ಕೊರೊನಾ ಸೋಂಕಿನ ಹರಡುವಿಕೆಗೆ ಮಂಡ್ಯದ ಜನ ಹೈರಾಣು; ಲಸಿಕೆ ಪಡೆದುಕೊಳ್ಳಲು ಸಾಲುಗಟ್ಟಿ ನಿಂತ ಸಾರ್ವಜನಿಕರು
ಜಿಲ್ಲೆಯ 6 ತಾಲೂಕು ಆಸ್ಪತ್ರೆಗಳಲ್ಲೂ ಕೊವಿಡ್ಗೆ ಸಂಬಂಧಿಸಿದ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಗಳನ್ನು ನೀಡಲಾಗುತ್ತಿದೆ. ಮೆಡಿಕಲ್ ಜೊತೆಗೆ ಸ್ಥಳೀಯವಾಗಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಲಸಿಕೆ ನೀಡಲಾಗುತ್ತಿದೆ.
ಮಂಡ್ಯ: ಎಲ್ಲೆಡೆ ಕೊರೊನಾ ಎರಡನೇ ಅಲೆಯ ಆತಂಕ ಮುಂದುವರೆದಿದ್ದು, ಮಂಡ್ಯ ಜಿಲ್ಲೆಯಲ್ಲೂ ಸಹ ಕೊರೊನಾ ತನ್ನ ಕದಂಬ ಬಾಹು ಚಾಚಿದೆ. ಇಂತಹ ಸಂದರ್ಭದಲ್ಲಿ ಕೊರೊನಾ ತಡೆಯಲು ಮಾಸ್ಕ್ ಧರಿಸಿಕೊಳ್ಳುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಎಷ್ಟು ಮುಖ್ಯವೋ ಸರ್ಕಾರದಿಂದ ನೀಡಲಾಗುತ್ತಿರುವ ಲಸಿಕೆ ತೆಗೆದುಕೊಳ್ಳುವುದು ಸಹ ಅಷ್ಟೇ ಮುಖ್ಯ ಎಂಬ ಮಾತುಗಳು ಕೇಳಿ ಬಂದ ಹಿನ್ನಲೆಯಲ್ಲಿ ಕೊರೊನಾದ ಹರಡುವಿಕೆಯಿಂದ ಭಯಗೊಂಡ ಜನ ತಾವೇ ಈಗ ಮುಂದೆ ಬಂದು ಲಸಿಕೆ ಹಾಕಿಸಿಕೊಳ್ಳಲಾರಂಭಿಸಿದ್ದಾರೆ. ಆರಂಭದಲ್ಲಿ ಸರ್ಕಾರದಿಂದ ಎಷ್ಟೇ ಕರೆ ನೀಡಿದ್ದರು ಜನರು ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದರು. ಆದರೆ ಜನರು ಈಗ ಲಸಿಕೆ ಕಡೆಗೆ ಆಸಕ್ತಿ ತೋರಿಸಲಾರಂಭಿಸಿದ್ದಾರೆ.
ಏಪ್ರಿಲ್ 1 ರಿಂದ ನಾಲ್ಕನೇ ಹಂತದ ಕೋವಿಡ್ ಲಸಿಕಾ ಕಾರ್ಯಕ್ರಮ ಆರಂಭವಾಗಿದ್ದರೂ 60 ವರ್ಷ ಮೇಲ್ಪಟ್ಟವರು ತೋರಿಸಿದ ಆಸಕ್ತಿಯನ್ನ 45 ವರ್ಷ ಮೇಲ್ಪಟ್ಟವರು ತೋರಿಸಿರಲಿಲ್ಲ. ಮದುವೆ, ಹಬ್ಬ, ಜಾತ್ರೆಗಳೆಂದು ಸಬೂಬು ಹೇಳಲಾರಂಭಿಸಿದ್ದರು. ಆದರೆ ಯಾವಾಗ ಜಿಲ್ಲೆಯಲ್ಲಿ ಕೊರೊನಾದ ಹೆಚ್ಚಾಗಲಾರಂಭಿಸಿತೋ ಆಗ ಜನ ಎಚ್ಚೆತ್ತುಕೊಂಡಂತೆ ಕಂಡು ಬಂದಿದ್ದು, ಲಸಿಕೆ ಪಡೆದುಕೊಳ್ಳಲು ಜನ ಸಾಲುಗಟ್ಟಿ ನಿಲ್ಲಲಾರಂಭಿಸಿದ್ದಾರೆ.
ಮಂಡ್ಯದ ಮೆಡಿಕಲ್ ಕಾಲೇಜಿನಲ್ಲಿ ತೆರೆಯಲಾಗಿರುವ ಲಸಿಕಾ ವಿತರಣಾ ಕೇಂದ್ರದಲ್ಲಿ ಪ್ರತಿ ನಿತ್ಯ 500 ಜನರಿಗೆ ಲಸಿಕೆ ನೀಡುವ ಗುರಿ ನೀಡಲಾಗಿದೆ. ಆರಂಭದಲ್ಲಿ ಬಾರದ ಜನ ಈಗ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದ್ದರಾದರೂ ನಿಗದಿತ ಗುರಿ ಅಂದರೆ 500 ತಲುಪಲು ಸಾಧ್ಯವಾಗುತ್ತಿಲ್ಲ. ಆದರೆ, ಜನ ಲಸಿಕೆ ಪಡೆದುಕೊಳ್ಳಲು ಬರುವ ಸಂಖ್ಯೆಯಲ್ಲಿ ಹೆಚ್ಚಾಗಿದೆ ಎಂದು ಮೆಡಿಕಲ್ ಕಾಲೇಜು ನಿರ್ದೇಶಕ ಡಾ ಹರೀಶ್ ಹೇಳಿದ್ದಾರೆ.
ಜಿಲ್ಲೆಯ 6 ತಾಲೂಕು ಆಸ್ಪತ್ರೆಗಳಲ್ಲೂ ಕೊವಿಡ್ಗೆ ಸಂಬಂಧಿಸಿದ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಗಳನ್ನು ನೀಡಲಾಗುತ್ತಿದೆ. ಮೆಡಿಕಲ್ ಜೊತೆಗೆ ಸ್ಥಳೀಯವಾಗಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಲಸಿಕೆ ನೀಡಲಾಗುತ್ತಿದೆ. ತಾಲೂಕು ಆಸ್ಪತ್ರೆಗಳಲ್ಲಿ 300 ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 100 ಜನರಿಗೆ ಎಂದು ಗುರಿ ನಿಗದಿಪಡಿಸಲಾಗುತ್ತಿದ್ದು, ಜಿಲ್ಲೆಯಲ್ಲಿ ಕೊವಿಡ್ ಪ್ರಮಾಣದಲ್ಲಿ ಏರಿಕೆಯಾಗುವುದನ್ನ ನೋಡುತ್ತಿರುವ ಜನರು ತಾವೇ ಮುಂದೆ ಬಂದು ಲಸಿಕೆ ಪಡೆದುಕೊಳ್ಳುತ್ತಿರುವುದು ಸಮಾಧಾನ ತಂದೊಡ್ಡಿದೆ.
ಈ ಬಗ್ಗೆ ಮಾತನಾಡಿರುವ ಮಂಡ್ಯ ಶಾಸಕ ಎಂ. ಶ್ರೀನಿವಾಸ್ ಇಂದು ನಾನು ಮೆಡಿಕಲ್ ಕಾಲೇಜಿನಲ್ಲಿ 2 ನೇ ಡೋಸ್ ಲಸಿಕೆ ಪಡೆದುಕೊಂಡಿದ್ದೇನೆ. ಜನರು ಸಹ ಯಾವುದೇ ಭಯವಿಲ್ಲದೆ ಬಂದು ಲಸಿಕೆ ಪಡೆದುಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ:
ಕೊರೊನಾ ಲಸಿಕೆ ಬಗ್ಗೆ ಗೊಂದಲ ಬೇಡ, 18 ವರ್ಷ ಮೇಲ್ಪಟ್ಟವರು ಕೂಡಾ 2 ಡೋಸ್ ಲಸಿಕೆ ಪಡೆಯಬೇಕು: ಆರೋಗ್ಯ ಸಚಿವ ಸುಧಾಕರ್
(Mandya people are coming forward to get covid 19 vaccination )