಯ ತೋರದೆ ಜವಾಬ್ದಾರಿಯಿಂದ ನಿಯಮಗಳನ್ನು ಪಾಲಿಸಬೇಕು ಎಂದು ಅಭಿಪ್ರಾಯಪಟ್ಟರು.
ಚರ್ಚೆಯ ಮುಂದಿನ ಭಾಗವಾಗಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ, ಜನರ ಬಗ್ಗೆ ಆರೋಪ ಹೊರಿಸುವುದು ಸರಿಯಲ್ಲ. ಈ ಬಗ್ಗೆ ರಾಜ್ಯ ಸರ್ಕಾರ ವಿಫಲವಾಗಿದೆ. ಸೂಕ್ತ ಕ್ರಮ ಕೈಗೊಳ್ಳದೆ ಸರ್ಕಾರವೇ ಕೊರೊನಾ ಹರಡಿಸುವ ಕೆಲಸವನ್ನು ಮಾಡುತ್ತಿದೆ. ಕೇರಳ ಗಡಿಯಲ್ಲಿ ಆರ್ಟಿಪಿಸಿಆರ್ ಪರೀಕ್ಷೆ ಕಡ್ಡಾಯ ಮಾಡಿದ್ದಾರೆ. ಆದರೆ ಬೆಂಗಳೂರಿನಿಂದ ಹೊರ ಜಿಲ್ಲೆಗಳಿಗೆ ಹೋಗುವ ಜನರಿಗೆ ಯಾವ ವ್ಯವಸ್ಥೆಯನ್ನು ಮಾಡಿಕೊಟ್ಟಿಲ್ಲ. ರಾಜ್ಯ ಸರ್ಕಾರ ಸರಿಯಾದ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದರೆ ಬೆಂಗಳೂರಿನಲ್ಲಿ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಹೇಳಿದರು.
ರಾಜ್ಯ ಗಡಿ ಭಾಗಗಳಲ್ಲಿ ಪೊಲೀಸ್ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು ಸೇರಿದಂತೆ ಹಲವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಬೆಂಗಳೂರಿನಿಂದ ಊರಿನತ್ತ ಜನರು ಹೋಗುತ್ತಿದ್ದಾರೆ. ಈ ಬಗ್ಗೆ ಹೆಚ್ಚು ಗಮನಹರಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದೇವೆ ಎಂದು ಶಶಿಕಲಾ ಜೊಲ್ಲೆ ತಿಳಿಸಿದರು.
ಇದನ್ನೂ ಓದಿ
ಕಾರಾಗೃಹದಲ್ಲಿನ ಕೈದಿಗಳಿಗೆ ಕೊರೊನಾ ಸೊಂಕು; ಚಿಕ್ಕಬಳ್ಳಾಪುರ ಜೈಲು ಅಧಿಕಾರಿಗಳಲ್ಲಿ ಹೆಚ್ಚಿದ ಆತಂಕ
(Discussion about corona curfew and people moving to villages on Tv9 Digital Live)