ಬೆಳಗಾವಿ ಉಪಚುನಾವಣೆ ಬಗ್ಗೆ ಮಹಾರಾಷ್ಟ್ರದಲ್ಲಿ ವ್ಯಾಪಕ ಕುತೂಹಲ: ಶಿವಸೇನೆ ವಕ್ತಾರ ಸಂಜಯ್ ರಾವುತ್
ಬೆಳಗಾವಿ ಲೋಕಸಭೆ ಉಪಚುನಾವಣೆಯನ್ನು ಮಹಾರಾಷ್ಟ್ರದ ಜನತೆ ಕುತೂಹಲದಿಂದ ನೋಡ್ತಿದ್ದಾರೆ. ಬಹಿರಂಗ ಪ್ರಚಾರಕ್ಕೆ 72 ಗಂಟೆ ಸಮಯಾವಕಾಶ ಇದೆ. ಇಲ್ಲಿನ ಎಂಇಎಸ್ ಕಾರ್ಯಕರ್ತರು ಬಿಂದಾಸ್ ಆಗಿ ಪ್ರಚಾರ ಮಾಡಬೇಕು ಎಂದು ಸಂಜಯ್ ರಾವುತ್ ಹೇಳಿದರು.
ಬೆಳಗಾವಿ: ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಅಭ್ಯರ್ಥಿ ಶುಭಂ ಶಳಕೆ ಪರ ಶಿವಸೇನೆಯ ವಕ್ತಾರ, ರಾಜ್ಯಸಭಾ ಸದಸ್ಯ ಸಂಜಯ್ ರಾವುತ್ ಬುಧವಾರ (ಏಪ್ರಿಲ್ 14) ರೋಡ್ ಶೋ ನಡೆಸಿ ಮತಯಾಚಿಸಿದರು. ಬೆಳಗಾವಿಯ ಶಿವಾಜಿ ವೃತ್ತದಿಂದ ಮರಾಠ ಚೌಕ್ವರೆಗೆ ರಾವುತ್ ರೋಡ್ ಶೋ ನಡೆಯಿತು. ರೋಡ್ ಶೋದಲ್ಲಿ ಎಂಇಎಸ್, ಶಿವಸೇನೆ ಕಾರ್ಯಕರ್ತರು ಭಾಗವಹಿಸಿದ್ದರು.
ಇದಕ್ಕೂ ಮುನ್ನ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ರಾಜ್ಯಸಭಾ ಸದಸ್ಯ, ಶಿವಸೇನೆ ವಕ್ತಾರ ಸಂಜಯ್ ರಾವುತ್ ಆಗಮಿಸಿದಾಗ ಕೆಲ ಕಿಡಿಗೇಡಿಗಳು ನಾಡವಿರೋಧಿ ಘೋಷಣೆಗಳನ್ನು ಕೂಗಿದ್ದರು. ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ರಾವುತ್, ಎಂಇಎಸ್ ಅಭ್ಯರ್ಥಿ ಶುಭಂ ಸುಳಕೆ ಪರ ಪ್ರಚಾರಕ್ಕೆ ನಾನು ಬೆಳಗಾವಿಗೆ ಬಂದಿದ್ದೇನೆ. ಎಂಇಎಸ್, ಶಿವಸೇನೆ ಕಾರ್ಯಕರ್ತರು ಒಟ್ಟಾಗಿ ಶುಭಂ ಶಳಕೆ ಗೆಲುವಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.
ಮಹಾರಾಷ್ಟ್ರ ರಾಜಕೀಯ ನಾಯಕರು ಪಕ್ಷಾತೀತವಾಗಿ ಶುಭಂಗೆ ಬೆಂಬಲ ಸೂಚಿಸಬೇಕು ಅದು ನಮ್ಮೆಲ್ಲರ ಕರ್ತವ್ಯ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಿರ್ದೇಶನದ ಮೇರೆಗೆ ನಾನಿಲ್ಲಿ ಪ್ರಚಾರಕ್ಕೆ ಬಂದಿದ್ದೇನೆ. ಆರಂಭದಲ್ಲಿ ಎಂಇಎಸ್ ಅಭ್ಯರ್ಥಿಗೆ 50 ಸಾವಿರ ಮತ ಬರುವುದು ಅನುಮಾನವಿತ್ತು. ಆದರೀಗ ಎಂಇಎಸ್ ಅಭ್ಯರ್ಥಿ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಇಂದು ಇಲ್ಲಿಗೆ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಂದಿದ್ದಾರೆ. ನಾಳೆ ಕೇಂದ್ರ ಸಚಿವ ನಿತೀನ್ ಗಡ್ಕರಿ ಬರ್ತಾರೆ. ನಾಡಿದ್ದು ಪ್ರಧಾನಿಯೂ ಬರಬಹುದು ಎಂದು ಹೇಳಿದರು.
ಬಿಜೆಪಿಯ ಇಂಥ ಮಹತ್ವದ ನಾಯಕರು ಬೆಳಗಾವಿಗೆ ಬರಲು ಎಂಇಎಸ್ ಅಭ್ಯರ್ಥಿ ಶುಭಂ ಒಡ್ಡುತ್ತಿರುವ ಪ್ರಬಲ ಪೈಪೋಟಿಯೇ ಕಾರಣ. ಅವರು ಅತ್ಯಂತ ತೀವ್ರ ಸ್ಪರ್ಧೆ ಒಡ್ಡುತ್ತಿರುವುದು ದಿನಕಳೆದಂತೆ ಗೊತ್ತಾಗುತ್ತಿದೆ. ಬೆಳಗಾವಿ ಲೋಕಸಭೆ ಉಪಚುನಾವಣೆಯನ್ನು ಮಹಾರಾಷ್ಟ್ರದ ಜನತೆ ಕುತೂಹಲದಿಂದ ನೋಡ್ತಿದ್ದಾರೆ. ಬಹಿರಂಗ ಪ್ರಚಾರಕ್ಕೆ 72 ಗಂಟೆ ಸಮಯಾವಕಾಶ ಇದೆ. ಇಲ್ಲಿನ ಎಂಇಎಸ್ ಕಾರ್ಯಕರ್ತರು ಬಿಂದಾಸ್ ಆಗಿ ಪ್ರಚಾರ ಮಾಡಲಿ. ನಮ್ಮ ತಕರಾರು ಇರುವುದು ಕರ್ನಾಟಕ ಸರ್ಕಾರ ಅಥವಾ ಕರ್ನಾಟಕದ ಜನತೆಯ ಜೊತೆಯಲ್ಲ. ಭಾಷೆ, ಗಡಿ, ಸಂಸ್ಕೃತಿ ವಿಚಾರದಲ್ಲಿ ನಮ್ಮ ಹೋರಾಟ ಇದೆ ಎಂದು ಹೇಳಿದರು.
ನಾವೇನು ಪಾಕಿಸ್ತಾನದವರಲ್ಲ, ಲಷ್ಕರೆ ತೋಯ್ಬಾ ಸಂಘಟನೆದವರಲ್ಲ. ನಾವು ರಾಷ್ಟ್ರವಾದಿಗಳು, ಹಿಂದುತ್ವವಾದಿಗಳು. ಛತ್ರಪತಿ ಶಿವಾಜಿ, ರಾಣಿಚೆನ್ನಮ್ಮ ನಡೆಸಿದಂಥ ಅನ್ಯಾಯ ವಿರುದ್ಧದ ಹೋರಾಟ ನಮ್ಮದು. ಗಡಿಹೋರಾಟದಲ್ಲಿ ಹಲವರು ಹುತಾತ್ಮರಾಗಿದ್ದಾರೆ, ಮತ್ತೆ ಕೆಲವರು ಜೈಲಿಗೆ ಹೋಗಿದ್ದಾರೆ. ದಿವಂಗತ ಬಾಳಾಸಾಹೇಬ್ ಠಾಕ್ರೆ ಕೂಡ ಮೂರು ತಿಂಗಳು ಜೈಲಿಗೆ ಹೋಗಿದ್ದರು. ಶಿವಸೇನೆಯ 69 ಕಾರ್ಯಕರ್ತರು ಗಡಿಹೋರಾಟದಲ್ಲಿ ಹುತಾತ್ಮರಾಗಿದ್ದಾರೆ. ಗಡಿಹೋರಾಟಕ್ಕಾಗಿ 69 ಕಾರ್ಯಕರ್ತರನ್ನು ಕಳೆದುಕೊಂಡ ಏಕೈಕ ಪಕ್ಷ ನಮ್ಮದು ಎಂದು ಅವರು ವಿವರಿಸಿದರು. ಮಹಾರಾಷ್ಟ್ರ ಮೈತ್ರಿ ಸರ್ಕಾರದ ಪಕ್ಷಗಳ ಪ್ರತಿನಿಧಿಯಾಗಿ ನಾನು ಪ್ರಚಾರಕ್ಕೆ ಬಂದಿದ್ದೇನೆ ಎಂದು ತಿಳಿಸಿದರು.
(Belagavi By Election Shivsena Spokesman Sanjay Raut in Campaign for MES Candidate)
ಇದನ್ನೂ ಓದಿ: ಕುಂದಾನಗರಿ ಬೆಳಗಾವಿಯಲ್ಲಿ ಚುನಾವಣೆಯ ಕಾವು; ಕಮಲ ಅರಳಿಸಲು ಬಿಜೆಪಿ ನಾಯಕರ ಹೊಸ ತಂತ್ರ