Coronavirus News Live Updates: ನರೇಂದ್ರ ಮೋದಿ ಮಹತ್ವದ ಸಭೆ: ಲಸಿಕೆ ಲಭ್ಯತೆ ಬಗ್ಗೆ ಪರಾಮರ್ಶೆ

|

Updated on: Apr 17, 2021 | 11:38 PM

ಕರ್ನಾಟಕದ ಹಲವೆಡೆ ಆಸ್ಪತ್ರೆಗಳಲ್ಲಿ ತೀವ್ರ ನಿಗಾ ಘಟಕಗಳು ಭರ್ತಿಯಾಗಿದ್ದು ಜನರು ಚಿಕಿತ್ಸೆಗಾಗಿ ಪರದಾಡುವಂತಾಗಿದೆ. ಯಾದಗಿರಿ ಸೇರಿದಂತೆ ರಾಜ್ಯದ ಕೆಲ ಜಿಲ್ಲೆಗಳಲ್ಲಿ ನಿನ್ನೆ ಲಸಿಕೆ ದಾಸ್ತಾನು ಮುಗಿದಿತ್ತು. ಬೆಂಗಳೂರಿನ ಚಿತಾಗಾರಗಳಲ್ಲಿ ಇಂದೂ ಸಹ ಶವಗಳನ್ನು ಹೊತ್ತ ಆ್ಯಂಬುಲೆನ್ಸ್​ಗಳು ಸರದಿಯಲ್ಲಿ ನಿಂತಿದ್ದವು.

Coronavirus News Live Updates: ನರೇಂದ್ರ ಮೋದಿ ಮಹತ್ವದ ಸಭೆ: ಲಸಿಕೆ ಲಭ್ಯತೆ ಬಗ್ಗೆ ಪರಾಮರ್ಶೆ
ಪ್ರಧಾನಿ ನರೇಂದ್ರ ಮೋದಿ

ಕರ್ನಾಟಕ ರಾಜ್ಯದಲ್ಲಿ ಕೊರೊನಾ ಸೋಂಕಿನ 2ನೇ ಅಲೆ ವ್ಯಾಪಕವಾಗಿ ಹರಡುತ್ತಿದೆ. ಆಸ್ಪತ್ರೆಗಳಲ್ಲಿ ತೀವ್ರ ನಿಗಾ ಘಟಕಗಳು ಭರ್ತಿಯಾಗಿದ್ದು ಜನರು ಚಿಕಿತ್ಸೆಗಾಗಿ ಪರದಾಡುವಂತಾಗಿದೆ. ಕೋವಿಡ್-19 ಸೋಂಕು ದೃಢಪಟ್ಟ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಹ ಇಂದು ಬೆಡ್ ಕೊರತೆಯ ಬಿಸಿ ಅನುಭವಿಸಿದರು. ಬೆಂಗಳೂರು ಸೇರಿದಂತೆ ರಾಜ್ಯದ 8 ನಗರಗಳಲ್ಲಿ ರಾತ್ರಿ ಕರ್ಫ್ಯೂ ಚಾಲ್ತಿಯಲ್ಲಿದ್ದು, ಹಲವು ನಿರ್ಬಂಧದ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಯಾದಗಿರಿ ಸೇರಿದಂತೆ ರಾಜ್ಯದ ಕೆಲ ಜಿಲ್ಲೆಗಳಲ್ಲಿ ನಿನ್ನೆ ಲಸಿಕೆ ದಾಸ್ತಾನು ಮುಗಿದಿತ್ತು. ಬೆಂಗಳೂರಿನ ಚಿತಾಗಾರಗಳಲ್ಲಿ ಇಂದೂ ಸಹ ಶವಗಳನ್ನು ಹೊತ್ತ ಆ್ಯಂಬುಲೆನ್ಸ್​ಗಳು ಸರದಿಯಲ್ಲಿ ನಿಂತಿದ್ದವು. ಕೊರೊನಾ ಸೋಂಕಿನ ಬಗ್ಗೆ ಜಾಗೃತಿ ಮೂಡಿಸಲು ಯತ್ನಿಸುತ್ತಿರುವ ಸರ್ಕಾರ ಮಾಸ್ಕ್ ಬಳಕೆ ಮತ್ತು ಸಾಮಾಜಿಕ ಅಂತರದ ಅವಶ್ಯಕತೆಯ ಬಗ್ಗೆ ತಿಳಿಹೇಳಲು ಹಲವು ಕ್ರಮಗಳನ್ನು ಅನುಸರಿಸುತ್ತಿದೆ. ಸಾವಿನ ಸಂಖ್ಯೆ ಹೆಚ್ಚಾದ ನಂತರ ರಾಜ್ಯದ ಪ್ರಮುಖ ನಗರ, ಪಟ್ಟಣಗಳ ಬೀದಿಗಳಲ್ಲಿ ಮಾಸ್ಕ್​ಧಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಕೊರೊನಾ ಸೋಂಕಿಗೆ ಸಂಬಂಧಿಸಿದ ಕ್ಷಣಕ್ಷಣದ ಅಪ್​ಡೇಟ್​ ಇಲ್ಲಿ ಲಭ್ಯ.

LIVE NEWS & UPDATES

The liveblog has ended.
  • 17 Apr 2021 10:42 PM (IST)

    ಕೊರೊನಾ ಸೋಂಕಿಗೆ 6 ತಿಂಗಳ ಮಗು ಸಾವು

    ಬೆಂಗಳೂರು: ನಗರದಲ್ಲಿ 6 ತಿಂಗಳ ಮಗು ಕೊರೊನಾ ಸೋಂಕಿನಿಂದ ಮೃತಪಟ್ಟಿದೆ. 2ನೇ ಅಲೆಯಲ್ಲಿ 6 ತಿಂಗಳ ಮಗು ಸಾವನ್ನಪ್ಪಿರುವುದು ಇದೇ ಮೊದಲು. ಆರ್.ಆರ್.ನಗರದಲ್ಲಿ ವಾಸವಿದ್ದ ದಂಪತಿಯ ಮಗುವಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ವಾಂತಿ ಹಿನ್ನೆಲೆಯಲ್ಲಿ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಟೆಸ್ಟ್‌ನಲ್ಲಿ ಮಗುವಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು.

  • 17 Apr 2021 09:32 PM (IST)

    ನರೇಂದ್ರ ಮೋದಿ ಮಹತ್ವದ ಸಭೆ: ಲಸಿಕೆ ಲಭ್ಯತೆ ಬಗ್ಗೆ ಪರಾಮರ್ಶೆ

    ದೇಶದಲ್ಲಿ ಕೊರೊನಾ 2ನೇ ಅಲೆ ತೀವ್ರಗತಿಯಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶನಿವಾರ ರಾತ್ರಿ ತುರ್ತು ಸಭೆ ನಡೆಸಿ ಪರಿಸ್ಥಿತಿಯ ಪರಾಮರ್ಶೆ ನಡೆಸಿದರು. ದೇಶದಲ್ಲಿ ಕೊರೊನಾ ಲಸಿಕೆ ಲಭ್ಯತೆ ಕುರಿತು ವಿಸ್ತೃತ ಮಾಹಿತಿ ಪಡೆದುಕೊಂಡರು.


  • 17 Apr 2021 09:11 PM (IST)

    ದಾವಣಗೆರೆಯಲ್ಲಿ 6 ಶಾಲಾ ಮಕ್ಕಳಿಗೆ ಕೊರೊನಾ ಸೋಂಕು

    ಬೆಣ್ಣೆ ನಗರಿ ದಾವಣಗೆರೆ ನಗರದ ಖಾಸಗಿ ಶಾಲೆಯ ಆರು ಮಕ್ಕಳಿಗೆ, ಖಾಸಗಿ ಪಿಯು ಕಾಲೇಜಿನ ಓರ್ವ ವಿದ್ಯಾರ್ಥಿಗೆ ಕೊರೊನಾ ಪಾಸಿಟಿವ್ ಬಂದಿದೆ. ಹರಿಹರ ಸರ್ಕಾರಿ ಶಾಲೆಯ ಓರ್ವ ವಿದ್ಯಾರ್ಥಿ ಹಾಗೂ ಓರ್ವ ಶಿಕ್ಷಕರಲ್ಲಿಯೂ ಸೋಂಕು ದೃಢಪಟ್ಟಿದೆ. ಸೋಂಕಿತರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಪತ್ತೆ ಮಾಡಿ, ಗಂಟಲು ದ್ರವ ಸಂಗ್ರಹಿಸಲಾಗುತ್ತದೆ. ಮನೆಯಲ್ಲಿ ಪ್ರತ್ಯೇಕವಾಗಿ ಇರುವಂತೆ ಸೂಚಿಸಲಾಗಿದೆ ಎಂದು
    ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಘವನ್ ಮಾಹಿತಿ ನೀಡಿದ್ದಾರೆ.

  • 17 Apr 2021 09:06 PM (IST)

    ಬೆಂಗಳೂರು ವಿವಿಗೆ ಸಾರ್ವಜನಿಕ ಪ್ರವೇಶ ನಿಷೇಧ

    ಬೆಂಗಳೂರಿನಲ್ಲಿ ಕೊರೊನಾ ಸೋಂಕು ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಆವರಣಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ವಿಶ್ವವಿದ್ಯಾಲಯ ಸಿಬ್ಬಂದಿಯ ಆರೋಗ್ಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್ ವಿನಂತಿಸಿದ್ದಾರೆ.

  • 17 Apr 2021 09:03 PM (IST)

    ಸಾರ್ವಜನಿಕರಿಗೆ ವಿಧಾನಸೌಧ ಪ್ರವೇಶ ನಿರ್ಬಂಧ

    ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣ ಹೆಚ್ಚಳ ಹಿನ್ನೆಲೆಯಲ್ಲಿ ವಿಧಾನಸೌಧ, ಬಹುಮಹಡಿ ಕಟ್ಟಡಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

  • 17 Apr 2021 07:08 PM (IST)

    ಕೊರೊನಾ ಚಿಕಿತ್ಸೆಗೆ ಬಳಸುವ ರೆಮ್​ಡಿಸಿವಿರ್ ಔಷಧಿಯ ದರ ಕಡಿತ

    ಕರ್ನಾಟಕದಲ್ಲಿ ರೆಮ್​ಡಿಸಿವಿರ್ ಇಂಜೆಕ್ಷನ್​ ₹ 899ಕ್ಕೆ ಸಿಗಲಿದೆ. ಕಂಪನಿಗಳು ಇಂಜೆಕ್ಷನ್ ದರವನ್ನು ಕಡಿಮೆ ಮಾಡಿವೆ ಎಂದು ಪ್ರಕಟಣೆ ತಿಳಿಸಿದೆ. ರೆಮಿಡಿಸಿವರ್ ಇಂಜೆಕ್ಷನ್ ಬೆಲೆಯನ್ನು ಕಂಪನಿಗಳು ‌ಸ್ವಪ್ರೇರಣೆಯಿಂದ ಇಳಿಸಿವೆ.

  • 17 Apr 2021 06:53 PM (IST)

    ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 11,41,998ಕ್ಕೆ ಏರಿಕೆ

    ಕರ್ನಾಟಕದಲ್ಲಿ ಇಂದು ಒಂದೇ ದಿನ 17,489 ಜನರಿಗೆ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ 11,41,998ಕ್ಕೆ (11.41 ಲಕ್ಷ) ಏರಿಕೆಯಾಗಿದೆ. ರಾಜ್ಯದಲ್ಲಿಂದು ಒಂದೇ ದಿನ ಕೊರೊನಾಗೆ 80 ಜನರ ಬಲಿ
    ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 13,270 ಜನರು ಸಾವನ್ನಪ್ಪಿದ್ದಾರೆ. ಸೋಂಕಿತರ ಪೈಕಿ 10,09,549 ಜನರು ಗುಣಮುಖರಾಗಿ ಡಿಸ್​ಚಾರ್ಜ್​ ಆಗಿದ್ದಾರೆ. 1,19,160 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

  • 17 Apr 2021 06:49 PM (IST)

    ಬೆಂಗಳೂರಿನಲ್ಲಿ ಒಂದೇ ದಿನ 11,404 ಜನರಿಗೆ ಸೋಂಕು

    ಬೆಂಗಳೂರಿನಲ್ಲಿ ಶನಿವಾರ (ಏಪ್ರಿಲ್ 17) ಒಂದೇ ದಿನ 43 ಜನರ ಬಲಿಯಾಗಿದ್ದಾರೆ. 11,404 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿಂದು ಒಂದೇ ದಿನ 17,489 ಜನರಿಗೆ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿಂದು ಒಂದೇ ದಿನ ಕೊರೊನಾಗೆ 80 ಜನರು ಮೃತಪಟ್ಟಿದ್ದಾರೆ.

  • 17 Apr 2021 06:48 PM (IST)

    ಕುಂಭಮೇಳ ಅಂತ್ಯ

    ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿ, ಈ ಬಾರಿ ಕುಂಭಮೇಳ ಸಾಂಕೇತಿಕವಾಗಿ ನಡೆಯಲಿ ಎಂದು ಹೇಳಿದ್ದರು. ಇದಕ್ಕೆ ಸಾಧುಗಳಿಂದ ಧನಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ.

  • 17 Apr 2021 06:23 PM (IST)

    ಕರ್ನಾಟಕದಲ್ಲಿ 1 ಲಕ್ಷ ದಾಟಿದ ಸಕ್ರಿಯ ಪ್ರಕರಣಗಳು

    ಭಾರತದಲ್ಲಿ ಅತಿಹೆಚ್ಚು ಕೊರೊನಾ ಸೋಂಕು ಸಕ್ರಿಯ ಪ್ರಕರಣಗಳಿರುವ ರಾಜ್ಯಗಳ ಅಂಕಿಅಂಶವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಈ ಮಾಹಿತಿ ಪ್ರಕಾರ ಕರ್ನಾಟಕದಲ್ಲಿ 1,07,334 ಸಕ್ರಿಯ ಪ್ರಕರಣಗಳಿವೆ. ಉಳಿದಂತೆ ಮಹಾರಾಷ್ಟ್ರದಲ್ಲಿ ಅತಿಹೆಚ್ಚು ಅಂದರೆ 6,39,642 ಪ್ರಕರಣಗಳಿವೆ. ಛತ್ತೀಸಗಡ, ಉತ್ತರ ಪ್ರದೇಶ ರಾಜ್ಯಗಳಲ್ಲಿಯೂ ಸಕ್ರಿಯ ಪ್ರಕರಣಗಳ ಸಂಖ್ಯೆ 1 ಲಕ್ಷ ದಾಟಿದೆ.

    ಕೊರೊನಾ ಸಕ್ರಿಯ ಸೋಂಕು ಪ್ರಕರಣಗಳ ವಿವರ

  • 17 Apr 2021 06:11 PM (IST)

    ಬಳ್ಳಾರಿ ಜಿಲ್ಲೆಯಲ್ಲಿ 355 ಮಂದಿಗೆ ಕೊರೊನಾ ಸೋಂಕು

    ಬಳ್ಳಾರಿ: ಜಿಲ್ಲೆಯಲ್ಲಿ ಶನಿವಾರ 355 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. 1672 ಸಕ್ರಿಯ ಪ್ರಕರಣಗಳಿವೆ. ಸೋಂಕಿನಿಂದ ಇಬ್ಬರು ಸಾವನ್ನಪ್ಪಿದ್ದಾರೆ. ಇದುವರೆಗೆ ಕೊರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 614ಕ್ಕೆ ಏರಿದೆ.

  • 17 Apr 2021 05:53 PM (IST)

    ರಾತ್ರಿ 8ಕ್ಕೆ ಪ್ರಧಾನಿ ನರೇಂದ್ರ ಮೋದಿ ತುರ್ತು ಸಭೆ

    ದೆಹಲಿ: ಕೊರೊನಾ ನಿಯಂತ್ರಣ ಸಂಬಂಧ ಪ್ರಧಾನಿ ನರೇಂದ್ರ ಮೋದಿ ರಾತ್ರಿ 8 ಗಂಟೆಗೆ ತುರ್ತು ಸಭೆ ಕರೆದಿದ್ದಾರೆ. ಕೊರೊನಾ ನಿಯಂತ್ರಣಕ್ಕೆ ಕೈಗೊಳ್ಳಬಹುದಾದ ಕ್ರಮಗಳು ಮತ್ತು ಮುಂಜಾಗ್ರತಾ ಕ್ರಮಗಳ ಬಗ್ಗೆ ಪ್ರಧಾನಿ ಚರ್ಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

  • 17 Apr 2021 05:07 PM (IST)

    ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆ: ರೋಗಿಗಳ ಪರದಾಟ

    ಬೆಂಗಳೂರಿನ ಸ್ವಸ್ತಿಕ್ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದ ಆರು ಸೋಂಕಿತರು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. 36 ಜಂಬೊ ಆಕ್ಸಿಜನ್ ಸಿಲಿಂಡರ್ ತುರ್ತಾಗಿ ಬೇಕು ಎಂದು ಆಸ್ಪತ್ರೆ ಮಾಲೀಕ ವಿಜಯ್ ರಾಘವ್ ರೆಡ್ಡಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

  • 17 Apr 2021 04:40 PM (IST)

    ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿ ತಾತ್ಕಾಲಿಕ ನೇಮಕಕ್ಕೆ ಪಾಲಿಕೆ ನಿರ್ಧಾರ

    ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊರೊನಾ ಸೋಂಕು ಉಲ್ಬಣ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ವೈದ್ಯರು, ಸಿಬ್ಬಂದಿಯನ್ನು ನೇರ ಸಂದರ್ಶನದ ಮೂಲಕ ನೇಮಿಸಿಕೊಳ್ಳಲು ಪಾಲಿಕೆ ನಿರ್ಧರಿಸಿದೆ. 3 ತಿಂಗಳ ಅವಧಿಗೆ ನೇಮಕಕ್ಕೆ ಬಿಬಿಎಂಪಿ ನೋಟಿಫಿಕೇಷನ್‌ ಹೊರಡಿಸಿದೆ. ಏಪ್ರಿಲ್​​ 19ರಿಂದ ಏಪ್ರಿಲ್​​ 21ರವರೆಗೆ ಬೆಂಗಳೂರು ದಕ್ಷಿಣ ವಲಯ ಜಯನಗರದ ವಲಯವಾರು ಬಿಬಿಎಂಪಿ ಕಚೇರಿಯಲ್ಲಿ ಬೆಳಿಗ್ಗೆ 11ರಿಂದ ಸಂಜೆ 4 ಗಂಟೆಯವರೆಗೆ ಸಂದರ್ಶನ ನಡೆಯಲಿದೆ. MBBS ವೈದ್ಯರಿಗೆ ₹ 80 ಸಾವಿರ ಸಂಬಳ, BDS ಮತ್ತು ಆಯುಷ್ ವೈದ್ಯರಿಗೆ ₹ 60 ಸಾವಿರ ಸಂಬಳ, ನರ್ಸ್​ಗಳಿಗೆ ₹ 20 ಸಾವಿರ ಸಂಬಳ, ಸ್ವಾಬ್​​ ಕಲೆಕ್ಟರ್ಸ್​ಗೆ (10ನೇ ತರಗತಿ) ₹ 19 ಸಾವಿರ ಸಂಬಳ ನಿಗದಿಪಡಿಸಲಾಗಿದೆ. ಈ ಎಲ್ಲಾ ಹುದ್ದೆಗಳಿಗೆ ವಯೋಮಿತಿ 50 ವರ್ಷ. ಕನ್ನಡದಲ್ಲಿ ಮಾತನಾಡಲು, ಓದಲು, ಬರೆಯಲು ಗೊತ್ತಿರಬೇಕು.

    ಬಿಬಿಎಂಪಿ ಮುಖ್ಯ ಕಚೇರಿ

  • 17 Apr 2021 04:24 PM (IST)

    ಬೆಂಗಳೂರು ಜಯನಗರದ ಬಿಗ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಸರಬರಾಜಾಗದೆ ರೋಗಿಗಳ ಪರದಾಟ

    ಆಕ್ಸಿಜನ್ ಸರಬರಾಜಾಗದೆ ಆಸ್ಪತ್ರೆಯಲ್ಲಿ ರೋಗಿಗಳ ಪರದಾಟವಾದ ಘಟನೆ ಬೆಂಗಳೂರಿನಲ್ಲಿ ಸಂಭವಿಸಿದೆ. ಬೆಂಗಳೂರಿನ ಜಯನಗರದ ಬಿಗ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಸರಬರಾಜು ಆಗದೆ ರೋಗಿಗಳು ಪರದಾಟ ಅನುಭವಿಸಿದ್ದಾರೆ. ದಿನಕ್ಕೆ ಒಟ್ಟು 3 ಆಕ್ಸಿಜನ್ ಸಿಲಿಂಡರ್​ಗಳ ಅಗತ್ಯ ಇತ್ತು. 2 ಏಜೆನ್ಸಿಗಳ ಮುಖಾಂತರ ಆಸ್ಪತ್ರೆ ಆಕ್ಸಿಜನ್ ಪಡೆಯುತ್ತಿತ್ತು. ಈಗ ಎರಡು ಏಜೆನ್ಸಿಗಳು ಕೂಡ ಸಿಲಿಂಡರ್ ಇಲ್ಲ ಎನ್ನುತ್ತಿವೆ. ಜೊತೆಗೆ ಸದ್ಯ ಆಸ್ಪತ್ರೆಯಲ್ಲಿ 1 ಸಿಲಿಂಡರ್ ಮಾತ್ರ ಇದೆ. ಅದರಿಂದ ಸಂಜೆ ಆರು ಗಂಟೆವರೆಗೂ ಚಿಕಿತ್ಸೆ ನೀಡಲಾಗುತ್ತೆ‌ ಎಂದು ಮಾಹಿತಿ ಲಭ್ಯವಾಗಿದೆ. ಬಳಿಕ, ಐಸಿಯುನಲ್ಲಿರುವ 10 ಸೋಂಕಿತರನ್ನು ಶಿಫ್ಟ್​ ಮಾಡಲು ಚಿಂತನೆ ನಡೆಸಲಾಗಿದೆ.

  • 17 Apr 2021 04:22 PM (IST)

    ಬೆಂಗಳೂರಿನಲ್ಲಿ ಕೊವಿಡ್ ಸೋಂಕಿಗೆ ಎಎಸ್‌ಐ ಬಲಿ

    ಬೆಂಗಳೂರಿನಲ್ಲಿ ಕೊವಿಡ್ ಸೋಂಕಿಗೆ ಎಎಸ್‌ಐ ಸಾವನ್ನಪ್ಪಿದ್ದಾರೆ. ಅಶೋಕನಗರ ಸಂಚಾರಿ ಪೊಲೀಸ್‌ ಠಾಣೆಯ ಎಎಸ್‌ಐ ಹನುಮಂತರಾಯಪ್ಪ ಕೊವಿಡ್-19ನಿಂದ ಮೃತಪಟ್ಟಿದ್ದಾರೆ.

  • 17 Apr 2021 04:20 PM (IST)

    ಕೊರೊನಾ ಹೆಚ್ಚಳ; ಸಿದ್ಧಲಿಂಗೇಶ್ವರ ಜಾತ್ರೆ ರದ್ದು

    ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿಯ ಸಿದ್ಧಲಿಂಗೇಶ್ವರ ಜಾತ್ರೆ ರದ್ದಾಗಿದೆ. ಎಡೆಯೂರಿನ ಐತಿಹಾಸಿಕ ಸಿದ್ಧಲಿಂಗೇಶ್ವರ ಜಾತ್ರೆ ರದ್ದುಗೊಳಿಸಿ, ಜಿಲ್ಲಾಡಳಿತ ಆದೇಶ ಹೊರಡಿಸಿದೆ. ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಎಡೆಯೂರು ಜಾತ್ರೆ, ಏಪ್ರಿಲ್ 19ರಿಂದ ಆರಂಭವಾಗಬೇಕಿತ್ತು. ಇದೀಗ, ಸಿದ್ಧಲಿಂಗೇಶ್ವರ ಜಾತ್ರೆ ರದ್ದು ಮಾಡಿ ತುಮಕೂರು ಜಿಲ್ಲಾಡಳಿತ ಆದೇಶ ನೀಡಿದೆ.

  • 17 Apr 2021 04:18 PM (IST)

    ವಿಜಯಪುರ ಜಿಲ್ಲೆಯಲ್ಲಿ ಕೊರೊನಾ ಸ್ಪೋಟ; 282 ಮಂದಿಗೆ ಸೋಂಕು ದೃಢ

    ವಿಜಯಪುರ ಜಿಲ್ಲೆಯಲ್ಲಿ ಇಂದು 282 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಕೊವಿಡ್-19 ಸಕ್ರೀಯ ಪ್ರಕರಣಗಳ ಸಂಖ್ಯೆ 1126ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು ಕೊರೊನಾ ಪೀಡಿತರು 16,527 ಆಗಿದ್ದಾರೆ. 475 ಪಾಸಿಟಿವ್ ಪೀಡಿತರಿಗೆ ವಿವಿಧ ಕೊರೊನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 651 ಜನ ಪಾಸಿಟಿವ್ ಆದವರಿಗೆ ಹೋಂ ಐಸೋಲೇಷನ್​ನಲ್ಲಿ ಇರುವಂತೆ ಸೂಚಿಸಲಾಗಿದೆ. ಈವರೆಗೆ 213 ಜನ‌ ಕೊರೊನಾಗೆ ಬಲಿಯಾಗಿದ್ದಾರೆ. ಕೊರೊನಾದಿಂದ ಗುಣಮುಖರಾದ 124 ಮಂದಿ ಆಸ್ಪತ್ರೆಗಯಿಂದ ಬಿಡುಗಡೆಗೊಂಡಿದ್ದಾರೆ. ಇಂದು 2969 ಜನರ ಗಂಟಲು ದ್ರವ ಪರೀಕ್ಷೆಗಾಗಿ ಸಂಗ್ರಹಿಸಲಾಗಿದ್ದು, ಇನ್ನೂ 2852 ಜನರ ಗಂಟಲು ದ್ರವ ವರದಿಗೆ ಕಾಯಲಾಗುತ್ತಿದೆ. ಈ ಬಗ್ಗೆ ಜಿಲ್ಲಾ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

  • 17 Apr 2021 04:11 PM (IST)

    ಕೊವಿಡ್ ಆಸ್ಪತ್ರೆ ವಾರ್ಡ್​ನಿಂದ ಸೋಂಕಿತ ವೃದ್ಧ ಎಸ್ಕೇಪ್

    ಕೊವಿಡ್ ಆಸ್ಪತ್ರೆ ವಾರ್ಡ್​ನಿಂದ ಸೋಂಕಿತ ವೃದ್ಧ ನಾಪತ್ತೆಯಾದ ಘಟನೆ ನೆಲಮಂಗಲ ಸರ್ಕಾರಿ ಕೊವಿಡ್ ಆಸ್ಪತ್ರೆಯಲ್ಲಿ ಘಟಿಸಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ, ಏಪ್ರಿಲ್ 12ರಂದು 75 ವರ್ಷದ ವೃದ್ಧ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ವೃದ್ಧ ಆಸ್ಪತ್ರೆಯಿಂದ ನಾಪತ್ತೆಯಾಗಿದ್ದು, ಇತ್ತ ಆಸ್ಪತ್ರೆಯಲ್ಲೂ ಇರದೆ, ಮನೆಗೂ ತೆರಳದೆ ಕಾಣೆಯಾಗಿದ್ದಾರೆ. ಈ‌ ಸಂಬಂಧ ನೆಲಮಂಗಲ ಟೌನ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ನರಸಿಂಹಯ್ಯ ಹೇಳಿಕೆ ನೀಡಿದ್ದಾರೆ. ವೃದ್ಧ ಎಸ್ಕೇಪ್ ಆಗಿರುವ ವಿಡಿಯೋ ಆಸ್ಪತ್ರೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

  • 17 Apr 2021 03:44 PM (IST)

    ಕಲಬುರಗಿ ಜಿಲ್ಲೆಯಲ್ಲಿ ಮೆಡಿಕಲ್ ಆಕ್ಸಿಜನ್ ಕೊರತೆ

    ಕಲಬುರಗಿ: ಜಿಲ್ಲೆಯಲ್ಲಿ ವೈದ್ಯಕೀಯ ಆಮ್ಲಜನಕದ (ಮೆಡಿಕಲ್ ಆಕ್ಸಿಜನ್) ಕೊರತೆ ಉಂಟಾಗಿದೆ. ಕೊವಿಡ್, ನಾನ್ ಕೊವಿಡ್ ರೋಗಿಗಳೂ ಸಂಕಷ್ಟ ಸ್ಥಿತಿ ಅನುಭವಿಸುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲೂ ಆಕ್ಸಿಜನ್ ಇಲ್ಲ, ಬೆಡ್ ಖಾಲಿ ಇಲ್ಲ. ರೋಗಿಗಳನ್ನು ಬೇರೆಡೆ ಕರೆದೊಯ್ಯಲು ಸೂಚಿಸುತ್ತಿರುವ ಹಿನ್ನೆಲೆಯಲ್ಲಿ ರೋಗಿಗಳು ಪರದಾಡುತ್ತಿದ್ದಾರೆ. ಜಿಲ್ಲಾಡಳಿತ, ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಆಕ್ಸಿಜನ್ ಸಿಲಿಂಡರ್ (ಪ್ರಾತಿನಿಧಿಕ ಚಿತ್ರ)

  • 17 Apr 2021 03:28 PM (IST)

    ನಿಖಿಲ್ ಕುಮಾರಸ್ವಾಮಿಗೆ ಕೊರೊನಾ ಪಾಸಿಟಿವ್​

    ಬೆಂಗಳೂರು: ಜೆಡಿಎಸ್ ನಾಯಕ ಎಚ್​.ಡಿ.ಕುಮಾರಸ್ವಾಮಿ ಅವರ ಪುತ್ರ ಮತ್ತು ನಟ ನಿಖಿಲ್ ಕುಮಾರಸ್ವಾಮಿ ಅವರಿಗೆ ಇಂದು ಕೊರೊನಾ ವೈರಸ್​ ದೃಢಪಟ್ಟಿದೆ. ಕೊವಿಡ್-19 ಟೆಸ್ಟ್​ ಮಾಡಿಸಿದ್ದ ನಿಖಿಲ್ ಅವರ ಪ್ರಾಥಮಿಕ ವರದಿಯಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲವೆಂದಿರುವ ನಿಖಿಲ್, ವೈದ್ಯರ ಸಲಹೆ ಮೇರೆಗೆ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನನ್ನ ಸಂಪರ್ಕಕ್ಕೆ ಬಂದಿದ್ದವರು ಕೊವಿಡ್ ಟೆಸ್ಟ್​ ಮಾಡಿಸಿಕೊಳ್ಳಿ ಎಂದು ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.

Published On - 10:42 pm, Sat, 17 April 21

Follow us on