ಕೊರೊನಾ ಸೋಂಕು ತಡೆ ಕುರಿತು ಚರ್ಚಿಸಲು ಏ.18ಕ್ಕೆ ನಿಗದಿಯಾಗಿದ್ದ ಸರ್ವಪಕ್ಷ ಸಭೆ ಮುಂದೂಡಿಕೆ

Covid-19: ರಾಜ್ಯದಲ್ಲಿ ಕೊರೊನಾ ಸೋಂಕು ವೇಗವಾಗಿ ಹರಡುತ್ತಿದೆ. ಅಂಕಿಅಂಶಗಳು ಅಪಾಯದ ಮಟ್ಟ ಮೀರಿ ಬೆಳೆಯುತ್ತಿದ್ದರೆ,  ಬೆಂಗಳೂರಿನ ಸ್ಮಶಾನಗಳಲ್ಲಿ ಚಿತೆಗಳು ಅವಿರತ ಉರಿಯುತ್ತಿವೆ.  ಆರೋಗ್ಯ ವ್ಯವಸ್ಥೆ ಕುಸಿಯುತ್ತಿದ್ದು, ಆಸ್ಪತ್ರೆಗಳಲ್ಲಿ ಬೆಡ್​ ಖಾಲಿಯಿಲ್ಲ ಫಲಕಗಳು ತೂಗಾಡುತ್ತಿವೆ.

 • TV9 Web Team
 • Published On - 21:43 PM, 16 Apr 2021
ಕೊರೊನಾ ಸೋಂಕು ತಡೆ ಕುರಿತು ಚರ್ಚಿಸಲು ಏ.18ಕ್ಕೆ ನಿಗದಿಯಾಗಿದ್ದ ಸರ್ವಪಕ್ಷ ಸಭೆ ಮುಂದೂಡಿಕೆ
ಪ್ರಾತಿನಿಧಿಕ ಚಿತ್ರ

ರಾಜ್ಯದಲ್ಲಿ ಕೊರೊನಾ ಸೋಂಕು ವೇಗವಾಗಿ ಹರಡುತ್ತಿದೆ. ಅಂಕಿಅಂಶಗಳು ಅಪಾಯದ ಮಟ್ಟ ಮೀರಿ ಬೆಳೆಯುತ್ತಿದ್ದರೆ,  ಬೆಂಗಳೂರಿನ ಸ್ಮಶಾನಗಳಲ್ಲಿ ಚಿತೆಗಳು ಅವಿರತ ಉರಿಯುತ್ತಿವೆ.  ಆರೋಗ್ಯ ವ್ಯವಸ್ಥೆ ಕುಸಿಯುತ್ತಿದ್ದು, ಆಸ್ಪತ್ರೆಗಳಲ್ಲಿ ಬೆಡ್​ ಖಾಲಿಯಿಲ್ಲ ಫಲಕಗಳು ತೂಗಾಡುತ್ತಿವೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಶುಕ್ರವಾರ ಕೊರೊನಾ ಸೋಂಕು ದೃಢಪಟ್ಟಿದೆ. ಅವರು ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಸ್ಕಿ ವಿಧಾನಸಭಾ ಉಪಚುನಾವಣೆಯ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲರಿಗೂ ಸೋಂಕು ದೃಢಪಟ್ಟಿದೆ. ಈ ನಡುವೆ ರಾಜ್ಯದಲ್ಲಿ ಲಾಕ್​ಡೌನ್​ ಭೀತಿಯೂ ಆವರಿಸಿದೆ. ಮಸ್ಕಿ, ಬಸವಕಲ್ಯಾಣ ಮತ್ತು ಬೆಳಗಾವಿ ಉಪಚುನಾವಣೆಯ ಮತದಾನದ ನಂತರ, ಅಂದರೆ ನಾಳೆ (ಏಪ್ರಿಲ್ 17) ರಾತ್ರಿ ಸರ್ಕಾರ ಈ ಸಂಬಂಧ ಮಹತ್ವದ ನಿರ್ಧಾರ ಘೋಷಿಸಬಹುದು ಎಂಬ ಮಾತುಗಳು ಪ್ರಬಲವಾಗಿ ಕೇಳಿಬರುತ್ತಿವೆ.

(Coronavirus India Karanataka covid-19 vaccine lockdown night curfew live updates)

LIVE NEWS & UPDATES

The liveblog has ended.
 • 16 Apr 2021 21:43 PM (IST)

  ರಾಜ್ಯ ಸರ್ಕಾರದಿಂದ 70,000 ರೆಮ್​ಡಿಸಿವಿರ್ ಖರೀದಿ ಪ್ರಕ್ರಿಯೆ

  ಬೆಂಗಳೂರು: ರಾಜ್ಯ ಸರ್ಕಾರದಿಂದ 70,000 ರೆಮ್​ಡಿಸಿವಿರ್ ಖರೀದಿ ಪ್ರಕ್ರಿಯೆ ನಡೆಸಿದೆ. 20,000 ರೆಮ್​ಡಿಸಿವಿರ್ ಡೋಸ್​ ಇಂದು ರಾಜ್ಯಕ್ಕೆ ಪೂರೈಕೆಯಾಗಿದೆ. ಈಗಾಗಲೇ 30,000 ರೆಮ್​ಡಿಸಿವಿರ್ ಡೋಸ್ ದಾಸ್ತಾನು ಇದೆ. ಖಾಸಗಿ ಆಸ್ಪತ್ರೆಗಳಿಗೂ ರೆಮ್​ಡಿಸಿವಿರ್ ಪೂರೈಕೆ ಬಗ್ಗೆ ಸರ್ಕಾರದಿಂದ ಚರ್ಚೆ ನಡೆದಿದೆ.

 • 16 Apr 2021 21:36 PM (IST)

  ಏ.18ಕ್ಕೆ ನಿಗದಿಯಾಗಿದ್ದ ಸರ್ವಪಕ್ಷ ಸಭೆ ಮುಂದೂಡಿಕೆ

  ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಏಪ್ರಿಲ್ 18ರ ಭಾನುವಾರ ಸಂಜೆ 4 ಗಂಟೆಗೆ ನಡೆಯಬೇಕಿದ್ದ ಸರ್ವಪಕ್ಷ ಸಭೆಯನ್ನು ಮುಂದೂಡಲಾಗಿದೆ. ಕೊವಿಡ್ ನಿಯಂತ್ರಣ ಸಂಬಂಧ ಉಭಯ ಸದನಗಳ ಮುಖಂಡರ ಸಭೆಯನ್ನು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರೆದಿದ್ದರು.

 • 16 Apr 2021 20:39 PM (IST)

  ಮದುವೆಗೆ ಹೋಗಿದ್ದ 21 ಜನರಿಗೆ ಕೊರೊನಾ ಸೋಂಕು

  ಶಿವಮೊಗ್ಗ: ಮದುವೆಗೆ ಹೋಗಿದ್ದ ಒಂದೇ ಗ್ರಾಮದ 21 ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಭದ್ರಾವತಿ ತಾಲೂಕು ಅರಬಿಳಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಳ್ಳಿ ಗ್ರಾಮಸ್ಥರು ಏ.8 ರಂದು ನಂಜುಂಡೇಶ್ವರಸ್ವಾಮಿ ದೇಗುಲದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಮದುವೆಯಲ್ಲಿ ಪಾಲ್ಗೊಂಡಿದ್ದ 200ಕ್ಕೂ ಹೆಚ್ಚು ಜನರ ಪೈಕಿ 73 ಮಂದಿಯ ಕೊವಿಡ್ ಟೆಸ್ಟ್​ ಮಾಡಲಾಗಿತ್ತು. ಈ ವೇಳೆ 21 ಜನರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

 • 16 Apr 2021 20:28 PM (IST)

  ಸೂಪರ್ ಸ್ಪ್ರೆಡರ್ ಆಗಲು ಹೊರಟಿದ್ದೀರಾ? ಆರೋಗ್ಯ ಸಚಿವ ಸುಧಾಕರ್​ ಕಾಲೆಳೆದ ಕಾಂಗ್ರೆಸ್

  ಬೆಂಗಳೂರು: ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರ ನಡೆಯನ್ನು ಕಾಂಗ್ರೆಸ್​ ಟ್ವಿಟರ್​ನಲ್ಲಿ ಟೀಕೆ ಮಾಡಿದೆ. ಸಿಎಂ ಸಂಪರ್ಕದಲ್ಲಿದ್ದ ತಾವು ಕ್ವಾರಂಟೈನ್ ಆಗದೆ ಸೂಪರ್ ಸ್ಪ್ರೆಡರ್ ಆಗಲು ಹೊರಟಿದ್ದೀರಾ ಎಂದು ಪ್ರಶ್ನಿಸಿದೆ. ಕಳೆದ ವರ್ಷ ಜವಾಬ್ದಾರಿ ಮರೆತು ಸ್ವಿಮಿಂಗ್ ಪೂಲ್​ನಲ್ಲಿ ಮಜಾ ಮಾಡುತ್ತಿದ್ದಿರಿ. ಈಗ ನಾನೂ ಕೊರೊನಾ ಯೋಧ, ನಿಯಮಗಳು ನನಗೆ ಅನ್ವಯಿಸುವುದಿಲ್ಲ ಎನ್ನುತ್ತಿರುವಿರಿ. ಇದು ನಿಮ್ಮ ದುರಹಂಕಾರ ಮತ್ತು ಬೇಜವಾಬ್ದಾರಿತನದ ಪರಮಾವಧಿ ಎಂದು ಕಾಂಗ್ರೆಸ್ ಟೀಕಿಸಿದೆ.

 • 16 Apr 2021 20:07 PM (IST)

  ICSE 10, ISC 12ನೇ ತರಗತಿ ಪರೀಕ್ಷೆಗಳು ಮುಂದೂಡಿಕೆ

  ದೆಹಲಿ: ದೇಶಾದ್ಯಂತ ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ಮೇ 4ರಿಂದ ಆರಂಭವಾಗಬೇಕಿದ್ದ ICSE 10, ISC 12ನೇ ತರಗತಿ ಪರೀಕ್ಷೆಗಳನ್ನು CISCE (ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಗ್ಸಾಮಿನೇಷನ್) ಮುಂದೂಡಿದೆ.  ಮುಂದೂಡಲಾದ ಪರೀಕ್ಷೆ ದಿನಾಂಕವನ್ನು ಜೂನ್ ಮೊದಲ ವಾರದಲ್ಲಿ ಪ್ರಕಟಿಸಲಾಗುವುದು ಎಂದು CISCE ಮಾಧ್ಯಮ ಪ್ರಕಟಣೆ ತಿಳಿಸಿದೆ.

  CISCE

  CISCE (ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಗ್ಸಾಮಿನೇಷನ್)

   

 • 16 Apr 2021 19:56 PM (IST)

  ಕೊವಿಡ್ ಸೋಂಕಿತರ ಚಿಕಿತ್ಸೆಗೆ ವಿಕ್ಟೋರಿಯಾ ಆಸ್ಪತ್ರೆ ಮೀಸಲು

  ಬೆಂಗಳೂರು: ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇನ್ನು ಮುಂದೆ ಕೊವಿಡ್ ಸೋಂಕಿತರಿಗೆ ಮಾತ್ರ ಚಿಕಿತ್ಸೆ ನೀಡಲಾಗುತ್ತದೆ. ನಾನ್ ಕೊವಿಡ್ ರೋಗಿಗಳಿಗೆ ಚಿಕಿತ್ಸೆ ಇಲ್ಲ ಎಂದು ಟಿವಿ9ಗೆ ವೈದ್ಯಕೀಯ ಅಧೀಕ್ಷಕ ಡಾ.ರಮೇಶ್ ಕೃಷ್ಣ ಮಾಹಿತಿ ನೀಡಿದ್ದಾರೆ. ಕೊವಿಡ್ ಸಂಕಷ್ಟ ಮುಗಿಯುವವರೆಗೆ ಇದೇ ಕ್ರಮ ಮುಂದುವರಿಯಲಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಹೆರಿಗೆ ಮತ್ತು ಮಕ್ಕಳ ವಿಭಾಗ, ವಾಣಿವಿಲಾಸ್, ಮಿಂಟೋ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ. ಆರೋಗ್ಯ ಸಚಿವ ಸುಧಾಕರ್ ಆಸ್ಪತ್ರೆಗೆ ಭೇಟಿ ನೀಡಿ ಆಡಳಿತ ಮಂಡಳಿ ಜೊತೆಗೆ ಸಭೆ ನಡೆಸಿದ ನಂತರ ಈ ಬೆಳವಣಿಗೆ ನಡೆದಿದೆ.

  ವಿಕ್ಟೋರಿಯಾ ಆಸ್ಪತ್ರೆಯಲ್ಲಿರುವ ಪ್ರಯೋಗಾಲಯ

 • 16 Apr 2021 19:01 PM (IST)

  ರಾಜ್ಯ ಸರ್ಕಾರದಿಂದ ಹೊಸ ಮಾರ್ಗಸೂಚಿ ಬಿಡುಗಡೆ

  ಬೆಂಗಳೂರು: ರಾಜ್ಯ ಸರ್ಕಾರವು ಶುಕ್ರವಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ತೆರೆದ ಪ್ರದೇಶದಲ್ಲಿ ಮದುವೆ ಕಾರ್ಯಕ್ರಮ ನಡೆದರೆ 200 ಜನ, ಕಲ್ಯಾಣ ಮಂಟಪ, ಹಾಲ್‌ಗಳಲ್ಲಿ ಮದುವೆ ನಡೆದ 100 ಜನರು ಮಾತ್ರ ಪಾಲ್ಗೊಳ್ಳಬಹುದು. ಹುಟ್ಟುಹಬ್ಬ ಇತರೆ ಕಾರ್ಯಕ್ರಮಗಳಲ್ಲಿ 50 ಜನರಿಗೆ ಪಾಲ್ಗೊಳ್ಳಲು ಅವಕಾಶವಿದೆ. ಅಂತ್ಯಸಂಸ್ಕಾರದಲ್ಲಿ 25 ಜನರು ಮಾತ್ರ ಭಾಗಿಯಾಗಬೇಕು ಎಂದು ಮಾರ್ಗಸೂಚಿ ಹೇಳಿದೆ. ಧಾರ್ಮಿಕ ಕಾರ್ಯಕ್ರಮ ಆಚರಣೆಗೆ ನಿರ್ಬಂಧ ವಿಧಿಸಲಾಗಿದೆ. ರಾಜಕೀಯ ಸಮಾರಂಭಗಳಲ್ಲಿ 200 ಜನ ಮಾತ್ರ ಭಾಗಿಯಾಗಬಹುದು ಎಂದು ರಾಜ್ಯ ಸರ್ಕಾರ ಹೇಳಿದೆ.

  ರಾಜ್ಯ ಸರ್ಕಾರ ಹೊರಡಿಸಿರುವ ಹೊಸ ಮಾರ್ಗಸೂಚಿ

 • 16 Apr 2021 18:57 PM (IST)

  ಕೊವ್ಯಾಕ್ಸಿನ್ ಲಸಿಕೆ ಉತ್ಪಾದನೆ ದ್ವಿಗುಣಕ್ಕೆ ಕೇಂದ್ರ ಸರ್ಕಾರ ಕ್ರಮ

  ದೆಹಲಿ: ಕೊವ್ಯಾಕ್ಸಿನ್ ಲಸಿಕೆಯ ಉತ್ಪಾದನೆ ಹೆಚ್ಚಳಕ್ಕೆ ಕೇಂದ್ರ ಸರ್ಕಾರವು ಕ್ರಮ ಕೈಗೊಂಡಿದೆ. ಮೇ, ಜೂನ್​ನಲ್ಲಿ ಕೊವ್ಯಾಕ್ಸಿನ್ ಲಸಿಕೆ ಉತ್ಪಾದನೆ ದ್ವಿಗುಣಗೊಳ್ಳುವ ನಿರೀಕ್ಷೆಯಿದೆ. ಏಪ್ರಿಲ್ ತಿಂಗಳಲ್ಲಿ ‌ಒಂದು ಕೋಟಿ ಡೋಸ್ ಉತ್ಪಾದನೆಯಾಗುತ್ತಿದೆ. ಜುಲೈ, ಆಗಸ್ಟ್ ಅಂತ್ಯಕ್ಕೆ 6-7 ಕೋಟಿ ಡೋಸ್ ಉತ್ಪಾದನೆಯಾಗುವ ನಿರೀಕ್ಷೆಯಿದೆ. ಸೆಪ್ಟೆಂಬರ್​ಗೆ ತಿಂಗಳಿಗೆ 10 ಕೋಟಿ ಡೋಸ್ ಉತ್ಪಾದನೆಯ ಗುರಿ ಹೊಂದಲಾಗಿದೆ. ಕೋಲಾರದ ಮಾಲೂರಿನಲ್ಲಿ ಲಸಿಕೆ ಉತ್ಪಾದನೆಗೆ ಭಾರತ್ ಬಯೋಟೆಕ್ ಕಂಪನಿಗೆ ಕೇಂದ್ರ ಸರ್ಕಾರದಿಂದ ₹65 ಕೋಟಿ ಹಣಕಾಸಿನ ನೆರವು ನೀಡಿದೆ ಎಂದು ಕೇಂದ್ರ ವಿಜ್ಞಾನ, ತಂತ್ರಜ್ಞಾನ ಇಲಾಖೆಯ ಮಾಧ್ಯಮ ಪ್ರಕಟಣೆ ತಿಳಿಸಿದೆ.

 • 16 Apr 2021 18:53 PM (IST)

  ಆಂಧ್ರದಲ್ಲಿ ಕೊರೊನಾ ಲಸಿಕೆ ಖಾಲಿ

  ಆಂಧ್ರಪ್ರದೇಶದಲ್ಲಿ ಕೊರೊನಾ ಲಸಿಕೆಯ ದಾಸ್ತಾನು ಖಾಲಿಯಾಗಿದೆ. ತಕ್ಷಣವೇ 60 ಲಕ್ಷ ಡೋಸ್ ಲಸಿಕೆ ಕಳಿಸಲು ಪ್ರಧಾನಿಗೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಪತ್ರ ಬರೆದು ಮನವಿ ಮಾಡಿದ್ದಾರೆ.

 • 16 Apr 2021 18:51 PM (IST)

  ವಿವಿಧ ಜಿಲ್ಲೆಗಳಲ್ಲಿ ಸೋಂಕು ಮತ್ತು ಸಾವಿನ ವಿವರ

  ವಿವಿಧ ಜಿಲ್ಲೆಗಳಲ್ಲಿ ಸೋಂಕು ಮತ್ತು ಸಾವಿನ ವಿವರ

 • 16 Apr 2021 18:27 PM (IST)

  ಜಿಲ್ಲಾವಾರು ಸೋಂಕಿತರು ಮತ್ತು ಮೃತರ ಮಾಹಿತಿ

  ಕರ್ನಾಟಕದಲ್ಲಿ ಇಂದು 78 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ. ಜಿಲ್ಲಾವಾರು ಸೋಂಕಿತರು ಮತ್ತು ಮೃತರ ಮಾಹಿತಿ ಇಲ್ಲಿದೆ.

  Covid-Update

  ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ವರದಿಯಾಗಿರುವ ಸೋಂಕು ಮತ್ತು ಸಾವಿನ ಸಂಖ್ಯೆಗಳ ವಿವರ

 • 16 Apr 2021 18:21 PM (IST)

  ಕರ್ನಾಟಕದಲ್ಲಿ 14,859 ಜನರಿಗೆ ಕೊರೊನಾ, 78 ಸಾವು

  ಕರ್ನಾಟಕ ರಾಜ್ಯದಲ್ಲಿ ಶುಕ್ರವಾರ (ಏಪ್ರಿಲ್ 16) ಹೊಸದಾಗಿ 14,859 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿಂದು ಕೊರೊನಾ ಸೋಂಕಿನಿಂದ 78 ಜನರು ಮೃತಪಟ್ಟಿದ್ದಾರೆ.

 • 16 Apr 2021 18:18 PM (IST)

  ಬಳ್ಳಾರಿ ಜಿಲ್ಲೆಯಲ್ಲಿ 279 ಜನರಿಗೆ ಕೊರೊನಾ

  ಬಳ್ಳಾರಿ: ಜಿಲ್ಲೆಯಲ್ಲಿ ಇಂದು 279 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ 1360 ಕೊರೊನಾ ಸಕ್ರಿಯ ಪ್ರಕರಣಗಳಿವೆ. ಬಳ್ಳಾರಿ ಜಿಲ್ಲೆಯಲ್ಲಿ ಕೊರೊನಾಗೆ ಇಂದು ಒಬ್ಬರು ಬಲಿ

 • 16 Apr 2021 18:18 PM (IST)

  ಉತ್ತರಪ್ರದೇಶದಲ್ಲಿಂದು 27,426 ಜನರಿಗೆ ಕೊರೊನಾ

  ಉತ್ತರಪ್ರದೇಶದಲ್ಲಿಂದು 27,426 ಜನರಿಗೆ ಕೊರೊನಾ. ಕೊರೊನಾ ಸೋಂಕಿಗೆ 103 ಜನರು ಬಲಿ. ಉತ್ತರಪ್ರದೇಶದಲ್ಲಿ ‌1,50,676 ಕೊರೊನಾ ಸಕ್ರಿಯ ಕೇಸ್.

 • 16 Apr 2021 18:14 PM (IST)

  ಕೋರ್ಟ್ ಮಧ್ಯಂತರ ಆದೇಶಗಳು ಮೇ 29ರವರೆಗೆ ವಿಸ್ತರಣೆ

  ಬೆಂಗಳೂರು: ಕೊರೊನಾ ವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಕಕ್ಷಿದಾರರಿಗೆ ಹೈಕೋರ್ಟ್​ ಸದ್ಯಕ್ಕೆ ರಿಲೀಫ್ ನೀಡಿದೆ. ಕೋರ್ಟ್ ನೀಡಿರುವ ಮಧ್ಯಂತರ ಆದೇಶಗಳು ಮೇ 29ರವರೆಗೆ ವಿಸ್ತರಣೆಯಾಗಲಿದೆ. ಕೋರ್ಟ್ ನೀಡಿರುವ ನೆಲಸಮ ಆದೇಶಗಳು ಅಮಾನತುಗೊಳ್ಳಲಿವೆ. ಹೈಕೋರ್ಟ್, ಸಿವಿಲ್ ಕೋರ್ಟ್, ನ್ಯಾಯಮಂಡಳಿ
  ಫ್ಯಾಮಿಲಿ ಕೋರ್ಟ್, ಎಲ್ಲ ಕೋರ್ಟ್ ಆದೇಶಗಳಿಗೂ ಇದು ಅನ್ವಯಿಸಲಿದೆ. ಈ ಅವಧಿಯಲ್ಲಿ ಸರ್ಕಾರ, ಮುನಿಸಿಪಾಲಿಟಿಗಳೂ ತೆರವಿಗೆ ಮುಂದಾಗಬಾರದು. ಕಕ್ಷಿದಾರರು ಕೋರ್ಟ್​ಗಳಿಗೆ ಬರುವುದನ್ನು ತಪ್ಪಿಸುವ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಂಡಿರುವುದಾಗಿ ಹೈಕೋರ್ಟ್​ ಮುಖ್ಯ ನ್ಯಾಯಮೂರ್ತಿ ಎ.ಎಸ್.ಒಕಾ, ನ್ಯಾಯಮೂರ್ತಿ ಅರವಿಂದ್ ಕುಮಾರ್​ ಅವರಿದ್ದ ಪೀಠ ಆದೇಶ ನೀಡಿದೆ.

 • 16 Apr 2021 18:08 PM (IST)

  ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್​ಗೆ ಕೊರೊನಾ

  ಕೇಂದ್ರದ ವಾರ್ತಾ, ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೆಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಕೊವಿಡ್ ದೃಢಪಟ್ಟ ಹಿನ್ನೆಲೆಯಲ್ಲಿ ತಮ್ಮ ಸಂಪರ್ಕದಲ್ಲಿದ್ದವರು ಟೆಸ್ಟ್ ಮಾಡಿಸಿ ಎಂದು ಸಚಿವರು ಮನವಿ ಮಾಡಿದ್ದಾರೆ.

 • 16 Apr 2021 18:06 PM (IST)

  ಕೊರೊನಾ ಸೋಂಕು ಹೆಚ್ಚಳ ಬಗ್ಗೆಹೈಕೋರ್ಟ್ ಕಳವಳ

  ಈ ಬಾರಿ ಕೊರೊನಾ ಸೋಂಕು ವೇಗವಾಗಿ ಹರಡುತ್ತಿದೆ. ಆಸ್ಪತ್ರೆಗಳಲ್ಲಿ ಬೆಡ್ ಕೊರತೆ ಬಗ್ಗೆ ಸರ್ಕಾರ ಉತ್ತರಿಸಬೇಕು. ಸೋಂಕಿತ ಹೈಕೋರ್ಟ್ ಸಿಬ್ಬಂದಿಗೂ ಬೆಡ್ ಸಿಗುತ್ತಿಲ್ಲ. ಖಾಸಗಿ ಆಸ್ಪತ್ರೆಗಳ ಶುಲ್ಕದ ಬಗ್ಗೆಯೂ ವಿವರಣೆ ನೀಡಿ. ಆ್ಯಂಬುಲೆನ್ಸ್​ಗಳ ಲಭ್ಯತೆ ಬಗ್ಗೆಯೂ ವಿವರಣೆ ನೀಡಿ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಹೇಳಿದೆ. ಅದೇ ವೇಳೆ ಕೊವಿಡ್ ಸಮಸ್ಯೆಗೆ ಸ್ಪಂದಿಸಲು ಉನ್ನತ ಸಮಿತಿ ರಚಿಸಲು ಸಾಧ್ಯವೇ ಎಂದು ಕೇಳಿದ ಕೋರ್ಟ್, ನಾಗರಿಕರು ತಮ್ಮ ಕಷ್ಟ ಹೇಳಿಕೊಳ್ಳಲು ವೇದಿಕೆ ಕಲ್ಪಿಸಿ. ಹೆಲ್ಪ್​ಲೈನ್​ಗಳನ್ನು ಮರು ಆರಂಭಿಸಲು ಕ್ರಮ ಕೈಗೊಳ್ಳಿ. ಸೋಂಕಿತರ ಅಂತ್ಯಕ್ರಿಯೆಗೆ ಕೈಗೊಂಡ ಕ್ರಮದ ಬಗ್ಗೆ ತಿಳಿಸಿ ಎಂದು ಹೇಳಿದ್ದು ಆಮ್ಲಜನಕ ಲಭ್ಯತೆ ಬಗ್ಗೆಯೂ ತಿಳಿಸಲು ಸೂಚನೆ ನೀಡಿದೆ.

 • 16 Apr 2021 17:55 PM (IST)

  ಪವರ್ ಸ್ಟಾರ್ ಪವನ್ ಕಲ್ಯಾಣ್​ಗೆ ಕೊರೊನಾ ಪಾಸಿಟಿವ್

  ಪವರ್ ಸ್ಟಾರ್ ಪವನ್ ಕಲ್ಯಾಣಗೆ ಕೊವಿಡ್ ದೃಢಪಟ್ಟಿದೆ. ಕೆಲವು ದಿನಗಳ ಹಿಂದೆ ಕೊರೊನಾ ಪರೀಕ್ಷೆ ಮಾಡಿಸಿದ್ದರು ಪವನ್. ಇವರ ಆರೋಗ್ಯ ಸ್ಥಿರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 • 16 Apr 2021 17:52 PM (IST)

  ಆಂಧ್ರಪ್ರದೇಶಕ್ಕೆ ಹೆಚ್ಚುವರಿ 60 ಲಕ್ಷ ಡೋಸ್ ಲಸಿಕೆ ನೀಡಲು ವೈ.ಎಸ್. ಜಗನ್ ಮನವಿ

  ಆಂಧ್ರಪ್ರದೇಶಕ್ಕೆ ಹೆಚ್ಚುವರಿ 60 ಲಕ್ಷ ಡೋಸ್ ಲಸಿಕೆ ನೀಡಲು ಕೋರಿ ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಆಂಧ್ರಪ್ರದೇಶದಲ್ಲಿ 45 ವರ್ಷ ಮೀರಿದವರಿಗೆ ಮೂರನೇ ವಾರದಲ್ಲಿ ಲಸಿಕೆ ನೀಡುವ ಗುರಿ ಹೊಂದಿದ್ದು ಲಸಿಕೆಯ ಕೊರತೆ ಕಂಡು ಬಂದಿದೆ. ಹಾಗಾಗಿ ಲಸಿಕೆ ದೊರತರೆ ಯೋಜತ ಗುರಿ ಮುಟ್ಟಲು ಸಾಧ್ಯ ಎಂದು ಜಗನ್ ತಮ್ಮ ಪತ್ರದಲ್ಲಿ ಹೇಳಿದ್ದಾರೆ.

 • 16 Apr 2021 17:46 PM (IST)

  ಬಿಎಸ್​ವೈಗೆ ಕೊವಿಡ್ ಬಂದಿರುವುದು ನೋವಾಗಿದೆ: ವಾಟಾಳ್ ನಾಗರಾಜ್

  ಸಿಎಂ ಬಿ.ಎಸ್.ಯಡಿಯೂರಪ್ಪಗೆ ಕೊರೊನಾ ಬಂದಿರುವುದು ನೋವಾಗಿದೆ. ಅವರು ಬೇಗ ಗುಣಮುಖರಾಗಿ ಹೊರಗೆ ಬರಲಿ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ.

 • 16 Apr 2021 17:39 PM (IST)

  ಉಪಚುನಾವಣೆ ಪ್ರಚಾರದ ವೇಳೆ ಸಿಎಂಗೆ ಸೋಂಕು ಬಂದಿದೆ: ಬಿ.ವೈ.ರಾಘವೇಂದ್ರ

  ಉಪಚುನಾವಣೆ ಪ್ರಚಾರದ ವೇಳೆ ಸಿಎಂಗೆ ಸೋಂಕು ಬಂದಿದೆ. 2ನೇ ಸಲ ಪಾಸಿಟಿವ್ ಬಂದಿದ್ದಕ್ಕೆ ಸಹಜವಾಗಿ ಸ್ವಲ್ಪ ಆತಂಕವಾಗಿದೆ. ಪ್ರಚಾರದ ವೇಳೆ ಕೊವಿಡ್ ನಿಯಮ ಪಾಲಿಸುವುದು ಕಷ್ಟ. ಹೀಗಾಗಿ ಯಡಿಯೂರಪ್ಪಗೆ ಕೊರೊನಾ ಹರಡಿದೆ. ಈಗಾಗಲೇ ವ್ಯಾಕ್ಸಿನ್ ಪಡೆದಿದ್ದಾರೆ, ಶೀಘ್ರ ಗುಣಮುಖರಾಗುತ್ತಾರೆ ಎಂದು ಶಿವಮೊಗ್ಗ ಸಂಸದ, ಸಿಎಂ ಪುತ್ರ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.

 • 16 Apr 2021 17:35 PM (IST)

  ಆಸ್ಪತ್ರೆಗಳಿಗೆ ಅಗತ್ಯ ಪ್ರಮಾಣದ ಆಕ್ಸಿಜನ್: ನರೇಂದ್ರ ಮೋದಿ ಪರಾಮರ್ಶೆ

  ದೇಶದಲ್ಲಿ ಸೂಕ್ತ ಪ್ರಮಾಣದಲ್ಲಿ ವೈದ್ಯಕೀಯ ದರ್ಜೆಯ ಆಮ್ಲಜನಕ (ಆಕ್ಸಿಜನ್) ಪೂರೈಕೆಯನ್ನು ಖಚಿತಪಡಿಸಿಕೊಳ್ಳುವ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಶುಕ್ರವಾರ ಪ್ರಗತಿ ಪರಿಶೀಲನೆ ನಡೆಸಿದರು. ಸೋಂಕು ಅತಿ ಹೆಚ್ಚಿರುವ ಮಹಾರಾಷ್ಟ್ರ, ಮಧ‍್ಯಪ್ರದೇಶ, ಗುಜರಾತ್, ಉತ್ತರ ಪ್ರದೇಶ, ದೆಹಲಿ, ಛತ್ತೀಸಗಡ, ಕರ್ನಾಟಕ, ಕೇರಳ, ತಮಿಳುನಾಡು, ಪಂಜಾಜ್, ಹರಿಯಾಣ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಮುಂದಿನ 15 ದಿನಗಳಿಗೆ ಅಂದಾಜು ಅಗತ್ಯವಿರುವಷ್ಟು ಆಮ್ಲಜನಕ ಲಭ್ಯತೆಯನ್ನು ಖಾತ್ರಿಪಡಿಸಿಕೊಂಡರು. ಈ 12 ರಾಜ್ಯಗಳಿಗೆ ಉಕ್ಕು ಘಟಕಗಳು ಮತ್ತು ಇತರ ಮೂಲಗಳಿಂದ ಆಮ್ಲಜನಕ ಮಂಜೂರು ಮಾಡಲಾಗಿದೆ. ವೈದ್ಯಕೀಯ ದರ್ಜೆಯ ಆಮ್ಲಜನಕವನ್ನು ಆಮದು ಮಾಡಿಕೊಳ್ಳುವ ಕುರಿತಂತೆಯೂ ಪ್ರಯತ್ನಗಳು ಮುಂದುವರಿದಿವೆ ಎಂದು ಅಧಿಕಾರಿಗಳು ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿಗೆ ಮಾಹಿತಿ ನೀಡಿದರು.

 • 16 Apr 2021 17:33 PM (IST)

  ಬೆಳಗಾವಿಯಲ್ಲಿ ಹೋಟೆಲ್​ನ 40 ಜನ ಸಿಬ್ಬಂದಿಗೆ ಪರೀಕ್ಷೆ

  ಸಿಎಂ ಬಿ.ಎಸ್ ಯಡಿಯೂರಪ್ಪಗೆ ಕೊರೊನಾ ಸೋಂಕು ಧೃಡಪಟ್ಟ ಹಿನ್ನೆಲೆಯಲ್ಲಿ ಸಿಎಂ ವಾಸ್ತವ್ಯ ಮಾಡಿದ್ದ ಹೋಟೆಲ್​ನ 40 ಜನ ಸಿಬ್ಬಂದಿಗೆ ಪರೀಕ್ಷೆ ಮಾಡಲಾಗಿದೆ. ಯಡಿಯೂರಪ್ಪ ಅವರು ಎರಡು ದಿನ ಸಚಿವ ಉಮೇಶ ಕತ್ತಿ ಮಾಲೀಕತ್ವದ ಯುಕೆ27 ಹೋಟೆಲ್​​ನಲ್ಲಿ ವಾಸ್ತವ್ಯ ಮಾಡಿದ್ದರು.

 • 16 Apr 2021 17:28 PM (IST)

  ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್​ಗೆ ಕೊರೊನಾ ಸೋಂಕು ದೃಢ

  ಜ್ವರ, ಕೆಮ್ಮು ಹಿನ್ನೆಲೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಕೊವಿಡ್ ಪರೀಕ್ಷೆಗೆ ಒಳಗಾಗಿದ್ದರು. ಹೆಬ್ಬಾಳ್ಕರ್ ಕುಟುಂಬದ 8 ಜನ ಸದಸ್ಯರಿಗೆ ಸೋಂಕು ದೃಢ. ಚಾಲಕ, ಅಡಿಗೆ ಭಟ್ಟನಿಗೂ ಕೊರೊನಾವೈರಸ್ ಸೋಂಕು ತಗುಲಿದೆ. ಕಳೆದ 15 ದಿನಗಳಿಂದ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ನಡೆಸಿದ್ದರು ಹೆಬ್ಬಾಳ್ಕರ್. ಇವರು ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ‌ ಸೇರಿದಂತೆ ಸಾಕಷ್ಟು ಜನರ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದರು.

 • 16 Apr 2021 17:21 PM (IST)

  ಬೆಂಗಳೂರು ವಿವಿಯ ಎಲ್ಲ ಪರೀಕ್ಷೆಗಳು ಮುಂದೂಡಿಕೆ

  ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಸ್ಫೋಟ ಹಿನ್ನೆಲೆಯಲ್ಲಿ ಬೆಂಗಳೂರು ವಿವಿಯ ಎಲ್ಲ ಪರೀಕ್ಷೆಗಳನ್ನೂ ಮುಂದೂಡಲಾಗಿದೆ. ಬೆಂಗಳೂರು ವಿವಿಯ ಎಲ್ಲಾ ಪದವಿ, ಸ್ನಾತಕೋತ್ತರ, ಎಂಜಿನಿಯರಿಂಗ್ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಏ.19 ರಂದು ನಿಗದಿಯಾಗಿದ್ದ ಬೆಂಗಳೂರು ವಿವಿ ಪರೀಕ್ಷೆಗಳನ್ನೂ ಮುಂದೂಡಲಾಗಿದೆ. ಮುಂದೂಡಿಕೆಯಾದ ಪರೀಕ್ಷೆಗಳ ದಿನಾಂಕ ಶೀಘ್ರ ಪ್ರಕಟಿಸಲಾಗುವುದು ಎಂದು ಬೆಂಗಳೂರು ವಿವಿ ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್ ಮಾಹಿತಿ ನೀಡಿದ್ದಾರೆ.

 • 16 Apr 2021 17:15 PM (IST)

  ರೇಣುಕಾಚಾರ್ಯಗೆ ಕೊವಿಡ್ ಟೆಸ್ಟ್

  ದಾವಣಗೆರೆ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಸಿಎಂ ಸಂಪರ್ಕದಲ್ಲಿದ್ದ ರೇಣುಕಾಚಾರ್ಯಗೆ ಕೊವಿಡ್ ಟೆಸ್ಟ್ ಮಾಡಲು ನಿರ್ಧರಿಸಲಾಗಿದೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಕೊವಿಡ್ ಪರೀಕ್ಷೆ ನಡೆಯಲಿದೆ. ಮಸ್ಕಿ ಮತ್ತು ಬೆಂಗಳೂರಿನಲ್ಲಿ ಯಡಿಯೂರಪ್ಪ ಜೊತೆಗೆ ರೇಣುಕಾಚಾರ್ಯ ಇದ್ದರು.

 • 16 Apr 2021 17:09 PM (IST)

  ಕೊರೊನಾ 2ನೇ ಅಲೆಗೆ ಬೆಂಗಳೂರು ಪೊಲೀಸರು ತತ್ತರ: 89 ಪೊಲೀಸರಿಗೆ ಸೋಂಕು

  ಬೆಂಗಳೂರು: ಕೊರೊನಾ 2ನೇ ಅಲೆಗೆ ಬೆಂಗಳೂರು ಪೊಲೀಸರು ತತ್ತರಿಸಿದ್ದಾರೆ. ನಗರದ ಒಟ್ಟು 89 ಪೊಲೀಸರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಪಶ್ಚಿಮ ವಿಭಾಗದಲ್ಲಿ 31, ಪೂರ್ವ ಮತ್ತು ಆಗ್ನೇಯ ವಿಭಾಗದಲ್ಲಿ ತಲಾ 9, ಕೇಂದ್ರ ವಿಭಾಗದಲ್ಲಿ ಐವರು, ದಕ್ಷಿಣ ವಿಭಾಗದಲ್ಲಿ ನಾಲ್ವರು, ಈಶಾನ್ಯ ವಿಭಾಗದಲ್ಲಿ ಇಬ್ಬರಿಗೆ ಸೋಂಕು ದೃಢಪಟ್ಟಿದೆ. ಉತ್ತರ ವಿಭಾಗ, ವೈಟ್‌ಫೀಲ್‌ನಲ್ಲಿ ತಲಾ ಒಬ್ಬರಿಗೆ ಸೋಂಕು ಬಂದಿದೆ. ನಗರ ಸಶಸ್ತ್ರ ಮೀಸಲು ಪಡೆಯ (ಸಿಎಆರ್) ಕೇಂದ್ರ ಕಚೇರಿಯ 10 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

 • 16 Apr 2021 17:09 PM (IST)

  ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲರಿಗೆ ಕೊರೊನಾ

  ಬಾಗಲಕೋಟೆ: ಮಸ್ಕಿ ಉಪಚುನಾವಣೆ ಪ್ರಚಾರದಲ್ಲಿ ಭಾಗಿಯಾಗಿದ್ದ ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ್‌ಗೆ ಕೊರೊನಾ ಸೋಂಕು ದೃಢಪಟ್ಟಿದೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಶಾಸಕ ದಾಖಲಾಗಿದ್ದಾರೆ.

 • 16 Apr 2021 17:02 PM (IST)

  ಕೊರೊನಾ ಬಗ್ಗೆ ಪ್ರಶ್ನಿಸಿದ್ದಕ್ಕೆ ಸಿಟ್ಟಿಗೆದ್ದ ಸುಧಾಕರ

  ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಕೊರೊನಾ ಸೋಂಕು ದೃಢಪಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ನೀವು ಕ್ವಾರಂಟೈನ್‌ ಆಗುವುದಿಲ್ಲವಾ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಆರೋಗ್ಯ ಸಚಿವ ಗರಂ ಆಗಿ ಪ್ರತಿಕ್ರಿಯಿಸಿದರು. ನಾನು ಕೊರೊನಾ ಯೋಧ. ಕೊವಿಡ್‌ ನಿಯಂತ್ರಿಸುತ್ತಿರುವ ಟೀಮ್‌ನ ಲೀಡರ್ ನಾನು. ನನ್ನನ್ನು ಅಸಹ್ಯದ ರಾಜಕೀಯಕ್ಕೆ ಎಳೆಯಬೇಡಿ. ನಾನು ಮಾಡುವ ಕೆಲಸಕ್ಕೆ ಅಡ್ಡಿ ಮಾಡಬೇಡಿ ಎಂದು ಸಿಟ್ಟಿನಿಂದ ಪ್ರತಿಕ್ರಿಯಿಸಿದರು.