Karnataka Bypolls: ಬೆಳಗಾವಿ ಶೇ 54, ಮಸ್ಕಿ ಶೇ 70, ಬಸವಕಲ್ಯಾಣ ಶೇ 59 ಮತದಾನ: ಮೇ 2ಕ್ಕೆ ಮತ ಎಣಿಕೆ
ಉಮೇದುವಾರರ ಭವಿಷ್ಯ ಮತಯಂತ್ರಗಳಲ್ಲಿ ದಾಖಲಾಗಿದ್ದು, ಮೇ 2ರಂದು ಮತ ಎಣಿಕೆ ನಡೆಯಲಿದ್ದು ಯಾರು ವಿಜೇತರು ಎಂದು ನಿರ್ಧಾರವಾಗಲಿದೆ.
ಬೆಂಗಳೂರು: ಕೊರೊನಾ 2ನೇ ಅಲೆ, ಸಾರಿಗೆ ನಿಗಮಗಳ ಮುಷ್ಕರ ಜೊತೆಗೆ ರಾಜ್ಯದ ಜನರ ಗಮನ ಸೆಳೆದಿದ್ದ ಮತ್ತೊಂದು ಮಹತ್ವ ವಿದ್ಯಮಾನ ಉಪಚುನಾವಣೆಗಳು. ಬೆಳಗಾವಿ ಲೋಕಸಭೆ, ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಶನಿವಾರ ಮತದಾನ ನಡೆಯಿತು. ಉಮೇದುವಾರರ ಭವಿಷ್ಯ ಮತಯಂತ್ರಗಳಲ್ಲಿ ದಾಖಲಾಗಿದ್ದು, ಮೇ 2ರಂದು ಮತ ಎಣಿಕೆ ನಡೆಯಲಿದ್ದು ಯಾರು ವಿಜೇತರು ಎಂದು ನಿರ್ಧಾರವಾಗಲಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಮ್ಮ ಪಕ್ಷದ ಅಭ್ಯರ್ಥಿಗಳ ಪ್ರಚಾರ ನಡೆಸಿದ್ದರು. ಮಸ್ಕಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಪ್ರತಾಪ್ ಗೌಡ ಪಾಟೀಲ ಅವರಿಗೆ ಕೊರೊನಾ ಸೋಂಕು ಬಾಧಿಸಿದೆ. ಅವರು ಪಿಪಿಇ ಕಿಟ್ ಧರಿಸಿಯೇ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿದರು. ಬೆಳಗಾವಿಯಲ್ಲಿ ಪ್ರಚಾರ ನಡೆಸಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಲ್ಲಿಯೂ ಸೋಂಕು ದೃಢಪಟ್ಟಿದ್ದು, ಅವರ ಜೊತೆಗೆ ಪ್ರಚಾರ ನಡೆಸಿದ್ದ ಸಚಿವರು, ಶಾಸಕರು ಮತ್ತು ನಾಯಕರಲ್ಲಿ ಭೀತಿ ಆವರಿಸಿದೆ.
ಬೆಳಗಾವಿ ಮತದಾನ ವಿವರ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಶೇ 54.02ರಷ್ಟು ಮತದಾನವಾಗಿದೆ. ಬಿಜೆಪಿ ಅಭ್ಯರ್ಥಿಯಾಗಿ ದಿವಂಗತ ಸಚಿವ ಸುರೇಶ್ ಅಂಗಡಿ ಅವರ ಪತ್ನಿ ಮಂಗಳಾ ಸುರೇಶ್ ಅಂಗಡಿ ಕಣದಲ್ಲಿದ್ದಾರೆ. ಕಾಂಗ್ರೆಸ್ ಪಕ್ಷವು ಸತೀಶ್ ಜಾರಕಿಹೊಳಿ ಅವರಿಗೆ ಟಿಕೆಟ್ ನೀಡಿದೆ. ಇಂದು ನಡೆದ ಚುನಾವಣೆಯಲ್ಲಿ ಶೇ 54.02ರಷ್ಟು ಮತದಾನವಾಗಿ ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಡಾ.ಹರೀಶ್ ಕುಮಾರ್ ಮಾಹಿತಿ ನೀಡಿದ್ದಾರೆ. ಕಳೆದ ಬಾರಿ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಶೇ 69.72ರಷ್ಟು ಮತದಾನವಾಗಿತ್ತು. ಈ ಬಾರಿ ಗೋಕಾಕ್ ವಿಧಾನಸಭಾ ಕ್ಷೇತ್ರದಲ್ಲೇ ಅತಿ ಹೆಚ್ಚು ಮತದಾನವಾಗಿರುವುದು ವಿಶೇಷ.
ಬೆಳಗಾವಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಮತದಾನ ವಿವರ ಇಂತಿದೆ.. ಅರಭಾವಿ ಶೇ 55.07, ಗೋಕಾಕ್ ಶೇ 60.47, ಬೆಳಗಾವಿ ಉತ್ತರ ಶೇ 42.88, ಬೆಳಗಾವಿ ದಕ್ಷಿಣ ಶೇ 44.84, ಬೆಳಗಾವಿ ಗ್ರಾಮೀಣ ಶೇ 58.36, ಬೈಲಹೊಂಗಲ ಶೇ 58, ಸವದತ್ತಿ ಶೇ 58.67, ರಾಮದುರ್ಗ ಶೇ 55.67. ಲೋಕಸಭಾ ಕ್ಷೇತ್ರದ ಎಲ್ಲ ಮತಗಟ್ಟೆಗಳಲ್ಲಿ ಬೆಳಿಗ್ಗೆ 7ರಿಂದ ಸಂಜೆ 7 ಗಂಟೆಯವರೆಗೆ ಮತದಾನ ನಡೆಯಿತು. ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಮತದಾನದ ಪ್ರಮಾಣ ಕಡಿಮೆಯಾಗಲು ಕೋವಿಡ್ ಭೀತಿಯೇ ಕಾರಣ ಎನ್ನಲಾಗಿದೆ.
ಮಸ್ಕಿ ಮತದಾನ ವಿವರ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಶೇ. 70.48ರಷ್ಟು ಮತದಾನವಾಗಿದೆ. ಒಟ್ಟು 2,06,429 ಮತದಾರರ ಪೈಕಿ 1,45,482 ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಕ್ಷೇತ್ರದಲ್ಲಿ ಮಹಿಳಾ ಮತದಾರರ ಸಂಖ್ಯೆಯು ಪುರುಷರಗಿಂತಲೂ ಹೆಚ್ಚಿನ ಪ್ರಮಾಣದಲ್ಲಿತ್ತು. 73,311 ಪುರುಷ ಮತದಾರರು, 72,169 ಮಹಿಳಾ ಮತದಾರರು ಮತ ನೀಡಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ ಮತದಾನದ ಪ್ರಮಾಣ ಹೆಚ್ಚಾಗಿರುವುದು ಗಮನಾರ್ಹ ಸಂಗತಿ.
2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಮೇಲೆ ಜಯಗಳಿಸಿದ್ದ ಪ್ರತಾಪ್ಗೌಡ ಪಾಟೀಲ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ತೆರವಾಗಿದ್ದ ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೂ ಶನಿವಾರವೇ ಮತದಾನ ನಡೆಯಲಿದೆ. ಈ ಬಾರಿ ಬಿಜೆಪಿಯಿಂದ ಪ್ರತಾಪಗೌಡ ಪಾಟೀಲ, ಕಾಂಗ್ರೆಸ್ನಿಂದ ಬಸನಗೌಡ ತುರುವಿಹಾಳ ನಡುವೆ ನೇರ ಹಣಾಹಣಿ ಇದೆ. ಕಣದಲ್ಲಿ 8 ಅಭ್ಯರ್ಥಿಗಳಿದ್ದರು.
ಬಸವಕಲ್ಯಾಣ ಮತ ವಿವರ ಬೀದರ್ ಜಿಲ್ಲೆ ಬಸವಕಲ್ಯಾಣ ಕ್ಷೇತ್ರದಲ್ಲಿ ಶೇ 59.57ರಷ್ಟು ಮತದಾನವಾಗಿದೆ. ಬಿಜೆಪಿಯಿಂದ ಶರಣು ಸಲಗರ, ಜೆಡಿಎಸ್‌ನ ಸಯ್ಯದ್ ಯಸ್ರಬ್ ಅಲಿ ಖಾದ್ರಿ ಮತ್ತು ಕಾಂಗ್ರೆಸ್ನಿಂದ ಮಾಲಾ ನಾರಾಯಣರಾವ್ ಸ್ಪರ್ಧಿಸಿದ್ದಾರೆ. ಶಾಸಕ ನಾರಾಯಣರಾವ್ ನಿಧನರಾದ ಕಾರಣ ಬಸವಕಲ್ಯಾಣ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗಿದೆ. ಒಟ್ಟು 12 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
(Karnataka Bypolls Belgaum lok sabha maski basavakalyan bypoll voting percentage)
ಇದನ್ನೂ ಓದಿ: ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ವೇಳೆ ಆಯೋಗ ಮುಟ್ಟುಗೋಲು ಹಾಕಿಕೊಂಡ ಮೊತ್ತ ₹ 1000 ಕೋಟಿ
ಇದನ್ನೂ ಓದಿ: ರಾಜಕೀಯ ವಿಶ್ಲೇಷಣೆ | ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ; ಯಾರಿಗೆ ಹೂವು? ಯಾರಿಗೆ ಮುಳ್ಳು?
Published On - 11:36 pm, Sat, 17 April 21