Belagavi Lok Sabha Bypoll 2021: ಕರವೇ, ಸಾರಿಗೆ ಸಂಘಟನೆ ಮತ್ತು ರೈತ ಸಂಘದ ಮತ ಸೆಳೆಯಲು ಕಾಂಗ್ರೆಸ್ ಪ್ರಯತ್ನ?
ಕಾಂಗ್ರೆಸ್ ಪಕ್ಷವು ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ, ರಾಜ್ಯ ರೈತ ಸಂಘ ಮತ್ತು ಸಾರಿಗೆ ಒಕ್ಕೂಟದ ಮತ ಸೆಳೆಯಲು ಪ್ರಯತ್ನಿಸಿದೆ ಎಂಬ ವಿಚಾರ ಈಗ ಹೊರಗೆ ಬಂದಿದೆ.
ಬೆಳಗಾವಿ ಲೋಕಸಭಾ ಉಪಚುನಾವಣೆ ಮತ್ತು ಮಸ್ಕಿ ವಿಧಾನಸಭಾ ಉಪಚುನಾವಣೆಯಲ್ಲಿ ಹೇಗಾದರೂ ಮಾಡಿ ಗೆಲುವು ಸಾಧಿಸಲೇಬೇಕೆಂದು ಪಣ ತೊಟ್ಟಿರುವ ಕಾಂಗ್ರೆಸ್ ಪಕ್ಷ ಹೊಸ ರೀತಿಯ ರಣನೀತಿಯನ್ನು ಮಾಡಿರುವ ವಿಷಯ ತಡವಾಗಿ ಹೊರಬಂದಿದೆ. ಕರ್ನಾಟಕ ರಕ್ಷಣಾ ವೇದಿಕೆ, ಸಾರಿಗೆ ನೌಕರರ ಒಕ್ಕೂಟ ಮತ್ತು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಪದಾಧಿಕಾರಿಗಳ ಜೊತೆ ಮಾತನಾಡಿರುವ ಕಾಂಗ್ರೆಸ್ ನಾಯಕರು, ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗೆ ಮತ ಹಾಕಿಸುವಂತೆ ಮನವೊಲಿಸಿ ಎಂದು ಕೇಳಿದ್ದಾರೆ ಎಂದು ತಿಳಿದು ಬಂದಿದೆ. ಬೆಳಗಾವಿ, ಮಸ್ಕಿ ಮತ್ತು ಬಸವಕಲ್ಯಾಣ ಉಪಚುನಾವಣೆಗಾಗಿ ಮತದಾನ ಶನಿವಾರ ನಡೆಯಲಿದೆ.
ಈ ತಂತ್ರ ಯಾಕೆ? ಕರ್ನಾಟಕ ರಕ್ಷಣಾ ವೇದಿಕೆಯ ಮುಖ್ಯಸ್ಥ ನಾರಾಯಣ ಗೌಡರ ಜೊತೆ ಮಾತನಾಡಿರುವ ಕೆಪಿಸಿಸಿ ನಾಯಕರು ಈ ಸಂಘಟನೆಯ ಸದಸ್ಯರು ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಯಾರಿದ್ದಾರೋ ಅವರ ಮನವೊಲಿಸಿ ಎಂದು ಕೋರಿದ್ದಾರೆ ಎಂದು ತಿಳಿದು ಬಂದಿದೆ. ಕರವೇ (ನಾರಾಯಣ ಗೌಡ ಬಣ) ಬೆಳಗಾವಿಯಲ್ಲಿ ಬಲಿಷ್ಠ ಸದಸ್ಯ ತಂಡ ಹೊಂದಿದೆ. ಗಡಿ ವಿಚಾರ ಬಂದಾಗ ಅತ್ಯಂತ ಗಟ್ಟಿಯಾಗಿ ಧ್ವನಿ ಎತ್ತುವ ಈ ಬಣ ಇಲ್ಲೀವರೆಗೆ ಯಾವ ಚುನಾವಣೆಯಲ್ಲಿಯೂ ಯಾವ ಪಕ್ಷಕ್ಕೂ ಕೆಲಸ ಮಾಡಿದ ಇತಿಹಾಸ ಇರಲಿಲ್ಲ. ಆದರೆ ಈ ಬಾರಿ, ಈ ಬಣದ ಸದಸ್ಯರಿಗೆ ಬೆಂಗಳೂರಿನಿಂದ ಕಾಂಗ್ರೆಸ್ಗೆ ಬೆಂಬಲ ನೀಡಬೇಕು ಎಂಬ ಸಂದೇಶ ಬಂದಿದೆ ಎಂದು ಹೆಸರು ಹೇಳಲಿಚ್ಛಿಸದ ಸ್ಥಳೀಯ ಕರವೇ (ನಾರಾಯಣ ಗೌಡ ಬಣ) ನಾಯಕರೊಬ್ಬರು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ರಾಜ್ಯ ಸಾರಿಗೆ ನೌಕರರ ಒಕ್ಕೂಟದ ಸದಸ್ಯರಿಗೂ ಇದೇ ರೀತಿಯ ಸಂದೇಶ ಬಂದಿದೆ ಎಂದು ತಿಳಿದು ಬಂದಿದೆ. ಸರಕಾರ ಮತ್ತು ಸಾರಿಗೆ ನೌಕರರ ನಡುವಿನ ಜಿದ್ದಾಜಿದ್ದಿನಲ್ಲಿ ಈ ಚುನಾವಣೆ ನಡೆಯುತ್ತಿರುವುದರಿಂದ, ಇದನ್ನು ಬಳಸಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ. ಈ ಕುರಿತು ಕಳೆದ ಏಪ್ರಿಲ್ 12 ರಂದು, ಕಾಂಗ್ರೆಸ್ ನಾಯಕರು ಈ ಎರಡು ಸಂಘಟನೆಗಳ ನಾಯಕರ ಜೊತೆ ಮಾತನಾಡಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಈ ವಿಚಾರವನ್ನು ನಿರಾಕರಿಸಿರುವ ಕೋಡಿಹಳ್ಳಿ ಚಂದ್ರಶೇಖರ ನನ್ನ ಜೊತೆ ಯಾವ ರಾಜಕೀಯ ಪಕ್ಷದ ನಾಯಕರು ಮಾತನಾಡಿಲ್ಲ. ಆದರೆ, ಈಗಿನ ಪ್ರಸ್ತುತ ಸಂದರ್ಭ ನೋಡಿ ಸ್ಥಳೀಯ ಮಟ್ಟದಲ್ಲಿ ನೀವೇ ನಿರ್ಧಾರ ಮಾಡಿ ಎಂದು ಹೇಳಿದ್ದೇನೆ, ಎಂದು ಟಿವಿ9 ಡಿಜಿಟಲ್ಗೆ ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆಗಾಗಿ ಸಂಪರ್ಕಿಸಿದಾಗ, ಕರವೇ ಅಧ್ಯಕ್ಷ ಟಿ.ಎ.ನಾರಾಯಣ ಗೌಡ ಟಿವಿ9 ಡಿಜಿಟಲ್ ಜೊತೆ ಮಾತನಾಡಿ, ತಮ್ಮಿಂದ ಯಾವ ನಿರ್ದೇಶನ ಹೋಗಿಲ್ಲ. ಕೆಲವು ಜಿಲ್ಲಾ ಅಧ್ಯಕ್ಷರು ಮತ್ತು ಇನ್ನಿತರೆ ಪದಾಧಿಕಾರಿಗಳು ತನ್ನನ್ನು ಸಂಪರ್ಕ ಮಾಡಿ ಸಲಹೆ ಕೇಳಿದ್ದು ನಿಜ. ಆಗ, ಸ್ಥಳೀಯ ಮಟ್ಟದಲ್ಲಿ ಯಾರು ಕನ್ನಡ ಪರ ಕೆಲಸಕ್ಕೆ ಮತ್ತು ರಾಜ್ಯದ ಬಗ್ಗೆ ಸದಾ ಕಾಳಜಿ ತೋರಿಸುತ್ತಾರೋ ಅವರಿಗೆ ಬೆಂಬಲಿಸಿ ಎಂಬ ಸಲಹೆ ನೀಡಿದ್ದೇನೆ ಎಂದು ಹೇಳಿದರು.
ಚುನಾವಣೆಯಲ್ಲಿ ಈ ತಂತ್ರ ಕೆಲಸ ಮಾಡಬಹುದೇ? ಈ ಹಿಂದಿನ ಯಾವ ಚುನಾವಣೆಯಲ್ಲೂ ಈ ಸಂಘಟನೆಗಳು ಮುನ್ನೆಲೆಗೆ ಬಂದು ಯಾವ ರಾಜಕೀಯ ಪಕ್ಷಕ್ಕೂ ಕೆಲಸ ಮಾಡಿದ ಇತಿಹಾಸ ಇಲ್ಲ. ಆದರೆ ಇಂತಹುದೇ ಇನ್ನೊಂದು ವಿಚಾರವೆಂದರೆ ಅದು ಕಾವೇರಿ ವಿವಾದ. ಇದೂ ಸಹ ಯಾವ ರಾಜಕೀಯ ಪಕ್ಷಕ್ಕೂ ಸಹಾಯ ಮಾಡಿಲ್ಲ. ಹೀಗಾಗಿ ಈ ಸಂಘಟನೆಗಳು, ಒಂದೊಮ್ಮೆ ಪ್ರಯತ್ನ ಮಾಡಿದರೂ ಅವು ಉತ್ತರ ಕರ್ನಾಟಕದಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಮತದಾರರ ಮೇಲೆ ಉದ್ದೇಶಿತ ಪ್ರಭಾವ ಬೀರುತ್ತವೆ ಎಂದು ಹೇಳುವುದು ಕಷ್ಟ.
ಸಾರಿಗೆ ನೌಕರರ ಒಕ್ಕೂಟದ ಹೆಚ್ಚಿನ ಸದಸ್ಯರು ಇನ್ನೂ ಕಮ್ಯೂನಿಸ್ಟ್ ಪಕ್ಷದ ಎಐಟಿಯುಸಿ ಗುಂಪಿನ ಸದಸ್ಯರಾಗಿಯೇ ಇದ್ದಾರೆ. ಆದ್ದರಿಂದ ಅವರು ಕೋಡಿಹಳ್ಳಿ ಹೇಳಿದ ಮಾತನ್ನು ಕೇಳುತ್ತಾರೆ ಎಂಬುದು ಕಷ್ಟ ಎಂದು ಸ್ಥಳೀಯ ನಾಯಕರು ಅಭಿಪ್ರಾಯಪಟ್ಟಿದ್ದಾರೆ. ಈ ಹಿಂದಿನ ಚುನಾವಣೆಗಳಂತೆ ಈ ಚುನಾವಣೆಯಲ್ಲಿ ಸಹ ಜಾತಿಯ ಪ್ರಭಾವ ಜಾಸ್ತಿ ಇರುವಂತೆ ಕಾಣುತ್ತಿರುವುದರಿಂದ ಈ ಸಂಘಟನೆಗಳ ಪ್ರಭಾವ ಚುನಾವಣೆಯಲ್ಲಿ ಕೆಲಸ ಮಾಡಬಹುದೇ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ.
ಇದನ್ನೂ ಓದಿ: ಬೆಳಗಾವಿ ಉಪಚುನಾವಣೆ ಪ್ರಚಾರದ ಮಧ್ಯೆ ಕಾಂಗ್ರೆಸ್ ಭಿನ್ನಮತ ಬಹಿರಂಗ
ಇದನ್ನೂ ಓದಿ: ಬೆಳಗಾವಿ ಉಪಚುನಾವಣೆ ಬಗ್ಗೆ ಮಹಾರಾಷ್ಟ್ರದಲ್ಲಿ ವ್ಯಾಪಕ ಕುತೂಹಲ: ಶಿವಸೇನೆ ವಕ್ತಾರ ಸಂಜಯ್ ರಾವುತ್
(Congress leaders reportedly tried to woo votes in Belagavi through pro Kannada and farmer organisation)
Published On - 7:31 pm, Fri, 16 April 21